Lalit Modi: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಂಸ್ಥಾಪಕ ಲಲಿತ್ ಮೋದಿ ಇದೀಗ ಅಧಿಕೃತವಾಗಿ ಬ್ರಿಟನ್ ಪ್ರಜೆಯಾಗಿದ್ದಾರೆ. 2026ರ ಸೆಪ್ಟೆಂಬರ್ 15ರಂದು ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಇನ್ನು ಬ್ರಿಟನ್ ತಮ್ಮ ಮನೆ ಎಂದು ಹೇಳಿಕೊಂಡಿದ್ದಾರೆ.
ಆಕ್ಸ್ಫರ್ಡ್ ಯೂನಿಯನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಲಲಿತ್ ಮೋದಿ ತಮ್ಮ ಬ್ರಿಟಿಷ್ ಪೌರತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬ್ರಿಟನ್ ಜೊತೆಗಿನ ತಮ್ಮ ದೀರ್ಘಕಾಲದ ನಂಟು ಹಾಗೂ ಪೌರತ್ವ ಪಡೆಯುವ ಪ್ರಯಾಣದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸೆಪ್ಟೆಂಬರ್ 15ರಂದು ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿಶೇಷ ಸಮಾರಂಭದ ಮೂಲಕ ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ತಿಳಿಸಿದ್ದಾರೆ.
ಬ್ರಿಟನ್ ಹಲವು ವರ್ಷಗಳಿಂದ ತಮ್ಮ ಮನೆಯಾಗಿದೆ ಎಂದು ಹೇಳಿರುವ ಅವರು, ಅಲ್ಲಿನ ಜನರು, ಸಂಸ್ಥೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ʼಬ್ರಿಟಿಷ್ ಪ್ರಜೆಯಾಗಿರುವುದು ಒಂದು ಗೌರವ ಮತ್ತು ಜವಾಬ್ದಾರಿ. ಇದನ್ನು ಹೆಮ್ಮೆ, ಕೃತಜ್ಞತೆ ಹಾಗೂ ನಿಜವಾದ ಸೇರಿದ ಭಾವನೆಯೊಂದಿಗೆ ಸ್ವೀಕರಿಸುತ್ತೇನೆʼ ಎಂದು ಲಲಿತ್ ಮೋದಿ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನವೆಂಬರ್ 26ರಂದು ದೇಶವ್ಯಾಪಿ ರೈತರ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ
ವಿವಿಧ ಸಂಸ್ಕೃತಿ ಮತ್ತು ಅನುಭವಗಳ ನಡುವೆ ತಮ್ಮ ಜೀವನ ಸಾಗಿದ್ದು, ಇದೀಗ ತಾವು ಹೆಮ್ಮೆಯಿಂದ ಮನೆ ಎಂದು ಕರೆಯುವ ದೇಶಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ನೋಡಿ: ಋತ್ವಿಕ್ ಘಟಕ್ -100| ಮೇಘೆ ಡಾಕಾ ತಾರಾ ಸಿನಿಮಾ ಕುರಿತು ಮುರಳಿ ಕೃಷ್ಣ ಮಾತುಕತೆ Janashakthi Media
ಈ ವಿಶೇಷ ಸಂದರ್ಭದಲ್ಲಿ ತಮ್ಮ ಕುಟುಂಬ, ಸ್ನೇಹಿತರು ಹಾಗೂ ಆಕ್ಸ್ಫರ್ಡ್ ಯೂನಿಯನ್ಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ. ಕಿಂಗ್ ಚಾರ್ಲ್ಸ್ III ಅವರ ಜನ್ಮದಿನದ ವೇಳೆ ಈ ಘೋಷಣೆ ಹೊಂದಿಕೆಯಾಗಿರುವುದು ಮತ್ತಷ್ಟು ವಿಶೇಷ ಎಂದು ಹೇಳಿದ್ದಾರೆ. ಕೊನೆಯಲ್ಲಿ ‘ಗಾಡ್ ಸೇವ್ ದಿ ಕಿಂಗ್!’ ಎಂದು ಬರೆದುಕೊಂಡಿದ್ದಾರೆ.
