‘ಮತಗಳ್ಳತನ’ ಆರೋಪಕ್ಕೆ ಉತ್ತರಿಸಿ, ರಾಹುಲ್ ಗಾಂಧಿ ಸವಾಲು ಸ್ವೀಕರಿಸಿ: ಪ್ರಧಾನಿ ಮೋದಿಗೆ ಖರ್ಗೆ ಆಗ್ರಹ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಚುನಾವಣಾ ಆಯೋಗ ಐದು ಬಾರಿ ನಿಲುವು ಬದಲಿಸಿದೆ ಎಂದು ಆರೋಪ; ಅಮಿತ್ ಶಾ ಅವರ 3 ಕೋಟಿ ನುಸುಳುಕೋರರ ಹೇಳಿಕೆಗೂ ಪ್ರಶ್ನೆ
ನವದೆಹಲಿ: ಮತಗಳ್ಳತನದ ಆರೋಪಗಳಿಗೆ ಉತ್ತರಿಸುವಂತೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಬಹಿರಂಗ ಚರ್ಚೆಯ ಸವಾಲನ್ನು ಸ್ವೀಕರಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಬುಧವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಪ್ರಧಾನಿ ಮೋದಿ ಅವರು ‘ದಿಮಾಗಿ ನಕ್ಸಲ್’ ಎಂಬ ಆರೋಪವನ್ನು ಪುನರಾವರ್ತಿಸುತ್ತಿದ್ದಾರೆ. ಆದರೆ ಮತಗಳ್ಳತನದ ಆರೋಪಗಳಿಗೆ ಉತ್ತರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ. ವಿದೇಶಿ ಶಕ್ತಿಗಳಿಗೆ ಭಾರತದ ಹಿತಾಸಕ್ತಿಗಳನ್ನು ಒತ್ತೆ ಇಟ್ಟಿರುವ ಆರೋಪಗಳ ಬಗ್ಗೆಯೂ ರಾಹುಲ್ ಗಾಂಧಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಪ್ರಧಾನಿ ಈ ಸವಾಲನ್ನು ಸ್ವೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ಕೋಟಿ ಮತದಾರರು ನುಸುಳುಕೋರರು ಎಂದು ಹೇಳುತ್ತಿದ್ದಾರೆ. ಹಲವು ವರ್ಷಗಳಿಂದ ಗೃಹ ಸಚಿವರಾಗಿದ್ದ ಅವರು ಅಕ್ರಮ ವಲಸೆಯನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಅಮಿತ್ ಶಾ ಅವರನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ.

ಎಸ್‌ಐಆರ್‌ನಲ್ಲಿ ಐದು ಬಾರಿ ನಿಲುವು ಬದಲಾವಣೆ ಆರೋಪ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಐದು ಬಾರಿ ತನ್ನ ನಿಲುವು ಬದಲಿಸಿದೆ ಎಂದು ಖರ್ಗೆ ಆರೋಪಿಸಿದ್ದಾರೆ. ನಮೂನೆ 6ರಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯನ್ನು ಸಹ ಚುನಾವಣಾ ಆಯುಕ್ತರೇ ಕಾನೂನುಬಾಹಿರ ಎಂದು ಕರೆದಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ನಮೂನೆ 6ರಲ್ಲಿನ ಬದಲಾವಣೆಗಳ ಕುರಿತು ಆಯೋಗ ಸ್ಪಷ್ಟನೆ ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸುವ ರಾಜ್ಯದ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ: ಡಿ.ಕೆ. ಶಿವಕುಮಾರ್

ಸಂಸತ್ತಿಗೆ ಬಾರದ ಪ್ರಧಾನಿ, ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ

ಸಂಸತ್ತಿನ ಹಿಂದಿನ ಅಧಿವೇಶನವನ್ನು ಮುಕ್ತಾಯಗೊಳಿಸದೆ 83 ದಿನಗಳು ಕಳೆದಿವೆ. ಮುಂದಿನ ಅಧಿವೇಶನದ ಸಿದ್ಧತೆ ನಡೆಯುತ್ತಿರುವಾಗ ವಿಶೇಷ ಅಧಿವೇಶನ ನಡೆಸುವ ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಸಂಸತ್ತಿಗೆ ಬರುತ್ತಿಲ್ಲ. ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ. ಈಗ ದೇಶದ ಪ್ರಶ್ನೆಗಳಿಗೆ ಉತ್ತರಿಸಲು ಬಹಿರಂಗ ಚರ್ಚೆಗೆ ಬರಬೇಕು. ಮತಗಳ್ಳತನದಲ್ಲಿ ತೊಡಗಿದ್ದೇಕೆ ಎಂಬುದನ್ನು ದೇಶಕ್ಕೆ ತಿಳಿಸಬೇಕು ಎಂದು ಖರ್ಗೆ ಸವಾಲು ಹಾಕಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳು ನಡೆಸಿದ ಸಾಂಕೇತಿಕ ಸಾರ್ವಜನಿಕ ಮಹಾಭಿಯೋಗ ಕಾರ್ಯಕ್ರಮ ಮತ್ತು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಮತ ಉಳಿಸಿ, ದೇಶ ಉಳಿಸಿ’ ಸಮಾವೇಶದಿಂದ ಬಿಜೆಪಿ ನಾಯಕತ್ವ ಆತಂಕಗೊಂಡಿದೆ ಎಂದೂ ಅವರು ಆರೋಪಿಸಿದ್ದಾರೆ.

ಇದನ್ನೂ ನೋಡಿ :ನ್ಯಾಯ ಕೊಡಿಸುವವರಿಗೇ ರಕ್ಷಣೆ ಇಲ್ಲವೇ? ರಾಜ್ಯಾದ್ಯಂತ ಬೀದಿಗಿಳಿದ ವಕೀಲರು Janashakthi Media

 

Donate Janashakthi Media

Leave a Reply

Your email address will not be published. Required fields are marked *