-
ದೀಪಾವಳಿ ಮತ್ತು ಛತ್ ಪೂಜೆ ವೇಳೆ ರೈಲು ನಿಲ್ದಾಣಗಳಲ್ಲಿ ಭಾರಿ ಜನದಟ್ಟಣೆ.
-
ಬಿಹಾರ, ಉತ್ತರ ಪ್ರದೇಶದ ಪ್ರಯಾಣಿಕರಿಗೆ ಊರಿಗೆ ತೆರಳಲು ತೀವ್ರ ತೊಂದರೆ.
-
2026-27ರ ಬಜೆಟ್‌ನಲ್ಲಿ ರೈಲ್ವೆಗೆ 2.78 ಲಕ್ಷ ಕೋಟಿ ರೂಪಾಯಿ ಬಂಡವಾಳ ಬೆಂಬಲ.
-
ಸಾಮಾನ್ಯ ಬೋಗಿಗಳ ಹೆಚ್ಚಳ ಮತ್ತು ಪ್ರಯಾಣಿಕರ ಸುರಕ್ಷತೆಗೆ ಒತ್ತಾಯ.
ವರದಿ : ಮಯೂರ ಹಾಲವರ್ತಿ
ಭಾರತೀಯ ರೈಲ್ವೆ: ದೇಶದಲ್ಲಿ ಹಬ್ಬದ ಸಂಭ್ರಮ ಮನೆಮಾಡುತ್ತಿದ್ದಂತೆ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟವೂ ಹೆಚ್ಚಾಗುತ್ತಿದೆ. ಛತ್ ಪೂಜೆ ವೇಳೆ ರೈಲುಗಳಲ್ಲಿ ಉಂಟಾಗುತ್ತಿರುವ ಭಾರಿ ಜನದಟ್ಟಣೆ ಪ್ರಯಾಣಿಕರ ಸುರಕ್ಷತೆ ಮತ್ತು ಮೂಲಸೌಕರ್ಯಗಳ ಬಗ್ಗೆ ಪ್ರಶ್ನೆ ಎಬ್ಬಿಸಿದೆ. ಒಂದೆಡೆ ವಂದೇ ಭಾರತ್, ಬುಲೆಟ್ ರೈಲುಗಳ ಮೂಲಕ ಅಭಿವೃದ್ಧಿಯ ಮಾತುಗಳನ್ನಾಡುವ ಕೇಂದ್ರ ಸರ್ಕಾರ, ಮತ್ತೊಂದೆಡೆ ಜನರಿಗೆ ಅಗತ್ಯವಾದ ಸಾರಿಗೆ, ಶಿಕ್ಷಣ, ಉದ್ಯೋಗ ಮತ್ತು ವಲಸೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ವಿಶೇಷವಾಗಿ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಬಂದಿರುವ ಕಾರ್ಮಿಕರು ಹಬ್ಬದ ಸಂದರ್ಭದಲ್ಲಿ ತಮ್ಮ ಊರುಗಳಿಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ರೈಲ್ವೆ ಇಲಾಖೆಯ ಜನದಟ್ಟಣೆ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ಪ್ರೀಮಿಯಂ ರೈಲುಗಳಿಗೆ ಆದ್ಯತೆ, ಬಡ ಪ್ರಯಾಣಿಕರಿಗೆ ಸಂಕಷ್ಟ?
ವಂದೇ ಭಾರತ್ ಮತ್ತು ಬುಲೆಟ್ ರೈಲುಗಳಂತಹ ಆಧುನಿಕ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಸಾಮಾನ್ಯ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅಗತ್ಯವಿರುವಷ್ಟು ಸೌಲಭ್ಯಗಳಿವೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಹಬ್ಬದ ಸಮಯದಲ್ಲಿ ಹೆಚ್ಚುವರಿ ರೈಲುಗಳ ವ್ಯವಸ್ಥೆ, ಸಾಮಾನ್ಯ ಬೋಗಿಗಳ ಸಂಖ್ಯೆ ಹೆಚ್ಚಳ ಮತ್ತು ನಿಲ್ದಾಣಗಳಲ್ಲಿ ಸೂಕ್ತ ಜನಸಂದಣಿ ನಿರ್ವಹಣೆ ಅಗತ್ಯ ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.
ಇದನ್ನೂ ಓದಿ: ‘ಕ್ರಾಂತಿ ಬರಲಿದೆ’: ಮೋದಿ ಸರ್ಕಾರದ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ, ಅಗ್ನಿಪಥ್ ಯೋಜನೆಗೂ ಟೀಕೆ
ರೈಲ್ವೆಗೆ 2.78 ಲಕ್ಷ ಕೋಟಿ ರೂಪಾಯಿ ಬಜೆಟ್ ಹಂಚಿಕೆ
2026-27ರ ಕೇಂದ್ರ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಸುಮಾರು 2.78 ಲಕ್ಷ ಕೋಟಿ ಕೋಟಿ ರೂಪಾಯಿ ಬಜೆಟ್ ನೀಡಲಾಗಿದೆ. ಇದು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಹೂಡಿಕೆಯಾಗಿದೆ.
ಪ್ರಮುಖವಾಗಿ ಹೊಸ ರೈಲು ಮಾರ್ಗಗಳ ನಿರ್ಮಾಣ, ಹಳಿಗಳ ದ್ವಿಗುಣಗೊಳಿಸುವಿಕೆ, ಹೊಸ ಬೋಗಿ ಮತ್ತು ಎಂಜಿನ್‌ಗಳ ಖರೀದಿ ಹಾಗೂ ಹೈಸ್ಪೀಡ್ ರೈಲು ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ.
ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡುತ್ತಿದ್ದರೂ ಸಾಮಾನ್ಯ ಪ್ರಯಾಣಿಕರ ದೈನಂದಿನ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿದಿಲ್ಲ ಎಂಬ ಟೀಕೆಗಳಿವೆ.
ರೈಲ್ವೆಯ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ
ಪಿಆರ್‌ಎಸ್ ಇಂಡಿಯಾ ವರದಿಯ ಪ್ರಕಾರ, 2026-27ರಲ್ಲಿ ಭಾರತೀಯ ರೈಲ್ವೆಯ ಆಂತರಿಕ ಆದಾಯವನ್ನು ಸುಮಾರು 3.02 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
- ಸರಕು ಸಾಗಣೆಯಿಂದ ಸುಮಾರು 1.89 ಲಕ್ಷ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.
- ಪ್ರಯಾಣಿಕರ ಸೇವೆಯಿಂದ ಸುಮಾರು 87,300 ಕೋಟಿ ರೂಪಾಯಿ ಆದಾಯದ ಅಂದಾಜಿದೆ.
- ರೈಲ್ವೆಯ ಆಪರೇಟಿಂಗ್ ರೇಷಿಯೋ ಶೇ.98.4ರಷ್ಟಿದೆ.
ಪ್ರತಿ 100 ರೂಪಾಯಿ ಆದಾಯಕ್ಕೆ ರೈಲ್ವೆ ಸುಮಾರು 98.40 ರೂಪಾಯಿ ಖರ್ಚು ಮಾಡುತ್ತಿದೆ. ಹೀಗಾಗಿ ಹೆಚ್ಚುವರಿ ಆದಾಯ ಕಡಿಮೆಯಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಬಜೆಟ್ ಅನುದಾನವೇ ಪ್ರಮುಖ ಆಧಾರವಾಗಿದೆ.

ವಿಶೇಷ ರೈಲುಗಳ ಜೊತೆಗೆ ವ್ಯವಸ್ಥಿತ ನಿರ್ವಹಣೆಯೂ ಅಗತ್ಯ
ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸುವುದು ಭಾರತೀಯ ರೈಲ್ವೆಯ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ. ಸಾಮಾನ್ಯ ಬೋಗಿಗಳ ಹೆಚ್ಚಳ, ನಿಲ್ದಾಣಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಮತ್ತು ಪ್ರಯಾಣಿಕರ ಪ್ರವೇಶ ಹಾಗೂ ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ ಮಾಡುವುದು ಕೂಡ ಅಷ್ಟೇ ಮುಖ್ಯ.
ಒಟ್ಟಿನಲ್ಲಿ, ರೈಲ್ವೆ ಆಧುನೀಕರಣದ ಜೊತೆಗೆ ಸಾಮಾನ್ಯ ಪ್ರಯಾಣಿಕರ ಅಗತ್ಯಗಳಿಗೂ ಸಮಾನ ಆದ್ಯತೆ ನೀಡಬೇಕಿದೆ. ಸಾವಿರಾರು ಕೋಟಿ ರೂಪಾಯಿ ಹೂಡಿಕೆಯ ನಿಜವಾದ ಪ್ರಯೋಜನ ಜನಸಾಮಾನ್ಯರಿಗೆ ತಲುಪಬೇಕಾದರೆ ಸುರಕ್ಷಿತ, ಸುಗಮ ಮತ್ತು ಕೈಗೆಟುಕುವ ರೈಲು ಪ್ರಯಾಣಕ್ಕೆ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯವಾಗಿದೆ.
ಇದನ್ನೂ ನೋಡಿ : ಎಸ್‌ಐಆರ್ ರದ್ದತಿಗೆ ಪಟ್ಟು: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಕೂಟದಿಂದ ಬೃಹತ್ ಪ್ರತಿಭಟನೆ Janashakthi
