ಸಂವಿಧಾನವನ್ನು ಜಾರಿಗೆ ತರುವಲ್ಲಿ ಶಾಸಕಾಂಗ, ಕಾರ್ಯಾಂಗ ಎಡವಿವೆ: ಹಿರಿಯ ವಕೀಲ ರಂಜನ್ ರಾವ್

Please follow and like us:
ಅಲ್ಪಸಂಖ್ಯಾತರು ಪದೇಪದೇ ದೇಶಪ್ರೇಮ ಸಾಬೀತುಪಡಿಸಬೇಕಾಗಿಲ್ಲ; ನ್ಯಾಯಾಂಗದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಸಿಗಲಿ: ವಕೀಲರ ಅಭಿಪ್ರಾಯ
ಮಂಗಳೂರು: ಭಾರತದ ಸಂವಿಧಾನವು ಎಲ್ಲ ಧರ್ಮಗ್ರಂಥಗಳಿಗಿಂತಲೂ ಶ್ರೇಷ್ಠವಾದುದು. ದೇಶದ ಪ್ರತಿಯೊಬ್ಬ ನಾಗರಿಕರೂ ನಿತ್ಯ ನೆನಪಿಸಿಕೊಳ್ಳಬೇಕಾದ ಗ್ರಂಥ ಸಂವಿಧಾನ. ಇಂತಹ ಮೌಲ್ಯಯುತ ಸಂವಿಧಾನ ಅಸ್ತಿತ್ವದಲ್ಲಿದ್ದರೂ ಅದರ ಆಶಯಗಳನ್ನು ಜಾರಿಗೆ ತರುವಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಗಳು ಎಡವಿವೆ ಎಂದು ಹಿರಿಯ ವಕೀಲ ಪಿ. ರಂಜನ್ ರಾವ್ ಅಭಿಪ್ರಾಯಪಟ್ಟರು. ಸಂವಿಧಾನ

ಅಖಿಲ ಭಾರತ ವಕೀಲರ ಒಕ್ಕೂಟದ (ಎಐಎಲ್‌ಯು) ವತಿಯಿಂದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಷಯ ಮಂಡಿಸಿ ಮಾತನಾಡಿದರು.

ವಿಭಿನ್ನ ಧರ್ಮ ಮತ್ತು ಸಿದ್ಧಾಂತಗಳ ಹಿನ್ನೆಲೆಯ ನಾಯಕರಾದ ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರು ಮೊದಲಾದವರ ಮುತುವರ್ಜಿಯಿಂದ ಜಾತ್ಯತೀತ ಹಾಗೂ ಧರ್ಮನಿರಪೇಕ್ಷ ಸಂವಿಧಾನ ಭಾರತದಲ್ಲಿ ಅಸ್ತಿತ್ವಕ್ಕೆ ಬಂತು. ಜನರಿಗೆ ಹಕ್ಕು ಮತ್ತು ಭದ್ರತೆ ಒದಗಿಸುವ ಇಂತಹ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾದಾಗ ಅವುಗಳನ್ನು ರಕ್ಷಿಸುವ ಹೊಣೆ ನ್ಯಾಯಾಂಗದ ಮೇಲಿದೆ. ಶಾಸಕಾಂಗ ರೂಪಿಸುವ ಕಾನೂನುಗಳು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದ್ದರೆ ಅವುಗಳನ್ನು ಪ್ರಶ್ನಿಸುವ ಮತ್ತು ವಿಮರ್ಶಿಸುವ ಹಕ್ಕನ್ನು ಸಂವಿಧಾನ ನ್ಯಾಯಾಲಯಗಳಿಗೆ ನೀಡಿದೆ ಎಂದು ಹೇಳಿದರು.

ಭಾರತೀಯರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿನ ಆಳ್ವಿಕೆಗೆ ಒಳಪಟ್ಟಿದ್ದೇವೆ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವು ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸುವ ಹಕ್ಕನ್ನು ನೀಡಿದೆ. ಆದರೆ, ತಮ್ಮ ಧರ್ಮವನ್ನು ಆಚರಿಸುವಾಗ ಇತರ ಧರ್ಮಗಳನ್ನು ದೂಷಿಸುವ ಅಗತ್ಯವಿಲ್ಲ. ಶಾಸಕಾಂಗದ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಂಗದ ಮಹತ್ವವನ್ನು ಕಡೆಗಣಿಸುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತುರ್ತು ಪರಿಸ್ಥಿತಿಯ ಕಾಲಘಟ್ಟ ಮತ್ತು ಬಾಬರಿ ಮಸೀದಿ ಪ್ರಕರಣದ ತೀರ್ಪಿನ ಸಂದರ್ಭದಲ್ಲಿ ನ್ಯಾಯಾಂಗದ ವಿಶ್ವಾಸಾರ್ಹತೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಾನ್ಯತೆಗೆ ಧಕ್ಕೆಯಾಯಿತು ಎಂದು ಅಭಿಪ್ರಾಯಪಟ್ಟ ಅವರು, ನ್ಯಾಯಾಧೀಶರಾಗಿ ಜವಾಬ್ದಾರಿ ವಹಿಸಿಕೊಂಡವರು ಸಾಮಾನ್ಯರಲ್ಲಿರುವ ಭಾವನಾತ್ಮಕ ಸೆಳೆತಗಳಿಂದ ದೂರವಿದ್ದು, ನಿಷ್ಪಕ್ಷಪಾತವಾಗಿ ನ್ಯಾಯದಾನ ಮಾಡಬೇಕು ಎಂದರು.

ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಪದೇಪದೇ ನಡೆಯುತ್ತಿರುವುದು ಖೇದಕರ. ಇಂತಹ ಉಲ್ಲಂಘನೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಅಲ್ಪಸಂಖ್ಯಾತರು ತಮ್ಮ ದೇಶಪ್ರೇಮವನ್ನು ಪದೇಪದೇ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ರಂಜನ್ ರಾವ್ ಹೇಳಿದರು. ಸಂವಿಧಾನ

ಇದನ್ನೂ ಓದಿ : ಲೇಬರ್ ಕೋಡ್ ರದ್ದತಿ, ಕಲ್ಯಾಣ ನಿಧಿ ಬಳಕೆಗೆ ಆಗ್ರಹ: ನವೆಂಬರ್ 16ರಂದು ಕಟ್ಟಡ ಕಾರ್ಮಿಕರ ದೇಶವ್ಯಾಪಿ ಪ್ರತಿಭಟನೆ

ಹಿರಿಯ ವಕೀಲ ಬಿ.ಎ. ಮೊಹಮ್ಮದ್ ಹನೀಫ್ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕುಗಳ ಕುರಿತು ಮಾತನಾಡಿದರೆ ಜೈಲಿಗಟ್ಟುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಕಾನೂನು ವ್ಯವಸ್ಥೆಯಲ್ಲಿ ಪ್ರಬಲ ಸಮುದಾಯಗಳ ಪ್ರಾತಿನಿಧ್ಯ ಹೆಚ್ಚಿರುವುದರಿಂದ ತುಳಿತಕ್ಕೊಳಗಾದ ಸಮುದಾಯಗಳ ನೋವು ಮತ್ತು ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಹೀಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಎಲ್ಲ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೀಸಲಾತಿ ಜಾರಿಯಾಗಬೇಕು. ವಿವಿಧ ಸಮುದಾಯಗಳ ಜನರಿಗೆ ನ್ಯಾಯಾಧೀಶರಾಗುವ ಅವಕಾಶ ದೊರೆಯಬೇಕು ಎಂದು ಒತ್ತಾಯಿಸಿದರು.

ವಕೀಲ ಪ್ರವೀಣ್ ಪಿಂಟೋ ಮಾತನಾಡಿ, ಸಂವಿಧಾನವನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಸಂವಿಧಾನದ 142ನೇ ವಿಧಿಯು ನ್ಯಾಯಾಲಯಗಳಿಗೆ ಸಂಪೂರ್ಣ ನ್ಯಾಯ ಒದಗಿಸುವ ಉದ್ದೇಶದಿಂದ ಅಗತ್ಯ ಆದೇಶಗಳನ್ನು ಹೊರಡಿಸುವ ಅಧಿಕಾರ ನೀಡಿದೆ. ಆದರೆ, ಗುಜರಾತ್‌ನ ಗೋಧ್ರಾ ದುರಂತ, ಮಣಿಪುರ ಗಲಭೆ ಹಾಗೂ ಎಸ್‌ಐಆರ್‌ ಸೇರಿದಂತೆ ಹಲವು ಪ್ರಮುಖ ಸಂದರ್ಭಗಳಲ್ಲಿ ಸಂವಿಧಾನದ 142ನೇ ವಿಧಿಯ ಆಶಯಕ್ಕೆ ಅನುಗುಣವಾಗಿ ನ್ಯಾಯಾಲಯಗಳು ತಮ್ಮ ನಿಲುವು ವ್ಯಕ್ತಪಡಿಸದಿರುವುದು ಖೇದಕರ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಸವರಾಜ್ ಕೋರಿಮಠ, ವಕೀಲ ವೃತ್ತಿ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಹೊಂದಿದೆ. ಈ ಗೌರವಕ್ಕೆ ತಕ್ಕಂತೆ ವಕೀಲರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಸಾಮಾನ್ಯರ ದೈನಂದಿನ ಬದುಕಿನ ಕಷ್ಟನಷ್ಟಗಳಿಗೆ ನೆರವಾಗುವ ಕೆಲಸ ಮಾಡಬೇಕು ಎಂದು ಹೇಳಿದರು.

ಇಂದಿನ ಕೃತಕ ಬುದ್ಧಿಮತ್ತೆಯ ಜಾಲದಲ್ಲಿ ವಕೀಲರು ಸಿಲುಕಿಕೊಂಡು ತಮ್ಮ ಜ್ಞಾನಾರ್ಜನೆಯ ಮಟ್ಟವನ್ನು ಕಳೆದುಕೊಳ್ಳಬಾರದು. ತಂತ್ರಜ್ಞಾನವನ್ನು ಬಳಸುವ ಜೊತೆಗೆ ಅಧ್ಯಯನ ಮತ್ತು ಜ್ಞಾನವೃದ್ಧಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಯಶವಂತ ಮರೋಳಿ ವಹಿಸಿದ್ದರು. ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೌತಮ್ ಬಿ.ಪಿ., ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ದಿನೇಶ್ ನಾಯಕ್, ವಕೀಲರಾದ ಶಾಲಿನಿ ಮನೋಹರ್, ನಿತಿನ್ ಕುತ್ತಾರ್, ಚರಣ್ ಶೆಟ್ಟಿ ಪಂಜಿಮೊಗರು, ಮನೋಜ್ ವಾಮಂಜೂರು, ರಾಮಚಂದ್ರ ಬಬ್ಬುಕಟ್ಟೆ, ದಿನೇಶ್ ಉಳಿಪಾಡಿ, ಬಿ.ಎಂ. ಭಟ್ ಮೊದಲಾದವರು ಉಪಸ್ಥಿತರಿದ್ದರು. ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ನಿತಿನ್ ಕುತ್ತಾರ್ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಇದನ್ನೂ ನೋಡಿ : ದತ್ತು/ಮೆಂಟರ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮಾರಾಟ ಮಾಡಲು ಮುಂದಾದ ಡಿ.ಕೆ.ಶಿವಕುಮಾರ್ ಸರ್ಕಾರ..Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *