ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧದ ರಾಜಕೀಯ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು INDIA ಒಕ್ಕೂಟ ನಿರ್ಧರಿಸಿದೆ. ಸೆಪ್ಟೆಂಬರ್ 30ರಂದು ನಡೆದ ಸುಮಾರು ಮೂರೂವರೆ ಗಂಟೆಗಳ ಸಭೆಯಲ್ಲಿ ದೇಶಾದ್ಯಂತ ಪ್ರತಿಭಟನೆಗಳು, ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆಗಳು ಹಾಗೂ ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಎಸ್ಐಆರ್
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಮಾಹಿತಿ ಪ್ರಕಾರ, ಅಕ್ಟೋಬರ್ 2ರಿಂದ 8ರವರೆಗೆ ಯುವಜನರು ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆಗಳನ್ನು ನಡೆಸಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿಗಳ ಮುಂದೆಯೂ ಪ್ರತಿಭಟನೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 6ರಂದು ಪ್ರತಿಪಕ್ಷ ಸಂಸದರು ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ನಡೆಸಲಿದ್ದಾರೆ. ಅಕ್ಟೋಬರ್ ಎರಡನೇ ವಾರದಲ್ಲಿ ರಾಷ್ಟ್ರಪತಿಯನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲು INDIA ಒಕ್ಕೂಟದ ನಾಯಕರು ಮುಂದಾಗಿದ್ದಾರೆ.
ಇದರ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ಐದು ಬೃಹತ್ ಸಮಾವೇಶಗಳನ್ನು ನಡೆಸಲು ಒಕ್ಕೂಟ ನಿರ್ಧರಿಸಿದ್ದು, ಅವುಗಳ ದಿನಾಂಕ ಮತ್ತು ಸ್ಥಳಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಖರ್ಗೆ ತಿಳಿಸಿದ್ದಾರೆ. ನವೆಂಬರ್ 1ರಂದು ದೆಹಲಿಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. SIR ಹಾಗೂ ಚುನಾವಣಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್ಗೂ ಮನವಿ ಮಾಡಲು ಒಕ್ಕೂಟ ನಿರ್ಧರಿಸಿದೆ. ಎಸ್ಐಆರ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ
ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಆರೋಪಗಳು ಪ್ರಮುಖ ಚರ್ಚೆಯ ವಿಷಯವಾಗಿದ್ದವು. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಕುರಿತು ಪ್ರತಿಪಕ್ಷಗಳು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿವೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯೂ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿರುವ ಹಿನ್ನೆಲೆಯಲ್ಲಿ INDIA ಒಕ್ಕೂಟ ಈ ವಿಚಾರವನ್ನು ರಾಷ್ಟ್ರಮಟ್ಟದ ರಾಜಕೀಯ ಹೋರಾಟದ ಪ್ರಮುಖ ಅಂಶವನ್ನಾಗಿ ಮಾಡಲು ಮುಂದಾಗಿದೆ. ಎಸ್ಐಆರ್
ಸಭೆಯ ಬಳಿಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದರು. ಚುನಾವಣಾ ವ್ಯವಸ್ಥೆಯ ಕುರಿತು ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗಳ ವಿರುದ್ಧ ದೇಶಾದ್ಯಂತ ಜನಾಂದೋಲನ ರೂಪಿಸುವುದಾಗಿ ಅವರು ಹೇಳಿದರು. ಇದೇ ವೇಳೆ ಮಮತಾ ಬ್ಯಾನರ್ಜಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಎಸ್ಐಆರ್
ಇದನ್ನೂ ಓದಿ : ನೈಸ್ ಯೋಜನೆಯಲ್ಲಿ ₹3 ಲಕ್ಷ ಕೋಟಿ ಅಕ್ರಮ ಆರೋಪ: ಡಿಕೆಶಿಗೆ ಕುಮಾರಸ್ವಾಮಿ ಸವಾಲು
ಬ್ಯಾಲೆಟ್ ಪೇಪರ್ಗೆ ಮರಳಲು ಆಗ್ರಹ
ಎಲ್ಲ ಚುನಾವಣೆಗಳನ್ನೂ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ನಡೆಸಬೇಕು ಎಂಬ ಬೇಡಿಕೆಯನ್ನೂ INDIA ಒಕ್ಕೂಟ ಸಭೆಯಲ್ಲಿ ಪುನರುಚ್ಚರಿಸಿದೆ. ಈ ಬೇಡಿಕೆಗೆ ಒಕ್ಕೂಟದಲ್ಲಿರುವ ಎಲ್ಲ ಪಕ್ಷಗಳೂ ಒಪ್ಪಿಕೊಂಡಿವೆ ಎಂದು ಖರ್ಗೆ ಹೇಳಿದ್ದಾರೆ. ಪ್ರಸ್ತುತ ಸರ್ಕಾರ ಈ ಕುರಿತು ರೂಪಿಸಿರುವ ಕಾನೂನುಗಳನ್ನು ರದ್ದುಪಡಿಸಬೇಕು ಎಂಬುದು ಪ್ರತಿಪಕ್ಷಗಳ ಮತ್ತೊಂದು ಬೇಡಿಕೆಯಾಗಿದೆ.
ಈ ನಡುವೆ ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ SIRಗೆ ಸಂಬಂಧಿಸಿದ ನಿರ್ಧಾರಗಳು ಹಾಗೂ ಆದೇಶಗಳ ಕುರಿತು ಕನಿಷ್ಠ 14 ಬಾರಿ ಆಕ್ಷೇಪ ದಾಖಲಿಸಿದ್ದರು ಎಂಬ ವರದಿಯೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಆಕ್ಷೇಪಗಳ ಬಗ್ಗೆ ಚುನಾವಣಾ ಆಯೋಗವು, ಸಂಸ್ಥೆಯೊಳಗಿನ ಭಿನ್ನಾಭಿಪ್ರಾಯಗಳು ಸಾಮಾನ್ಯ ಪ್ರಕ್ರಿಯೆಯ ಭಾಗವಾಗಿದ್ದು, ಆಯೋಗದ ಎಲ್ಲಾ ಆದೇಶಗಳು ಕಾನೂನುಬದ್ಧವಾಗಿವೆ ಮತ್ತು ನಿಗದಿತ ಶಾಸನಬದ್ಧ ಪ್ರಕ್ರಿಯೆಯಂತೆ ಹೊರಬಂದಿವೆ ಎಂದು ಹೇಳಿದೆ.
SIR ವಿಚಾರವನ್ನು ಮುಂದಿಟ್ಟುಕೊಂಡು INDIA ಒಕ್ಕೂಟ ರೂಪಿಸಿರುವ ಹೋರಾಟದ ರೂಪುರೇಷೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಚುನಾವಣಾ ಆಯೋಗದ ವಿರುದ್ಧದ ಆರೋಪಗಳು, ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಇದೀಗ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಪ್ರಮುಖ ರಾಜಕೀಯ ಸಂಘರ್ಷದ ವಿಷಯಗಳಾಗಿವೆ. ಎಸ್ಐಆರ್
ಇದನ್ನೂ ನೋಡಿ : LIVE : SIR -ದ್ರೋಹ ಮತ್ತು ಕಣ್ಣೀರ ಕಥನ (ಪರಿಶೋಧನಾ ವರದಿ ಬಿಡುಗಡೆ) ನೇರಪ್ರಸಾರ
