ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾ ಮಾಡಬೇಕು ಮತ್ತರು ಎಸ್ಐಆರ್ನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಎಡಪಕ್ಷಗಳ ಒಂದು ವಾರದ ಪ್ರತಿಭಟನಾ ಚಳುವಳಿಯ ಭಾಗವಾಗಿ ಸಪ್ಟಂಬರ್ ೨೯ರಂದು ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಮುಂದೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿಯವರ ನೇತೃತ್ವದಲ್ಲಿ ಮತಪ್ರದರ್ಶನದ ಸಂದರ್ಭದಲ್ಲಿ . ಆಯೋಗದ ಪ್ರಧಾನ ಕಚೇರಿಯಾದ ‘ನಿರ್ವಾಚನ ಸದನ’ದ ಗೇಟ್ ತಲುಪಲು ಪ್ರಯತ್ನಿಸುತ್ತಿದ್ದ ಎಡಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಶಾಂತಿಯುತವಾಗಿ ಧರಣಿ ನಡೆಸಲಾರಂಭಿಸಿದ ಎಂವ ಬೇಬಿ, ಹಿರಿಯ ನಾಯಕರಾದ ಬೃಂದಾ ಕಾರಟ್, ಸುಭಾಷಿಣಿ ಅಲಿಯವರನ್ನೂ ಸೇರಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮತ್ತು ಪ್ರತಿಭಟನೆಯನ್ನು ಭಂಗಗೊಳಿಸಲು ದೆಹಲಿ ಪೊಲೀಸರು ಅವರನ್ನು ಎಳೆದಾಡಿದರು ಹಾಗೂ ಬಲಪ್ರಯೋಗ ಮಾಡಿದರು. ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಪ್ರತಿಭಟನಾಕಾರರೊಂದಿಗೆ ಪುರುಷ ಪೊಲೀಸ್ ಅಧಿಕಾರಿಗಳು ಅಸಭ್ಯವಾಗಿ ವರ್ತಿಸಿ ಅವರನ್ನು ವಶಕ್ಕೆ ಪಡೆದರು ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಇದನ್ನು ಖಂಡಿಸಿದೆ.

ಎಡಪಕ್ಷಗಳ ಈ ಚಳುವಳಿಯು ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದೆ:
– ಮುಖ್ಯ ಚುನಾವಣಾ ಆಯುಕ್ತರನ್ನು ವಜಾ ಮಾಡಬೇಕು
– ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು
– ಎಸ್ಐಆರ್ ಪ್ರಕ್ರಿಯೆಯಲ್ಲಿ ಅನ್ಯಾಯವಾಗಿ ಪಟ್ಟಿಯಿಂದ ತೆಗೆದುಹಾಕಲಾದ ಎಲ್ಲಾ ಅರ್ಹ ಮತದಾರರನ್ನು ಮರುಸೇರ್ಪಡೆಗೊಳಿಸಬೇಕು
– ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ 2023ರ ಕಾಯ್ದೆಯನ್ನು ರದ್ದುಗೊಳಿಸಬೇಕು ಹಾಗೂ ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳನ್ನು ಪಾಲಿಸಬೇಕು.
ಈ ಎಲ್ಲಾ ಬೇಡಿಕೆಗಳು ಈಡೇರುವ ವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡುವುದಾಗಿ ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಇದನ್ನೂ ಓದಿ : ಹೆದ್ದಾರಿ ಹೆಚ್ಚಿದರೂ ನಿಲ್ಲದ ಅಪಘಾತ ಸಾವು! ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 34 ಮಂದಿ ಬಲಿ
ಎಂ.ಎ. ಬೇಬಿ, ಬೃಂದಾ ಕಾರಟ್ ಮತ್ತು ಸುಭಾಷಿಣಿ ಅಲಿಯವರಲ್ಲದೆ, ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾದ ಬಿ.ವಿ. ರಾಘವಲು ಮತ್ತು ಆರ್. ಅರುಣ್ ಕುಮಾರ್, ಸಂಸದರಾದ ವಿ. ಶಿವದಾಸನ್ ಮತ್ತು ಎ.ಎ. ರಹೀಮ್, ಸಿಪಿಐ ದೆಹಲಿ ರಾಜ್ಯ ಕಾರ್ಯದರ್ಶಿ ದಿನೇಶ್ ವಾರ್ಷ್ನೆ, ಸಿಪಿಐ(ಎಂಎಲ್) ಕೇಂದ್ರ ಸಮಿತಿ ಸದಸ್ಯರಾದ ಸುಚೇತಾ ಡೇ ಮತ್ತು ರಾಜೀವ್ ಡಿಮ್ರಿ, ಆರ್ಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ಧರ್ಮೇಂದ್ರ ವರ್ಮಾ, ಫಾರ್ವರ್ಡ್ ಬ್ಲಾಕ್ನ ದೆಹಲಿ ರಾಜ್ಯ ಕಾರ್ಯದರ್ಶಿ ಮತ್ತು ಸಿಜಿಪಿಐ ನಾಯಕ ಬಿರ್ಜು ನಾಯಕ್ ವಹಿಸಿದ್ದರು.
ಪ್ರತಿಭಟನಾಕಾರರನ್ನು ಬಂಧಿಸಿ ಅಲ್ಲಿಂದ ಬಸ್ನಲ್ಲಿ ಕರೆದೊಯ್ಯಲಾಯಿತು. ಬಸ್ನಲ್ಲಿಯೂ ನಾಯಕರು ಘೋಷಣೆಗಳನ್ನು ಕೂಗಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ತಡೆಹಿಡಿಯಬೇಕು ಮತ್ತು ಅನ್ಯಾಯವಾಗಿ ಮತದಾನದ ಹಕ್ಕು ಕಳೆದುಕೊಂಡ ಎಲ್ಲರಿಗೂ ಮತ್ತೆ ಮತದಾನದ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ನೋಡಿ : LIVE : SIR -ದ್ರೋಹ ಮತ್ತು ಕಣ್ಣೀರ ಕಥನ (ಪರಿಶೋಧನಾ ವರದಿ ಬಿಡುಗಡೆ) ನೇರಪ್ರಸಾರ
