ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಆಕಾಶವಾಣಿ ಭವನದ ಆವರಣಕ್ಕೆ ಅನುಮತಿಯಿಲ್ಲದೆ ಪ್ರವೇಶಿಸಿದ ಆರೋಪದ ಮೇಲೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಸ್ಐಆರ್ ವಿರುದ್ಧ ರಾಹುಲ್ ಗಾಂಧಿ ಹೋರಾಟ ನಡೆಸುತ್ತಿದ್ದರೆ, ಮೋದಿ–ಶಾ ಅವರು ಎಫ್ಐಆರ್ ದಾಖಲಿಸುವಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಎಸ್ಐಆರ್ ಮೂಲಕ ಕೋಟ್ಯಂತರ ನೈಜ ಮತದಾರರು ತಮ್ಮ ಸಂವಿಧಾನಾತ್ಮಕ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸತ್ಯಾಗ್ರಹದ ಮೂಲಕ ಪ್ರತಿಭಟನೆ ನಡೆಸಿದಾಗ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಮೋದಿ ಮತ್ತು ಶಾ ಆತಂಕಗೊಂಡಿದ್ದು, ಹತಾಶರಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ : ನಂದಿನಿ ಹಾಲಿನ ದರ ಏರಿಕೆಗೆ ಸಂಪುಟ ಸಮ್ಮತಿ: ಲೀಟರ್ಗೆ ₹8 ಹೆಚ್ಚಳ ಸಾಧ್ಯತೆ!
ಎಸ್ಐಆರ್ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ
ಅಕ್ಟೋಬರ್ 6ರಂದು ಇಂಡಿಯಾ ಒಕ್ಕೂಟದ ಸಂಸದರು ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಎಸ್ಐಆರ್ನಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಗಿತ್ತು.
ಮೆರವಣಿಗೆಯನ್ನು ಪೊಲೀಸರು ತಡೆದ ಬಳಿಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ಆಕಾಶವಾಣಿ ಭವನದ ಆವರಣದಲ್ಲಿ ಧರಣಿ ನಡೆಸಿದರು. ಎಂಟು ಗಂಟೆಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯ ಬಳಿಕ ರಾಹುಲ್ ಗಾಂಧಿ ಸೇರಿದಂತೆ ಸುಮಾರು 260 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪೊಲೀಸರ ಪ್ರಕಾರ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅವರ ಬೆಂಬಲಿಗರು ಹಾಗೂ ಅವರೊಂದಿಗೆ ತೆರಳಿದ್ದ ಸಂಸದರು ಅನುಮತಿಯಿಲ್ಲದೆ ಆಕಾಶವಾಣಿ ಭವನದ ಆವರಣ ಪ್ರವೇಶಿಸಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಪ್ರತಿಪಕ್ಷಗಳು ಮತ್ತೊಂದೆಡೆ ಎಸ್ಐಆರ್ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಅಕ್ರಮಗಳಿವೆ ಎಂದು ಆರೋಪಿಸುತ್ತಿದ್ದು, ಎಸ್ಐಆರ್ನ್ನು ರದ್ದುಪಡಿಸುವುದು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸುತ್ತಿವೆ.
ಇದನ್ನೂ ನೋಡಿ : SIR | ಕಿತ್ತುಹಾಕುವವರಿಗೆ ಸಂತಸ, ಹೊರಹೋಗುವವರಿಗೆ ಆತಂಕ! ಫಾರ್ಮ್–7ರ ಆಟದ ಸೂತ್ರಧಾರರು ಯಾರು? Janashakthi Media
