ಎಸ್‌ಐಆರ್‌ ರದ್ದು, ಗ್ಯಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ರದ್ದುಪಡಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್‌ 8ರಂದು ಬೃಹತ್ ಪ್ರತಿಭಟನೆ ನಡೆಯಿತು.  ಪ್ರತಿಭಟನೆಯಲ್ಲಿ ನಟ ಪ್ರಕಾಶ್‌ ರಾಜ್‌, ಯೂಟ್ಯೂಬರ್‌ ಧ್ರುವ್‌ ರಾಠೀ, CJP ಸಂಸ್ಥಾಪಕ ಅಭಿಜಿತ್‌ ದಿಪ್ಕೆ, SFI ಅಖಿಲ ಭಾರತ ಜಂಟಿ ಕಾರ್ಯದರ್ಶಿ ಆಯಿಷಾ ಘೋಷ್‌, AISFನ ವಿರಾಜ್‌ ದೇವಾಂಗ್‌ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಯುವಜನರು ಭಾಗವಹಿಸಿದ್ದರು. ಎಸ್‌ಐಆರ್‌

ಪ್ರತಿಭಟನೆಯಲ್ಲಿ “ಭಗತ್‌ ಸಿಂಗ್‌ ದೇಶದಲ್ಲಿ ತಾನಾಶಾಹಿ, ಸರ್ವಾಧಿಕಾರ ನಡೆಯುವುದಿಲ್ಲ”, “ಗ್ಯಾನೇಶ್‌ ಕುಮಾರ್‌ ರಾಜೀನಾಮೆ ಕೊಡಿ”, “SIR ರದ್ದು ಮಾಡಿ” ಹಾಗೂ “ವೋಟ್‌ ಚೋರ್‌ ಗದ್ದಿ ಛೋಡ್‌” ಎಂಬ ಘೋಷಣೆಗಳು ಮೊಳಗಿದವು.

‘ಗ್ಯಾನೇಶ್‌ ಕುಮಾರ್‌ ರಾಜೀನಾಮೆ ಮಾತ್ರ ನಮ್ಮ ಬೇಡಿಕೆಯಲ್ಲ’

CJP ಸಂಸ್ಥಾಪಕ ಅಭಿಜಿತ್‌ ದಿಪ್ಕೆ ಮಾತನಾಡಿ, ಹೋರಾಟ ಕೇವಲ ಗ್ಯಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಸೀಮಿತವಾಗಿಲ್ಲ ಎಂದು ಹೇಳಿದರು. ಗ್ಯಾನೇಶ್‌ ಕುಮಾರ್‌ ಸ್ಥಾನದಿಂದ ತೆರಳಿದ ಬಳಿಕ ಮತ್ತೊಬ್ಬರು ಬರುವ ಸಾಧ್ಯತೆಯಿದ್ದು, SIR ಪ್ರಕ್ರಿಯೆಯನ್ನೇ ರದ್ದುಪಡಿಸುವುದು ತಮ್ಮ ಪ್ರಮುಖ ಬೇಡಿಕೆ ಎಂದು ಹೇಳಿದರು.

SIR ಮೂಲಕ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದ ಅವರು, ನಿಜವಾಗಿ ಮತ ಕಳೆದುಕೊಂಡವರು ಹಾಗೂ ಅದರಿಂದ ಅನ್ಯಾಯಕ್ಕೊಳಗಾದ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ದಾಖಲಿಸಬೇಕಿದೆ ಎಂದು ಹೇಳಿದರು. ಬಡವರು, ಯುವಕರು ಹಾಗೂ ದುರ್ಬಲ ವರ್ಗಗಳ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪವನ್ನೂ ಮಾಡಿದರು.

“ನಾವು ಪ್ರಜೆಗಳು. ನಮ್ಮ ಹಕ್ಕಿಗಾಗಿ ಈ ಹೋರಾಟ. SIR ರದ್ದಾಗುವವರೆಗೆ ಶಾಂತಿಯುತವಾಗಿ ಹೋರಾಟ ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.

‘ವೋಟ್‌ ಚೋರಿ’ ಆರೋಪ

ಅಭಿಜಿತ್‌ ದಿಪ್ಕೆ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದರು. ಮತದಾರರ ಹೆಸರುಗಳನ್ನು ತೆಗೆದುಹಾಕುವ ಮೂಲಕ ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಜವಾಹರಲಾಲ್‌ ನೆಹರು ಅವರ ಕೊಡುಗೆಗಳನ್ನು ಉಲ್ಲೇಖಿಸಿದ ಅವರು, ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ರಕ್ಷಿಸಬೇಕಿದೆ ಎಂದು ಹೇಳಿದರು. “ದೇಶ ಉಳಿಯುವುದು ಮತ ಉಳಿದರೆ ಮಾತ್ರ” ಎಂದು ಅವರು ಪ್ರತಿಪಾದಿಸಿದರು.

ಒಂದು ದೇಶ, ಒಂದು ಚುನಾವಣೆ ಎಂಬ ಘೋಷಣೆಯ ಹಿಂದೆ ಒಂದು ದೇಶ, ಒಂದು ಪಕ್ಷದ ಪರಿಕಲ್ಪನೆ ಇದೆ ಎಂದು ದಿಪ್ಕೆ ಆರೋಪಿಸಿದರು. ಆದರೆ ಇಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಮತ್ತು ಜನರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು. ಎಸ್‌ಐಆರ್‌

‘ಸಂವಿಧಾನದ ಮೂಲಕವೇ ದೇಶ ನಡೆಯಬೇಕು’ – ಆಯಿಷಾ ಘೋಷ್‌

SFI ಅಖಿಲ ಭಾರತ ಜಂಟಿ ಕಾರ್ಯದರ್ಶಿ ಆಯಿಷಾ ಘೋಷ್‌ ಮಾತನಾಡಿ, ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

“ಈ ದೇಶ ಸಂವಿಧಾನದಲ್ಲಿ ಬರೆದಿರುವ ಮೌಲ್ಯಗಳ ಮೂಲಕ ನಡೆಯಬೇಕು. ಆದರೆ ಆಳುವವರಿಗೆ ಅದು ಬೇಕಿಲ್ಲ. ನಾವೆಲ್ಲರೂ ಒಟ್ಟಾಗಿ ಹೋರಾಡಿ ಗ್ಯಾನೇಶ್‌ ಕುಮಾರ್‌ ರಾಜೀನಾಮೆ ನೀಡುವಂತೆ ಮಾಡಬೇಕು” ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸಿದ ಅವರು, “ಜೈ ಭೀಮ್, ಇನ್‌ಕ್ವಿಲಾಬ್‌ ಜಿಂದಾಬಾದ್‌” ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ : ಮೇಘಾಲಯದಲ್ಲಿ ಶೇ.60ರಷ್ಟು ಮಳೆ ಕೊರತೆ: ಎಲ್‌ನಿನೊ ಪರಿಣಾಮದ ಆತಂಕಎಸ್‌ಐಆರ್‌

‘ಮತದಾನದ ಹಕ್ಕನ್ನು ಕಳೆದುಕೊಳ್ಳುವುದಿಲ್ಲ’ – ವಿರಾಜ್‌ ದೇವಾಂಗ್‌

AISF ಮುಖಂಡ ವಿರಾಜ್‌ ದೇವಾಂಗ್‌ ಮಾತನಾಡಿ, ಮತದಾನದ ಹಕ್ಕು ಹೋರಾಟದ ಮೂಲಕ ದೊರೆತ ಹಕ್ಕು ಎಂದು ಹೇಳಿದರು. ಕಳೆದ ಹಲವು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಮತದಾನದ ಹಕ್ಕನ್ನು ಕಳೆದುಕೊಳ್ಳಲು ಜನರು ಅವಕಾಶ ನೀಡುವುದಿಲ್ಲ ಎಂದರು.

ಮತದಾರರ ಹಕ್ಕು ಕಸಿಯುವ ಪ್ರಯತ್ನದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ ಅವರು, ಅಗತ್ಯವಿದ್ದರೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.

 

‘ನಾನು ಸರ್ಕಾರ ಬದಲಿಸಲು ಬಂದಿಲ್ಲ’ – ಧ್ರುವ್‌ ರಾಠೀ

ಪ್ರತಿಭಟನೆಯಲ್ಲಿ ಮಾತನಾಡಿದ ಯೂಟ್ಯೂಬರ್‌ ಧ್ರುವ್‌ ರಾಠೀ, ಇದು ತಮ್ಮ ಮೊದಲ ಪ್ರತಿಭಟನೆ ಎಂದು ಹೇಳಿದರು. ತಾವು ಸರ್ಕಾರ ಬದಲಿಸುವ ಉದ್ದೇಶದಿಂದ ಪ್ರತಿಭಟನೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, SIR ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಶ್ನೆಗಳು ಬಿಜೆಪಿಗೆ ಮತ ಹಾಕುವವರನ್ನೂ ಒಳಗೊಂಡಂತೆ ದೇಶದ ಪ್ರತಿಯೊಬ್ಬ ನಾಗರಿಕರ ಮೇಲೂ ಪರಿಣಾಮ ಬೀರುತ್ತವೆ ಎಂದು ಹೇಳಿದರು.

“ನನಗೆ ಎಲಾನ್‌ ಮಸ್ಕ್‌ ಅಥವಾ ಜಾರ್ಜ್‌ ಸೊರೊಸ್‌ ಅವರಿಂದ ಯಾವುದೇ ಹಣ ಬಂದಿಲ್ಲ” ಎಂದು ಹೇಳಿದ ಅವರು, ಮತದಾರರ ಪಟ್ಟಿಗೆ ಸಂಬಂಧಿಸಿದ ತಮ್ಮ ಆರೋಪಗಳಿಗೆ ಮೂರು ಉದಾಹರಣೆಗಳನ್ನು ಮುಂದಿಟ್ಟರು.

ಪಶ್ಚಿಮ ಬಂಗಾಳದಲ್ಲಿ ಸುಮಾರು 70 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪ, ಬಿಹಾರದಲ್ಲಿ ಸುಮಾರು 75 ಲಕ್ಷ ಹೆಸರುಗಳ ಕುರಿತ ಪ್ರಶ್ನೆಗಳು ಮತ್ತು ಸುಮಾರು 14 ಲಕ್ಷ ಹೆಸರುಗಳನ್ನು ಸೇರಿಸಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎಂಬ ಆರೋಪಗಳನ್ನು ಅವರು ಪ್ರಸ್ತಾಪಿಸಿದರು. ಈ ಅಂಶಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ಅದೇ ವೇಳೆ, “ಇದು ಯಾವುದೇ ಪಕ್ಷದ ಕಾರ್ಯಕ್ರಮವಾಗಿ ನಾನು ಹೇಳುತ್ತಿಲ್ಲ. ಸಾಮಾನ್ಯ ನಾಗರಿಕನಾಗಿ ಹೇಳುತ್ತಿದ್ದೇನೆ. ಬಿಜೆಪಿಯನ್ನು ಬೆಂಬಲಿಸುವವರೂ ಈ ಹೋರಾಟಕ್ಕೆ ಬೆಂಬಲ ನೀಡಬೇಕು” ಎಂದು ರಾಠೀ ಹೇಳಿದರು. ಎಸ್‌ಐಆರ್‌

‘ಮತದಾರರ ಪಟ್ಟಿಯಿಂದ ಹೆಸರು ತೆಗೆದಿರುವವರ ಧ್ವನಿ ಕೇಳಬೇಕು’

ಪ್ರತಿಭಟನೆಯಲ್ಲಿ ಮಾತನಾಡಿದ ಹಲವು ಮುಖಂಡರು, SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸುತ್ತಿರುವ ಜನರ ನೇರ ಅಹವಾಲುಗಳನ್ನು ಆಲಿಸಬೇಕು ಎಂದು ಜನಪರ ಸಂಘಟನೆಗಳ ನಾಯಕರು ಒತ್ತಾಯಿಸಿದರು.

SIR ಕುರಿತ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಜನರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ಜನತಾ ನ್ಯಾಯಮಂಡಳಿ’ ನಡೆಸಲಾಯಿತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದವರು ತಮ್ಮ ಅನುಭವಗಳು ಮತ್ತು ಅಹವಾಲುಗಳನ್ನು ಮಂಡಿಸಿದರು.

ಆಯೋಜಕರ ಪ್ರಕಾರ, SIR ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಜಿಲ್ಲೆ ಮಟ್ಟದಲ್ಲಿ ಅಧ್ಯಯನ ಮಾಡಲು ವಿವಿಧ ಸಂಘಟನೆಗಳು ಕಾರ್ಯನಿರ್ವಹಿಸಿವೆ. ಜನರಿಂದ ಮಾಹಿತಿ ಸಂಗ್ರಹಿಸಿ ಈ ಹೋರಾಟಕ್ಕೆ ದಾಖಲೆಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನಾಕಾರರು SIR ರದ್ದಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು. “ಮೊದಲು SIR ರದ್ದು ಮಾಡಬೇಕು, ಗ್ಯಾನೇಶ್‌ ಕುಮಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು; ಅಲ್ಲಿಯವರೆಗೆ ಸುಮ್ಮನಿರುವುದಿಲ್ಲ” ಎಂಬುದು ಪ್ರತಿಭಟನೆಯಲ್ಲಿ ಕೇಳಿಬಂದ ಪ್ರಮುಖ ಒತ್ತಾಯವಾಗಿತ್ತು. ಬೆಂಗಳೂರಿನ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಅಕ್ಟೋಬರ್‌ 10ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು CJP ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿವೆ.

ಪ್ರತಿಭಟನೆಯಲ್ಲಿ ಖ್ಯಾತ ಚಿತ್ರನಟ ಪ್ರಕಾಶ್‌ ರೈ, ಜಸ್ಟೀಸ್‌ ಗೋಪಾಲಗೌಡ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌ ವರಲಕ್ಷ್ಮಿ,  ಮತಕಾವಲು ಸಮಿತಿಯ ನೂರ್‌ ಶ್ರೀಧರ್‌, ದಲಿತ ನಾಯಕ ಮಾವಳ್ಳಿ ಶಂಕರ್,  ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು‌, ಕಾರ್ಮಿಕ ಸಂಘಟನೆಗಳು, ಯುವಜನ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಭಾಗವಹಿಸಿದ್ದವು. ಕಾರ್ಯಕ್ರಮವನ್ನು ಸಿಐಟಿಯುನ ಕೆ. ಮಹಾಂತೇಶ್‌ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಎಲ್‌ ಅಶೋಕ್‌ ನಿರ್ವಹಿಸಿದರು.

ಇದನ್ನೂ ನೋಡಿ : LIVE : ಗ್ಯಾನೇಶ್ ಕುಮಾರ್ ವಜಾ, SIR ರದ್ದತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಾಗೂ ರಾಜ್ಯಮಟ್ಟದ SIR ಜನತಾ ನ್ಯಾಯಾಲಯ

Donate Janashakthi Media

Leave a Reply

Your email address will not be published. Required fields are marked *