ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ಬಳಿ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ಮತ್ತಷ್ಟು ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಹಲವು ಬಾರಿ ಘರ್ಷಣೆ ನಡೆದಿದೆ. ವಿದ್ಯಾರ್ಥಿಗಳು ಹಾಗೂ ಯುವತಿಯರು ಬಂಧನಕ್ಕೆ ತೀವ್ರ ಪ್ರತಿರೋಧ ತೋರಿದ್ದು, ಬ್ಯಾರಿಕೇಡ್ಗಳನ್ನು ಮುರಿದು ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಜಂತರ್
ಪೊಲೀಸರನ್ನು ಎದುರಿಸಿದ ಯುವತಿಯರು
‘ಜಂತರ್ ಮಂತರ್ 2.0’ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ AISA, SFI, DYFI, KYS, AISF ಮತ್ತು ದಿಶಾ ಸಂಘಟನೆಗಳ ವಿದ್ಯಾರ್ಥಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಪ್ರತಿಭಟನೆ ಸುಮಾರು ಸಂಜೆ 6.30ರವರೆಗೆ ಮುಂದುವರಿಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾದಾಗ ಯುವತಿಯರು ಸೇರಿದಂತೆ ಪ್ರತಿಭಟನಾಕಾರರು ತೀವ್ರ ಪ್ರತಿರೋಧ ತೋರಿದರು. ಕೆಲವರು ಪೊಲೀಸ್ ವಾಹನಗಳ ಮೇಲೆ ಹತ್ತಿ ಘೋಷಣೆ ಕೂಗಿದರೆ, ಮತ್ತಷ್ಟು ಮಂದಿ ಬ್ಯಾರಿಕೇಡ್ಗಳನ್ನು ಮುರಿದರು.
ಪ್ರತಿಭಟನಾಕಾರರನ್ನು ಬಂಧಿಸಲು ಆರು–ಏಳು ಮಂದಿ ಪೊಲೀಸರು ಹಾಗೂ ಮಹಿಳಾ ಪೊಲೀಸರು ಒಟ್ಟಾಗಿ ಮುಂದಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವರು ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡರು. ಬಂಧನಕ್ಕೆ ಕರೆದೊಯ್ಯುತ್ತಿದ್ದ ಬಸ್ನ ಹಿಂಬದಿಯ ಗಾಜು ಒಡೆದು ಕೆಲ ಪ್ರತಿಭಟನಾಕಾರರು ಹೊರಬಂದರೆ, ಒಬ್ಬ ಯುವತಿ ಪೊಲೀಸ್ ಬಸ್ನ ಇಗ್ನಿಷನ್ ಕೀ ತೆಗೆದುಕೊಂಡು ಪರಾರಿಯಾಗಿದ್ದಾಳೆ ಎಂದು ವರದಿ ತಿಳಿಸಿದೆ. ಜಂತರ್

ಮಹಿಳಾ ಪತ್ರಕರ್ತೆಗೆ ಕಿರುಕುಳ ಆರೋಪ
ಪ್ರತಿಭಟನೆಯ ಸಂದರ್ಭದಲ್ಲಿ ಸ್ವತಂತ್ರ ಮಹಿಳಾ ಪತ್ರಕರ್ತೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತರೂ ಜಂತರ್ ಮಂತರ್ನಲ್ಲಿ ಕರ್ತವ್ಯದಲ್ಲಿದ್ದರು ಎಂದು ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಆ ಪೊಲೀಸ್ ಅಧಿಕಾರಿಯ ಭಾವಚಿತ್ರವಿರುವ ಪೋಸ್ಟರ್ಗಳನ್ನು ಪ್ರದರ್ಶಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್, ಮಹಿಳಾ ಪತ್ರಕರ್ತೆಗೆ ಕಿರುಕುಳ ನೀಡಿದ ಆರೋಪದ ಕುರಿತು ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ದೂರು ದಾಖಲಿಸಲು ಪೊಲೀಸರು ವಿಡಿಯೊ ಸಾಕ್ಷ್ಯ ಕೇಳುತ್ತಿರುವುದನ್ನು ಪ್ರಶ್ನಿಸಿದ ಅವರು, ಮಹಿಳೆಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊವನ್ನು ತಾವೇ ಚಿತ್ರೀಕರಿಸಿಕೊಂಡಿರಬೇಕೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ: 700ಕ್ಕೂ ಹೆಚ್ಚು ಮಂದಿ ವಶಕ್ಕೆ

ಜಂತರ್ ಮಂತರ್ ತಲುಪದಿದ್ದರೂ ಪ್ರತಿಭಟನೆ ಮುಂದುವರಿಕೆ
ಜಂತರ್ ಮಂತರ್ ತಲುಪಲು ಸಾಧ್ಯವಾಗದಿದ್ದರೆ ಇಂಡಿಯಾ ಗೇಟ್ಗೆ ತೆರಳಿ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಪರಸ್ಪರ ಹೇಳಿಕೊಂಡಿದ್ದರು. ಆದರೆ ಆಂಧ್ರ ಭವನ ವೃತ್ತದ ಬಳಿ ದೆಹಲಿ ಪೊಲೀಸರು, ಸಿಆರ್ಪಿಎಫ್ ಮತ್ತು ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಿಬ್ಬಂದಿಯನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಲಾಠಿ ಮತ್ತು ಅಶ್ರುವಾಯು ಬಳಸಲು ಸಜ್ಜಾಗಿದ್ದ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ತಡೆಯಲು ಮುಂದಾದವು.
ಪ್ರತಿಭಟನಾಕಾರರು ರಸ್ತೆಯಲ್ಲೇ ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಅವರನ್ನು ಬಲವಂತವಾಗಿ ಬಸ್ಗಳಿಗೆ ತುಂಬಿದಾಗ ಕೆಲವರು ಪೊಲೀಸರೊಂದಿಗೆ ನೂಕಾಟ ನಡೆಸಿ ಮತ್ತೆ ಹೊರಬಂದರು. ಪ್ರತಿಭಟನಾಕಾರರು ತಪ್ಪಿಸಿಕೊಂಡಾಗಲೆಲ್ಲ ಸ್ಥಳದಲ್ಲಿ ಘೋಷಣೆಗಳು ಮೊಳಗುತ್ತಿದ್ದವು. ಅಕ್ಟೋಬರ್ 2ರಿಂದ ಸತತ ಮೂರು ದಿನಗಳ ಪ್ರತಿಭಟನೆಯಲ್ಲಿ ಯುವತಿಯರೇ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ “ಒಂದು ಕಚೋರಿ, ಎರಡು ಸಮೋಸಾ, ದೆಹಲಿ ಪೊಲೀಸರನ್ನು ಹೇಗೆ ನಂಬುವುದು?” ಎಂಬ ಘೋಷಣೆಯೂ ಕೇಳಿಬಂದಿದೆ. ಪ್ರತಿಭಟನಾಕಾರರು ಪೊಲೀಸರ ಬಂಧನ ಕ್ರಮ, ಮಹಿಳೆಯರ ಮೇಲಿನ ವರ್ತನೆ ಮತ್ತು ಪ್ರತಿಭಟನೆಗೆ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ನೋಡಿ : SIR ಕರ್ನಾಟಕ | ಬಾಲ್ಕಿಯಲ್ಲಿ ಫಾರ್ಮ್–7 ಮೂಲಕ ಏನಾಗುತ್ತಿದೆ? ಹೆಸರು ಅಳಿಸುವಿಕೆಯ ಹಿಂದಿರುವವರು ಯಾರು?
