ಬೆಂಗಳೂರು: ಗುತ್ತಿಗೆ ಪದ್ಧತಿ ಎಂಬ ಜೀತ ಪದ್ಧತಿಯನ್ನು ಕೊನೆಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಖಾಯಂ ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ಬಲವಾದ ಕಾರ್ಮಿಕ ಚಳವಳಿ ಕಟ್ಟಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ವಿದ್ಯುತ್ ಕಾರ್ಮಿಕರ ಸಂಘಟನೆಯ ಮುಖಂಡ ಎಳಮರೀಂ ಕರೀಮ್ ಕರೆ ನೀಡಿದರು.
ಕೊಂಡಜ್ಜಿ ಬಸಪ್ಪ ಭವನದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (KSEWF)ನ 3ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವಿರುದ್ಧವಾಗಿ ಎಲೆಕ್ಟ್ರಿಸಿಟಿ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (EEFI) ನಿರಂತರವಾಗಿ ಹೋರಾಟ ನಡೆಸುತ್ತಿದೆ. ವಿದ್ಯುತ್ ಖಾಸಗೀಕರಣಗೊಂಡರೆ ಕಾರ್ಮಿಕರ ಉದ್ಯೋಗಗಳಿಗೆ ಕುತ್ತು ಬರುವುದರ ಜೊತೆಗೆ, ಬಡ ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ದೊರೆಯುವ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.
ಕೇರಳದಲ್ಲಿ ಎಡರಂಗ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ವಿದ್ಯುತ್ ಕಾರ್ಮಿಕರ ಅಭಿವೃದ್ಧಿ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂತಹ ಮಾದರಿಯನ್ನು ದೇಶದ ಇತರ ರಾಜ್ಯಗಳಲ್ಲಿಯೂ ಜಾರಿಗೊಳಿಸುವ ಅಗತ್ಯವಿದೆ ಎಂದು ಎಳಮರೀಂ ಕರೀಮ್ ಹೇಳಿದರು. ಕರ್ನಾಟಕದಲ್ಲಿ ಗುತ್ತಿಗೆ ಕಾರ್ಮಿಕರು ಸಿಐಟಿಯು ನೇತೃತ್ವದಡಿ ಸಂಘಟಿತರಾಗುತ್ತಿರುವುದು ಸಂತಸದ ವಿಚಾರ. ಕಾರ್ಮಿಕ ವಿರೋಧಿ ಕಾಯ್ದೆಗಳು ಮತ್ತು ನೀತಿಗಳ ವಿರುದ್ಧ ಎಲ್ಲಾ ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ JCTU ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟಗಳನ್ನು ಸಂಘಟಿಸಲಾಗುತ್ತಿದೆ. ಇದೇ ಹೋರಾಟದ ಮುಂದುವರಿದ ಭಾಗವಾಗಿ ಡಿಸೆಂಬರ್ 1 ಮತ್ತು 2ರಂದು ಮತ್ತೊಂದು ಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದರು.
EEFI ತಮಿಳುನಾಡಿನ ನಾಯಕ ರಾಜೇಂದ್ರನ್ ಮಾತನಾಡಿ, ದೇಶ ಇಂದು ಖಾಸಗೀಕರಣ, ಉದಾರೀಕರಣ ಮತ್ತು ಕೋಮುವಾದೀಕರಣದ ಅಪಾಯಗಳನ್ನು ಎದುರಿಸುತ್ತಿದೆ. ಈ ಮೂರು ನೀತಿಗಳ ಪರಿಣಾಮ ಗುತ್ತಿಗೆ ಕಾರ್ಮಿಕರು ಅತ್ಯಂತ ಕೆಳಮಟ್ಟದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆ ಕಾರ್ಮಿಕರಿಗೆ ಖಾಯಂ ಉದ್ಯೋಗ ಕಲ್ಪಿಸಬೇಕು. ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರಗಳು ಗಂಭೀರವಾಗಿ ಆಲಿಸಬೇಕು ಎಂದು ಒತ್ತಾಯಿಸಿದರು.

ಕನಿಷ್ಠ ವೇತನ ಜಾರಿಗೆ ಆಗ್ರಹ
ಸಮ್ಮೇಳನದ ಹಿನ್ನೆಲೆಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ, ಗುತ್ತಿಗೆ ಪದ್ಧತಿ ರದ್ದಾಗಬೇಕು, ಕನಿಷ್ಠ ವೇತನ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಮೇ ತಿಂಗಳ 22ರಂದು ಕನಿಷ್ಠ ವೇತನ ಪರಿಷ್ಕರಣೆ ಕುರಿತು ಘೋಷಣೆ ಮಾಡಿತ್ತು. ಆದರೆ ಈಗಾಗಲೇ ಇರುವ ಸಮಿತಿಯ ಬದಲಿಗೆ ಮತ್ತೊಂದು ಸಮಿತಿಯನ್ನು ರಚಿಸಿರುವುದು ಕಾರ್ಮಿಕರ ಶ್ರಮಕ್ಕೆ ಸಿಗಬೇಕಾದ ಕೂಲಿಗೆ ಮಾಡಿರುವ ದ್ರೋಹವಾಗಿದೆ ಎಂದು ಅವರು ಆರೋಪಿಸಿದರು. ಕನಿಷ್ಠ ವೇತನ ನೀಡಲು ಸಾಧ್ಯವಿಲ್ಲ ಎನ್ನುವ ಯಾವುದೇ ಉದ್ಯಮವನ್ನು ನಡೆಸಬಾರದು ಎಂಬ ನಿಯಮ ಸರ್ಕಾರಕ್ಕೂ ಅನ್ವಯವಾಗಬೇಕು ಎಂದು ಪ್ರಶ್ನಿಸಿದರು.
ಸರ್ಕಾರ ಮಾದರಿ ಉದ್ಯೋಗದಾತನಾಗಿ ನಡೆದುಕೊಳ್ಳಬೇಕಾಗಿದ್ದರೂ, ಕಾರ್ಮಿಕ ಕಾನೂನುಗಳನ್ನೇ ಉಲ್ಲಂಘಿಸಿ ಕಾರ್ಮಿಕರ ಶೋಷಣೆಗೆ ಅವಕಾಶ ಮಾಡಿಕೊಡುತ್ತಿರುವುದು ಖಂಡನೀಯ ಎಂದರು.
ವಿದ್ಯುತ್ ಕ್ಷೇತ್ರದಲ್ಲಿ ಶೇ.40ರಷ್ಟು ಗುತ್ತಿಗೆ ಕಾರ್ಮಿಕರು
ಕರ್ನಾಟಕದ ವಿದ್ಯುತ್ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅನೇಕರು ನಿವೃತ್ತಿ ವಯಸ್ಸಿನ ಸಮೀಪಕ್ಕೆ ಬಂದಿದ್ದರೂ, ಖಾಯಂ ಉದ್ಯೋಗ ಸೇರಿದಂತೆ ಯಾವುದೇ ಸೌಲಭ್ಯಗಳು ಅವರಿಗೆ ದೊರೆಯುತ್ತಿಲ್ಲ ಎಂದು ವರಲಕ್ಷ್ಮಿ ಹೇಳಿದರು.
ದೇಶದ ಇತರ ಭಾಗಗಳ ವಿದ್ಯುತ್ ಕ್ಷೇತ್ರವನ್ನು ಗಮನಿಸಿದರೆ, 220 ಕೆವಿ, 110 ಕೆವಿ, 66 ಕೆವಿ ಮತ್ತು 33 ಕೆವಿ ವಿದ್ಯುತ್ ಕೇಂದ್ರಗಳಲ್ಲಿ ಗುತ್ತಿಗೆ ಪದ್ಧತಿ ಇಲ್ಲದಿರುವ ಉದಾಹರಣೆಗಳಿವೆ. ಆದರೆ ಕರ್ನಾಟಕದಲ್ಲಿ 220 ಕೆವಿ ಕೇಂದ್ರಗಳಲ್ಲಿಯೂ ಸಹಾಯಕರಾಗಿ ಕೆಲಸ ಮಾಡುವವರು, ಡಿಪ್ಲೊಮಾ ಇಂಜಿನಿಯರ್‌ಗಳು ಸೇರಿದಂತೆ ವಿದ್ಯಾವಂತ ಕಾರ್ಮಿಕರು ಗುತ್ತಿಗೆ ಆಧಾರದಲ್ಲೇ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಗ್ರಹಣೆ, ಪ್ರಸರಣ ಮತ್ತು ಸರಬರಾಜಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕಾರಿ ಕೆಲಸಗಳನ್ನು ಗುತ್ತಿಗೆ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ವಿದ್ಯುತ್ ವ್ಯವಸ್ಥೆ ಕಡಿಮೆ ಸಂಪನ್ಮೂಲಗಳಲ್ಲಿಯೇ ಕಾರ್ಯನಿರ್ವಹಿಸಲು ಇವರ ಶ್ರಮ ಪ್ರಮುಖ ಕಾರಣವಾಗಿದೆ. ವಿದ್ಯುತ್ ಕ್ಷೇತ್ರದ ಕಂಪನಿಗಳಲ್ಲಿ ಸುಮಾರು ಶೇ.40ರಷ್ಟು ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ : ದೋಷಪೂರಿತ ಎಸ್‌ಐಆರ್ ರದ್ದುಪಡಿಸಿ: ಪ್ರಕಾಶ್ ರಾಜ್ ಆಗ್ರಹ
ವಿದ್ಯಾವಂತ ಯುವಕರಿಗೂ ಖಾಯಂ ಉದ್ಯೋಗವಿಲ್ಲ
ಸಂಘಟನೆಯ ರಾಜ್ಯಾಧ್ಯಕ್ಷ ಜೆ. ಸತ್ಯಬಾಬು ಮಾತನಾಡಿ, ಗುತ್ತಿಗೆ ಕಾರ್ಮಿಕರಲ್ಲಿ ಅನೇಕರು ಐಟಿಐ, ಡಿಪ್ಲೊಮಾ ಸೇರಿದಂತೆ ವಿವಿಧ ತಾಂತ್ರಿಕ ಶಿಕ್ಷಣ ಪಡೆದಿದ್ದಾರೆ. ಕೆಲವರು ಇಂಜಿನಿಯರಿಂಗ್ ಶಿಕ್ಷಣವನ್ನೂ ಪಡೆದಿದ್ದಾರೆ. ಆದರೂ ಅವರನ್ನು ಖಾಯಂ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಹೊರಗುತ್ತಿಗೆ ವ್ಯವಸ್ಥೆಯಿಂದ ಗುತ್ತಿಗೆದಾರರಿಗೆ ಕಾರ್ಮಿಕರನ್ನು ಶೋಷಿಸಲು ಹೆಚ್ಚಿನ ಅವಕಾಶ ಸಿಕ್ಕಿದೆ ಎಂದು ಆರೋಪಿಸಿದರು.
ಸರ್ಕಾರ ವೇತನ ಹೆಚ್ಚಳ ಮಾಡಿದಾಗಲೂ ಅದರ ಸಂಪೂರ್ಣ ಪ್ರಯೋಜನ ಕಾರ್ಮಿಕರಿಗೆ ತಲುಪುತ್ತಿಲ್ಲ. ಹೆಚ್ಚಳಗೊಂಡ ವೇತನದ ಮೊತ್ತವನ್ನು ಮೊದಲು ಗುತ್ತಿಗೆದಾರರು ಪಾವತಿಸಿ, ನಂತರ ನಮಗೆ ಕೊಡಬೇಕು ಎಂದು ಹೇಳಿ ಕಾರ್ಮಿಕರಿಂದ ಹಣ ವಸೂಲಿ ಮಾಡುವ ಪದ್ಧತಿ ಇದೆ ಎಂದು ಅವರು ದೂರಿದರು. ಕರ್ನಾಟಕದ ವಿದ್ಯುತ್ ಕ್ಷೇತ್ರದಲ್ಲಿ ಪ್ರತಿ ಕಾರ್ಮಿಕರಿಂದ ತಿಂಗಳಿಗೆ ಸುಮಾರು ₹3,000ದಿಂದ ₹4,000ವರೆಗೆ ಗುತ್ತಿಗೆದಾರರು ಹಣ ಪಡೆಯುತ್ತಿರುವ ಆರೋಪಗಳಿವೆ. ಹಣ ನೀಡದಿದ್ದರೆ ವೇತನ ತಡೆಹಿಡಿಯುವುದು ಅಥವಾ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದರು.
ಸರ್ಕಾರ ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳಲ್ಲಿಯೂ ಗುತ್ತಿಗೆದಾರರು ಕಮಿಷನ್ ಪಡೆಯುವಂತಹ ವ್ಯವಸ್ಥೆ ಇದೆ ಎಂದು ಆರೋಪಿಸಿದ ಅವರು, ಕಾರ್ಮಿಕರ ಪಿಎಫ್ ಮತ್ತು ಇಎಸ್‌ಐ ಹಣವನ್ನು ಸಮರ್ಪಕವಾಗಿ ಪಾವತಿಸದಿರುವುದು, ಪಾವತಿಸಿದರೂ ಅದರ ದಾಖಲೆ ಅಥವಾ ಸಂಖ್ಯೆಯನ್ನು ಕಾರ್ಮಿಕರಿಗೆ ನೀಡದಿರುವಂತಹ ಸಮಸ್ಯೆಗಳಿವೆ ಎಂದು ಹೇಳಿದರು.
ವಿದ್ಯುತ್ ಗುತ್ತಿಗೆ ಕಾರ್ಮಿಕರು ಪ್ರತಿದಿನ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ ಕಾರ್ಮಿಕರು ರಾತ್ರಿ ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ ಎಂಬ ಖಾತರಿಯೇ ಇಲ್ಲ. ವಿದ್ಯುತ್ ಕೇಂದ್ರಗಳು ಮತ್ತು ಪ್ರಸರಣ ವ್ಯವಸ್ಥೆಯಲ್ಲಿ ಜೀವಕ್ಕೆ ಅಪಾಯಕಾರಿಯಾದ ಕೆಲಸಗಳನ್ನು ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಮೈಸೂರಿನ ಉಮಾಶಂಕರ್ ಒತ್ತಾಯಿಸಿದರು.
ಅಪಘಾತ ಅಥವಾ ಪ್ರಾಣಾಪಾಯದ ಘಟನೆ ಸಂಭವಿಸಿದ ಸಂದರ್ಭದಲ್ಲಿ ಇಎಸ್‌ಐ ಮೂಲಕ ಸಮರ್ಪಕ ಚಿಕಿತ್ಸೆ ದೊರೆಯದಿರುವ ಸಮಸ್ಯೆಯೂ ಇದೆ. ಆದ್ದರಿಂದ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಮಾತ್ರವಲ್ಲದೆ, ಗ್ರಾಚ್ಯುಟಿ, ಬೋನಸ್ ಸೇರಿದಂತೆ ಕಾನೂನುಬದ್ಧ ಎಲ್ಲಾ ಸೌಲಭ್ಯಗಳನ್ನು ಖಾತ್ರಿಪಡಿಸಬೇಕು. ಗುತ್ತಿಗೆ ಕಾರ್ಮಿಕರ ಖಾಯಮಾತಿಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ವಿಚಾರಣೆಗೆ ಬರಲಿದೆ. ಕಾರ್ಮಿಕರನ್ನು ಖಾಯಂ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ನೀತಿಗಳನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಸಮ್ಮೇಳನದಲ್ಲಿ EEFI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುದೀಪ್ ದತ್ತಾ, KSEWF ಖಜಾಂಜಿ ಸುರೇಶ್, ಮುಖಂಡರಾದ ಪರಮೇಶ್ವರ್, ದೊಡ್ಡಪ್ಪ, ವೀರೇಶ್ ಕುಂಬಾರ್, ರಂಗನಾಥ್ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು. ವಿವಿಧ ಜಿಲ್ಲೆಗಳಿಂದ ನೂರಾರು ವಿದ್ಯುತ್ ಕಾರ್ಮಿಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಇದನ್ನೂ ನೋಡಿ : “ಜೊಕುಮಾರಸ್ವಾಮಿ: ಜನಪದ ನಂಬಿಕೆ ಮತ್ತು ಆಚರಣೆ” — ಜೀವನ್‌ಸಾಬ್ ವಾಲೀಕಾರ್ Janashakthi Media

