ಭಗತ್ ಸಿಂಗ್ ಜನ್ಮ ದಿನದ ಅಂಗವಾಗಿ ಹಾಸನದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ನಾನೇಕೆ ನಾಸ್ತಿಕ” 3ನೇ ರಾಜ್ಯ ಮಟ್ಟದ ವೈಚಾರಿಕ ಸಂವಾದ ಸಮಾವೇಶ 27 ಸೆಪ್ಟೆಂಬರ್ 2026 ರಂದು ಯಶಸ್ವಿಯಾಗಿ ನಡೆಯಿತು. ಈ ಸಮಾವೇಶವನ್ನು ಹಿರಿಯ ಸಾಹಿತಿ ಡಾ. ರಾಜಪ್ಪ ದಳವಾಯಿಯವರು ಉಧ್ಘಾಟಿಸಿ ಮಾತನಾಡಿದರು. ಇದರ ಪೂರ್ಣ ಪಠ್ಯವನ್ನು ಇಲ್ಲಿ ನೀಡಲಾಗಿದೆ. ಕಾರ್ಯಕ್ರಮವನ್ನು ಭಾರತೀಯ ವಿಚಾರವಾದಿಗಳ ಒಕ್ಕೂಟ ಕರ್ನಾಟಕ, ನೇಗಿಲಯೋಗಿ ಟ್ರಸ್ಟ್ ಬೆಂಗಳೂರು, ಏಯ್ಡ್ ವಿತೌಟ್ ರಿಲಿಜನ್ ಟ್ರಸ್ಟ್ ಮಂಗಳೂರು, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ (ರಿ) ಬೆಂಗಳೂರು, ಭಗತ್ ಸಿಂಗ್ ಜನ್ಮದಿನ ಆಚರಣಾ ಸಮಿತಿ ಹಾಸನ ಇವರುಗಳು ಸಂಘಟಿಸಿದ್ದರು. ಮಾನವನನ್ನು
ಹಾಸನದ ಎಲ್ಲಾ ಎಡ ಪಕ್ಷದ ಚಿಂತಕರು ಸೇರಿ ಇವತ್ತು ಹುತಾತ್ಮ ಭಗತ್ ಸಿಂಗ್ ಅವರ ಜನ್ಮ ದಿನಾಚರಣೆಯನ್ನ ಮಾಡ್ತಾ ಇರುವ ಈ ಸಂದರ್ಭದಲ್ಲಿ ಒಂದು ನಾಸ್ತಿಕ ಸಮಾವೇಶ ಅಥವಾ ಕಾರ್ಯ ಕಾರಣ ಸಂಬಂಧದ ಬಗ್ಗೆ ಮಾನವೀಯ ತುಡಿತಕ್ಕೆ ಒಲಿಯಬೇಕಾಗಿರುವ ಇಂದಿನ ಅನಿವಾರ್ಯತೆಯನ್ನ ಆತ್ಮೀಯರಾದಂತಹ ನರೇಂದ್ರ ನಾಯಕ್ ಮತ್ತು ಹೆಚ್.ಆರ್.ಸ್ವಾಮಿ ಮತ್ತು ನಟೇಶ್ ಇಂತಾದ ಗೆಳೆಯರು ಇದನ್ನ ಒಂದು ಅರ್ಥಪೂರ್ಣವಾದಂತಹ ಕಾರ್ಯಕ್ರಮವನ್ನಾಗಿ ಪರಿವರ್ತಿಸಿದ್ದಾರೆ. ಅದನ್ನ ಇವತ್ತು ಹಾಸನದ ಸಂಗಾತಿಗಳು ಮಾಡ್ತಾ ಇರುವಂತದ್ದಕ್ಕೆ ನಾನು ಅವರೆಲ್ಲರನ್ನು ಅಭಿನಂದಿಸುತ್ತಾ ತುಂಬಾ ಸಂತೋಷದಿಂದ ಈ ಸಮಾರಂಭವನ್ನ ಉದ್ಘಾಟನೆ ಮಾಡಿದ್ದೇನೆ.
ಆತ್ಮೀಯರೇ, ಭಗತ್ ಸಿಂಗ್ ‘ನಾನೇಕೆ ನಾಸ್ತಿಕ’ ಅನ್ನುವಂತಹ ಕ್ರೌನ್ 1/8 ಸೈಜಿನ 23 ಪುಟಗಳಲ್ಲಿರುವಂತಹ ಒಂದು ಚಿಕ್ಕ ಲೇಖನವನ್ನ ಓದಿದರೆ ಯಾರಿಗಾದರೂ ಈ ದೇಶದ ಪ್ರಗತಿಯ ಬಗ್ಗೆ ಭಗತ್ ಸಿಂಗ್ ಅವರು ಏನು ಯೋಚನೆ ಮಾಡಿದ್ರು ಅನ್ನುವಂತದ್ದು ಗೊತ್ತಾಗುತ್ತೆ. ಎಲ್ಲಿ ಮನುಷ್ಯ ಮುಖ್ಯ ಆಗ್ತಾನೆ ಅಲ್ಲಿ ಧರ್ಮ ಆಗಲಿ ಅಥವಾ ದೇವರಾಗಲಿ ಮುಖ್ಯ ಆಗಲ್ಲ. ಎಲ್ಲಿ ಮನುಷ್ಯ ಅಪ್ರಸ್ತುತ ಆಗ್ತಾನೆ ಆಗ ದೇವರು, ದೇವಾಲಯಗಳು ಮತ್ತು ಇತರ ಧರ್ಮದ ಸಂಸ್ಥೆಗಳು, ವಿವಿಧ ಮಠಗಳು ಅಥವಾ ಚರ್ಚ್ಗಳು ಅಥವಾ ಮಸೀದಿ ಇವೆಲ್ಲವೂ ಮುಖ್ಯ ಆಗ್ತವೆ. ಮನುಷ್ಯನ ಪರವಾದ ಚಿಂತನೆಗೆ ಒಂದು ದೊಡ್ಡ ಚರಿತ್ರೆ ಇದೆ.
ಹುತಾತ್ಮರ ಗಲ್ಲಿಗೇರಿಸುವ ಸಂದರ್ಭದ ಒಂದು ಮಾತಿನಿಂದ ನಾನು ಆರಂಭ ಮಾಡ್ತೇನೆ. ಯಾಕೆ ಅಂದ್ರೆ ನಾನು ಪುಸ್ತಕದ ಜೊತೆಯಲ್ಲೇ ಬದುಕುತ್ತಾ ಇರುವವನು. ಹುತಾತ್ಮ ಭಗತ್ ಸಿಂಗ್ ಅವರನ್ನ ನೇಣುಗಂಬಕ್ಕೆ ಏರಿಸುವಾಗ ‘ನಿನ್ನ ಕೊನೆಯ ಆಸೆ ಏನು’ ಅಂತ ಜೈಲಿನಲ್ಲಿ ಕೇಳ್ತಾರೆ. ಅವರು ಸರಳವಾಗಿ ಒಂದು ಮಾತು ಹೇಳ್ತಾರೆ, ಲೆನಿನ್ ಅವರ ಆತ್ಮಕಥೆಯನ್ನ ನಾನು ಓದ್ತಾ ಇದ್ದೆ ಅದು ಪೂರ್ಣಗೊಳ್ಳಬೇಕಾಗಿದೆ. ಬಹುಶಃ ಇದಕ್ಕಿಂತ ಕಾವ್ಯ, ಸಾವಿನ ಕೊನೆಯಲ್ಲೂ ಕೂಡ ಪುಸ್ತಕಕ್ಕೆ ಅವರು ಕೊಟ್ಟಂತಹ ಘನತೆ ಇದೆಯಲ್ಲ ಅದು ಬಹಳ ಮಹತ್ವದ್ದು. ಆದರೆ ನಾವು ಇವತ್ತು ಪುಸ್ತಕವನ್ನು ಬಿಟ್ಟು ಉಳಿದದ್ದೆಲ್ಲಾ ಮಾಡ್ತಾ ಇದ್ದೀವಿ. ಪುಸ್ತಕ ಹೇಗೆ ಬೆಳೆಸಿದೆ, ಅವರು ಓದಿರುವ ಪುಸ್ತಕಗಳು, ಅವರು ಹೇಳುವ ಉಲ್ಲೇಖಗಳು ಮತ್ತು ಅವರ ಪುಸ್ತಕದ ಬಗ್ಗೆ ಬರೆದಿರುವಂತಹ ಮುನ್ನುಡಿ, ಅವರ ಡೈರಿಯನ್ನ ನೋಡಿದರೆ ಅವರು ಎಷ್ಟು ಕಾಲ ಎಷ್ಟು ಅದ್ಭುತವಾದ ಓದುಗರಾಗಿದ್ರು ಅನ್ನುವಂತದ್ದನ್ನ ನೆನಪು ಮಾಡಿಕೊಂಡಾಗ ನಾವು ಓದಿನಿಂದ ಎಷ್ಟು ದೂರ ಇದ್ದೀವಿ ಅನ್ನೋದು ಗೊತ್ತಾಗುತ್ತೆ.
ಅಧಿಕಾರ ಯಾವಾಗಲೂ ಧರ್ಮವನ್ನ ತನ್ನ ಹಿಡಿತದಲ್ಲಿ ಇಟ್ಟುಕೊಂಡು ತನ್ನ ಬೆಳವಣಿಗೆಗೆ ಬಳಸಿಕೊಳ್ತಾ ಇರುತ್ತದೆ. ಪ್ರಭುತ್ವ ಮತ್ತು ಧರ್ಮ ಇವೆಲ್ಲವನ್ನ ಬೇರ್ಪಡಿಸೋಕೆ ಆಗಲ್ಲ. ಸಾರಿನಲ್ಲಿರುವ ಉಪ್ಪನ್ನ ಬೇರ್ಪಡಿಸಿಕೊಡಿ ಅಂದ್ರೆ ಹೆಂಗೆ ಆಗಲ್ವೋ ಹಾಗೆ. ಅವು ಪರಸ್ಪರ ಪೂರಕವಾಗಿರ್ತವೆ, ಒಂದಕ್ಕೊಂದು ತೆಕ್ಕೆ ಹಾಕಿಕೊಂಡಿರ್ತವೆ, ಒಂದನ್ನ ಬಿಟ್ಟು ಒಂದಿರೋದಿಲ್ಲ, ಅವು ಮನುಷ್ಯನನ್ನ ಸಂಕೋಲೆಗೆ ಒಳಮಾಡುತ್ತವೆ. ಬಹಳ ದೊಡ್ಡ ಚಿಂತನೆ ಈ ಲೇಖನ ನಿಮ್ಮ ಕೈಯಲ್ಲಿರುವ ಪುಸ್ತಕದಲ್ಲಿ, ಬಡತನ ಅನ್ನುವುದು ಒಂದು ಮಹಾ ಅಪರಾಧ ಅನ್ನುವಂತಹ ಚರ್ಚೆ ಇದೆಯಲ್ಲ ಅದು ಬಹಳ ಮುಖ್ಯವಾದದ್ದು. ಬಡತನ ಹೇಗೆ ಆಗುತ್ತೆ ಅನ್ನುವುದನ್ನ ನಾವು ಯೋಚನೆ ಮಾಡೋದಿಲ್ಲ, ಅದು ನಮ್ಮ ಕರ್ಮ ಅಂತ ಭಾವಿಸ್ತೀವಿ ಅಥವಾ ನಮ್ಮ ಪೂರ್ವ ಜನ್ಮದ ಕರ್ಮ ಅಂತ ತಿಳೀತೀವಿ, ಹಿಂದೆ ಯಾವ ಜನ್ಮದಲ್ಲಿ ಏನಾಗಿದ್ವೋ ಅದಕ್ಕೆ ಈ ಸರಿ ಬಡವರಾಗಿದ್ದೀವಿ ಅಂತೀವಿ, ಹಂಗಾದ್ರೆ ಶ್ರೀಮಂತ ಹೆಂಗಾದ?. ಈ ಚರ್ಚೆ ಇದೆಯಲ್ಲ ಬಹಳ ಮಹತ್ವದ್ದು. ಮಾನವನನ್ನು

ಅದು ಈ ದೇಶದ ಒಂದು ನಾಸ್ತಿಕತೆ ಅಂದ್ರೆ ಅದೇನು ಅಪಾಯಕಾರಿಯಾದದ್ದು ಅಂತ ತಿಳಿಯಬೇಕಾಗಿಲ್ಲ. ಭಾರತದಲ್ಲಿ ಚಾರ್ವಾಕ ಮತದ ಬಗ್ಗೆ ಭಗತ್ ಸಿಂಗ್ ಅವರು ಬಹಳ ಸುದೀರ್ಘವಾಗಿ ಚರ್ಚೆ ಮಾಡ್ತಾರೆ, ಅನೇಕ ಪಂಥಗಳಿವೆ. ಆಮೇಲೆ ನಮಗೆ ಬಹಳ ಅಗತ್ಯವಾಗಿರುವಂತದ್ದು ನೀವು ದೇವರನ್ನ ಇಷ್ಟಪಟ್ಟು ಪೂಜಿಸುವುದಾದರೆ ಪೂಜಿಸಿ, ಅವರು ಇಲ್ಲ ಅಂದ್ರೆ ಬಿಡಿ, ಎಲ್ಲಾ ಬಗೆಯ ಸ್ವಾತಂತ್ರ‍್ಯ ಕೂಡ ನಮಗಿದೆ. ಆದರೆ ನಾವು ಆ ಸ್ವಾತಂತ್ರ‍್ಯವನ್ನ ಎಷ್ಟರ ಮಟ್ಟಿಗೆ ಬಳಸಿಕೊಳ್ತಿದ್ದೀವಿ?. ಎಲ್ಲಿ ಅಪರಾಧ, ಸಾಮಾಜಿಕ ಅಪರಾಧ ಜಾಸ್ತಿ ಇರುತ್ತೆ ಅಲ್ಲಿ ದೇವರು ವಿಜೃಂಭಿಸುತ್ತಾನೆ ಅಂತ ತಿಳ್ಕೊಂಡ್ಬಿಡಿ. ನಮ್ಮ ಬಹಳ ದೊಡ್ಡ ದೊಡ್ಡ ರಸ್ತೆಗಳಿವೆಯಲ್ಲ ತಿರುಪತಿಗೆ ಹೋಗುವ ರಸ್ತೆ, ಅದು ಅಷ್ಟಪಥ ರಸ್ತೆ. ಎಷ್ಟು ಬೇಗ ಹೋಗಿ ಬೇಗ ಬರಬೇಕು ಅವರು. ಅಪರಾಧಿಗಳ ಒಂದು ಕೇಂದ್ರ ಅದು. ದೇವಾಲಯ ಕೂಡ ಅಪರಾಧದ ಒಂದು ಕೇಂದ್ರ. ಎಷ್ಟು ಜನ ನಾರಾಯಣಗುರು ಅಂತವರು ದೇವಾಲಯದ ಪಕ್ಕಕ್ಕೆ ಒಂದು ಗ್ರಂಥಾಲಯವನ್ನ ಮಾಡಿದ್ರು. ಆದರೆ ದೇವಾಲಯವನ್ನ ನಮ್ಮ ಊರಲ್ಲಿ ಇರೋ ದೇವಾಲಯಕ್ಕೆ ಇರಬಹುದಾದ ಒಂದು ಐತಿಹಾಸಿಕತೆಯನ್ನೇ ಅರ್ಥ ಮಾಡಿಕೊಳ್ಳೋಕೆ ಸಾಧ್ಯ ಇಲ್ಲ ನಾವು.
ಕೆಡವಿಬಿಟ್ಟು ಅಲ್ಲಿ ಒಂದು ಹೊಸ ದೇವಸ್ಥಾನ ಕಟ್ಟುವ ಒಂದು ದುರ್ಬುದ್ಧಿ, ಅಭಿವೃದ್ಧಿಯ ಒಂದು ಭಾಗವಾಗಿದೆ. ಒಬ್ಬ ಜನಪ್ರತಿನಿಧಿ ಇವತ್ತು ಜನರಿಗೆ ಬೇಕಾಗಿರುವಂತಹ ಅನುಕೂಲಗಳನ್ನ ಮಾಡೋದರ ಬದಲು, ಅವನೆ ಒಂದಷ್ಟು ದುಡ್ಡು ಕೊಟ್ಟುಬಿಟ್ಟು ಆ ಊರಿಗೆ ದೇವಸ್ಥಾನ ಕಟ್ಟಿಸ್ತಾನೆ. ಅದು ಅವನು ಕೊಟ್ಟ ಬಹಳ ದೊಡ್ಡ ಕೊಡುಗೆ ಅಂತ ನಾವು ತಿಳ್ಕೊಂಡಿದ್ದೀವಿ, ಅವರನ್ನ ಮೊದಲು ಓಡಿಸಬೇಕು. ನಮಗೆ ಬೇಕಾಗಿರೋದು ದೇವರು ಧರ್ಮ ಅಲ್ಲ, ಮನುಷ್ಯನ ಅಗತ್ಯತೆಗಳನ್ನ ಅರ್ಥ ಮಾಡಿಕೊಳ್ಳಬೇಕು. ಇದು ದೊಡ್ಡ ಸವಾಲು, ಇದು ಚರಿತ್ರೆಯ ಉದ್ದಕ್ಕೂ ನಡೆದಿರುವ ಸಂಘರ್ಷ, ಒಂದು ದಿವಸದ್ದಲ್ಲ. ಈಗಿರುವ ಜನರು ಏನು ಬದಲಾವಣೆ ಇಲ್ಲದೆ ಇರೋರು, ನೂರು ಸಾವಿರ ವರ್ಷಗಳಿಂದ ಹೆಂಗಿದೆಯೋ ಅದನ್ನ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕು ಅಂತ ಬಯಸುವವರು ಜಾಸ್ತಿ. ದೇವರನ್ನ ನಂಬಿಸುವ, ನೀವು ಸುಮ್ಮನೆ ನಿಮಗೆ ಕೆಲವು ಮಠಗಳಲ್ಲಿ ಎಷ್ಟು ಚೆನ್ನಾಗಿರ್ತವೆ ಅಂದ್ರೆ, ಹೋದವನು ಸೀದಾ ಕಾಲಿಗೆ ಬೀಳಬೇಕು ಅವರು. ದಾಸ್ಯದ ಸಂಕೋಲೆಯಲ್ಲಿ ಮನುಷ್ಯ ಬದುಕಬೇಕು ಅಂತ ಬಯಸ್ತೀವಿ ನಾವು. ಯಾರಾದರೂ ನಮ್ಮ ಎದುರಿಗೆ ಬಂದ್ರೆ, ಅವನು ನಮ್ಮ ಕಾಲಿಗೆ ಬೀಳದೆ ಇದ್ರೆ, ಅವನನ್ನ ಶತ್ರುವಿನ ತರಹ ನೋಡುವ ದುರ್ಬುದ್ಧಿಗಳು ನಮ್ಮಲ್ಲಿವೆ. ಇನ್ನೊಬ್ಬ ಶರಣಾಗುವುದನ್ನ ಹೆಚ್ಚು ಆಸ್ವಾದಿಸುವ ಒಂದು ದುರ್ಗುಣ ನಮ್ಮಲ್ಲಿದೆ.
ನಾಸ್ತಿಕವಾದ ಪ್ರಧಾನವಾಗಿ ಕಾರ್ಯ ಕಾರಣ ಸಂಬಂಧವನ್ನ ಕುರಿತು ಚರ್ಚೆ ಮಾಡುತ್ತದೆ. ಮನುಷ್ಯನಾದವನು ಎಲ್ಲಾ ಜೀವಿಗಳ ನಡುವೆ ಅವನು ಹೇಗೆ, ಯಾಕೆ, ಹೇಗೆ ಬದುಕಬೇಕು, ಅವನ ಪ್ರಕೃತಿಯ ಜೊತೆ ಹೇಗಿರಬೇಕು, ಅವನ ಪ್ರಗತಿಯ ವಿಷಯಗಳೇನು ಮುಂತಾದ ವಿಷಯಗಳನ್ನ, ಪ್ರತಿಯೊಂದಕ್ಕೂ ಒಂದು ವಿಜ್ಞಾನದ ತಳಹದಿ ಇರುತ್ತದೆ. ನೋಡಿ ಯಾವ ದೇಶದಲ್ಲಿ ವಿಜ್ಞಾನವನ್ನು ಬಳಸಿಕೊಂಡು ಪ್ರಗತಿಯನ್ನ ಕಾಣಬೇಕಾಗಿತ್ತೋ ಅದೇ ವಿಜ್ಞಾನ ಇವತ್ತು ಅಜ್ಞಾನವಾಗಿ ಕೂತಿರುವಂತಹ ದುರಂತವನ್ನು ನಾವು ನೋಡ್ತೀವಿ. ಯಾವುದಾದರೂ ನಾವು ಈ ದೇಶದ ಪ್ರಜೆಗಳಾಗಿ ನಮ್ಮ ಅಭಿವೃದ್ಧಿಯ ಅಥವಾ ಬೆಳವಣಿಗೆಯ ಸಂದರ್ಭದಲ್ಲಿ ವಿಜ್ಞಾನಕ್ಕೆ ನಾವು ಏನನ್ನಾದರೂ ಕೊಡುಗೆ ಕೊಟ್ಟಿದ್ದೀವಾ ಅಂತ ಯೋಚಿಸಿದರೆ ಪ್ರತಿಯೊಂದೂ ಕೂಡ ನಮಗೆ ಯುರೋಪಿನಿಂದ ಬಂದದ್ದು. ಯುರೋಪನ್ನ ಇವತ್ತು ಕೇವಲ ದ್ವೇಷ ಮಾಡೋದ್ರಿಂದ ಏನು ಪ್ರಯೋಜನ ಇಲ್ಲ. ನಾವು ಬಹಳ ವಿಚಿತ್ರಗಳನ್ನ ನೋಡ್ತೀವಿ, ನಮ್ಮ ಚರಿತ್ರೆಯನ್ನೇ ತಿರುಗುಮುರುಗು ಮಾಡಿ ಹೇಳಿಕೊಡುವ ಬುದ್ಧಿವಂತರಿದ್ದಾರೆ. ನಾವೇ ಸರ್ವಶ್ರೇಷ್ಠರು ಅಂತ ಹೇಳ್ತೀವಿ, ಎಲ್ಲಾ ಕಾಲಕ್ಕಿಂತ ಮುಂಚೆನೇ ನಾವು ವಿಮಾನದಲ್ಲಿ ಓಡಾಡ್ತಿದ್ವಿ ಅಂತ ಹೇಳ್ತೀವಿ. ಹೌದಪ್ಪ ಅದು ರೈಟ್ ಸಹೋದರರ ವಿಮಾನವೋ ಅಥವಾ ನಿಮ್ಮ ಕಲ್ಪನೆಯ ವಿಮಾನವೋ?. ಇದನ್ನ ಸಂಶೋಧನೆ ಮಾಡೋರು ವೈಸ್ ಚಾನ್ಸಲರ್‌ಗಳಾಗ್ತಾರೆ ಈ ದೇಶದಲ್ಲಿ. ವಿಮಾನವನ್ನ ಹೇಗೆ ಓಡಿಸಿದ್ರು ರಾಮಾಯಣದ ಸಂದರ್ಭದಲ್ಲಿ ಅಂತ ಸಂಶೋಧನೆ ಮಾಡಿದವರಿಗೆ ಒಂದು ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಪೋಸ್ಟ್ ಅನ್ನ ಕೊಡ್ತಾರೆ. ಮಾನವನನ್ನು
ಇದನ್ನೂ ಓದಿ : ಹೆದ್ದಾರಿ ಹೆಚ್ಚಿದರೂ ನಿಲ್ಲದ ಅಪಘಾತ ಸಾವು! ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 34 ಮಂದಿ ಬಲಿ
ನಾವು ಭಾರತ ಸಂವಿಧಾನ ಕೊಡಮಾಡಲ್ಪಟ್ಟ, ನೋಡಿ ಈ ಸ್ಥಳವು ಎಷ್ಟು ಚೆನ್ನಾಗಿದೆ, ಈ ಕಡೆ ಬಾಬಾಸಾಹೇಬ್ ಅಂಬೇಡ್ಕರ್ ಇದ್ದಾರೆ, ಈ ಕಡೆ ಗೆಳೆಯ ಚಂದ್ರಪ್ರಸಾದ್ ತ್ಯಾಗಿ ಫೋಟೋ ಇದೆ, ಒಬ್ಬ ಕಾರ್ಮಿಕನಾಗಿ ಭದ್ರಾವತಿಯ ವಿಎಸ್‌ಎನ್‌ಎಲ್‌ನಲ್ಲಿ ಕುಡಿಯುವ ನೀರಿನ ತಾರತಮ್ಯ ಮಾಡಿದ್ರು, ಟೀ ಕೊಡುವುದರಲ್ಲಿ ತಾರತಮ್ಯ ಮಾಡಿದ್ರು ಅಂತ ಆರಂಭವಾದ ಒಂದು ಸಣ್ಣ ವಿಷಯ ಮುಂದೆ ದಲಿತ ಸಂಘರ್ಷ ಸಮಿತಿ ಬೆಳೆಯಲಿಕ್ಕೆ ಕಾರಣವಾಯಿತು. ವೇದಿಕೆಗೆ ಹೆಸರಿಟ್ಟಿರುವಂತಹ ವ್ಯಕ್ತಿ ಇದ್ದಾರಲ್ಲ, ಕೆ.ಟಿ.ಶಿವಪ್ರಸಾದ್ ಅಂತ ಈ ಜಗತ್ತು ಕಂಡAತಹ ಪ್ರಸಿದ್ಧ ಚಿತ್ರ ಕಲಾವಿದರು. ಮನೆಯವರು ಇಂಜಿನಿಯರ್ ಮಾಡು ಅಂತ ಕಳಿಸಿದರೆ, ಅದನ್ನ ಬಿಟ್ಟು ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ಗೆ ಹೋಗಿ ಓದುತ್ತಾರೆ. ಆತ ಕೂಡ ಬಹಳ ದೊಡ್ಡ ವಿಚಾರವಂತ, ಬಹಳ ದೊಡ್ಡ ಪ್ರಗತಿಯ, ರೈತ ಸಂಘದ, ದಲಿತ ಸಂಘರ್ಷ ಸಮಿತಿಯ ಬೆಳವಣಿಗೆಯಲ್ಲಿ ಅವರ ಪಾತ್ರವನ್ನು ನಾವು ಕಡಿಮೆ ಮಾಡೋಕೆ ಸಾಧ್ಯ ಇಲ್ಲ. ತನ್ನ ಸ್ವಂತ ತಂದೆಯ ವಿರುದ್ಧವೇ ಕೂಲಿ ಕಾರ್ಮಿಕರನ್ನ ಎತ್ತಿಕಟ್ಟಿ ನೀವು ನಿಮ್ಮ ನ್ಯಾಯವನ್ನು ಕೇಳಿ ಅಂತ ಅವರನ್ನ ಸಶಕ್ತರನ್ನಾಗಿ ಮಾಡಿದಂತಹ ಒಬ್ಬ ಪ್ರತಿಭಾವಂತ. ಇಂತಹ ಎಲ್ಲರ ಸಂಗಮದ ಸನ್ನಿವೇಶದಲ್ಲಿ ನಾವು ನಿಂತು ವಿಜ್ಞಾನದ ಬಗ್ಗೆ ಯೋಚನೆ ಮಾಡೋದು ಇದೆಯಲ್ಲ ಅದು ವಿಜ್ಞಾನದ ಬುದ್ಧಿ ಬಹಳ ಮಹತ್ವದ್ದು.
ವಿಜ್ಞಾನ ಇಲ್ಲದೆ ಇದ್ರೆ ಒಂದು ಚಕ್ರ ಚಲಿಸೋದಿಲ್ಲ. ಬೆಂಕಿ ಈ ಜಗತ್ತು ಕಂಡಂತಹ ಮೊದಲನೆಯ ವಿಜ್ಞಾನ, ಚಕ್ರ ಅಥವಾ ಒಂದು ಸನ್ನೆಕೋಲು ಇವೆಲ್ಲ ವಿಜ್ಞಾನದ ಬಹಳ ಪ್ರಾಥಮಿಕವಾದ ಅಂಶ, ಅವನ್ನೆಲ್ಲ ಓದಿರ್ತೀವಿ. ಓದ್ತಾ ಓದ್ತಾ ಮೇಲೆ ಬರ್ತೀವಿ, ಮನೆ ಕಟ್ಟೋವರೆಗೂ ಕೂಲಿ ಕಾರ್ಮಿಕರು ಬೇಕು, ಕಟ್ಟಿ ಆದಮೇಲೆ ಮಂತ್ರ ಹೇಳೋಕೆ ಇನ್ನೊಬ್ಬನ್ನ ಹಿಡ್ಕೊಂಡು ಬರ್ತೀವಿ. ಎಷ್ಟರಮಟ್ಟಿಗೆ ಇರುತ್ತೆ ಅಂದ್ರೆ, ಅದಕ್ಕೆ ನನಗೆ ಹೆಚ್.ಆರ್. ಸ್ವಾಮಿ ಬಹಳ ದೊಡ್ಡ ಆದರ್ಶ ವ್ಯಕ್ತಿ, ಅವರು ಮನೆ ಕಟ್ಟುತ್ತಾರೆ ಅರಸೀಕೆರೆಯಲ್ಲಿ. ಅದರ ಉದ್ಘಾಟನೆ ಹೇಗೆ ಗೊತ್ತಾ? ಯಾರ್ಯಾರು ಕೆಲಸ ಮಾಡಿದ್ರೋ ಅವರೆಲ್ಲರಿಗೂ ಸನ್ಮಾನ ಮಾಡೋದು. ಇಟ್ಟಂಗಿ ಹೊರೋನಿಂದ ಹಿಡಿದು ಬೇರೆ ಬೇರೆ… ಅಂದ್ರೆ ನಾವು ದೊಡ್ಡ ದೊಡ್ಡ ಮಾತನ್ನ ವೇದಿಕೆಯಲ್ಲಿ ಹೇಳೋದು ಬೇರೆ ಆದರೆ ಮನುಷ್ಯರಾಗಿ ನಾವು ಹೇಗೆ ಬದುಕುತ್ತೀವಿ ಅದು ಬಹಳ ಮಹತ್ವದ್ದು.
ಅದಕ್ಕೆ ಕುವೆಂಪು ಅವರು ಬಹಳ ಚೆನ್ನಾಗಿ ಹೇಳ್ತಾರೆ, ವಿಜ್ಞಾನದ ಅಧ್ಯಾಪಕರುಗಳು ಸರಿಯಾಗಿ ಕೆಲಸ ಮಾಡಿದ್ರೆ ಹಿಂಗೆ ಆಗ್ತಿದ್ದಿಲ್ಲ, ಅವರು ಪಾಪ ವಿಜ್ಞಾನ ಓದಿದ್ದಾರೆ, ಆ ವಿಜ್ಞಾನವನ್ನು ಒರುವ ಹೇಸರಗತ್ತೆಗಳು ಅಂತ ಹೇಳ್ತಾರೆ. ಮನೆ ಕಟ್ಟಿಸಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿ ಪ್ರಸಾದ ಕೊಟ್ರೆ ಅದು ಯಾತಕ್ಕೆ ಬರುತ್ತೆ. ವಿಚಾರ ಅನ್ನೋದು ಒಂದು ಶಕ್ತಿ.
ದೇವರ ಬಗೆಗೆ, ದೇವರ ನಾಸ್ತಿಕತೆಯ ವಿಷಯದಲ್ಲಿ ಬಹಳ ದೊಡ್ಡ ಚಿಂತನೆ ಕನ್ನಡದಲ್ಲಿದೆ. ವಸುದೇವ ಭೂಪಾಲಂ ಅನ್ನುವಂತಹ ಒಬ್ಬ ವ್ಯಕ್ತಿ ‘ದೇವರು ಸತ್ತ’ ಅನ್ನುವಂತಹ ಒಂದು ಪುಸ್ತಕದಿಂದ ಮಾಡಿದ ಆಧುನಿಕ ಕನ್ನಡ ಸಾಹಿತ್ಯದ ಆಲೋಚನಾ ಕ್ರಮ ಅಭೂತಪೂರ್ವವಾದದ್ದು. ಕುವೆಂಪು ಅವರು ತಮ್ಮ ಲೇಖನಗಳಲ್ಲಿ ಮಾಡಿದಂತಹ ವಿಚಾರಧಾರೆ ಇದೆಯಲ್ಲ ಅದು ವಿಚಾರ ಕ್ರಾಂತಿಗೆ ಆಹ್ವಾನ ಅಂತಲೇ ಅದರ ಹೆಸರು. ನಿರಂಕುಶಮತಿಗಳಾಗಿ ಅನ್ನುವಂತಹ ಒಂದು ಲೇಖನ ಓದಿದ್ರೆ ಸಾಕು ಇವತ್ತು ಒಬ್ಬ ವಿದ್ಯಾರ್ಥಿ ಸಂಪೂರ್ಣ ಬದಲಾಗುವ ಭರವಸೆ ನನಗಿದೆ, ನಾವು ಕಲಿಸಿದ್ದೀವಿ, ಬದಲು ಮಾಡಿದ್ದೀವಿ. ಆದ್ದರಿಂದ ವಿಚಾರವಂತರಿಗೆ ವಿಚಾರಕ್ಕೆ ಕೊರತೆ ಇಲ್ಲ, ವಿಚಾರವನ್ನ ಸ್ವೀಕರಿಸುವ ಜನ ಮತ್ತು ಅದನ್ನ ಪ್ರಾಯೋಗಿಕವಾಗಿ ಬದುಕುವ ಜನರ ಕೊರತೆ ಇದೆ. ಅದನ್ನ ಇಂತಹ ವರ್ಕ್ ಶಾಪ್ ಗಳು, ಇಂತಹ ಸಭಾಂಗಣದಲ್ಲಿ ಎಳೆಯ ಮನಸ್ಸುಗಳು, ಅವನ್ನ ಸ್ವೀಕರಿಸುವ ಸಂದರ್ಭದಲ್ಲಿ, ಸ್ವತಃ 23 ವರ್ಷಕ್ಕೆ ಅಷ್ಟು ದೊಡ್ಡ ಕ್ರಾಂತಿಕಾರಿಯಾಗುವ ಅಂದಿನ ಅವಕಾಶಗಳ ಸಂದರ್ಭಕ್ಕಿಂತ ಇವತ್ತು ಅದಕ್ಕಿಂತ ದೊಡ್ಡ ಯುದ್ಧದ, ವಿಚಾರ ಕ್ರಾಂತಿಯ ಯುದ್ಧವನ್ನ ನಾವು ಮಾಡಬೇಕಾಗಿದೆ.

ನಮ್ಮ ಸುತ್ತಮುತ್ತ ಇರುವ ಎಲ್ಲಾ ಅವಿಚಾರಿಗಳ ನಡುವೆ ವಿಚಾರ ಅನ್ನೋದೇ ಶಕ್ತಿ, ಅದಕ್ಕೆ ಮಾರ್ಕ್ಸ್ ರ ಒಂದು ಪ್ರಸಿದ್ಧವಾದ ಮಾತಿದೆ, ಈ ಜಗತ್ತನ್ನ ಆಳುವವರು ವ್ಯಕ್ತಿಗಳಲ್ಲ ವಿಚಾರಗಳು. ನಿಮಗೆ ಯಾವ ವಿಚಾರದಲ್ಲಿ ಸ್ಪಷ್ಟತೆ ಇದೆ, ನಿಮ್ಮ ಮನಸ್ಸಿನಲ್ಲಿ ಏನು ಯೋಚನೆ ಮಾಡ್ತೀರಿ ಅನ್ನುವಂತದ್ದನ್ನ ನಿಮ್ಮ ಹತ್ತು ಮಾತಿನಲ್ಲಿ ನಿಮ್ಮ ಬದುಕು ಹೇಗೆ ಅಂತ ಅಳೆದುಬಿಡಬಹುದು. ಅದಕ್ಕೆ ವಿಚಾರ ಶಕ್ತಿ, ವಿಚಾರವಂತರಿಲ್ಲದೆ ಇರುವ ದೇಶ ಅದು ಬಲಿಷ್ಠ ದೇಶ ಅಲ್ಲವೇ ಅಲ್ಲ, ಅಸಂಖ್ಯಾತ ಜನರಿದ್ದರೆ ಏನು ಪ್ರಯೋಜನ?. ವಿಚಾರ ಹಾಕು, ಹಳ್ಳಿಯಲ್ಲಿ ಒಂದು ಮಾತಿದೆ, ನಿನ್ನ ಸಮಸ್ಯೆಯನ್ನ ವಿಚಾರಕ್ಕೆ ಹಾಕಪ್ಪ ಅಂತ, ಇದು ಸರಿನಾ ತಪ್ಪಾ ಅನ್ನುವಂತಹ ತೀಕ್ಷ÷್ಣಮತಿ, ವಿಮರ್ಶೆ, ಮನುಷ್ಯನಿಗೆ ಇರುವ ಮೂಲಭೂತವಾದಂತಹ ಒಂದು ಅಂಶ, ಇದು ಸರಿಯಾ ಇದು ತಪ್ಪಾ ಅನ್ನುವಂತಹ ವಿವೇಕ ನಮಗೆ ಇಲ್ಲದೆ ಇದ್ರೆ, ಅವಿವೇಕವನ್ನೇ ಬಹಳ ದೊಡ್ಡ ಮೌಲ್ಯ ಅಂತ ಭಾವಿಸುವಂತಹ ಈ ಸಂದರ್ಭದಲ್ಲಿ ನಾವು ವಿಚಾರವಂತರ ಶಕ್ತಿಯನ್ನ ಹೆಚ್ಚು ಮಾಡಬೇಕಾಗಿದೆ.
ನೀವು ವಿಚಾರ ಮಾಡೋಕೆ ಹತ್ತಿದ್ರೆ ದೇಶಕ್ಕೆ ಅಪಾಯಕಾರಿ ಅನ್ನುವಂತಹ ಸನ್ನಿವೇಶ ಒಂದು ಕಡೆಯಲ್ಲಿದೆ. ಆದರೆ ಯಾವತ್ತೂ ವಿಚಾರವಾದಿ ಮನುಷ್ಯ ಒಳಿತನ್ನ ಬಯಸ್ತಾನೆಯೇ ಹೊರತು, ಅವನು ಎಂದೂ ಕೂಡ ದೇಶದ ಧಕ್ಕೆಗಾಗಲಿ ಅಥವಾ ವ್ಯಕ್ತಿತ್ವದ ಧಕ್ಕೆಗಾಗಲಿ ಅವನು ಕೆಲಸ ಮಾಡೋದಿಲ್ಲ. ಒಬ್ಬ ವಿಚಾರವಂತ ಇದ್ದಾನೆ ಅಂದ್ರೆ ಅಲ್ಲಿ ಒಬ್ಬ ಮಾನವೀಯ ವ್ಯಕ್ತಿ ಇದ್ದಾನೆ ಅಂತ ಮನುಷ್ಯನ ಬಗ್ಗೆ ಯೋಚನೆ ಮಾಡುವ ವ್ಯಕ್ತಿ ಇದ್ದಾನೆ ಅಂತ ನಾವು ಅವನನ್ನ ತಿಳಿಯಬೇಕು. ಈಗ ಎಷ್ಟರಮಟ್ಟಿಗೆ ಇದಾರೆ ಅಂತAದ್ರೆ, ಆಯ್ತಪ್ಪ ನಂದೊAದು ಅಂತಿಮವಾದ ಪ್ರಶ್ನೆ ಇದೆ, ಆಸ್ತಿಕರಿಂದಲೇ ಈ ದೇಶಕ್ಕೆ ಒಳ್ಳೆಯದಾಗಿದ್ದು ಆಗದಾಗಿದ್ರೆ ಇನ್ನು ಬೆಳವಣಿಗೆ ಹೊಂದಬೇಕಿತ್ತಲ್ಲ ಈ ದೇಶ, ಬಡತನ ಹೋಗಬೇಕಿತ್ತಲ್ಲ?. ಸುಮ್ಮನೆ ನೀವು ಒಂದು ಬಸ್ ಸ್ಟಾö್ಯಂಡ್, ಒಂದು ರೈಲ್ವೆ ಸ್ಟೇಷನ್ ಅನ್ನ ನೋಡಿ ನಮ್ಮ ದೇಶದ ಸ್ಥಿತಿಗತಿ ಹೇಗಿದೆ ಅಂತ. ಯಾರೋ ವಿಐಪಿಗಳು ಬಂದಾಗ ಅವರನ್ನ ಗುಡಿಸಿ ಪರದೆ ಹಾಕಿದ ತಕ್ಷಣನೇ ಅದು ಒಳ್ಳೆಯ ರಸ್ತೆ ಆಗಲಿ, ಒಳ್ಳೆಯ ಕಾಲೋನಿ ಆಗಲಿ ಆಗಲ್ಲ. ನಿರಂತರ ಬಡತನದ, ಶೆಲ್ಟರ್ ಇಲ್ಲದೆ ಇರುವಂತಹ, ಊಟಕ್ಕೆ ಇಲ್ಲದೆ ಇರುವಂತಹ ಜನ ಇವತ್ತು ಪರದಾಡ್ತಾ ಇರೋದನ್ನ ಎಲ್ಲಾ ಕಡೆಗೂ ನೋಡ್ತೀವಿ, ಇದನ್ನ ಹೋಗಲಾಡಿಸಲಿಕ್ಕೆ ಏನು ಯೋಚನೆ ಮಾಡೋದು ಬೇಡ್ವಾ?. ಅದು ವಿಚಾರ ಶಕ್ತಿ, ವಿಚಾರ ದೇಶದ ಪ್ರಗತಿಯ ಒಂದು ಅವಿಭಾಜ್ಯ ಅಂಗವೇ ಹೊರತು, ಅದು ಎಂದು ಕೂಡ ದ್ರೋಹದ ವಿಷಯ ಅಲ್ಲ.
ವಾಸ್ತವ ಸಂಗತಿ ಏನಂದ್ರೆ ಹಕ್ಕುಗಳ ಬಗ್ಗೆ ನಾವು ಬಹಳಷ್ಟು ಮಾತನಾಡ್ತೀವಿ, ಆದರೆ ಕರ್ತವ್ಯಗಳಲ್ಲಿ ವೈಜ್ಞಾನಿಕ ಮನೋಭಾವವನ್ನ ರೂಪಿಸುವ, ಬೆಳೆಸುವ, ಬಿತ್ತುವ ಕೆಲಸ ಕೂಡ ಬಹಳ ಮಹತ್ವದ್ದು. ಅಜ್ಞಾನವನ್ನ ಬಿತ್ತುವುದಕ್ಕೆ ಇರುವಷ್ಟು ರಕ್ಷಣೆ, ವಿಚಾರವನ್ನ ಬಿತ್ತುವವರಿಗೆ ಇಲ್ಲ ಅಂದ್ರೆ ಅದು ಯಾವ ಬಗೆಯ ದೇಶ ಅಂತ ನನಗೆ ಇನ್ನು ಅರ್ಥ ಆಗ್ತಾ ಇಲ್ಲ. ಆದ್ದರಿಂದಲೇ ನಮ್ಮ ಕರ್ತವ್ಯವಾದ ವೈಜ್ಞಾನಿಕ ಮನೋಭಾವವನ್ನ ಎಲ್ಲರ ಮನಸ್ಸಿನಲ್ಲಿ ಬಿತ್ತುವ ಒಂದು ಜವಾಬ್ದಾರಿ ಇದೆ ಅಂತ ತಿಳಿದು ಈ ಕಾರ್ಯಕ್ರಮ ಇವತ್ತು ಹಾಗೆ ಮಾಡಲ್ಪಟ್ಟಿದೆ, ಇದಕ್ಕೆ ನಾನು ಶುಭವನ್ನು ಕೋರುತ್ತೇನೆ. ಡಾ. ನರೇಂದ್ರ ನಾಯಕ್ ಅವರು, ಕೋವೂರು ಅವರನ್ನ ಕರ್ನಾಟಕಕ್ಕೆ ಕರ್ಕೊಂಡು ಬಂದು ಒಂದು ದೊಡ್ಡ ವಿಚಾರ ಕ್ರಾಂತಿಯನ್ನೇ ಉಂಟುಮಾಡಿದ್ದಾರೆ. ನಾನೇನಾದ್ರೂ ಕೋವೂರರ ಲೇಖನಗಳನ್ನ ಓದದೆ ಇದ್ದಿದ್ರೆ, ಹೆಚ್.ಎನ್ ಅವರ ಇದು ಜ್ಯೋತಿಷ್ಯವೋ ಅಥವಾ ಭವಿಷ್ಯವೋ ಅನ್ನುವಂತಹ ಒಂದು ಲೇಖನವನ್ನ ಓದದೆ ಇದ್ದಿದ್ರೆ ಯಾವ ರೀತಿ ಇರ್ತಿದ್ನೋ ಗೊತ್ತಿಲ್ಲ ಅಥವಾ ವಿಚಾರ ಕ್ರಾಂತಿಯAತಹ ಲೇಖನ ಓದದೆ ಇದ್ರೆ, ಎಳೆಯ ವಯಸ್ಸಿನಲ್ಲಿ ಬಿ.ಎ ಪದವಿ ಓದುವ ಸಂದರ್ಭದಲ್ಲಿ ಮುಂದಕ್ಕೆ ಓದುತ್ತಾ ಇದ್ನೋ ಇಲ್ವೋ ಗೊತ್ತಿಲ್ಲ. ಆದರೆ ಅವರು ನನ್ನ ವಿಚಾರ ಶಕ್ತಿಗೆ ಒಂದು ಹೊಸ ಶಕ್ತಿಯನ್ನ ಆ ಲೇಖನಗಳು ತುಂಬಿ ಬೆಳೆದಿದ್ದರಿಂದ ಇವತ್ತು ನಾವು ಸಮಾಜವನ್ನ, ಜಗತ್ತನ್ನ ಮತ್ತು ನಮ್ಮ ಸುತ್ತಮುತ್ತಲನ್ನ ನೋಡುವ, ನೊಂದುಕೊಳ್ಳುವ, ಅಸಹ್ಯ ಪಟ್ಟುಕೊಳ್ಳುವ ಎಲ್ಲಾ ಕ್ರಮಗಳು ಇವತ್ತಿವೆ.
ಯಾಕೆಂದ್ರೆ ಮನುಷ್ಯ ಸಂವೇದನಾಶೀಲನಾಗಿರೋದ್ರಿAದ ನಾನು ಬಹಳಷ್ಟು ಜನರನ್ನ ನೋಡ್ತೀನಿ, ಅವರಿಗೆ ಯಾವ ಸಂವೇದನೆನೂ ಇರೋದಿಲ್ಲ. ಸಾಮಾನ್ಯವಾಗಿ ಅಧಿಕಾರ ಅಂದ್ರೆ ಸಂವೇದನಾ ರಾಹಿತ್ಯವಾಗಿ ಬದುಕೋದು ಅಂತ ಬಹಳ ಜನ ತಿಳ್ಕೊಂಡಿದ್ದಾರೆ, ಹಂಗಿಲ್ಲ, ನೀವೊಬ್ಬ ಆಡಳಿತಗಾರರಾಗಿ ಅಥವಾ ಯಾವುದೇ ಕಸುಬನ್ನ ಮಾಡುವ ವ್ಯಕ್ತಿ, ಅಲ್ಲಿ ನಿಮಗೊಂದು ಸಂವೇದನಾಶೀಲತೆ ಇರಬೇಕು. ಕಡೆಯದಾಗಿ ಒಂದು ಪ್ರಸಂಗವನ್ನ ಹೇಳಿ ಮಾತು ಮುಗಿಸ್ತೀನಿ, ಇತ್ತೀಚಿಗೆ ನಾನು ಐಎಎಸ್ ಅಭ್ಯರ್ಥಿಗಳಿಗೆ ಪಾಠ ಹೇಳಲಿಕ್ಕೆ ಹೋಗಿದ್ದೆ. ಅವರಲ್ಲಿ ನಾನು ಕೇಳಿದೆ, ನಿಮ್ಮಲ್ಲಿ ಫೈನ್ ಆರ್ಟ್ಸ್ ಪೈಂಟ್ ಮಾಡೋರು ಯಾರಾದ್ರೂ ಇದ್ದೀರಾ ಅಂದೆ, ಇಲ್ಲ ಅಂದ್ರು. ಡ್ಯಾನ್ಸ್ ಮಾಡೋರು ಯಾರಾದ್ರೂ ಇದ್ದೀರಾ ಅಂದೆ, ಇಲ್ಲ ಅಂದ್ರು. ಹಾಡು ಹೇಳೋರು ಯಾರಾದ್ರೂ ಇದ್ದೀರಾ, ಇಲ್ಲ ಅಂದ್ರು. ಆಮೇಲೆ ಲೇಖನ ಏನಾದ್ರೂ ಬರೆಯೋರು ಇದ್ದೀರಾ, ಇಲ್ಲ ಅಂದ್ರು. ಅಂದ್ರೆ ನೀವು ಎಂತಹ ನಿರ್ದಯಿಗಳು ನೀವಿಲ್ಲಿ ಕೂತಿರೋರು ಅಂತ ಹೇಳಿದೆ ನಾನು, ಇನ್ನೇನು ಹೇಳೋಕಾಗುತ್ತೆ. ಒಂದು ಡ್ಯಾನ್ಸ್, ಒಂದು ಚಿತ್ರಕಲೆ, ಒಂದು ಸಂಗೀತ ಇದೇನು ಇಲ್ಲದೆ ಇರೋರು ಹೋಗ್ತಾರೆ ಅಂದ್ರೆ ನಿಮ್ಮದು ಎಂತಹ ಶುಷ್ಕವಾದ ಕ್ಷೇತ್ರ ಅನ್ನೋದನ್ನ ಅರ್ಥ ಮಾಡಿಕೊಳ್ಳಿ ಅಂದ್ರೆ ಎಂತಹ ಅಪಾಯಕಾರಿಯಾದಂತಹ ಝೋನ್ನಲ್ಲಿ ನೀವಿದ್ದೀವಿ.
ಮನುಷ್ಯನನ್ನಾಗಿ ಏರ್ಪಾಟು ಮಾಡುವ ಸನ್ನಿವೇಶದಲ್ಲಿ ವಿಜ್ಞಾನ ಬಹಳ ದೊಡ್ಡ ಕೊಡುಗೆಯನ್ನ ಕೊಟ್ಟಿದೆ. ಆ ವಿಜ್ಞಾನ ನಮ್ಮ ವಿಚಾರ ಶಕ್ತಿಯ ಒಂದು ಭಾಗ, ಅದು ಒಂದು ಪ್ರಾಯೋಗಿಕವಾಗಿ, ವಿಜ್ಞಾನದ ಕೊಡುಗೆಯಾಗಿ ಒಂದು ಮೋಟಾರು ಓಡಿದ ಹಾಗೆ ನಮ್ಮ ಮೆದುಳಿನ ಶಕ್ತಿಗೆ ಬೇಕಾಗಿರುವಂತಹ ವಿಚಾರವೂ ಕೂಡ ಬಹಳ ಮುಖ್ಯ. ವಿಚಾರ ಶಕ್ತಿ, ವೈಚಾರಿಕತೆ ಇಲ್ಲದೆ ಇರುವ ಬದುಕು ಅದು ತಾರತಮ್ಯವನ್ನ ಗುರುತಿಸೋದಾಗಲಿ ಅಥವಾ ವಿಮರ್ಶೆಯ ಬೆಳವಣಿಗೆಗಾಗಲಿ ಪೂರಕ ಆಗಿರೋದಿಲ್ಲ. ವಿಮರ್ಶೆ ಇಲ್ಲದೆ ಇರುವ ಬದುಕು ಅದು ಬದುಕೇ ಅಲ್ಲ. ಆದ್ದರಿಂದ ಒಂದು ಕಾಲದಲ್ಲಿ ಭಗತ್ ಸಿಂಗ್ ನಿರ್ಮಿಸಿದ ಅಧಿಕಾರದ ವಿಷಯ ಇವತ್ತೂ ಕೂಡ ಪ್ರಸ್ತುತ. ‘ನಾನೇಕೆ ನಾಸ್ತಿಕ’ ಅನ್ನೋದು ಯಾವುದೋ ವರ್ಷ ಬರೆದ, 20ರ ದಶಕದಲ್ಲಿ ಬರೆದಂತಹ ಪುಸ್ತಕ, ಲೇಖನ ಅಂತ ತಿಳಿಯಬಾರದು, ಅದು ಇವತ್ತಿಗೂ ತುಂಬಾ ಪ್ರಸ್ತುತವಾದದ್ದು. ಅದನ್ನ ಮುನ್ನಡೆಸ್ತಾ ಇರುವಂತಹ ಈ ಸಂಸ್ಥೆ, ಎಲ್ಲಾ ಸಂಸ್ಥೆಗಳಿಗೆ ಧನ್ಯವಾದಗಳನ್ನ ಹೇಳ್ತಾ ಇಂತಹ ಒಂದು ಅವಕಾಶಕ್ಕಾಗಿ ತಮ್ಮೆಲ್ಲರಿಗೂ ಸಾವಧಾನದಿಂದ ನನ್ನ ಮಾತನ್ನ ಕೇಳಿದ್ದಕ್ಕೆ ವಂದಿಸಿ ನನ್ನ ಮಾತು ಮುಗಿಸ್ತೀನಿ, ನಮಸ್ಕಾರ. ಮಾನವನನ್ನು
– ಹೆಚ್.ಆರ್. ನವೀನ್‌ಕುಮಾರ್, ಹಾಸನ
ಇದನ್ನೂ ನೋಡಿ : LIVE : SIR -ದ್ರೋಹ ಮತ್ತು ಕಣ್ಣೀರ ಕಥನ (ಪರಿಶೋಧನಾ ವರದಿ ಬಿಡುಗಡೆ) ನೇರಪ್ರಸಾರ
