ದೀಪಾವಳಿ ಪಟಾಕಿ ಅವಘಡ: ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ

ಮಕ್ಕಳೇ ಹೆಚ್ಚು ಬಾಧಿತರು; ಮೂರು ತಿಂಗಳ ಹಸುಗೂಸು ಕೂಡ ಗಾಯಾಳುಗಳ ಪಟ್ಟಿಯಲ್ಲಿ – ಹಲವರಿಗೆ ಶಸ್ತ್ರಚಿಕಿತ್ಸೆ
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಸಿಡಿಸುವುದರಿಂದ ಸಂಭವಿಸಿದ ಅವಘಡಗಳು ಬೆಂಗಳೂರಿನಲ್ಲಿ ಆತಂಕ ಮೂಡಿಸಿವೆ. ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗೊಂಡ 100ಕ್ಕೂ ಹೆಚ್ಚು ಪ್ರಕರಣಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ಗಾಯಾಳುಗಳಲ್ಲಿ ಮಕ್ಕಳು ಮತ್ತು ಹಸುಗೂಸುಗಳೂ ಸೇರಿದ್ದು, ಹಲವರು ಗಂಭೀರ ಸ್ವರೂಪದ ಗಾಯಗಳಿಗೆ ಒಳಗಾಗಿದ್ದಾರೆ. ಕೆಲವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಿದೆ.ದೀಪಾವಳಿ

ನಗರದ ನಾರಾಯಣ ನೇತ್ರಾಲಯದ ರಾಜಾಜಿನಗರ ಕೇಂದ್ರದಲ್ಲಿ 41 ಪ್ರಕರಣಗಳು ವರದಿಯಾಗಿದ್ದರೆ, ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್‌ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ಮಿಂಟೊ ನೇತ್ರ ಆಸ್ಪತ್ರೆಯಲ್ಲಿ 14 ಪ್ರಕರಣಗಳು ವರದಿಯಾಗಿದ್ದು, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 26 ಪ್ರಕರಣಗಳು ದಾಖಲಾಗಿವೆ.

ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿರುವ 41 ಗಾಯಾಳುಗಳ ಪೈಕಿ 24 ಮಂದಿ 18 ವರ್ಷದೊಳಗಿನ ಮಕ್ಕಳು. ಅಂದರೆ, ಒಟ್ಟು ಗಾಯಾಳುಗಳಲ್ಲಿ ಶೇ 59ರಷ್ಟು ಮಕ್ಕಳು. 31 ಪುರುಷರು ಮತ್ತು 10 ಮಹಿಳೆಯರು ಗಾಯಗೊಂಡಿದ್ದಾರೆ. ಇವರಲ್ಲಿ 29 ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, 12 ಮಂದಿ ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ. 40 ಮಂದಿಗೆ ಔಷಧೋಪಚಾರದ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ನಾರಾಯಣ ನೇತ್ರಾಲಯದ ಇತರ ಮೂರು ಕೇಂದ್ರಗಳಲ್ಲಿ ದಾಖಲಾಗಿರುವ 29 ಪ್ರಕರಣಗಳ ಪೈಕಿ 15 ಮಕ್ಕಳು ಗಾಯಗೊಂಡಿದ್ದಾರೆ. ಏಳು ಮಂದಿ ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡಿದ್ದರೆ, 22 ಮಂದಿ ಪಟಾಕಿ ಸಿಡಿಸುವಾಗ ಗಾಯಗಳಿಗೆ ಒಳಗಾಗಿದ್ದಾರೆ. ದೀಪಾವಳಿ

ಇದನ್ನೂ ಓದಿ : 2 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿಯವರೊಂದಿಗೆ ಜೋಡಿಸುವ ಯೋಜನೆ ಕೈಬಿಡಿ: ಎಸ್‌ಎಫ್‌ಐ ಆಗ್ರಹ

ಮಿಂಟೊ ನೇತ್ರ ಆಸ್ಪತ್ರೆಯಲ್ಲಿ ದಾಖಲಾಗಿರುವ 14 ಪ್ರಕರಣಗಳ ಪೈಕಿ 10 ಗಂಭೀರ ಸ್ವರೂಪದ ಗಾಯಗಳಾಗಿದ್ದರೆ, ನಾಲ್ಕು ಪ್ರಕರಣಗಳು ಸಾಮಾನ್ಯ ಸ್ವರೂಪದ್ದಾಗಿವೆ. ನವೆಂಬರ್ 8ರ ಒಂದೇ ದಿನ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಗಾಯಾಳುಗಳಲ್ಲಿ ಐವರು ಮಕ್ಕಳು. ಒಟ್ಟು 14 ಮಂದಿಯಲ್ಲಿ 12 ಮಂದಿ ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ಉಳಿದ ಇಬ್ಬರಿಗೆ ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸಾ ವಿಧಾನಗಳ ಮೂಲಕ ಚಿಕಿತ್ಸೆ ನೀಡಲಾಗಿದೆ.

ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ದಾಖಲಾದ 26 ಪ್ರಕರಣಗಳಲ್ಲಿ ಮೂರು ತಿಂಗಳ ಹಸುಗೂಸು ಕೂಡ ಸೇರಿದೆ. ಐದು ತಿಂಗಳ ಮಗುವೊಂದು ತಾನೇ ಪಟಾಕಿ ಸಿಡಿಸುವಾಗ ಗಾಯಗೊಂಡಿರುವ ಪ್ರಕರಣವೂ ವರದಿಯಾಗಿದೆ. ಈ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ವಯಸ್ಸು ಮೂರು ತಿಂಗಳಿಂದ 46 ವರ್ಷದವರೆಗೆ ಇದೆ.

ಪಟಾಕಿ ಸಿಡಿಸುವವರಷ್ಟೇ ಅಲ್ಲದೆ, ಸುತ್ತಮುತ್ತ ನಿಂತು ವೀಕ್ಷಿಸುವವರೂ ಅಪಾಯಕ್ಕೆ ಸಿಲುಕುತ್ತಿರುವುದು ಈ ಪ್ರಕರಣಗಳಿಂದ ಸ್ಪಷ್ಟವಾಗಿದೆ. ವಿಶೇಷವಾಗಿ ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಪಟಾಕಿ ಸಿಡಿಸುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಕ್ಕಳನ್ನು ಒಂಟಿಯಾಗಿ ಪಟಾಕಿ ಸಿಡಿಸಲು ಬಿಡದಿರುವುದು ಮತ್ತು ಕಣ್ಣಿನ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ.

ಇದನ್ನೂ ನೋಡಿ : ಋತ್ವಿಕ್‌ ಘಟಕ್ -100| ಮೇಘೆ ಡಾಕಾ ತಾರಾ ಸಿನಿಮಾ ಕುರಿತು ಮುರಳಿ ಕೃಷ್ಣ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *