ತೀವ್ರ ಬಿಸಿಲಿನ ಹೊಡೆತ: ಗರ್ಭಿಣಿಯರು, ನವಜಾತ ಶಿಶುಗಳಿಗೆ ಹೆಚ್ಚಿದ ಆರೋಗ್ಯ ಅಪಾಯ

ಶೇ.73ರಷ್ಟು ತಾಯಂದಿರ ಆರೋಗ್ಯ ತಜ್ಞರಿಂದ ಆತಂಕ; ಬಿಸಿಗಾಳಿಯಿಂದ ಗರ್ಭಧಾರಣೆ ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆ ಪರಿಣಾಮ
ದೆಹಲಿ : ತೀವ್ರ ಬಿಸಿಲು ಮತ್ತು ಶಾಖದ ಅಲೆಗಳು ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ಆರೋಗ್ಯಕ್ಕೆ ಹೆಚ್ಚುತ್ತಿರುವ ಅಪಾಯವಾಗಿ ಪರಿಣಮಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಶಾಖಕ್ಕೆ ಸಂಬಂಧಿಸಿದ ಗರ್ಭಧಾರಣೆಯ ತೊಂದರೆಗಳು ಹೆಚ್ಚಾಗಿರುವುದನ್ನು ಶೇ.73ರಷ್ಟು ತಾಯಂದಿರ ಆರೋಗ್ಯ ಕ್ಷೇತ್ರದ ತಜ್ಞರು ಗಮನಿಸಿದ್ದಾರೆ ಎಂದು ಹೊಸ ಅಂತಾರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ. ಭ್ರೂಣ ಮತ್ತು ನವಜಾತ ಶಿಶುಗಳ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚಾಗಿವೆ ಎಂದು ಶೇ.76ರಷ್ಟು ಆರೋಗ್ಯ ಸಿಬ್ಬಂದಿ ಹೇಳಿದ್ದಾರೆ.

ವೆಲ್‌ಕಮ್ ಸಂಸ್ಥೆಯು ನಡೆಸಿದ ಈ ಸಮೀಕ್ಷೆಯಲ್ಲಿ ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್, ಬ್ರಿಟನ್ ಮತ್ತು ಜಿಂಬಾಬ್ವೆಯ ತಾಯಂದಿರ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ 1,000 ಆರೋಗ್ಯ ವೃತ್ತಿಪರರನ್ನು ಒಳಗೊಳ್ಳಲಾಗಿದೆ. ಪ್ರತಿ ದೇಶದಿಂದ ತಲಾ 200 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 1, 2026ರವರೆಗೆ ಸಮೀಕ್ಷೆ ನಡೆಸಲಾಗಿದೆ.

ಗರ್ಭಿಣಿಯರ ಆರೋಗ್ಯದ ಮೇಲೆ ನೇರ ಪರಿಣಾಮ

ತೀವ್ರ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಅವಧಿಪೂರ್ವ ಹೆರಿಗೆ, ಕಡಿಮೆ ತೂಕದ ಮಗು ಜನಿಸುವುದು, ಸತ್ತ ಮಗು ಜನಿಸುವುದು ಸೇರಿದಂತೆ ಹಲವು ಪ್ರತಿಕೂಲ ಪರಿಣಾಮಗಳ ಅಪಾಯ ಹೆಚ್ಚಾಗಬಹುದು ಎಂದು ಅಧ್ಯಯನಗಳು ಸೂಚಿಸಿವೆ. ಶಾಖದ ಪ್ರಮಾಣದಲ್ಲಿ ಪ್ರತಿ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾದಾಗ ಅವಧಿಪೂರ್ವ ಹೆರಿಗೆಯ ಸಾಧ್ಯತೆ ಸುಮಾರು ಶೇ.5ರಷ್ಟು ಹೆಚ್ಚಾಗಬಹುದು. ಶಾಖದ ಅಲೆಗಳಿಗೆ ಒಡ್ಡಿಕೊಳ್ಳುವುದರಿಂದ ಪ್ರಸೂತಿ ಸಂಬಂಧಿತ ತೊಂದರೆಗಳ ಅಪಾಯವೂ ಸುಮಾರು ಶೇ.25ರಷ್ಟು ಹೆಚ್ಚಾಗಿರುವುದು ಸಂಶೋಧನೆಗಳಲ್ಲಿ ಕಂಡುಬಂದಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಆರೋಗ್ಯ ಸಿಬ್ಬಂದಿಯ ಪೈಕಿ ಶೇ.23ರಷ್ಟು ಮಂದಿ ತೀವ್ರ ಶಾಖದಿಂದಾಗಿ ಹೆಚ್ಚುವರಿ ಮೇಲ್ವಿಚಾರಣೆ ಅಥವಾ ಚಿಕಿತ್ಸೆಯ ಅಗತ್ಯವಿರುವ ಗರ್ಭಧಾರಣೆಯ ತೊಂದರೆಗಳನ್ನು ಕಂಡಿರುವುದಾಗಿ ತಿಳಿಸಿದ್ದಾರೆ. ಶೇ.34ರಷ್ಟು ಮಂದಿ ಕಡಿಮೆ ಜನನ ತೂಕ ಅಥವಾ ಭ್ರೂಣದ ಬೆಳವಣಿಗೆ ಕುಂಠಿತವಾಗಿರುವ ಪ್ರಕರಣಗಳನ್ನು ಗಮನಿಸಿದ್ದಾರೆ.

ನವಜಾತ ಶಿಶುಗಳಿಗೂ ಅಪಾಯ

ತೀವ್ರ ಬಿಸಿಲಿನ ಪರಿಣಾಮ ನವಜಾತ ಶಿಶುಗಳ ಮೇಲೂ ಕಂಡುಬರುತ್ತಿದೆ. ಶೇ.36ರಷ್ಟು ಆರೋಗ್ಯ ಸಿಬ್ಬಂದಿ ನವಜಾತ ಶಿಶುಗಳಲ್ಲಿ ನಿರ್ಜಲೀಕರಣ ಮತ್ತು ಶಾಖ ಸಂಬಂಧಿತ ಅನಾರೋಗ್ಯದ ಪ್ರಕರಣಗಳನ್ನು ಕಂಡಿರುವುದಾಗಿ ಹೇಳಿದ್ದಾರೆ. ಮತ್ತಷ್ಟು ಮಂದಿ ಶಿಶುಗಳಿಗೆ ಹಾಲು ಕುಡಿಯುವುದು, ಉಸಿರಾಟ ಮತ್ತು ದೇಹದ ಉಷ್ಣಾಂಶ ನಿಯಂತ್ರಣದಲ್ಲಿ ತೊಂದರೆಗಳು ಎದುರಾಗಿರುವುದನ್ನು ವರದಿ ಮಾಡಿದ್ದಾರೆ.

ಇದಲ್ಲದೆ, ಶಾಖದ ಕಾರಣದಿಂದ ಆರೋಗ್ಯ ಸೇವೆ ಪಡೆಯುವುದಕ್ಕೂ ಅಡಚಣೆ ಉಂಟಾಗುತ್ತಿದೆ. ಶೇ.27ರಷ್ಟು ಆರೋಗ್ಯ ವೃತ್ತಿಪರರು ತೀವ್ರ ಉಷ್ಣತೆಯಿಂದ ಗರ್ಭಿಣಿಯರು ಮತ್ತು ಕುಟುಂಬಗಳಿಗೆ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಿಗೆ ತೆರಳುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಶೇ.29ರಷ್ಟು ಮಂದಿ ತುರ್ತು ಅಥವಾ ತಕ್ಷಣದ ಚಿಕಿತ್ಸೆಯ ಅಗತ್ಯವಿರುವ ಪ್ರಕರಣಗಳು ಹೆಚ್ಚಾಗಿರುವುದನ್ನು ಗಮನಿಸಿದ್ದಾರೆ.

ಇದನ್ನೂ ಓದಿ : “ಕುಟುಂಬದವರು ಬೇರೆ ಬೇರೆ ಊರಲ್ಲಿದ್ದಾರೆಂದು ವಂಶವೃಕ್ಷ ಪ್ರಮಾಣಪತ್ರ ತಿರಸ್ಕರಿಸುವಂತಿಲ್ಲ: ಹೈಕೋರ್ಟ್”

ಮುಂದಿನ ಐದು ವರ್ಷಗಳ ಬಗ್ಗೆ ಆತಂಕ

ತೀವ್ರ ಶಾಖದಿಂದ ತಾಯಂದಿರು, ಭ್ರೂಣಗಳು ಮತ್ತು ನವಜಾತ ಶಿಶುಗಳ ಆರೋಗ್ಯಕ್ಕೆ ಮುಂದಿನ ಐದು ವರ್ಷಗಳಲ್ಲಿ ಇನ್ನಷ್ಟು ಅಪಾಯ ಎದುರಾಗಬಹುದು ಎಂದು ಶೇ.81ರಷ್ಟು ಆರೋಗ್ಯ ವೃತ್ತಿಪರರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿಯೂ ಈ ಸಮಸ್ಯೆಯ ಬಗ್ಗೆ ಆರೋಗ್ಯ ವ್ಯವಸ್ಥೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಯುಎನ್‌ಎಫ್‌ಪಿಎ 2026ರಲ್ಲಿ ಗರ್ಭಾವಸ್ಥೆಯ ಸಂದರ್ಭದಲ್ಲಿ ತೀವ್ರ ಶಾಖದಿಂದ ಉಂಟಾಗಬಹುದಾದ ಅಪಾಯಗಳನ್ನು ಗುರುತಿಸುವ ಮತ್ತು ನಿರ್ವಹಿಸುವ ಕುರಿತು ಆರೋಗ್ಯ ಸಿಬ್ಬಂದಿಗಾಗಿ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿವೆ. ಇದರಲ್ಲಿ ನೀರು, ತಂಪಾಗಿಸುವ ವ್ಯವಸ್ಥೆ, ಅಪಾಯದ ಲಕ್ಷಣಗಳ ಗುರುತಿಸುವಿಕೆ ಮತ್ತು ಅಗತ್ಯವಿದ್ದಾಗ ತಕ್ಷಣದ ಚಿಕಿತ್ಸೆಗೆ ರವಾನೆ ಸೇರಿದಂತೆ ಹಲವು ಕ್ರಮಗಳನ್ನು ಸೂಚಿಸಲಾಗಿದೆ.

ಹವಾಮಾನ ಬದಲಾವಣೆಯೊಂದಿಗೆ ಹೆಚ್ಚುತ್ತಿರುವ ಸಂಕಷ್ಟ

ಹವಾಮಾನ ಬದಲಾವಣೆಯಿಂದ ತೀವ್ರ ಶಾಖದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳನ್ನು ಹವಾಮಾನ ಹಾಗೂ ಆರೋಗ್ಯ ನೀತಿಗಳಲ್ಲಿ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗಾಗಿ ಶಾಖದ ಮುನ್ನೆಚ್ಚರಿಕೆ ವ್ಯವಸ್ಥೆ, ತಂಪಾದ ಆರೋಗ್ಯ ಕೇಂದ್ರಗಳು, ಸುರಕ್ಷಿತ ಕುಡಿಯುವ ನೀರು ಮತ್ತು ಆರೋಗ್ಯ ಸೇವೆಗಳಿಗೆ ಸುಲಭ ಪ್ರವೇಶ ಕಲ್ಪಿಸುವ ಅಗತ್ಯವಿದೆ. ತೀವ್ರ ಶಾಖವನ್ನು ಕೇವಲ ಹವಾಮಾನ ಸಮಸ್ಯೆಯಾಗಿ ನೋಡದೆ, ತಾಯಂದಿರು ಮತ್ತು ಶಿಶುಗಳ ಆರೋಗ್ಯಕ್ಕೆ ಸಂಬಂಧಿಸಿದ ಸಾರ್ವಜನಿಕ ಆರೋಗ್ಯ ಸವಾಲಾಗಿ ಪರಿಗಣಿಸುವ ಅಗತ್ಯವನ್ನು ಈ ಸಮೀಕ್ಷೆ ಮತ್ತೊಮ್ಮೆ ಎತ್ತಿ ತೋರಿಸಿದೆ.

ಇದನ್ನೂ ನೋಡಿ : SIR | ಕಿತ್ತುಹಾಕುವವರಿಗೆ ಸಂತಸ, ಹೊರಹೋಗುವವರಿಗೆ ಆತಂಕ! ಫಾರ್ಮ್‌–7ರ ಆಟದ ಸೂತ್ರಧಾರರು ಯಾರು? Janashakthi Media

Donate Janashakthi Media

Leave a Reply

Your email address will not be published. Required fields are marked *