ಹೊಸ ಪಿಎಫ್‌ ನಿರ್ಬಂಧ ವಿರೋಧಿಸಿ ಗಾರ್ಮೆಂಟ್ ಕಾರ್ಮಿಕರ ಪ್ರತಿಭಟನೆ: 50ಕ್ಕೂ ಹೆಚ್ಚು ಮಂದಿ ವಶಕ್ಕೆ

ಗಾರ್ಮೆಂಟ್‌ ಮತ್ತು ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ ಅಧ್ಯಕ್ಷೆ ಡಾ. ಪ್ರತೀಭಾ ಆರ್. ಸೇರಿದಂತೆ ಕಾರ್ಮಿಕರು ಪೊಲೀಸ್ ವಶಕ್ಕೆ
ಬೆಂಗಳೂರು: ಕಾರ್ಮಿಕರು ತಮ್ಮದೇ ಭವಿಷ್ಯ ನಿಧಿ (ಪಿಎಫ್‌) ಹಣವನ್ನು ಹಿಂಪಡೆಯುವುದಕ್ಕೆ ಕೇಂದ್ರ ಸರ್ಕಾರ ವಿಧಿಸಿರುವ ಹೊಸ ನಿರ್ಬಂಧಗಳನ್ನು ವಿರೋಧಿಸಿ ಬೆಂಗಳೂರಿನ ಪೀಣ್ಯದಲ್ಲಿ ಗಾರ್ಮೆಂಟ್‌ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು, ಗಾರ್ಮೆಂಟ್‌ ಮತ್ತು ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ (ಎಐಸಿಸಿಟಿಯು) ಅಧ್ಯಕ್ಷೆ ಡಾ. ಪ್ರತೀಭಾ ಆರ್. ಸೇರಿದಂತೆ 50ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸ ಪಿಎಫ್‌

ಹೊಸ ಪಿಎಫ್‌ ನಿಯಮಗಳ ಕುರಿತು ಕಾರ್ಮಿಕರು ಪ್ರಶ್ನೆಗಳನ್ನು ಎತ್ತುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗಾರ್ಮೆಂಟ್‌ ಮತ್ತು ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ ಆರೋಪಿಸಿದೆ. ತಮ್ಮದೇ ಉಳಿತಾಯದ ಹಣವನ್ನು ಪಡೆಯುವ ಹಕ್ಕಿನ ಮೇಲೆ ನಿರ್ಬಂಧ ಹೇರುವ ನಿಯಮಗಳನ್ನು ವಿರೋಧಿಸಿ ಧ್ವನಿ ಎತ್ತುವುದು ಕಾರ್ಮಿಕರ ಹಕ್ಕಾಗಿದ್ದು, ಅದನ್ನು ಪೊಲೀಸ್ ಕ್ರಮದ ಮೂಲಕ ಹತ್ತಿಕ್ಕಬಾರದು ಎಂದು ಸಂಘಟನೆ ಒತ್ತಾಯಿಸಿದೆ. ಹೊಸ ಪಿಎಫ್‌

2016ರ ಹೋರಾಟದ ನೆನಪು

2016ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಕಾರ್ಮಿಕರು ತಮ್ಮ ಪಿಎಫ್‌ ಹಣವನ್ನು ಹಿಂಪಡೆಯುವುದಕ್ಕೆ ನಿರ್ಬಂಧ ವಿಧಿಸುವ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಇದನ್ನು ವಿರೋಧಿಸಿ ಬೆಂಗಳೂರಿನಾದ್ಯಂತ ಸಾವಿರಾರು ಗಾರ್ಮೆಂಟ್‌ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಕಾರ್ಮಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಂತರ ಆ ನಿಯಮಗಳನ್ನು ಹಿಂಪಡೆಯಬೇಕಾಯಿತು.

ಇದೀಗ ಯಾವುದೇ ಸಾರ್ವಜನಿಕ ಚರ್ಚೆ ನಡೆಸದೆ ಕೇಂದ್ರ ಸರ್ಕಾರ ಮತ್ತೆ ಇದೇ ರೀತಿಯ ನಿರ್ಬಂಧಗಳನ್ನು ಜಾರಿಗೆ ತಂದಿದೆ ಎಂದು ಗಾರ್ಮೆಂಟ್‌ ಕಾರ್ಮಿಕರ ಸಂಘಟನೆಗಳು ಆರೋಪಿಸಿವೆ. ಹೊಸ ನಿಯಮಗಳು ಕಾರ್ಮಿಕ ವಿರೋಧಿಯಾಗಿದ್ದು, ಕಾರ್ಮಿಕರು ತಮ್ಮ ಭವಿಷ್ಯ ನಿಧಿಯಲ್ಲಿ ಸಂಗ್ರಹಿಸಿರುವ ಹಣವನ್ನು ಅಗತ್ಯ ಸಂದರ್ಭದಲ್ಲಿ ಪಡೆಯುವುದಕ್ಕೆ ಅಡ್ಡಿಯಾಗುತ್ತವೆ ಎಂದು ಸಂಘಟನೆ ಹೇಳಿದೆ. ಹೊಸ ಪಿಎಫ್‌

ಇದನ್ನೂ ಓದಿ : ಎಸ್‌ಐಆರ್‌ ವಿರುದ್ಧ INDIA ಒಕ್ಕೂಟದ ಹೋರಾಟ ತೀವ್ರ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

12 ಮತ್ತು 36 ತಿಂಗಳ ಕಾಯುವಿಕೆ

2026ರ ಜೂನ್‌ 29ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳ ಪ್ರಕಾರ, ಉದ್ಯೋಗ ತೊರೆದ ಬಳಿಕ ಕಾರ್ಮಿಕರು ತಮ್ಮ ಪಿಎಫ್‌ ಉಳಿತಾಯದಲ್ಲಿರುವ ಉಳಿದ ಶೇ.25ರಷ್ಟು ಮೊತ್ತವನ್ನು ಪಡೆಯಲು 12 ತಿಂಗಳು ಕಾಯಬೇಕಾಗಿದೆ. ಇದೇ ವೇಳೆ 10 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಕಾರ್ಮಿಕರು ನೌಕರರ ಪಿಂಚಣಿ ಯೋಜನೆ (ಇಪಿಎಸ್‌) ಹಣವನ್ನು ಹಿಂಪಡೆಯಲು 36 ತಿಂಗಳು ಕಾಯಬೇಕಾಗುತ್ತದೆ ಎಂದು ಸಂಘಟನೆ ತಿಳಿಸಿದೆ.

ಈ ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಸೆಪ್ಟೆಂಬರ್‌ 28ರಂದು ಗಾರ್ಮೆಂಟ್‌ ಮತ್ತು ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಆದರೆ ಬೇಡಿಕೆಗಳಿಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಆಂದೋಲನವನ್ನು ಮುಂದುವರಿಸಿದ್ದಾರೆ.

ಮಹಿಳಾ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ

ಗಾರ್ಮೆಂಟ್‌ ಕ್ಷೇತ್ರದಲ್ಲಿ ಶೇ.85ರಿಂದ 90ರಷ್ಟು ಕಾರ್ಮಿಕರು ಮಹಿಳೆಯರಾಗಿದ್ದು, ಅವರಲ್ಲಿ ಬಹುತೇಕರು ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ಕುಟುಂಬದ ಪ್ರಮುಖ ಆದಾಯದ ಮೂಲವಾಗಿರುವ ಅನೇಕ ಮಹಿಳೆಯರು ಉದ್ಯೋಗದ ಅನಿಶ್ಚಿತತೆ, ಕಡಿಮೆ ವೇತನ ಮತ್ತು ವೇತನದ ಕೆಲಸದ ಜೊತೆಗೆ ಮನೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.

ವೈದ್ಯಕೀಯ ತುರ್ತು ಪರಿಸ್ಥಿತಿ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ಮದುವೆ ಸೇರಿದಂತೆ ವಿವಿಧ ಕುಟುಂಬದ ಅಗತ್ಯಗಳ ಸಂದರ್ಭದಲ್ಲಿ ಅನೇಕ ಮಹಿಳಾ ಕಾರ್ಮಿಕರಿಗೆ ಪಿಎಫ್‌ ಉಳಿತಾಯವೇ ಪ್ರಮುಖ ಆರ್ಥಿಕ ಆಧಾರವಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮದೇ ಉಳಿತಾಯವನ್ನು ಪಡೆಯಲು 12 ಮತ್ತು 36 ತಿಂಗಳವರೆಗೆ ಕಾಯಬೇಕೆಂಬ ನಿಯಮ ಕಾರ್ಮಿಕರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಹೇರುತ್ತದೆ ಎಂದು ಸಂಘಟನೆಗಳು ಹೇಳಿವೆ. ಹೊಸ ಪಿಎಫ್‌

5 ಸಾವಿರ ಕಾರ್ಮಿಕರಿಂದ ಸಹಿ ಸಂಗ್ರಹ

ಹೊಸ ಪಿಎಫ್‌ ನಿರ್ಬಂಧಗಳನ್ನು ವಿರೋಧಿಸಿ ಗಾರ್ಮೆಂಟ್‌ ಮಹಿಳಾ ಕಾರ್ಮಿಕರು ಈಗಾಗಲೇ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಸುಮಾರು 5,000 ಕಾರ್ಮಿಕರ ಸಹಿಗಳನ್ನು ಸಂಗ್ರಹಿಸಿ ಮನವಿಯೊಂದಿಗೆ ಸಲ್ಲಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿರುವ ಎಲ್ಲ ಕಾರ್ಮಿಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ತಮ್ಮ ಹಕ್ಕುಗಳ ಕುರಿತು ಪ್ರಶ್ನೆ ಕೇಳಿದ ಕಾರಣಕ್ಕೆ ಯಾವುದೇ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಗಾರ್ಮೆಂಟ್‌ ಮತ್ತು ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ ಆಗ್ರಹಿಸಿದೆ.

ಅಲ್ಲದೆ, ಕರ್ನಾಟಕ ಸರ್ಕಾರ ಕೂಡಲೇ ಕೇಂದ್ರ ಸರ್ಕಾರದೊಂದಿಗೆ ಮಧ್ಯಪ್ರವೇಶ ನಡೆಸಿ, ಕಾರ್ಮಿಕರು ತಮ್ಮ ಪಿಎಫ್‌ ಮತ್ತು ಇಪಿಎಸ್‌ ಉಳಿತಾಯವನ್ನು ಹಿಂಪಡೆಯುವುದಕ್ಕೆ ವಿಧಿಸಿರುವ ಹೊಸ ನಿರ್ಬಂಧಗಳನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.ಹೊಸ ಪಿಎಫ್‌

ಇದನ್ನೂ ನೋಡಿ : LIVE : SIR -ದ್ರೋಹ ಮತ್ತು ಕಣ್ಣೀರ ಕಥನ (ಪರಿಶೋಧನಾ ವರದಿ ಬಿಡುಗಡೆ) ನೇರಪ್ರಸಾರ

Donate Janashakthi Media

Leave a Reply

Your email address will not be published. Required fields are marked *