ಬೆಂಗಳೂರು: ಬೆಂಗಳೂರಿನ ಪೂರ್ವ ಭಾಗದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಶಾಲಾ ಮಕ್ಕಳ ದಿನಚರಿಯ ಮೇಲೆಯೇ ಗಂಭೀರ ಪರಿಣಾಮ ಬೀರುತ್ತಿದೆ. ವೈಟ್ಫೀಲ್ಡ್–ಸರ್ಜಾಪುರ ರಸ್ತೆಯ ವ್ಯಾಪ್ತಿಯಲ್ಲಿ ಶಾಲೆಗೆ ತೆರಳಿ ಮರಳಲು ಮಕ್ಕಳಿಗೆ ಪ್ರತಿದಿನ ಸರಾಸರಿ 112 ನಿಮಿಷ ಬೇಕಾಗುತ್ತಿದ್ದು, ವರ್ಷಕ್ಕೆ ಸುಮಾರು 374 ಗಂಟೆ, ಅಂದರೆ ಬರೋಬ್ಬರಿ 53 ಶಾಲಾ ದಿನಗಳನ್ನು ರಸ್ತೆ ಪ್ರಯಾಣದಲ್ಲೇ ಕಳೆಯುವಂತಾಗಿದೆ. ಇನ್ವೆಂಚರ್ ಅಕಾಡೆಮಿ ನಡೆಸಿದ ಶಾಲಾ ಬಸ್ಗಳ ಜಿಪಿಎಸ್ ಮಾಹಿತಿಯ ವಿಶ್ಲೇಷಣೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. ಬೆಂಗಳೂರು
ಡೊಮ್ಮಸಂದ್ರ ವೃತ್ತದಿಂದ ವರ್ತೂರು ಕೋಡಿ ನಡುವಿನ ಸುಮಾರು 10 ಕಿ.ಮೀ. ಮಾರ್ಗದಲ್ಲಿ ಶಾಲಾ ಬಸ್ಗಳ ಪ್ರಯಾಣದ ಅವಧಿ ಕಳೆದ ಎರಡು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. 2024-25ರಲ್ಲಿ ಸುಮಾರು 92 ನಿಮಿಷಗಳಿದ್ದ ಒಟ್ಟು ಪ್ರಯಾಣದ ಅವಧಿ 2026-27ರಲ್ಲಿ 112 ನಿಮಿಷಗಳಿಗೆ ಏರಿಕೆಯಾಗಿದೆ. ಈ ಮಾರ್ಗದಲ್ಲಿ ಶಾಲಾ ಬಸ್ಗಳ ಸರಾಸರಿ ವೇಗ ಕೇವಲ 9.2 ಕಿ.ಮೀ. ಪ್ರತಿ ಗಂಟೆಯಷ್ಟಿದೆ. ಕೆಲವು ಭಾಗಗಳಲ್ಲಿ ಬಸ್ಗಳ ವೇಗ ವೇಗವಾಗಿ ನಡೆಯುವ ವ್ಯಕ್ತಿಯ ವೇಗಕ್ಕಿಂತಲೂ ಕಡಿಮೆಯಾಗುತ್ತಿದೆ.
ಈ ಪ್ರದೇಶದಲ್ಲಿ ಸುಮಾರು 42 ಖಾಸಗಿ ಶಾಲೆಗಳು ಮತ್ತು 1,000ಕ್ಕೂ ಹೆಚ್ಚು ಶಾಲಾ ಬಸ್ಗಳಿದ್ದು, ಸುಮಾರು 40 ಸಾವಿರ ವಿದ್ಯಾರ್ಥಿಗಳು ಈ ಸಂಚಾರ ಸಮಸ್ಯೆಯಿಂದ ನೇರವಾಗಿ ಪರಿಣಾಮಕ್ಕೊಳಗಾಗುವ ಸಾಧ್ಯತೆಯಿದೆ. ಅಧ್ಯಯನದ ಪ್ರಕಾರ, ಶೇ.60ರಷ್ಟು ಶಾಲಾ ಬಸ್ಗಳು ನಿಗದಿತ ಸಮಯಕ್ಕಿಂತ ತಡವಾಗಿ ತಲುಪುತ್ತಿವೆ. ಶೇ.15ರಷ್ಟು ಪ್ರಯಾಣಗಳು ಕನಿಷ್ಠ 30 ನಿಮಿಷ ತಡವಾಗುತ್ತಿದ್ದು, ಶೇ.4ರಷ್ಟು ಬಸ್ಗಳು ಒಂದು ಗಂಟೆಗೂ ಹೆಚ್ಚು ತಡವಾಗುತ್ತಿವೆ.
ಮೂಲಸೌಕರ್ಯ ಕೊರತೆ, ಕಾಮಗಾರಿ ಮತ್ತು ಕಿರಿದಾದ ರಸ್ತೆಗಳು
ಡೊಮ್ಮಸಂದ್ರ, ಗುಂಜೂರು, ವರ್ತೂರು ಕೋಡಿ, ವಿಬ್ಗಯಾರ್ ರಸ್ತೆ–ಕುಂದಲಹಳ್ಳಿ ಹಾಗೂ ಗ್ರಾನ್ ಕಾರ್ಮೆಲ್ ಸೇರಿದಂತೆ ಹಲವು ಪ್ರದೇಶಗಳು ಪ್ರಮುಖ ಸಂಚಾರ ತಡೆಗಳಾಗಿ ಗುರುತಿಸಲ್ಪಟ್ಟಿವೆ. ರಸ್ತೆ ಗುಂಡಿಗಳು, ಅಪೂರ್ಣ ಮೇಲ್ಸೇತುವೆ ಕಾಮಗಾರಿ, ಕಿರಿದಾದ ರಸ್ತೆಗಳು, ತಾತ್ಕಾಲಿಕ ಮಾರ್ಗ ಬದಲಾವಣೆ, ರಸ್ತೆ ಅತಿಕ್ರಮಣ, ನೀರು ನಿಲ್ಲುವ ಸಮಸ್ಯೆ ಮತ್ತು ಸರಿಯಾದ ಸಂಚಾರ ನಿರ್ವಹಣೆಯ ಕೊರತೆ ದಟ್ಟಣೆಗೆ ಕಾರಣವಾಗಿವೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷವಾಗಿ ಶಾಲೆ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ವಾಹನಗಳ ಒತ್ತಡ ಹೆಚ್ಚುವುದರಿಂದ ಮಕ್ಕಳ ಪ್ರಯಾಣ ಮತ್ತಷ್ಟು ದೀರ್ಘವಾಗುತ್ತಿದೆ. ಗುರುವಾರಗಳು ಅತ್ಯಂತ ಕೆಟ್ಟ ಸಂಚಾರದ ದಿನಗಳಾಗಿದ್ದು, ಕೆಲವು ಮಾರ್ಗಗಳಲ್ಲಿ ಶಾಲೆಯಿಂದ ವರ್ತೂರು ಕೋಡಿಗೆ ತಲುಪಲು ಮಧ್ಯಾಹ್ನದ ವೇಳೆಯಲ್ಲಿ 76 ನಿಮಿಷಗಳವರೆಗೆ ಬೇಕಾಗುತ್ತಿದೆ. ಈ ಸಂದರ್ಭದಲ್ಲಿ ಬಸ್ಗಳ ಸರಾಸರಿ ವೇಗ ಗಂಟೆಗೆ 8.4 ಕಿ.ಮೀ.ಗೆ ಕುಸಿದಿದೆ. ಬೆಂಗಳೂರು
ಇದನ್ನೂ ಓದಿ : ಹೈದರಾಬಾದ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಎಸ್ಎಫ್ಐನ ದಿಲ್ಶಾದಾ ರೈಹಾನ್ ಆಯ್ಕೆ
ಮಕ್ಕಳ ಓದು, ನಿದ್ದೆ, ಆಟಕ್ಕೂ ಹೊಡೆತ
ದೀರ್ಘ ಸಂಚಾರ ಪ್ರಯಾಣದಿಂದ ಮಕ್ಕಳಿಗೆ ಓದು, ಆಟ, ವಿಶ್ರಾಂತಿ ಮತ್ತು ನಿದ್ದೆಗೆ ಸಿಗುವ ಸಮಯ ಕಡಿಮೆಯಾಗುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳ ದಿನಚರಿಯಲ್ಲಿ ಈಗಾಗಲೇ ಶಾಲೆ, ಮನೆಪಾಠ, ತರಬೇತಿ ಮತ್ತು ಇತರ ಚಟುವಟಿಕೆಗಳ ಒತ್ತಡವಿದ್ದು, ಅದರ ನಡುವೆ ಪ್ರತಿದಿನ ಗಂಟೆಗಟ್ಟಲೆ ರಸ್ತೆ ಮೇಲೆ ಕಳೆಯಬೇಕಾದ ಪರಿಸ್ಥಿತಿ ಅವರ ಒಟ್ಟಾರೆ ಜೀವನಶೈಲಿಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ವೈದ್ಯರು ಮತ್ತು ಮಕ್ಕಳ ತಜ್ಞರು ತಿಳಿಸಿದ್ದಾರೆ.
ಮಕ್ಕಳ ಬೆಳವಣಿಗೆಗೆ ಪಾಠದ ಸಮಯದಷ್ಟೇ ಮುಕ್ತ ಆಟ, ಸ್ನೇಹಿತರೊಂದಿಗೆ ಬೆರೆಯುವುದು ಮತ್ತು ಸ್ವತಂತ್ರವಾಗಿ ಸಮಯ ಕಳೆಯುವುದೂ ಮುಖ್ಯ. ಆದರೆ ಸಂಚಾರ ದಟ್ಟಣೆಯಿಂದ ಈ ಸಮಯವೇ ಕಡಿಮೆಯಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಶಾಲಾ ಸಮಯ ಬದಲಿಸುವುದು ಅಥವಾ ಆನ್ಲೈನ್ ತರಗತಿಗಳಿಗೆ ಪರ್ಯಾಯ ಹುಡುಕುವುದಕ್ಕಿಂತ, ನಗರದ ಸಾರಿಗೆ ವ್ಯವಸ್ಥೆ, ರಸ್ತೆ ಮೂಲಸೌಕರ್ಯ ಮತ್ತು ಸಂಚಾರ ನಿರ್ವಹಣೆಯಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಬೆಂಗಳೂರು
ಶಾಲಾ ಸಮಯದಲ್ಲಿ ಭಾರಿ ವಾಹನಗಳಿಗೆ ನಿರ್ಬಂಧಕ್ಕೆ ಆಗ್ರಹ
ಸಂಚಾರ ಸಮಸ್ಯೆ ನಿವಾರಣೆಗೆ ಸಾರ್ವಜನಿಕ ಸಾರಿಗೆ ಬಲಪಡಿಸುವುದು, ರಸ್ತೆ ಜಾಲ ವಿಸ್ತರಿಸುವುದು, ಶಾಲಾ ಸಮಯದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವುದು, ಶಾಲಾ ಬಸ್ಗಳಿಗೆ ಆದ್ಯತೆ ನೀಡುವುದು ಹಾಗೂ ರಸ್ತೆ ಗುಂಡಿ ಮತ್ತು ನೀರು ನಿಲ್ಲುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಒತ್ತಾಯಿಸಲಾಗಿದೆ. ಸಂಚಾರ ನಿರ್ವಹಣೆಗೆ ನೈಜ ಸಮಯದ ಸಂಚಾರ ದತ್ತಾಂಶ ಬಳಸಿ ಶಾಲೆ ಮತ್ತು ಕಚೇರಿ ಸಮಯಗಳನ್ನು ವೈಜ್ಞಾನಿಕವಾಗಿ ಹೊಂದಿಸುವ ಸಲಹೆಯೂ ಬಂದಿದೆ.
ಮಕ್ಕಳು ಶಾಲೆಗೆ ಹೋಗಲು ಮತ್ತು ಮರಳಲು ಪ್ರತಿದಿನ ಎರಡು ಗಂಟೆಗೂ ಹೆಚ್ಚು ಸಮಯ ರಸ್ತೆ ಮೇಲೆ ಕಳೆಯುವ ಪರಿಸ್ಥಿತಿ ಸಾಮಾನ್ಯವಾಗುತ್ತಿರುವುದು ಬೆಂಗಳೂರಿನ ನಗರ ಯೋಜನೆ ಹಾಗೂ ಸಾರಿಗೆ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಶಾಲೆಯ ಸಮಯ ಮಕ್ಕಳ ಕಲಿಕೆಗೆ ಮೀಸಲಾಗಿರಬೇಕಾದರೆ, ರಸ್ತೆ ಮೇಲಿನ 53 ದಿನಗಳ ನಷ್ಟಕ್ಕೆ ಪರಿಹಾರ ಯಾವಾಗ? ಎಂಬ ಪ್ರಶ್ನೆ ಈಗ ಎದುರಾಗಿದೆ. ಬೆಂಗಳೂರು
ಇದನ್ನೂ ನೋಡಿ : LIVE : SIR -ದ್ರೋಹ ಮತ್ತು ಕಣ್ಣೀರ ಕಥನ (ಪರಿಶೋಧನಾ ವರದಿ ಬಿಡುಗಡೆ) ನೇರಪ್ರಸಾರ
