Bilkis Bano Case: 2002ರ ಗುಜರಾತ್ ಗಲಭೆ ವೇಳೆ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್ ಆದೇಶಕ್ಕೆ ಸಂತ್ರಸ್ತೆ ಬಿಲ್ಕಿಸ್ ಬಾನೊ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತನ್ನ ಅಳಲನ್ನು ಕೇಳಿಸಿಕೊಳ್ಳದೆ, ತನ್ನನ್ನು ವಿಚಾರಣೆಗೆ ಕರೆಯದೆ ಆದೇಶ ನೀಡಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ಬಿಲ್ಕಿಸ್ ಬಾನೊ
ಸುಪ್ರೀಂ ಕೋರ್ಟ್ ಅಕ್ಟೋಬರ್ 28ರಂದು ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ್ ಮೋರ್ಡಿಯಾ ಎಂಬ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡಿತ್ತು. 17 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿರುವುದು ಮತ್ತು ಅವರಲ್ಲಿ ಒಬ್ಬರಿಗೆ ತೀವ್ರ ದೈಹಿಕ ಅಂಗವೈಕಲ್ಯ ಇರುವುದು ಸೇರಿದಂತೆ ಹಲವು ಅಂಶಗಳನ್ನು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠ ಪರಿಗಣಿಸಿತ್ತು.
ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಬಿಲ್ಕಿಸ್ ಬಾನೊ, “ನೋವು, ಆಘಾತ ಮತ್ತು ನಂಬಲಾಗದ ಸ್ಥಿತಿಯಲ್ಲಿ ಈ ಹೇಳಿಕೆ ನೀಡುತ್ತಿದ್ದೇನೆ. ಮತ್ತೊಮ್ಮೆ ಸುಪ್ರೀಂ ಕೋರ್ಟ್ ನನ್ನನ್ನು ಕರೆಯದೆ, ನನ್ನ ಮಾತುಗಳನ್ನು ಕೇಳದೆ ಆದೇಶ ನೀಡಿದೆ. ಈ ವಿಚಾರ ನನಗೆ ಪತ್ರಿಕಾ ವರದಿಗಳ ಮೂಲಕ ತಿಳಿಯಿತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ಜಿಲ್ಲಾಧಿಕಾರಿಗೆ ನ್ಯಾಯ ಒದಗಿಸಿ: ಮಹಿಳಾ ಆಯೋಗಕ್ಕೆ ಕನಿಮೊಳಿ ಒತ್ತಾಯ
2002ರಲ್ಲಿ ನಡೆದ ಘಟನೆ ತಮ್ಮ ಜೀವನವನ್ನೇ ಬದಲಿಸಿತು. ಅಂದಿನಿಂದ ಕಳೆದ 24 ವರ್ಷಗಳಿಂದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದೇನೆ. ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದ ಜೀವನವನ್ನು ಮತ್ತೆ ಕಟ್ಟಿಕೊಂಡಿದ್ದರೂ, ಈಗಿನ ಆದೇಶದಿಂದ ಹಳೆಯ ಭಯಗಳು ಮತ್ತೆ ಕಾಡುತ್ತಿವೆ. ನನ್ನ ಕುಟುಂಬ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಉಂಟಾಗಿದೆ ಎಂದು ಬಿಲ್ಕಿಸ್ ಬಾನೊ ನೋವು ತೋಡಿಕೊಂಡಿದ್ದಾರೆ.
ಇನ್ನು, ಈ ಆದೇಶದ ವಿರುದ್ಧವೂ ಹೋರಾಟ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ಮೂರು ವರ್ಷದ ಮಗಳು ಸಲೇಹಾ ಸೇರಿದಂತೆ ಕುಟುಂಬದ ಸದಸ್ಯರಿಗೆ ನ್ಯಾಯ ಸಿಗಬೇಕು. ಯಾವುದೇ ಮಹಿಳೆ ಅಥವಾ ಅತ್ಯಾಚಾರ ಸಂತ್ರಸ್ತೆ ತನ್ನ ಜೀವನದುದ್ದಕ್ಕೂ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ಬರಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ: ಎಸ್ಎಸ್ಆರ್ ಸಾಕಿತ್ತೇ? ಎಸ್ಐಆರ್ ಬೇಕಿತ್ತೇ? | ಮೂಲಭೂತ ಹಕ್ಕು?Janashakthi Media
