ನಮೂನೆ-7ರ ಅಕ್ರಮದ ಆರೋಪ: ತನಿಖೆಗೆ ಸಿಎಂ ಭರವಸೆ

ಬೆಂಗಳೂರು: ಎಸ್‌ಐಆರ್‌ ಪ್ರಕ್ರಿಯೆ ಸಂದರ್ಭದಲ್ಲಿ ನಮೂನೆ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿರುವ ಆರೋಪಗಳ ಕುರಿತು ಕಾನೂನಿನ ಚೌಕಟ್ಟಿನಲ್ಲಿ ಸಮಗ್ರ ತನಿಖೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ ಎಂದು ಎಸ್‌ಐಆರ್‌ ವಿರೋಧಿ ಒಕ್ಕೂಟ ತಿಳಿಸಿದೆ.

ಬುಧವಾರ ನಗರದ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ನಟ ಪ್ರಕಾಶ್‌ರಾಜ್‌ ನೇತೃತ್ವದಲ್ಲಿ ಎಸ್‌ಐಆರ್‌ ವಿರೋಧಿ ಒಕ್ಕೂಟದ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿತು. ನೂರ್‌ ಶ್ರೀಧರ್, ಮುಹಮ್ಮದ್‌ ಯೂಸುಫ್ ಕನ್ನಿ, ಜೆ.ಎಂ.ವೀರಸಂಗಯ್ಯ, ಕೆ.ಎಲ್.ಅಶೋಕ್, ಅಬ್ದುಲ್‌ ಮಜೀದ್, ಕೆ.ಎಸ್.ವಿಮಲಾ, ವರದರಾಜೇಂದ್ರ, ಸೀತಾರಂ ಗುಂಡಪ್ಪ, ಡಾ.ಪೂರ್ಣಾನಂದ, ಇಸಾಬೆಲ್, ಸತ್ಯ ಮುನ್ನಡಿ ಸೇರಿದಂತೆ ಹಲವರು ನಿಯೋಗದಲ್ಲಿದ್ದರು. ಈ ಸಂದರ್ಭದಲ್ಲಿ ಎಸ್‌ಐಆರ್‌ ಪರಿಶೋಧನಾ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿ, ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ಹಾಗೂ ನಮೂನೆ-7 ಅರ್ಜಿಗಳ ಬಳಕೆಯ ಕುರಿತು ಚರ್ಚಿಸಲಾಯಿತು.

ಮತದಾರರ ಹಕ್ಕು ರಕ್ಷಿಸುವುದು ಕರ್ತವ್ಯ: ಸಿಎಂ

ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಯೊಬ್ಬರ ಮತದಾನದ ಹಕ್ಕನ್ನು ರಕ್ಷಿಸುವುದು ತಮ್ಮ ಕರ್ತವ್ಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ ಎಂದು ಒಕ್ಕೂಟದ ಮುಖಂಡ ಕೆ.ಎಲ್.ಅಶೋಕ್‌ ಹೇಳಿದರು. ಬಿಎಲ್‌ಎ-1 ಮತ್ತು ಬಿಎಲ್‌ಎ-2ಗಳು ಬಿಎಲ್‌ಒಗಳಿಗೆ ನಮೂನೆ-7 ಅರ್ಜಿಗಳನ್ನು ಸಲ್ಲಿಸಿ ಮತದಾರರ ಹೆಸರುಗಳನ್ನು ತೆಗೆಸಲು ಪ್ರಯತ್ನಿಸಿರುವ ಕುರಿತು ಯಾರಿಗಾದರೂ ಮಾಹಿತಿ ಇದ್ದರೆ, ಅಂತಹ ಎಲ್ಲ ವಿವರಗಳನ್ನು ಕೂಡಲೇ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ ಎಂದು ಅಶೋಕ್‌ ತಿಳಿಸಿದರು.

ಇದನ್ನೂ ಓದಿ : ಎಸ್‌ಐಆರ್‌ ವಿರುದ್ಧ INDIA ಒಕ್ಕೂಟದ ಹೋರಾಟ ತೀವ್ರ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಅ.1ರಂದು ಚುನಾವಣಾ ಆಯೋಗಕ್ಕೆ ಸಿಎಂ ಭೇಟಿ

ನಮೂನೆ-7 ಅರ್ಜಿಗಳ ದುರ್ಬಳಕೆಯ ಆರೋಪಗಳ ಕುರಿತು ಲಭ್ಯವಿರುವ ಮಾಹಿತಿ ಹಾಗೂ ದಾಖಲೆಗಳನ್ನು ಮುಖ್ಯಮಂತ್ರಿಗಳ ಕಚೇರಿಗೆ ತಲುಪಿಸುವಂತೆ ಒಕ್ಕೂಟ ಮನವಿ ಮಾಡಿದೆ. ಇದೇ ವೇಳೆ ಅಕ್ಟೋಬರ್‌ 1ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಖುದ್ದಾಗಿ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ, ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಕೆ.ಎಲ್.ಅಶೋಕ್‌ ಮಾಹಿತಿ ನೀಡಿದರು.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಯಾವುದೇ ರೀತಿಯ ಅಕ್ರಮ ಅಥವಾ ದುರ್ಬಳಕೆಯ ಮೂಲಕ ತೆಗೆದುಹಾಕದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಒಕ್ಕೂಟದ ಪ್ರಮುಖ ಆಗ್ರಹವಾಗಿದೆ. ನಮೂನೆ-7 ಅರ್ಜಿಗಳ ಬಳಕೆ ಕುರಿತ ಆರೋಪಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ತಪ್ಪಿತಸ್ಥರು ಕಂಡುಬಂದರೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಇದನ್ನೂ ನೋಡಿ : ದಿಗ್ಬಂಧನದ ನಡುವೆಯೂ ಕ್ಯೂಬಾ ಹೇಗಿದೆ? | ಕಣ್ಣಾರೆ ಕಂಡ ವಿಭಿನ್ನ ಬದುಕಿನ ಅನುಭವ | ಮೀನಾಕ್ಷಿ ಸುಂದರಂ

Donate Janashakthi Media

Leave a Reply

Your email address will not be published. Required fields are marked *