-
16ನೇ ದಿನಕ್ಕೆ ಕಾಲಿಟ್ಟ ಕರವೇ ಆಗ್ರಹ ಅಭಿಯಾನ
-
ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಿಂದ ಆರಂಭವಾದ ಹೋರಾಟ
-
ಹಾವೇರಿ, ಕೊಪ್ಪಳ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಭಿಯಾನ ವಿಸ್ತರಣೆ
-
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಗಳ ಅಧಿಕೃತ ಮಾಹಿತಿ ಬೇಕು
-
ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಅಭಿಯಾನ ಮುಂದುವರಿಕೆ
Karave Jobs Campaign: ಕರ್ನಾಟಕದ ಐಟಿ-ಬಿಟಿ ಕಂಪನಿಗಳು ಹಾಗೂ ಖಾಸಗಿ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಎಂಬ ಅಧಿಕೃತ ಮಾಹಿತಿ ಪಡೆಯುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆರಂಭಿಸಿರುವ ಆಗ್ರಹ ಅಭಿಯಾನ 16ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ಆರಂಭವಾದ ಈ ಅಭಿಯಾನ ಇದೀಗ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಣೆಯಾಗಿದೆ. ಐಟಿ
ಆರಂಭದಲ್ಲಿ ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಿಗೆ ಮಾತ್ರ ಸೀಮಿತವಾಗಿದ್ದ ಅಭಿಯಾನವನ್ನು ಇದೀಗ ರಾಜ್ಯದ ಖಾಸಗಿ ಕೈಗಾರಿಕೆಗಳಿಗೂ ವಿಸ್ತರಿಸಲಾಗಿದೆ. ಆಯಾ ಕಂಪನಿಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಎಂಬ ಅಧಿಕೃತ ಮಾಹಿತಿಯನ್ನು ನೀಡುವಂತೆ ಕರವೇ ಕಾರ್ಯಕರ್ತರು ಸಂಸ್ಥೆಗಳಿಗೆ ಭೇಟಿ ನೀಡಿ ಆಗ್ರಹ ಪತ್ರ ಸಲ್ಲಿಸುತ್ತಿದ್ದಾರೆ. ಹಾವೇರಿ, ಬೀದರ್, ಕೊಪ್ಪಳ, ದಾವಣಗೆರೆ, ಗದಗ, ಧಾರವಾಡ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಭಿಯಾನ ನಡೆಯುತ್ತಿದ್ದು, ಆಯಾ ಜಿಲ್ಲಾ ಘಟಕಗಳು ಸಕ್ರಿಯವಾಗಿ ಭಾಗವಹಿಸಿವೆ.
ಹಲವು ಜಿಲ್ಲೆಗಳ ಕೈಗಾರಿಕೆಗಳಿಗೆ ಕರವೇ ಭೇಟಿ
ಹಾವೇರಿ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಗಿರೀಶ್ ಬಾರ್ಕಿ ನೇತೃತ್ವದ ತಂಡ ಹರಿಹರ ತಾಲೂಕಿನ ಬಿರ್ಲಾ ಕೈಗಾರಿಕಾ ಸಂಸ್ಥೆ, ರಾಣೆಬೆನ್ನೂರು ತಾಲೂಕಿನ ಸೀಜಂಟ್ ಸಂಸ್ಥೆ, ಬ್ಯಾಡಗಿ ತಾಲೂಕಿನ ಮಂಕೂರು ಸಂಸ್ಥೆ ಹಾಗೂ ತಡಸ್ ಸಮೀಪದ ಆಕಾಂ ಸಂಸ್ಥೆಗಳಿಗೆ ಭೇಟಿ ನೀಡಿ ಕನ್ನಡಿಗರ ಉದ್ಯೋಗದ ಮಾಹಿತಿ ಕೋರಿದೆ.
ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ನೇತೃತ್ವದ ತಂಡ ಬಲ್ದೋಟ ಸಮೂಹದ ಎಂಎಸ್ಪಿಎಲ್ ಲಿಮಿಟೆಡ್, ಕಿರ್ಲೋಸ್ಕರ್ ಫೆರಸ್ ಲಿಮಿಟೆಡ್, ಅಲ್ಟ್ರಾಟೆಕ್ ಸಿಮೆಂಟ್, ಕಲ್ಯಾಣಿ ಸ್ಟೀಲ್ಸ್ ಸೇರಿದಂತೆ ಹಲವು ಕೈಗಾರಿಕೆಗಳಿಗೆ ಭೇಟಿ ನೀಡಿದೆ. ಎಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಧ್ರುವ ದೇಶ್ಮೆಟ್ ಸ್ಟೀಲ್, ಕೆಪಿಆರ್ ಫರ್ಟಿಲೈಸರ್ಸ್, ಭದ್ರಾ ಸ್ಟೀಲ್ ಹಾಗೂ ಬಜಾಜ್ ಮುಕುಂದ್ ಶಮಿ ಸ್ಪೆಷಲ್ ಸ್ಟೀಲ್ ಸಂಸ್ಥೆಗಳಿಗೂ ಆಗ್ರಹ ಪತ್ರ ಸಲ್ಲಿಸಿ ಮಾಹಿತಿ ಕೋರಲಾಗಿದೆ. ಐಟಿ
ಇದನ್ನೂ ನೋಡಿ: AIKS ಸಮ್ಮೇಳನ | ರೈತರ ಒಗ್ಗಟ್ಟಿನ ಮೆರವಣಿಗೆ, ಕೃಷಿ ಬಿಕ್ಕಟ್ಟಿನ ಕುರಿತು ಚರ್ಚೆ Janashakthi Media
ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದ ತಂಡ ಮಾಯಾ ಫುಡ್ಸ್, ವಿಪಿಎಲ್ ಗಾರ್ಮೆಂಟ್ಸ್, ಶಿಖರ್ ಇಂಡಸ್ಟ್ರೀಸ್, ಶಾಪ್ ಪವರ್, ಶ್ರೀ ಸಾಯಿ ಕ್ರಿಯೇಷನ್ಸ್, ಡೆಲಿವರಿ ಲಿಮಿಟೆಡ್ ಹಾಗೂ ಜೈನ್ ಪ್ಲಾಸ್ಟಿಕ್ ಸಂಸ್ಥೆಗಳಿಗೆ ಭೇಟಿ ನೀಡಿದೆ. ಇನ್ನು ಗದಗ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ ನೇತೃತ್ವದ ತಂಡ ಗದಗ ಕೆಐಎಡಿಬಿ ಕೈಗಾರಿಕಾ ಪ್ರದೇಶದ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಆಗ್ರಹ ಪತ್ರ ಸಲ್ಲಿಸಿದೆ. ಬೆಂಗಳೂರಿನಲ್ಲಿಯೂ ಕರವೇ ಕಾರ್ಯಕರ್ತರು ವಿವಿಧ ಐಟಿ-ಬಿಟಿ ಕಂಪನಿಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ಅಭಿಯಾನ ಮುಂದುವರಿಸಿದ್ದಾರೆ.
ಕನ್ನಡಿಗರ ಉದ್ಯೋಗದ ಪಾಲಿನ ಮಾಹಿತಿ ಸಂಗ್ರಹಕ್ಕೆ ಒತ್ತು
ಬೆಂಗಳೂರಿನಿಂದ ಆರಂಭವಾದ ಈ ಅಭಿಯಾನ ಇದೀಗ ರಾಜ್ಯದ ಕೈಗಾರಿಕಾ ಪ್ರದೇಶಗಳಿಗೂ ವ್ಯಾಪಿಸಿದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗಾವಕಾಶಗಳು ಸಿಕ್ಕಿವೆ ಎಂಬ ನಿಖರ ಮಾಹಿತಿಯನ್ನು ಸಂಗ್ರಹಿಸುವುದು ಕರವೇಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: ತರಕಾರಿ ಮಾರುವವರ ತಲೆಯ ಮೇಲೆ ಕ್ಯಾಮೆರಾ! ಬೆಂಗಳೂರಿನ ಕೆಆರ್ ಮಾರ್ಕೆಟ್ನಲ್ಲಿ ಇದೆಂಥಾ ಟೆಕ್ ಪ್ರಯೋಗ? | Bengaluru KR Market
ಕೇವಲ ಉದ್ಯೋಗದ ಮಾಹಿತಿ ಕೇಳುವುದಕ್ಕೆ ಸೀಮಿತವಾಗದೆ, ರಾಜ್ಯದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ದೊರೆಯುತ್ತಿರುವ ಉದ್ಯೋಗ ಪ್ರಾತಿನಿಧ್ಯದ ವಾಸ್ತವ ಚಿತ್ರಣವನ್ನು ತಿಳಿದುಕೊಳ್ಳುವ ಪ್ರಯತ್ನ ಇದಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರವೇ ಘಟಕಗಳು ಅಭಿಯಾನ ಮುಂದುವರಿಸಿವೆ.
