ಪ್ರೀತಿ ಮತ್ತು ಕ್ರಾಂತಿಯ ವಿಚಾರಗಳಲ್ಲಿ ಜಗತ್ತಿನ ಎಲ್ಲ ಯುವಜನರಿಗೂ ಸ್ಫೂರ್ತಿಯನ್ನು ನೀಡಿದವನು ಚೆಗೆವಾರ. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಜಗತ್ತಿನಾದ್ಯಂತ ಬಳಸುವ ಅಸ್ತ್ರವೂ ಚೆಗೆವಾರ. ಇವನ ಬದುಕನ್ನು ಪರಿಚಯಿಸುವ ಹಾಗೂ ಇಬ್ಬರು ಸಹಕ್ರಾಂತಿಕಾರಿಗಳು ಮಹೋನ್ನತ ಉದ್ದೇಶಕ್ಕಾಗಿ ಕೆಲಸ ಆರಂಭಿಸಿ, ತಮ್ಮ ಖಾಸಗಿ ಬದುಕಿನಲ್ಲೂ ಒಟ್ಟಿಗೆ ಹೆಜ್ಜೆ ಹಾಕುವ, ಆ ಕಾಲಾವಧಿಯ ಎಲ್ಲ ಮಗ್ಗುಲುಗಳ ಅನುಭವವೇ ‘ಚೆಗೆವಾರ ಜೊತೆಯಲ್ಲಿ ನನ್ನ ಬದುಕಿನ ನೆನಪು’ ಎಂಬ ಕೃತಿ.
ಹೆಚ್.ಆರ್. ನವೀನ್ಕುಮಾರ್, ಹಾಸನ
ಜನತೆಯನ್ನು ಕಿತ್ತುತಿನ್ನುತ್ತಿದ್ದ ಬಡತನ ಮತ್ತು ಶೋಷಣೆಗೆ ಕಾರಣವಾಗಿದ್ದ ಬಟಿಸ್ಟಾ ಪ್ರಭುತ್ವವನ್ನು ಕಿತ್ತೆಸೆದು, ಜನತೆಯ ಅಧಿಕಾರ ಸ್ಥಾಪನೆಗಾಗಿ ನಡೆದ ಕ್ಯೂಬಾ ಕ್ರಾಂತಿಯಲ್ಲಿ ಫಿಡೆಲ್ ಕ್ಯಾಸ್ಟ್ರೊ ಜೊತೆಗೆ ಪ್ರಮುಖ ಪಾತ್ರ ವಹಿಸಿದವನು ಚೆಗೆವಾರ. ಚೆ ಜೊತೆ ಗೆರಿಲ್ಲಾ ಪಡೆಯಲ್ಲಿದ್ದುಕೊಂಡು ಕ್ಯೂಬಾದ ವಿಮೋಚನಾ ಹೋರಾಟದಲ್ಲಿ ತೊಡಗಿಸಿಕೊಂಡ ಅಲೈಡಾ ಮಾರ್ಚ್, ನಂತರದ ದಿನಗಳಲ್ಲಿ ಆತನ ಬಾಳಸಂಗಾತಿಯಾಗುತ್ತಾರೆ. ಈ ಕೃತಿ ಇವರಿಬ್ಬರ ವೈಯಕ್ತಿಕ ಬದುಕಿನ ಜೊತೆಗೆ, ಆ ಸಂದರ್ಭದಲ್ಲಿನ ಕ್ಯೂಬಾದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸರ ಹಾಗೂ ಇವರ ಹೋರಾಟದ ಕುರಿತು ಬೆಳಕು ಚೆಲ್ಲುತ್ತದೆ.
ಅಲೈಡಾ ತಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಆರಂಭವಾಗುವ ಈ ಕೃತಿಯಲ್ಲಿ, ಅವರು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದದ್ದು, ಆ ಮೂಲಕ ಚೆಗೆವಾರನ ಪರಿಚಯವಾದದ್ದು, ಜೊತೆಯಲ್ಲೇ ಕ್ರಾಂತಿಯ ಕೆಲಸದಲ್ಲಿ ತೊಡಗಿಸಿಕೊಂಡದ್ದು, ಕ್ರಾಂತಿಯ ನಂತರದ ಕ್ಯೂಬಾದ ಸ್ಥಿತಿಗತಿ, ಅದರ ಅಭಿವೃದ್ಧಿಗಾಗಿ ನಡೆದ ಚರ್ಚೆಗಳು ಹಾಗೂ ಚೆಗೆವಾರನ ಕೆಲಸಗಳ ಕುರಿತು ಅತ್ಯಂತ ಸ್ವಾರಸ್ಯಕರವಾಗಿ ವಿವರಿಸಲಾಗಿದೆ. ಇದರ ಜೊತೆಗೆ, ಉತ್ಕಟ ಪ್ರೇಮದ ಸಂಕೇತವಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಚೆ ಹೇಗೆ ಜೀವಿಸುತ್ತಿದ್ದ ಎಂಬ ಅಂಶಗಳನ್ನೂ ಅಲೈಡಾ ಮುಕ್ತವಾಗಿ ಚರ್ಚಿಸಿದ್ದಾರೆ.
ಇದುವರೆಗೆ ಲಭ್ಯವಿರುವ ಬಹುತೇಕ ಕೃತಿಗಳಲ್ಲಿ ಚೆಗೆವಾರನ ಹೋರಾಟ ಮತ್ತು ಆತನ ಕ್ರಾಂತಿಕಾರಿ ಚಟುವಟಿಕೆಗಳ ಕುರಿತು ಮಾತ್ರ ತಿಳಿದುಕೊಳ್ಳಲು ಸಾಧ್ಯವಾಗಿದೆ. ಆದರೆ ಈ ಕೃತಿಯು ಚೆಗೆವಾರನ ವೈಯಕ್ತಿಕ ಬದುಕು, ಆತನ ಯೋಚನಾ ಲಹರಿ ಮತ್ತು ಯೋಜನೆಗಳು, ಓದು, ಬರಹ, ಸೈದ್ಧಾಂತಿಕ ಹಾಗೂ ವೈಚಾರಿಕ ಸ್ಪಷ್ಟತೆಯ ಕುರಿತು ವಿವರವಾಗಿ ಚರ್ಚಿಸುತ್ತದೆ.
ಜಗತ್ತಿನ ಅತ್ಯುತ್ತಮ ಸ್ನೇಹಿತರು ಎಂಬ ಹೆಗ್ಗಳಿಕೆಯನ್ನು ಫಿಡೆಲ್ ಕ್ಯಾಸ್ಟ್ರೊ ಮತ್ತು ಚೆಗೆವಾರ ಪಡೆದಂತೆ, ಸಮಾಜವಾದದ ಸಾಧನೆಗಾಗಿ ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಆದರ್ಶ ದಂಪತಿಗಳಾಗಿ ಚೆ ಮತ್ತು ಅಲೈಡಾ ಗೋಚರಿಸುತ್ತಾರೆ.
ಚೆ ಕೇವಲ ಬಂದೂಕು ಹಿಡಿದು ಶತ್ರು ಸೈನ್ಯದ ವಿರುದ್ಧ ಹೋರಾಡಿದ ಯೋಧ ಮಾತ್ರವಲ್ಲ. ಬದಲಿಗೆ, ಸ್ವತಃ ತಾನೊಬ್ಬ ಕವಿಯಾಗಿ ಪಾಬ್ಲೊ ನೆರುದನನ್ನು ತನ್ನೊಳಗೆ ಆವರಿಸಿಕೊಂಡಿದ್ದ. ಕ್ಯೂಬಾದ ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು, ಅವರ ಜೀವನಮಟ್ಟವನ್ನು ಉತ್ತಮಪಡಿಸಲು ಜನಪರ ಯೋಜನೆಗಳನ್ನು ಜಾರಿಗೆ ತಂದವನು. ಇಂದು ಕ್ಯೂಬಾ ತೋರುತ್ತಿರುವ ಮಾನವ ಅಭಿವೃದ್ಧಿಯ ಸಾಧನೆಗಳ ಹಿಂದೆ ಚೆ, ಕ್ಯಾಸ್ಟ್ರೊ ಮತ್ತು ಅವರ ಸಂಗಡಿಗರು ಮಾಡಿದ ಕೆಲಸಗಳು ಪ್ರತಿಫಲಿಸುತ್ತಿವೆ.
ಇದನ್ನೂ ಓದಿ : ಎಡಪಂಥೀಯರ ಪುಸ್ತಕ ಮಳಿಗೆಗಳ ಬಗ್ಗೆ ಬಾಂಗ್ಲಾದೇಶೀ ಲೇಖಕಿ ತಸ್ಲಿಮಾ ಪ್ರಶ್ನೆಗಳು “ಅರ್ಥಹೀನ, ತರ್ಕಹೀನ ”
ಚೆ ನ ಜ್ಞಾನದ ಹಸಿವಿನ ಕುರಿತು ಅಲೈಡಾ ಹೀಗೆ ಬರೆಯುತ್ತಾರೆ:
“ನಮ್ಮ ಅತ್ಯಂತ ಸಂತಸದ ಕ್ಷಣಗಳು ಕಳೆದುಹೋದದ್ದು ಪುಸ್ತಕಗಳನ್ನು ಹಂಚಿಕೊಳ್ಳುವುದರಲ್ಲಿ. ಬದುಕಿನುದ್ದಕ್ಕೂ ಅವನೊಬ್ಬ ಓದುಬಾಕ – ತಣಿಯದ ಓದಿನ ಹಸಿವಿದ್ದ ಓದುಗ. ಒಂದು ಜಾಗದಿಂದ ಇನ್ನೊಂದಕ್ಕೆ ಪ್ರಯಾಣಿಸುವಾಗ ಸಿಗುವ ಸಮಯವನ್ನು ಉಪಯೋಗಿಸಿಕೊಂಡು ದಿನಕ್ಕೊಂದರಂತೆ ಪುಸ್ತಕವನ್ನು ಓದುತ್ತಿದ್ದ. ಅವನಿಗೆ ಅತ್ಯಂತ ಪ್ರೀತಿಪಾತ್ರ ಪುಸ್ತಕಗಳಲ್ಲಿ ಒಂದು ‘ಡಾನ್ ಕ್ವಿಕ್ಸೋಟ್’ ಕಾದಂಬರಿ. ಅದನ್ನು ಆರು ಬಾರಿ ಓದಿದ್ದ. ಇನ್ನೊಂದು ಕಾರ್ಲ್ ಮಾರ್ಕ್ಸ್ ಅವರ ‘ಕ್ಯಾಪಿಟಲ್’ (ಬಂಡವಾಳ). ಅದನ್ನು ಅವನು ಮಾನವನ ಜ್ಞಾನಕ್ಕೆ ನಿಲ್ಲಿಸಿದ ಸ್ಮಾರಕ ಎಂದೇ ಭಾವಿಸಿದ್ದ. ಅವನಿಗೆ ಮುಖ್ಯವಾದ ಕೃತಿ ಎಂದು ಕಂಡದ್ದನ್ನು ಓದಲು ನನಗೂ ಪ್ರೇರೇಪಿಸುತ್ತಿದ್ದ. ನಂತರ ನಾವು ಅದರ ಬಗ್ಗೆ ಚರ್ಚಿಸುತ್ತಿದ್ದೆವು. ನಾವು ಲ್ಯಾಟಿನ್ ಅಮೆರಿಕಾದ ಬಹುತೇಕ ಪ್ರಮುಖ ಸಾಹಿತ್ಯ ಕೃತಿಗಳನ್ನು, ರಷ್ಯಾದ ಕಥೆಗಳನ್ನು, ಸೋವಿಯತ್ ಸಾಹಿತ್ಯವನ್ನು ಮತ್ತು ಅಮೆರಿಕಾದ ಅತ್ಯುತ್ತಮ ಲೇಖಕರ ಕೃತಿಗಳನ್ನು ಓದಿದೆವು.
ಅನೇಕ ಬಾರಿ ‘ಚೆ’ ತನ್ನ ಗೃಹಕಚೇರಿಯಿಂದಲೂ ಕೆಲಸ ಮಾಡುತ್ತಿದ್ದ. ಅದನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ಅವನಿಗೆ ಇಷ್ಟ. ಅಲ್ಲಿ ಅವನು ತನ್ನ ಅಮೂಲ್ಯ ಪುಸ್ತಕಗಳನ್ನು ಜೋಡಿಸಿಕೊಂಡಿದ್ದ. ಅವುಗಳಲ್ಲಿ ಬಹುತೇಕ ಪುಸ್ತಕಗಳಲ್ಲಿ ಅವನ ಅಭಿಪ್ರಾಯಗಳು, ಟಿಪ್ಪಣಿಗಳು ದಾಖಲಾಗಿರುತ್ತಿದ್ದವು. ಆ ಸಣ್ಣ ಕೋಣೆ ಅವನ ಆಶ್ರಯತಾಣವಾಗಿತ್ತು. ಕಪಾಟುಗಳಲ್ಲಿದ್ದ ಪುಸ್ತಕಗಳು ಅವನ ವೈವಿಧ್ಯಮಯ ಆಸಕ್ತಿಯನ್ನು ಸೂಚಿಸುತ್ತಿದ್ದವು. ಅದರಲ್ಲಿ ಜಾಗತಿಕ ಸಾಹಿತ್ಯವಿತ್ತು. ಅವನ ನೆಚ್ಚಿನ ಲ್ಯಾಟಿನ್ ಅಮೆರಿಕಾದ ಕವಿಗಳಾದ ಪಾಬ್ಲೊ ನೆರುದ ಮತ್ತು ಸೀಸರ್ ವ್ಯಾಲೆಜೊ ಅವರ ಕೃತಿಗಳಿದ್ದವು. ಜೀವನಚರಿತ್ರೆ, ಇತಿಹಾಸ, ವಿಜ್ಞಾನ, ಅರ್ಥಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ವಿಶೇಷವಾಗಿ ಮಾರ್ಕ್ಸ್ವಾದಿ ಚಿಂತನೆಯ ಅಭಿಜಾತ ಕೃತಿಗಳಿದ್ದವು. ಯುದ್ಧತಂತ್ರ, ರಾಜಕೀಯ, ಸಮಾಜಶಾಸ್ತ್ರ, ಚೆಸ್ ಆಟದ ಕೈಪಿಡಿಗಳು ಮತ್ತು ಇನ್ನೂ ಅನೇಕ ರೀತಿಯ ಪುಸ್ತಕಗಳಿದ್ದವು. ಪುಸ್ತಕಗಳಲ್ಲಿ ಅವನು ಮಾಡಿಕೊಂಡಿದ್ದ ಟಿಪ್ಪಣಿಗಳು ಅವನ ಚಿಂತನೆಯ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ನೀಡುತ್ತವೆ.”
ಕ್ಯೂಬಾದಲ್ಲಿ ಕ್ರಾಂತಿಯ ಕೆಲಸ ಪೂರ್ಣಗೊಂಡ ನಂತರ, ಇನ್ನು ಮುಂದೆ ತನ್ನ ಕೆಲಸ ಅತ್ಯಂತ ಸಂಕಷ್ಟದಲ್ಲಿರುವ ಮತ್ತೊಂದು ದೇಶದ ಜನತೆಯ ವಿಮೋಚನೆಗಾಗಿ ಎಂದು ಭಾವಿಸಿ ಬೊಲಿವಿಯಾ ಮತ್ತು ಕಾಂಗೋ ದೇಶಗಳಿಗೆ ಚೆ ಹೊರಟಾಗ ಅಲೈಡಾ ಅನುಭವಿಸಿದ ಮಾನಸಿಕ ತಳಮಳ, ಆತನ ಆದರ್ಶಗಳಿಗಾಗಿ ಏಕಾಂಗಿಯಾಗಿ ಮಕ್ಕಳನ್ನು ಸಾಕಿದ ರೀತಿ ಹಾಗೂ ಅಂತಿಮವಾಗಿ ಚೆಗೆವಾರನನ್ನು ಸಾಮ್ರಾಜ್ಯಶಾಹಿ ಶಕ್ತಿಗಳು ಕೊಲೆಗೈದು, ಆತನ ದೇಹ ಯಾರಿಗೂ ಸಿಗದಂತೆ ಹೂತಿಟ್ಟ 30 ವರ್ಷಗಳ ನಂತರ ಅದನ್ನು ಪತ್ತೆಹಚ್ಚಿ, ಅವಶೇಷಗಳನ್ನು ಕ್ಯೂಬಾಗೆ ತಂದು ಗೌರವ ಸಲ್ಲಿಸಿದ ಸಂದರ್ಭ – ಇವೆಲ್ಲವನ್ನೂ ಈ ಕೃತಿ ವಿವರಿಸುತ್ತದೆ. ಈ ಸಂದರ್ಭದಲ್ಲಿ ಚೆಯ ದೊಡ್ಡ ಮಗಳು ಆಡಿದ ಮಾತುಗಳು, ಚೆ ಮತ್ತು ಅಲೈಡಾ ಅವರ ಆಲೋಚನೆಗಳಂತೆ ಮಕ್ಕಳ ಮೂಲಕವೂ ಕ್ರಾಂತಿಯ ಪರಂಪರೆ ಮುಂದುವರಿಯುವುದನ್ನು ಸೂಚಿಸುತ್ತವೆ.
“ಮತ್ತೆ ರಸ್ತೆ ಮಾಯವಾಗುವವರೆಗೂ ನಾವು ಜೊತೆಯಲ್ಲಿ ಸಾಗೋಣ” ಎಂಬುದು ಕ್ರಾಂತಿಯ ಸಂಗಾತಿ ಹಾಗೂ ಬಾಳಸಂಗಾತಿ ಅಲೈಡಾಗೆ ಚೆ ಬರೆದ ಪದ್ಯದ ಸಾಲು. ಈ ಸಾಲುಗಳು ಸಂಗಾತಿಗಳ ಸಹಪಯಣವನ್ನು ಸೂಚಿಸುತ್ತವೆ. ಎಂತಹ ಸಂಕಷ್ಟದಲ್ಲೂ ಜೊತೆಯಾಗಿರಲು ಬಯಸುವ ಮನೋಭಾವವನ್ನು ಪ್ರತಿಬಿಂಬಿಸುತ್ತವೆ.
ಚೆಗೆವಾರನ ಬಾಳಸಂಗಾತಿ ಅಲೈಡಾ ಮಾರ್ಚ್ ಇಂಗ್ಲಿಷ್ನಲ್ಲಿ ರಚಿಸಿರುವ ಈ ಕೃತಿಯನ್ನು ಮಂಜುನಾಥ್ ಬಿ.ಆರ್. ಅವರು ಅತ್ಯಂತ ಸರಳವಾಗಿ ಹಾಗೂ ಎಲ್ಲಿಯೂ ಅಡೆತಡೆಗಳಿಲ್ಲದೆ ಓದಿಸಿಕೊಂಡು ಹೋಗುವಂತೆ ಕನ್ನಡೀಕರಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಇದನ್ನು ಪ್ರಕಟಿಸಿದೆ. 224 ಪುಟಗಳ ಈ ಕೃತಿಯ ಬೆಲೆ 230 ರೂ.
ಇದನ್ನೂ ನೋಡಿ : ಟಿಪ್ಪು ಇತಿಹಾಸ ಅಳಿಸಲು ಸಾಧ್ಯವಿಲ್ಲ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು Janashakthi Media
