ಜಿಲ್ಲಾಧಿಕಾರಿಗಳಿಗೆ ₹25 ಲಕ್ಷದವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ | ಮೇವು ಸಾಗಣೆಗೆ ನಿರ್ಬಂಧ
ಮುಂಬೈ: ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರದ 304 ತಾಲೂಕುಗಳಲ್ಲಿ ಬರ ನಿರ್ವಹಣಾ ಕ್ರಮಗಳನ್ನು ರಾಜ್ಯ ಸರ್ಕಾರ ತೀವ್ರಗೊಳಿಸಿದೆ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಜಲಸಂರಕ್ಷಣೆ, ಜಾನುವಾರುಗಳಿಗೆ ಮೇವು ಒದಗಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ ಹಲವು ವಿಶೇಷ ಕ್ರಮಗಳನ್ನು ಘೋಷಿಸಿದೆ. ಬರ ನಿರ್ವಹಣೆ
ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಜಿಲ್ಲಾಡಳಿತಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕಾಮಗಾರಿಗೆ ಗರಿಷ್ಠ ₹25 ಲಕ್ಷದವರೆಗೆ ಅನುಮೋದನೆ ನೀಡಲು ಜಿಲ್ಲಾಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಬರ ಹಾಗೂ ನೀರಿನ ಅಭಾವಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಈ ನಿರ್ಧಾರ ಸಹಕಾರಿಯಾಗಲಿದೆ.
ಮಹಾರಾಷ್ಟ್ರ ಸರ್ಕಾರ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 6ರವರೆಗೆ ಹೊರಡಿಸಲಾದ ವಿವಿಧ ಸರ್ಕಾರಿ ಆದೇಶಗಳು, ಸುತ್ತೋಲೆಗಳು ಮತ್ತು ನಿರ್ದೇಶನಗಳನ್ನು ಒಟ್ಟುಗೂಡಿಸಿ ಬರ ನಿರ್ವಹಣೆಯ ಸಮಗ್ರ ಕ್ರಮಗಳನ್ನು ಪ್ರಕಟಿಸಿದೆ.
ಸರ್ಕಾರವು ಬರಪೀಡಿತ 304 ತಾಲೂಕುಗಳಲ್ಲಿ ಜಲ ಮತ್ತು ಮಣ್ಣಿನ ಸಂರಕ್ಷಣಾ ಕಾಮಗಾರಿಗಳನ್ನು ಚುರುಕುಗೊಳಿಸಲು ನಿರ್ಧರಿಸಿದೆ. ಹಳ್ಳಗಳ ಆಳ ಮತ್ತು ಅಗಲ ಹೆಚ್ಚಿಸುವುದು, ಕೃಷಿ ಹೊಂಡಗಳ ನಿರ್ಮಾಣ, ಅಂತರ್ಜಲ ಮರುಪೂರಣಕ್ಕಾಗಿ ರೀಚಾರ್ಜ್ ಶಾಫ್ಟ್ಗಳ ನಿರ್ಮಾಣ, ಚೆಕ್ಡ್ಯಾಂಗಳ ದುರಸ್ತಿ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಗಳ ಭಾಗವಾಗಿದೆ. ಈ ಕಾಮಗಾರಿಗಳನ್ನು ಸ್ವಯಂಸೇವಾ ಸಂಸ್ಥೆಗಳು ಹಾಗೂ ವಿಬಿ-ಜಿ ರಾಮ್-ಜಿ ಯೋಜನೆಯ ಮೂಲಕ ಕೈಗೆತ್ತಿಕೊಳ್ಳಲಾಗುತ್ತದೆ.
ಮಣ್ಣಿನ ಮತ್ತು ಜಲಸಂರಕ್ಷಣಾ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ. ಬರ ನಿರ್ವಹಣೆ
ಮೇವಿನ ಕೊರತೆ ತಡೆಯಲು ವಿಶೇಷ ವ್ಯವಸ್ಥೆ
ಜಾನುವಾರುಗಳಿಗೆ ಮೇವು ಪೂರೈಕೆಯನ್ನು ಖಚಿತಪಡಿಸಲು ಕೃಷಿ ಭೂಮಿ, ಅರಣ್ಯ ಪ್ರದೇಶ ಹಾಗೂ ಜಲಾಶಯಗಳ ನೀರು ಕಡಿಮೆಯಾದ ಬಳಿಕ ಲಭ್ಯವಾಗುವ ಭೂಮಿಯಲ್ಲಿ ಮೇವು ಬೆಳೆ ಬೆಳೆಯಲು ಸರ್ಕಾರ ಕ್ರಮ ಕೈಗೊಂಡಿದೆ. ಕಡಿಮೆ ಅವಧಿಯಲ್ಲಿ ಬೆಳೆದು ಹಲವು ಬಾರಿ ಕೊಯ್ಲು ಮಾಡಬಹುದಾದ ಮೇವು ಬೆಳೆಗಳಿಗೆ ನೀರಾವರಿ ಸೌಲಭ್ಯವಿರುವ ಜಮೀನುಗಳನ್ನು ಗುರುತಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗಳಿಗೆ ನೀಡಲಾಗಿದೆ.
ಮೇವಿಗೆ ಪ್ರತಿ ಕೆಜಿಗೆ ₹12 ಮೂಲ ಬೆಲೆ ಹಾಗೂ ಸೈಲೇಜ್ಗೆ ಪ್ರತಿ ಕೆಜಿಗೆ ಗರಿಷ್ಠ ₹8 ಬೆಲೆ ನಿಗದಿಪಡಿಸಲಾಗಿದೆ. ಸಾಗಣೆ ವೆಚ್ಚ ಇದರಲ್ಲಿ ಸೇರಿಲ್ಲ. ಜಾನುವಾರುಗಳಿಗೆ ಮೇವು ಲಭ್ಯವಾಗುವಂತೆ ನೋಡಿಕೊಳ್ಳಲು ಅರಣ್ಯ ಇಲಾಖೆಯು ಮುಂದಿನ ಆದೇಶದವರೆಗೆ ಸಾಮಾನ್ಯ ಹುಲ್ಲು ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
ಜಾನುವಾರುಗಳ ಸಂಖ್ಯೆ ಮತ್ತು ನೀರಿನ ಲಭ್ಯತೆಯನ್ನು ಆಧರಿಸಿ ಪ್ರತಿ ಕಂದಾಯ ವೃತ್ತದಲ್ಲಿ ಅಗತ್ಯವಿದ್ದಲ್ಲಿ ಮೇವು ಶಿಬಿರಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಮೇವು ಸಂಗ್ರಹ ಕೇಂದ್ರಗಳು, ನೀರು ಪೂರೈಕೆ, ನೈರ್ಮಲ್ಯ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದಿಂದ ಹೊರರಾಜ್ಯಗಳಿಗೆ ಮೇವು ಸಾಗಿಸುವುದನ್ನು ಸರ್ಕಾರ ನಿಷೇಧಿಸಿದೆ. ಅಲ್ಲದೆ, ಜಾನುವಾರುಗಳ ಮೇವಿಗಾಗಿ ಮೀಸಲಿಟ್ಟ ಹುಲ್ಲನ್ನು ಜೈವಿಕ ಇಂಧನ, ವಿದ್ಯುತ್ ಉತ್ಪಾದನೆ ಹಾಗೂ ಕೈಗಾರಿಕಾ ಪ್ಯಾಕೇಜಿಂಗ್ನಂತಹ ಇತರ ಉದ್ದೇಶಗಳಿಗೆ ಬಳಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಬರ ನಿರ್ವಹಣೆ
ಇದನ್ನೂ ಓದಿ : ತರಕಾರಿ ಮಾರುವವರ ತಲೆಯ ಮೇಲೆ ಕ್ಯಾಮೆರಾ! ಬೆಂಗಳೂರಿನ ಕೆಆರ್ ಮಾರ್ಕೆಟ್ನಲ್ಲಿ ಇದೆಂಥಾ ಟೆಕ್ ಪ್ರಯೋಗ? | Bengaluru KR Market
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ
ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಬಾವಿಗಳ ಆಳ ಹೆಚ್ಚಿಸುವುದು, ಹೂಳು ತೆಗೆಯುವುದು, ಖಾಸಗಿ ಕೊಳವೆಬಾವಿಗಳನ್ನು ಸ್ವಾಧೀನಕ್ಕೆ ಪಡೆದು ನೀರು ಪೂರೈಸುವುದು ಹಾಗೂ ತಾತ್ಕಾಲಿಕ ಪೈಪ್ಲೈನ್ಗಳ ಮೂಲಕ ಹೆಚ್ಚುವರಿ ನೀರು ಒದಗಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೀರಿನ ಮೂಲಗಳ ಸಮೀಪ ಅಂತರ್ಜಲ ಮರುಪೂರಣ ವ್ಯವಸ್ಥೆಗಳನ್ನೂ ನಿರ್ಮಿಸಲಾಗುತ್ತದೆ.
ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಶುದ್ಧ ಕುಡಿಯುವ ನೀರು, ಕೈತೊಳೆಯುವ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ನೀರಿನ ಮಾದರಿಗಳನ್ನು ನಿಯಮಿತವಾಗಿ ಜೈವಿಕ ಪರೀಕ್ಷೆಗೆ ಒಳಪಡಿಸಬೇಕು. ನೀರು ಪೂರೈಕೆ ಕಾಮಗಾರಿಗಳು ಪೂರ್ಣಗೊಳ್ಳದ ಪ್ರದೇಶಗಳಲ್ಲಿ ಟ್ಯಾಂಕರ್ ಅಥವಾ ತಾತ್ಕಾಲಿಕ ಪೈಪ್ಲೈನ್ ಮೂಲಕ ನೀರು ಒದಗಿಸಲು ಸೂಚಿಸಲಾಗಿದೆ.
ವಿದ್ಯುತ್ ಬಾಕಿ ಅಥವಾ ಸಂಪರ್ಕ ಕಡಿತದಿಂದ ಸ್ಥಗಿತಗೊಂಡಿರುವ ಕುಡಿಯುವ ನೀರಿನ ಯೋಜನೆಗಳನ್ನು ಪುನರಾರಂಭಿಸಲು ಸ್ಥಳೀಯ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಒಂದು ತಿಂಗಳ ಭದ್ರತಾ ಠೇವಣಿ ಮತ್ತು ಮರುಸಂಪರ್ಕ ಶುಲ್ಕ ಪಾವತಿಸಿ ಸ್ಥಗಿತಗೊಂಡ ವಿದ್ಯುತ್ ಸಂಪರ್ಕಗಳನ್ನು ಪುನಃ ಪಡೆಯಬಹುದು. ಹಳೆಯ ಬಾಕಿ ಉಳಿದಿದ್ದರೂ ನಿಗದಿತ ಶುಲ್ಕ ಪಾವತಿಸಿ ನೀರು ಪೂರೈಕೆ ಯೋಜನೆಗಳಿಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದರ ಜತೆಗೆ ಬರಪೀಡಿತ ತಾಲೂಕುಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ತಾಲೂಕು ಮಟ್ಟದ ಘಟಕಗಳು ಹಾಗೂ ಸಮನ್ವಯ ಸಮಿತಿಗಳನ್ನು ರಚಿಸಿ ಸಾರ್ವಜನಿಕ ಆರೋಗ್ಯ ಸೇವೆಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಒಟ್ಟಾರೆ, ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕೃಷಿ ಕಾರ್ಮಿಕರು ಹಾಗೂ ಜಾನುವಾರುಗಳ ಮೇಲಿನ ಬರದ ಪರಿಣಾಮವನ್ನು ತಗ್ಗಿಸಲು ನೀರು, ಮೇವು ಮತ್ತು ಜಲಸಂರಕ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ಈ ಕ್ರಮಗಳನ್ನು ಪ್ರಕಟಿಸಿದೆ. ಬರ ನಿರ್ವಹಣೆ
ಇದನ್ನೂ ನೋಡಿ : ಚುನಾವಣಾ ಭರವಸೆಗಳ ಜಾರಿಗೆ ಪಟ್ಟು: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರು, ಶೋಷಿತರ ಆಕ್ರೋಶ
