ಜಿಂದಾಲ್ ಕಂಪೆನಿಯಲ್ಲಿ ಕಾರ್ಮಿಕನ ದುರಂತ ಸಾವು: ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಿ; ಸಮಗ್ರ ತನಿಖೆಗೆ ಡಿವೈಎಫ್‌ಐ ಆಗ್ರಹ

ಸುರಕ್ಷತಾ ಲೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು | ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ನೀಡದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ
ಬಳ್ಳಾರಿ: ಬಳ್ಳಾರಿಯ ಜಿಂದಾಲ್ ಕಂಪೆನಿಯ ಆವರಣದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 30 ವರ್ಷದ ಕಾರ್ಮಿಕ ಡಿ. ದೇವರಾಜ್ ಮೃತಪಟ್ಟಿರುವ ಘಟನೆಗೆ ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮೃತ ಕಾರ್ಮಿಕನ ಕುಟುಂಬಕ್ಕೆ ಜಿಂದಾಲ್ ಕಂಪೆನಿ ತಕ್ಷಣವೇ ₹1 ಕೋಟಿ ಪರಿಹಾರ ನೀಡಬೇಕು ಹಾಗೂ ಘಟನೆಯ ಕುರಿತು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಅ.31ರಂದು ಜಿಂದಾಲ್ ಕಂಪೆನಿಯ ಬಿ.ಎಫ್. 3 ಪಂಪ್ ಹೌಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಭಾರೀ ಗಾತ್ರದ ಪ್ಯಾನಲ್ ಕಾರ್ಮಿಕ ದೇವರಾಜ್ ಅವರ ಮೈಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ದೇವರಾಜ್ ಅವರ ಸಾವಿಗೆ ಕೆಲಸದ ಸ್ಥಳದಲ್ಲಿನ ಸುರಕ್ಷತಾ ಲೋಪಗಳು ಕಾರಣವೇ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ ಎಂದು ಡಿವೈಎಫ್‌ಐ ಹೇಳಿದೆ.

ಕಾರ್ಮಿಕರ ಸುರಕ್ಷತೆಗೆ ಕಂಪೆನಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು ಎಂಬುದನ್ನು ತನಿಖೆ ನಡೆಸಬೇಕು. ಭಾರೀ ಗಾತ್ರದ ಪ್ಯಾನಲ್ ಬಿದ್ದು ಕಾರ್ಮಿಕನ ಜೀವಕ್ಕೆ ಅಪಾಯವಾಗದಂತೆ ತಡೆಯಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತೇ ಎಂಬುದನ್ನು ಪರಿಶೀಲಿಸಬೇಕು. ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಿದ ಮಾತ್ರಕ್ಕೆ ಕಂಪೆನಿಯ ಜವಾಬ್ದಾರಿ ಮುಗಿಯುವುದಿಲ್ಲ. ಸಾವಿಗೆ ಕಾರಣವಾದ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಇದನ್ನೂ ಓದಿ : ಬಿಜೆಪಿ ಸರ್ಕಾರವನ್ನು ಉರುಳಿಸುವುದೇ ನಮ್ಮ ಹೋರಾಟದ ಗುರಿ: ಪ್ರಕಾಶ್ ರಾಜ್

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವಡ್ಡರಹಳ್ಳಿಯ ನಿವಾಸಿ, ಡಿ. ಗಾಳೇಶ ಅವರ ಪುತ್ರ ದೇವರಾಜ್ ಅವರ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಕುಟುಂಬದ ಜೀವನಾಧಾರವಾಗಿದ್ದ ಯುವ ಕಾರ್ಮಿಕನನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಜಿಂದಾಲ್ ಕಂಪೆನಿಯು ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವುದರ ಜೊತೆಗೆ, ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ಮತ್ತು ದೀರ್ಘಕಾಲೀನ ಆರ್ಥಿಕ ನೆರವು ಒದಗಿಸಬೇಕು ಎಂದು ಡಿವೈಎಫ್‌ಐ ಆಗ್ರಹಿಸಿದೆ.

ಕಾರ್ಮಿಕನ ಸಾವಿಗೆ ಕಾರಣರಾದವರ ಹೊಣೆಗಾರಿಕೆಯನ್ನು ನಿಗದಿಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸದೆ ಕಂಪೆನಿ ಅನ್ಯಾಯ ಎಸಗಿದರೆ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ ಮತ್ತು ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಇದನ್ನೂ ನೋಡಿ : SIRವಿರೋಧಿಸಿ ಮಂಗಳೂರಿನಲ್ಲಿ ಸಾಮೂಹಿಕ ಜನತಾ ನಡಿಗೆಇಂಡಿಯಾ ಕೂಟದ ಪಕ್ಷಗಳು ಸಮಾನ ಮನಸ್ಕ ಸಂಘಟನೆಗಳು

Donate Janashakthi Media

Leave a Reply

Your email address will not be published. Required fields are marked *