ನಿಮಾನ್ಸ್‌ನಲ್ಲಿ ತೃತೀಯ ಲಿಂಗಿಗಳ ಬಗ್ಗೆ ತಾರತಮ್ಯ: ಅನುಚಿತವಾಗಿ ವರ್ತಿಸಿದ ವೈದ್ಯರ ವಿರುದ್ಧ ಕ್ರಮಕ್ಕೆ ಡಿವೈಎಫ್ಐ ಆಗ್ರಹ

ಒಳರೋಗಿ ಅರ್ಜಿಯಲ್ಲಿ ತೃತೀಯ ಲಿಂಗದ ಆಯ್ಕೆಯೇ ಇಲ್ಲ; ಘಟನೆಯ ಸಮಗ್ರ ತನಿಖೆಗೆ ಒತ್ತಾಯ
ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ನಿಮಾನ್ಸ್ (NIMHANS) ಆಸ್ಪತ್ರೆಯಲ್ಲಿ ತೃತೀಯ ಲಿಂಗಿಗಳೊಂದಿಗೆ ತಾರತಮ್ಯದಿಂದ ವರ್ತಿಸಲಾಗುತ್ತಿದೆ ಮತ್ತು ಅವರ ಲಿಂಗ ಅಸ್ಮಿತೆಗೆ ಗೌರವ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ಅರ್ಜಿ ನಮೂನೆಯಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗ ಆಯ್ಕೆಗಳನ್ನು ಮಾತ್ರ ನೀಡಲಾಗಿದ್ದು, ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಿಲ್ಲ. ಇದನ್ನು ಪ್ರಶ್ನಿಸಿದ ಕೇರಳ ಮೂಲದ ರೋಗಿಯೊಂದಿಗೆ ವೈದ್ಯರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ. ಈ ಘಟನೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಬೆಂಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ಸಂಬಂಧಪಟ್ಟ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ದೇಶದ ಪ್ರಮುಖ ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿರುವ ನಿಮಾನ್ಸ್‌ನಲ್ಲೇ ಇಂತಹ ತಾರತಮ್ಯ ನಡೆಯುತ್ತಿರುವುದು ಕಳವಳಕಾರಿ. ಒಳರೋಗಿಗಳ ನೋಂದಣಿ ಅರ್ಜಿಯಲ್ಲಿ ತೃತೀಯ ಲಿಂಗದ ಆಯ್ಕೆಯನ್ನು ಕಲ್ಪಿಸದಿರುವುದು ಅವರ ಅಸ್ಮಿತೆ ಮತ್ತು ಸಂವಿಧಾನಬದ್ಧ ಹಕ್ಕುಗಳನ್ನು ಕಡೆಗಣಿಸಿದಂತಾಗಿದೆ ಎಂದು ಡಿವೈಎಫ್ಐ ಜಿಲ್ಲಾ ಸಮಿತಿಯ ಅಧ್ಯಕ್ಷ ದಿಲೀಪ್ ಶೆಟ್ಟಿ ಮತ್ತು ಕಾರ್ಯದರ್ಶಿ ವಿನೋದ್ ತಿಳಿಸಿದ್ದಾರೆ.

2014ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ನಾಳ್ಸಾ (NALSA) ತೀರ್ಪು ತೃತೀಯ ಲಿಂಗಿಗಳ ಅಸ್ಮಿತೆಯನ್ನು ಗುರುತಿಸಿ, ವ್ಯಕ್ತಿಯ ಸ್ವಯಂ ಗುರುತಿಸಿಕೊಂಡ ಲಿಂಗಕ್ಕೆ ಕಾನೂನು ಮಾನ್ಯತೆ ನೀಡಿದೆ. ಅಲ್ಲದೆ, 2019ರ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣಾ ಕಾಯ್ದೆಯು ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ವಿರುದ್ಧ ತಾರತಮ್ಯ ಮಾಡುವುದನ್ನು ನಿಷೇಧಿಸಿದೆ. ಇಂತಹ ಕಾನೂನು ಮತ್ತು ಸಂವಿಧಾನಬದ್ಧ ಆಶಯಗಳಿದ್ದರೂ ನಿಮಾನ್ಸ್‌ನಂತಹ ಸಂಸ್ಥೆಯಲ್ಲಿ ತೃತೀಯ ಲಿಂಗಿಗಳಿಗೆ ಅಗತ್ಯ ಗೌರವ ನೀಡದಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ : 2 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿಯವರೊಂದಿಗೆ ಜೋಡಿಸುವ ಯೋಜನೆ ಕೈಬಿಡಿ: ಎಸ್‌ಎಫ್‌ಐ ಆಗ್ರಹ

ಕೇರಳ ಮೂಲದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ನಿಮಾನ್ಸ್‌ನಲ್ಲಿ ಒಳರೋಗಿಯಾಗಿ ದಾಖಲಾಗುವ ಸಂದರ್ಭದಲ್ಲಿ ಅರ್ಜಿ ನಮೂನೆಯಲ್ಲಿ ತೃತೀಯ ಲಿಂಗದ ಆಯ್ಕೆ ಇಲ್ಲದಿರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವೈದ್ಯರೊಬ್ಬರು ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಂತ್ರಸ್ತ ವ್ಯಕ್ತಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಮಾನವೀಯತೆ, ಸಂವೇದನಾಶೀಲತೆ ಮತ್ತು ಗೌರವದಿಂದ ನಡೆದುಕೊಳ್ಳುವುದು ಅತ್ಯಗತ್ಯ. ಆದರೆ, ತಮ್ಮ ಲಿಂಗ ಅಸ್ಮಿತೆಯ ಕುರಿತು ಪ್ರಶ್ನಿಸಿದ ಕಾರಣಕ್ಕೆ ವೈದ್ಯರಿಂದಲೇ ಅಗೌರವದ ವರ್ತನೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಆರೋಗ್ಯ ಸೇವೆಯ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಡಿವೈಎಫ್ಐ ಹೇಳಿದೆ.

ತೃತೀಯ ಲಿಂಗಿಗಳೆಂಬ ಕಾರಣಕ್ಕೆ ಯಾರೂ ಆರೋಗ್ಯ ಸೇವೆ, ಸರ್ಕಾರಿ ಸೌಲಭ್ಯ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಅವಮಾನ ಮತ್ತು ತಾರತಮ್ಯ ಎದುರಿಸಬಾರದು. ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕು ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಸಂವಿಧಾನ ಖಾತರಿಪಡಿಸಿದೆ. ಈ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಿ ಸಂಸ್ಥೆಗಳ ಮೇಲಿದೆ. ಕೇವಲ ಕಾನೂನು ರೂಪಿಸಿದರೆ ಸಾಲದು, ಅದರ ಪರಿಣಾಮಕಾರಿ ಅನುಷ್ಠಾನವೂ ಆಗಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ನಿಮಾನ್ಸ್‌ನಲ್ಲಿ ನಡೆದಿರುವ ಈ ಘಟನೆಯ ಕುರಿತು ರಾಜ್ಯ ಆರೋಗ್ಯ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಆಸ್ಪತ್ರೆಯ ಆಡಳಿತದಿಂದ ವಿವರಣೆ ಪಡೆಯಬೇಕು. ಅರ್ಜಿ ನಮೂನೆಯಲ್ಲಿ ತೃತೀಯ ಲಿಂಗದ ಆಯ್ಕೆಯನ್ನು ಅಳವಡಿಸುವುದರ ಜತೆಗೆ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದ ಯಾವುದೇ ಸರ್ಕಾರಿ ಕಚೇರಿ ಅಥವಾ ಸಾರ್ವಜನಿಕ ಸಂಸ್ಥೆಯಲ್ಲಿ ಇಂತಹ ತಾರತಮ್ಯ ಮರುಕಳಿಸದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ದಿಲೀಪ್ ಶೆಟ್ಟಿ ಮತ್ತು ವಿನೋದ್ ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಿಮಾನ್ಸ್ ಆಸ್ಪತ್ರೆಯ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಡಿವೈಎಫ್ಐ ಎಚ್ಚರಿಕೆ ನೀಡಿದೆ.

ಇದನ್ನೂ ನೋಡಿ : ಋತ್ವಿಕ್‌ ಘಟಕ್ -100| ಮೇಘೆ ಡಾಕಾ ತಾರಾ ಸಿನಿಮಾ ಕುರಿತು ಮುರಳಿ ಕೃಷ್ಣ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *