ಸೋನಿಯಾ ಗಾಂಧಿ ಜೀವನಗಾಥೆಗೆ ಸಿನಿಮಾ ರೂಪ: 2 ಕೋಟಿ ರೂ. ದೇಣಿಗೆ ಘೋಷಿಸಿದ ʼಕೈʼ ನಾಯಕ

Please follow and like us:

‘Belonging: A Journey of Love’: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಮತ್ತು ರಾಜಕೀಯ ಪಯಣವನ್ನು ಆಧರಿಸಿ ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ಮಿಸಲು ನಿರ್ಧರಿಸಲಾಗಿದೆ. ಸೋನಿಯಾ ಗಾಂಧಿ ಅವರ ಆತ್ಮಕಥೆ ʼಬೆಲಾಂಗಿಂಗ್: ಎ ಜರ್ನಿ ಆಫ್ ಲವ್ʼ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮೂಡಿಬರಲಿದೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಘೋಷಿಸಿದ್ದಾರೆ.

ಸಂಗಾರೆಡ್ಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿನಿಮಾ ನಿರ್ಮಾಣಕ್ಕೆ ಸಂಗಾರೆಡ್ಡಿ ಕ್ಷೇತ್ರದ ನಾಯಕರು ಮತ್ತು ಕಾರ್ಯಕರ್ತರು ಆರ್ಥಿಕವಾಗಿ ನೆರವು ನೀಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜುಲಕಂಟಿ ಅಂಜನೇಲು ಅವರು ಚಿತ್ರ ನಿರ್ಮಾಣಕ್ಕಾಗಿ 2 ಕೋಟಿ ರೂ.  ದೇಣಿಗೆ ನೀಡುವುದಾಗಿ ಘೋಷಿಸಿದರು.

ಚಿತ್ರ ನಿರ್ಮಾಣದ ಪ್ರಕ್ರಿಯೆ ಆರಂಭಿಸಲು 50 ಸದಸ್ಯರ ಸಮಿತಿ ರಚಿಸುವಂತೆ ಜಗ್ಗಾ ರೆಡ್ಡಿ ಸಲಹೆ ನೀಡಿದರು. ಗಾಂಧಿ ಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರಿಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ಈ ಕೆಲಸ ನಡೆಯಲಿದೆ ಎಂದರು. ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡಿ, ಅಗತ್ಯ ಬಜೆಟ್ ಸಂಗ್ರಹಿಸುವಂತೆ ಪಕ್ಷದ ಮುಖಂಡರಿಗೆ ಕರೆ ನೀಡಿದರು. ಸಿದ್ಧತೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಟಿಪಿಸಿಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರನ್ನು ಆಹ್ವಾನಿಸಿ ಚಿತ್ರೀಕರಣಕ್ಕೆ ಚಾಲನೆ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.

ಸೋನಿಯಾ ಗಾಂಧಿ ಅವರ ಜೀವನದ ವಿವಿಧ ಹಂತಗಳು, ಇಂದಿರಾ ಗಾಂಧಿ ಅವರ ಸೊಸೆಯಾಗಿ, ರಾಜೀವ್ ಗಾಂಧಿ ಅವರ ಪತ್ನಿಯಾಗಿ ಹಾಗೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ತಾಯಿಯಾಗಿ ಅವರು ಎದುರಿಸಿದ ಸವಾಲುಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ಕುಟುಂಬ ಎದುರಿಸಿದ ಸಂಕಷ್ಟ, ಮಕ್ಕಳನ್ನು ಬೆಳೆಸಿದ ರೀತಿ ಹಾಗೂ ಸೋನಿಯಾ ಗಾಂಧಿ ಅವರ ರಾಜಕೀಯ ಪ್ರವೇಶ ಮತ್ತು ಪಯಣವೂ ಸಿನಿಮಾದಲ್ಲಿ ಇರಲಿದೆ ಎಂದು ಜಗ್ಗಾ ರೆಡ್ಡಿ ವಿವರಿಸಿದರು.

ಸೋನಿಯಾ ಗಾಂಧಿ ಅವರು ಭಾರತದ ವೈವಿಧ್ಯಮಯ ರಾಜಕೀಯ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ತಮ್ಮದೇ ಆದ ರಾಜಕೀಯ ಗುರುತನ್ನು ರೂಪಿಸಿಕೊಂಡಿದ್ದಾರೆ. ಪ್ರಧಾನಿಯಾಗುವ ಅವಕಾಶಗಳು ಬಂದಿದ್ದರೂ ಅವರು ಆ ಹುದ್ದೆಯ ಮೇಲೆ ಆಸಕ್ತಿ ತೋರಲಿಲ್ಲ ಎಂದು ಜಗ್ಗಾ ರೆಡ್ಡಿ ಹೇಳಿದರು. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ನಾಯಕರು ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಒತ್ತಾಯಿಸಿದರೂ, ಸೋನಿಯಾ ಗಾಂಧಿ ಅದನ್ನು ನಿರಾಕರಿಸಿ ಮನಮೋಹನ್ ಸಿಂಗ್ ಅವರಿಗೆ ಅವಕಾಶ ನೀಡಿದ್ದರು. ಅವರ ಈ ನಿರ್ಧಾರ ರಾಜಕೀಯ ಇತಿಹಾಸದ ಮಹತ್ವದ ಘಟನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ‘ನಿನ್ನನ್ನೂ ಕೊಂದುಬಿಡುತ್ತಾರೆ’ ಎಂದಿದ್ದ ಸೋನಿಯಾ ಗಾಂಧಿ: ರಾಜೀವ್ ಹತ್ಯೆಯ ರೋಚಕ ಕಥೆ!

ಇದಲ್ಲದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ರೂಪುಗೊಳ್ಳುವಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರ ಆಲೋಚನೆಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಅವರು ತಿಳಿಸಿದರು. ದೇಶದಲ್ಲಿ ಮತ್ತೊಮ್ಮೆ ಗಾಂಧಿ ಕುಟುಂಬದ ವ್ಯಕ್ತಿಯೊಬ್ಬರು ಪ್ರಧಾನಿಯಾಗಬೇಕೆಂಬ ಜನರ ಆಶಯವಿದೆ. ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ಸೋನಿಯಾ ಗಾಂಧಿ ಬಯಸಿದ್ದಾರೆ ಎಂದೂ ಜಗ್ಗಾ ರೆಡ್ಡಿ ಹೇಳಿದರು.

ಇದನ್ನೂ ನೋಡಿ: ಎಸ್‌ಐಆರ್‌ ರದ್ದತಿಗೆ ಪಟ್ಟು: ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ‘ಇಂಡಿಯಾ’ ಕೂಟದಿಂದ ಬೃಹತ್‌ ಪ್ರತಿಭಟನೆ Janashakthi

ಸೋನಿಯಾ ಗಾಂಧಿ ಅವರ ಆತ್ಮಕಥೆಯ ಪ್ರತಿಗಳನ್ನು ಖರೀದಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ವಿತರಿಸುವುದಾಗಿಯೂ ಅವರು ತಿಳಿಸಿದರು. ಆ ಮೂಲಕ ಪಕ್ಷದ ಕಾರ್ಯಕರ್ತರು ಸೋನಿಯಾ ಗಾಂಧಿ ಅವರ ಜೀವನ, ಹೋರಾಟ ಮತ್ತು ರಾಜಕೀಯ ಅನುಭವಗಳನ್ನು ತಿಳಿದುಕೊಳ್ಳಲು ಸಹಾಯವಾಗಲಿದೆ ಎಂದರು.

Please follow and like us:
Donate Janashakthi Media

Leave a Reply

Your email address will not be published. Required fields are marked *