‘ಇದು ಸಂಪೂರ್ಣ ನಾಚಿಕೆಗೇಡಿನ ನಡೆ, ವಾಯುಪಡೆಯ ಕುಟುಂಬಕ್ಕೆ ಮಾಡಿದ ಅಗೌರವ’ ಎಂದ ಜೈರಾಮ್ ರಮೇಶ್
ನವದೆಹಲಿ, ನ.3: ಭಾರತೀಯ ವಾಯುಪಡೆಯ (ಐಎಎಫ್) ಕ್ರೀಡಾ ಸಂಕೀರ್ಣ ಇರುವ ಜಾಗವನ್ನು ಮರಳಿ ವಶಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮವು ಸಂಪೂರ್ಣ ನಾಚಿಕೆಗೇಡಿನದ್ದು ಮತ್ತು ವಾಯುಪಡೆಯ ಇಡೀ ಕುಟುಂಬಕ್ಕೆ ಮಾಡಿದ ಅಗೌರವ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ. ವಾಯುಪಡೆಯ
ದೆಹಲಿಯ ಪ್ರಧಾನಿಯ ಅಧಿಕೃತ ನಿವಾಸದ ಸಮೀಪದಲ್ಲಿರುವ ರೇಸ್ ಕೋರ್ಸ್ ವಾಯುನೆಲೆಯ ವ್ಯಾಪ್ತಿಯಲ್ಲಿ ಈ ಕ್ರೀಡಾ ಸಂಕೀರ್ಣವಿದೆ. ಇಲ್ಲಿ ಗಾಲ್ಫ್ ಮೈದಾನ, ಈಜುಕೊಳ ಸೇರಿದಂತೆ ಹಲವು ಸೌಲಭ್ಯಗಳಿವೆ. ಕಳೆದ ವಾರದಿಂದ ಸಂಕೀರ್ಣವನ್ನು ಮುಚ್ಚಲಾಗಿದ್ದು, ಜಾಗವನ್ನು ಹಸ್ತಾಂತರಿಸುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭೂಮಿ ಮತ್ತು ಅಭಿವೃದ್ಧಿ ಕಚೇರಿ (ಎಲ್ ಆ್ಯಂಡ್ ಡಿಒ) ಸಂಕೀರ್ಣದ ಆಡಳಿತ ಮಂಡಳಿಗೆ ತೆರವು ನೋಟಿಸ್ ನೀಡಿದೆ.
ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಅವರು ಈ ಕುರಿತು ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 26ರಂದು, ನಿವೃತ್ತಿಗೆ ಕೆಲವೇ ದಿನಗಳ ಮೊದಲು, ಆಗಿನ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು, ರೇಸ್ ಕೋರ್ಸ್ ವಾಯುನೆಲೆಯ ವ್ಯಾಪ್ತಿಯಲ್ಲಿರುವ ಈ ಪ್ರಮುಖ ಜಾಗದ ಮೇಲಿನ ವಾಯುಪಡೆಯ ನಿಯಂತ್ರಣವನ್ನು ಉಳಿಸಬೇಕೆಂದು ಮನವಿ ಮಾಡಿದ್ದರು. ಕಾರ್ಯಾಚರಣೆಗೆ ಅಗತ್ಯವಾದ ವ್ಯವಸ್ಥೆಗಳು ಮತ್ತು ಅಲ್ಲಿರುವ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಮನವಿ ಮಾಡಲಾಗಿತ್ತು. ವಾಯುಪಡೆಯ
ಇದನ್ನೂ ಓದಿ : ಹಾವೇರಿಯಲ್ಲಿ ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಹಲ್ಲೆ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ DYFI ಆಗ್ರಹ
“ವಾಯುಪಡೆಯ ಕ್ರೀಡಾ ಸಂಕೀರ್ಣಕ್ಕೆ ದೀರ್ಘ ಇತಿಹಾಸವಿದೆ. ದಶಕಗಳಿಂದ ಇದು ಹಲವು ಸಾರ್ವಜನಿಕ ಉದ್ದೇಶಗಳಿಗೆ ಸೇವೆ ಸಲ್ಲಿಸಿದೆ. ಭಾರತೀಯ ವಾಯುಪಡೆಯ ಸಾಮಾಜಿಕ ಮೂಲಸೌಕರ್ಯದ ಅವಿಭಾಜ್ಯ ಭಾಗವಾಗಿಯೂ ಉಳಿದಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. “ಮೋದಿ ಸರ್ಕಾರದ ಕ್ರಮ ಸಂಪೂರ್ಣ ನಾಚಿಕೆಗೇಡಿನದ್ದು. ಇದು ವಾಯುಪಡೆಯ ಇಡೀ ಕುಟುಂಬಕ್ಕೆ ತೋರಿದ ಅಗೌರವ” ಎಂದು ಅವರು ಟೀಕಿಸಿದ್ದಾರೆ.
ಪ್ರಧಾನಿ ನಿವಾಸದ ಸುತ್ತಮುತ್ತಲಿನ ಬೆಲೆಬಾಳುವ ಸರ್ಕಾರಿ ಜಾಗಗಳನ್ನು ಮರಳಿ ವಶಕ್ಕೆ ಪಡೆಯುವ ಕೇಂದ್ರದ ಕ್ರಮಗಳ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಕಳೆದ ಕೆಲವು ವಾರಗಳಿಂದ ಲೋಕ ಕಲ್ಯಾಣ ಮಾರ್ಗದ ಸಮೀಪದಲ್ಲಿರುವ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗಾಲ್ಫ್ ಮತ್ತು ಕ್ರೀಡಾ ಸೌಲಭ್ಯಗಳ ಜಾಗಗಳ ಪರಿಶೀಲನೆ ನಡೆಸಲಾಗುತ್ತಿದೆ.
ಇದಕ್ಕೂ ಮೊದಲು, ಲೋಕ ಕಲ್ಯಾಣ ಮಾರ್ಗದಲ್ಲಿದ್ದ 53 ಎಕರೆ ವಿಸ್ತೀರ್ಣದ ದೆಹಲಿ ರೇಸ್ ಕ್ಲಬ್ನ ಜಾಗವನ್ನು ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ವಶಕ್ಕೆ ಪಡೆದಿತ್ತು. ಸಾರ್ವಜನಿಕ ಉದ್ದೇಶಕ್ಕಾಗಿ ಜಾಗದ ಅಗತ್ಯವಿದೆ ಎಂದು ತಿಳಿಸಲಾಗಿತ್ತು. ಇದೇ ರೀತಿ ಇಂಡಿಯನ್ ಪೋಲೊ ಅಸೋಸಿಯೇಷನ್ನ ವಶದಲ್ಲಿದ್ದ ಜೈಪುರ ಪೋಲೊ ಮೈದಾನದ ಜಾಗವನ್ನೂ ಸರ್ಕಾರ ಮರಳಿ ಪಡೆದಿದೆ.
ವಾಯುಪಡೆಯ ಕ್ರೀಡಾ ಸಂಕೀರ್ಣದ ಜಾಗವನ್ನು ಮರಳಿ ಪಡೆಯುವ ಕೇಂದ್ರದ ಕ್ರಮದ ಕುರಿತು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ವಾಯುಪಡೆಯ ಸೌಲಭ್ಯಗಳು ಮತ್ತು ಅದರ ಕಾರ್ಯಾಚರಣೆಯ ಅಗತ್ಯಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದೆ. ವಾಯುಪಡೆಯ
ಇದನ್ನೂ ಓದಿ : ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಸುರಕ್ಷಿತತೆ: ಆನ್ಲೈನ್ ಸಂವಾದ Janashakthi Media
