19 ಕ್ಷೇತ್ರಗಳಲ್ಲಿ ಮತ ಚಲಾಯಿಸಿದವರ ಸಂಖ್ಯೆಯನ್ನೇ ದಾಖಲಿಸದ ಚುನಾವಣಾ ಅಧಿಕಾರಿಗಳು; ಮುಂಬೈ ಉತ್ತರ ಕ್ಷೇತ್ರದಲ್ಲಿ 7.78 ಲಕ್ಷ ಮತಗಳ ವ್ಯತ್ಯಾಸ
ನವದೆಹಲಿ: 2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಿದವರ ಸಂಖ್ಯೆ ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಎಣಿಕೆಯಾದ ಮತಗಳ ನಡುವೆ ಹಲವು ಕ್ಷೇತ್ರಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟೀವ್ ನಡೆಸಿದ ತನಿಖೆ ಬಹಿರಂಗಪಡಿಸಿದೆ. ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಒಟ್ಟು 530 ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಚುನಾವಣಾ ದಾಖಲೆಗಳನ್ನು ಪರಿಶೀಲಿಸಿರುವ ಸಂಸ್ಥೆ, 51 ಕ್ಷೇತ್ರಗಳಲ್ಲಿ ಮತದಾನದ ದಾಖಲೆ ಮತ್ತು ಮತ ಎಣಿಕೆಯ ಅಂಕಿಅಂಶಗಳ ನಡುವೆ ಹೊಂದಾಣಿಕೆ ಇಲ್ಲದಿರುವುದನ್ನು ಪತ್ತೆಹಚ್ಚಿದೆ. ಚುನಾವಣೆ
ಈ 51 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದವರ ಸಂಖ್ಯೆಯನ್ನೇ ಚುನಾವಣಾ ಅಧಿಕಾರಿಗಳು ದಾಖಲಿಸಿಲ್ಲ. ಉಳಿದ 32 ಕ್ಷೇತ್ರಗಳಲ್ಲಿ ಮತ ಚಲಾಯಿಸಿದವರ ಸಂಖ್ಯೆ ಮತ್ತು ಇವಿಎಂಗಳಲ್ಲಿ ಎಣಿಕೆಯಾದ ಮತಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಚುನಾವಣಾ ಆಯೋಗದ ಆಂತರಿಕ ದಾಖಲೆಗಳನ್ನು ಆಧರಿಸಿ ಈ ತನಿಖೆ ನಡೆಸಲಾಗಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟೀವ್ ತಿಳಿಸಿದೆ.
ಮುಂಬೈ ಉತ್ತರದಲ್ಲಿ 7.78 ಲಕ್ಷ ಮತಗಳ ವ್ಯತ್ಯಾಸ
ಮಹಾರಾಷ್ಟ್ರದ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ವ್ಯತ್ಯಾಸ ಕಂಡುಬಂದಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಗೆದ್ದಿರುವ ಈ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ಆಂತರಿಕ ದಾಖಲೆಗಳ ಪ್ರಕಾರ 18.11 ಲಕ್ಷ ಮತಗಳು ಚಲಾವಣೆಯಾಗಿದ್ದವು. ಆದರೆ ಆಯೋಗ ಪ್ರಕಟಿಸಿದ ಫಲಿತಾಂಶದಲ್ಲಿ ಇವಿಎಂಗಳಲ್ಲಿ ಎಣಿಕೆಯಾದ ಮತಗಳ ಸಂಖ್ಯೆ 10.33 ಲಕ್ಷ ಮಾತ್ರ. ಹೀಗಾಗಿ ಎರಡೂ ಅಂಕಿಅಂಶಗಳ ನಡುವೆ 7.78 ಲಕ್ಷ ಮತಗಳ ವ್ಯತ್ಯಾಸವಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟೀವ್ ವರದಿ ಮಾಡಿದೆ.
ಹರಿಯಾಣದ ಬದ್ಖಲ್ ವಿಧಾನಸಭಾ ಕ್ಷೇತ್ರದಲ್ಲಿಯೂ ಗಂಭೀರ ವ್ಯತ್ಯಾಸ ದಾಖಲಾಗಿದೆ. ಆಯೋಗದ ಆಂತರಿಕ ದಾಖಲೆಗಳಲ್ಲಿ 3.32 ಲಕ್ಷ ಮತಗಳು ಚಲಾವಣೆಯಾಗಿರುವುದಾಗಿ ನಮೂದಾಗಿದ್ದರೆ, ಪ್ರಕಟಿತ ಫಲಿತಾಂಶದಲ್ಲಿ 1.60 ಲಕ್ಷ ಮತಗಳು ಮಾತ್ರ ಎಣಿಕೆಯಾಗಿವೆ. ಸುಮಾರು 1.72 ಲಕ್ಷ ಮತಗಳ ವ್ಯತ್ಯಾಸ ಕಂಡುಬಂದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ವಿಜಯ್ ಪ್ರತಾಪ್ ಸಿಂಗ್ ಅವರು ಬಿಜೆಪಿಯ ಧನೇಶ್ ಅದ್ಲಾಖಾ ವಿರುದ್ಧ ಕೇವಲ 6,181 ಮತಗಳ ಅಂತರದಿಂದ ಸೋತಿದ್ದರು.
ಹರಿಯಾಣದ ಕೈಥಲ್ ವಿಧಾನಸಭಾ ಕ್ಷೇತ್ರದ ದಾಖಲೆಗಳಲ್ಲಿಯೂ ಅಸಂಗತತೆ ಕಂಡುಬಂದಿದೆ. ಚುನಾವಣಾ ಆಯೋಗದ ಆಂತರಿಕ ದಾಖಲೆಗಳಲ್ಲಿ ಇಡೀ ಕ್ಷೇತ್ರದಲ್ಲಿ ಕೇವಲ 215 ಮಂದಿ ಮತ ಚಲಾಯಿಸಿದ್ದಾರೆ ಎಂದು ನಮೂದಿಸಲಾಗಿದೆ. ಆದರೆ ಇವಿಎಂಗಳಲ್ಲಿ 1,67,285 ಮತಗಳು ಎಣಿಕೆಯಾಗಿವೆ. ಕಾಂಗ್ರೆಸ್ನ ಆದಿತ್ಯ ಸುರಜೇವಾಲ ಅವರು ಬಿಜೆಪಿಯ ಲೀಲಾ ರಾಮ್ ವಿರುದ್ಧ 8,124 ಮತಗಳ ಅಂತರದಿಂದ ಗೆದ್ದಿದ್ದರು.
ಜಮ್ಮು-ಕಾಶ್ಮೀರದ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ 6,66,046 ಮತಗಳು ಚಲಾವಣೆಯಾಗಿರುವುದಾಗಿ ಆಂತರಿಕ ದಾಖಲೆಗಳು ತಿಳಿಸಿದರೆ, ಇವಿಎಂಗಳಲ್ಲಿ 6,72,942 ಮತಗಳು ಎಣಿಕೆಯಾಗಿವೆ. ಅಂದರೆ ಚಲಾವಣೆಯಾದ ಮತಗಳಿಗಿಂತ 6,896 ಮತಗಳು ಹೆಚ್ಚುವರಿಯಾಗಿ ಎಣಿಕೆಯಾಗಿರುವುದು ದಾಖಲಾಗಿದೆ. ಈ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ನ ಆಗಾ ಸೈಯದ್ ರುಹುಲ್ಲಾ ಮೆಹ್ದಿ ಗೆಲುವು ಸಾಧಿಸಿದ್ದರು. ಚುನಾವಣೆ
ಇದನ್ನೂ ಓದಿ : ಎಸ್ಐಆರ್ | 99.32 ಲಕ್ಷ ಹೆಸರುಗಳು ಡಿಲೀಟ್! ಪರಿಷ್ಕರಣೆಯೋ, ಮತದಾನದ ಹಕ್ಕಿಗೆ ಸಂಚಕಾರವೋ?
19 ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆಯೇ ಶೂನ್ಯ!
ತನಿಖೆಯ ಪ್ರಕಾರ, ಮಹಾರಾಷ್ಟ್ರ ಮತ್ತು ಹರಿಯಾಣದ 19 ಕ್ಷೇತ್ರಗಳಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದವರ ಸಂಖ್ಯೆಯ ಜಾಗದಲ್ಲಿ ಶೂನ್ಯ ಅಥವಾ ‘ನಿಲ್’ ಎಂದು ನಮೂದಿಸಲಾಗಿದೆ. ಅಂದರೆ ಮತದಾನಕ್ಕೆ ಬಂದವರ ಸಂಖ್ಯೆಯನ್ನೇ ಸರಿಯಾಗಿ ದಾಖಲಿಸದಿರುವುದು ಕಂಡುಬಂದಿದೆ. ಇಂತಹ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಈ ದಾಖಲೆಗಳಲ್ಲಿನ ಶೂನ್ಯ ನಮೂದು ಮತದಾರರು ಯಾರೂ ಮತ ಚಲಾಯಿಸಿಲ್ಲ ಎಂಬುದನ್ನು ಸೂಚಿಸುತ್ತದೆಯೇ ಅಥವಾ ಚುನಾವಣಾ ಅಧಿಕಾರಿಗಳು ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿಲ್ಲವೇ ಎಂಬ ಪ್ರಶ್ನೆಯನ್ನು ತನಿಖಾ ವರದಿ ಎತ್ತಿದೆ. ಚುನಾವಣೆ
4,212 ಪುಟಗಳ ದಾಖಲೆ ಪರಿಶೀಲನೆ
ದಿ ರಿಪೋರ್ಟರ್ಸ್ ಕಲೆಕ್ಟೀವ್ನ ಸುಮೇಧಾ ಮಿತ್ತಲ್ ಮತ್ತು ವೆಂಕಟೇಶ್ ನಾಯಕ್ ಅವರು ಚುನಾವಣಾ ಆಯೋಗದ ಆಂತರಿಕ ದಾಖಲೆಗಳನ್ನು ಪಡೆದು ಪರಿಶೀಲಿಸಿದ್ದಾರೆ. ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ 467 ವಿಧಾನಸಭಾ ಹಾಗೂ 63 ಲೋಕಸಭಾ ಕ್ಷೇತ್ರಗಳ ಒಟ್ಟು 4,212 ಪುಟಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ವಿಶ್ಲೇಷಿಸಲಾಗಿದೆ. ಚುನಾವಣಾ ಆಯೋಗ ಇಂತಹ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸದಿರುವ ಹಿನ್ನೆಲೆಯಲ್ಲಿ, ಹೊರಗಿನ ಪತ್ರಕರ್ತರು ಈ ದಾಖಲೆಗಳನ್ನು ಪರಿಶೀಲಿಸಿರುವುದು ಇದೇ ಮೊದಲು ಎಂದು ಸಂಸ್ಥೆ ಹೇಳಿಕೊಂಡಿದೆ.
ಮತದಾನ ಮುಗಿದ ಬಳಿಕ ಪ್ರತಿ ಮತಗಟ್ಟೆಯಲ್ಲೂ ಚಲಾವಣೆಯಾದ ಮತಗಳ ಸಂಖ್ಯೆಯನ್ನು ನಮೂನೆ 17ಸಿ (Form 17C)ಯಲ್ಲಿ ದಾಖಲಿಸಲಾಗುತ್ತದೆ. ಮತದಾನದ ಬಳಿಕ ಅಭ್ಯರ್ಥಿಗಳ ಏಜೆಂಟರಿಗೂ ಈ ದಾಖಲೆಯ ಪ್ರತಿಯನ್ನು ನೀಡಲಾಗುತ್ತದೆ. ಆದರೆ ಕ್ಷೇತ್ರವಾರು ದಾಖಲೆಗಳ ಪರಿಶೀಲನೆಗೆ ಅಗತ್ಯವಿರುವ ಮತಗಟ್ಟೆವಾರು ನಮೂನೆಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಿಲ್ಲ ಎಂದು ತನಿಖೆ ಗಮನಸೆಳೆದಿದೆ.
ಚುನಾವಣಾ ಆಯೋಗದ ಪ್ರತಿಕ್ರಿಯೆ ಏನು?
ಈ ವ್ಯತ್ಯಾಸಗಳ ಕುರಿತು ದಿ ರಿಪೋರ್ಟರ್ಸ್ ಕಲೆಕ್ಟೀವ್ ಚುನಾವಣಾ ಆಯೋಗಕ್ಕೆ ಪ್ರಶ್ನೆಗಳನ್ನು ಕಳುಹಿಸಿತ್ತು. ಆದರೆ ಪತ್ರಕರ್ತರ ಪ್ರಶ್ನೆಗಳನ್ನು ಸಾರ್ವಜನಿಕ ಕುಂದುಕೊರತೆಗಳ ಅರ್ಜಿಯಂತೆ ಪರಿಗಣಿಸಿದ ಆಯೋಗ, ತನ್ನದೇ ಆಂತರಿಕ ದಾಖಲೆಗಳನ್ನು ಮತ್ತೆ ತನಗೇ ಒದಗಿಸುವಂತೆ ಕೇಳಿದೆ. ಆ ಮಾಹಿತಿಯನ್ನು ಇಲಾಖೆಯೊಳಗೆ ಗೌಪ್ಯವಾಗಿ ಇರಿಸಲಾಗುವುದು ಮತ್ತು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ ಎಂದು ಆಯೋಗ ತಿಳಿಸಿರುವುದಾಗಿ ಸಂಸ್ಥೆ ವರದಿ ಮಾಡಿದೆ.
2024ರಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಕೂಡ ಲೋಕಸಭಾ ಚುನಾವಣೆಯ ನಮೂನೆ 17ಸಿ ದಾಖಲೆಗಳನ್ನು ಸಾರ್ವಜನಿಕಗೊಳಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸರ್ಕಾರ 2024ರ ಡಿಸೆಂಬರ್ 20ರಂದು ಚುನಾವಣಾ ನಡಾವಳಿ ನಿಯಮಗಳಿಗೆ ತಿದ್ದುಪಡಿ ತಂದು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಕೆಲವು ಚುನಾವಣಾ ದಾಖಲೆಗಳ ಸಾರ್ವಜನಿಕ ಲಭ್ಯತೆಗೆ ನಿರ್ಬಂಧ ವಿಧಿಸಿತ್ತು.
ಚಲಾವಣೆಯಾದ ಮತಗಳ ಸಂಖ್ಯೆ ಮತ್ತು ಎಣಿಕೆಯಾದ ಮತಗಳ ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳೂ ಮತಗಳ ಅಕ್ರಮ ಅಥವಾ ದುರುಪಯೋಗವನ್ನು ಸಾಬೀತುಪಡಿಸುವುದಿಲ್ಲ. ಆದರೆ ಚುನಾವಣಾ ಆಯೋಗದ ದಾಖಲೆಗಳಲ್ಲಿನ ಲೋಪಗಳು, ದೊಡ್ಡ ಪ್ರಮಾಣದ ವ್ಯತ್ಯಾಸಗಳು ಮತ್ತು ಅವುಗಳ ಕುರಿತು ಸಮರ್ಪಕ ವಿವರಣೆ ನೀಡದಿರುವುದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟೀವ್ ತನ್ನ ತನಿಖೆಯಲ್ಲಿ ಅಭಿಪ್ರಾಯಪಟ್ಟಿದೆ. ಚುನಾವಣೆ
ಇದನ್ನೂ ನೋಡಿ : ಎಸ್ಐಆರ್ ರದ್ದತಿಗೆ ಪಟ್ಟು: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಕೂಟದಿಂದ ಬೃಹತ್ ಪ್ರತಿಭಟನೆ Janashakthi
