ಬಿಡದಿ ರೈತರ ಹೋರಾಟ: 50ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ, ದೌರ್ಜನ್ಯ ಆರೋಪ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ವೃತ್ತದಲ್ಲಿ ಕಳೆದ ಐದು ದಿನಗಳಿಂದ ರಸ್ತೆ ತಡೆ ಹಾಗೂ ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದು, 50ಕ್ಕೂ ಹೆಚ್ಚು ರೈತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಮಹಿಳಾ ರೈತರನ್ನೂ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಈ ಕ್ರಮವನ್ನು ಸಂಯುಕ್ತ ಹೋರಾಟ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಬಿಡದಿ

ಬಿಡದಿ–ಹಾರೋಹಳ್ಳಿ ಮುಖ್ಯ ರಸ್ತೆಯ ಬೈರಮಂಗಲ ವೃತ್ತದಲ್ಲಿ ರೈತರು ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳಿಸಬೇಕು ಹಾಗೂ ತಮ್ಮ ಕೃಷಿ ಭೂಮಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ರಸ್ತೆ ತಡೆ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತರನ್ನು ತೆರವುಗೊಳಿಸಲು ಮುಂದಾದರು. ಈ ಸಂದರ್ಭದಲ್ಲಿ ಯೋಜನೆ ಪರವಾಗಿರುವ ಮತ್ತೊಂದು ರೈತರ ಗುಂಪು ಕೂಡ ಸ್ಥಳಕ್ಕೆ ಬಂದಿದ್ದು, ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿದರು. ಬಳಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ರೈತರ ಮೇಲೆ ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಆರೋಪಿಸಿದೆ. ರಸ್ತೆ ತಡೆ ತೆರವುಗೊಳಿಸುವುದಕ್ಕೆ ಮಾತ್ರ ಸೀಮಿತವಾಗದೆ, ಗ್ರಾಮಗಳಿಗೆ ತೆರಳಿ ರೈತರನ್ನು ವಶಕ್ಕೆ ಪಡೆಯುವ ಮೂಲಕ ಭೀತಿ ಮೂಡಿಸುವ ಪ್ರಯತ್ನ ನಡೆದಿದೆ ಎಂದು ಸಂಘಟನೆ ಹೇಳಿದೆ. ಮಹಿಳೆಯರನ್ನೂ ಪುರುಷ ಪೊಲೀಸರ ಮೂಲಕ ಎಳೆದಾಡಿ ವಶಕ್ಕೆ ಪಡೆಯಲಾಗಿದೆ ಹಾಗೂ ಕಳೆದ 560 ದಿನಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯ ಸ್ಥಳವನ್ನು ಧ್ವಂಸ ಮಾಡಲಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ–ಕಂಚುಗಾರನಹಳ್ಳಿ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಆಗಸ್ಟ್ 25ರಂದು ನಡೆದ ವಿಧಾನಸೌಧ ಚಲೋ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಭರವಸೆಗಳನ್ನು ಸರ್ಕಾರ ಜಾರಿಗೊಳಿಸಿಲ್ಲ ಎಂದು ಸಂಘಟನೆ ಆಕ್ಷೇಪಿಸಿದೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕಾನೂನಾತ್ಮಕ, ಮಾನವೀಯ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಪರಿಶೀಲಿಸಲು ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಅದಕ್ಕೆ ಪರಿಸರ, ಕೃಷಿ ಹಾಗೂ ಸಮಾಜ ವಿಜ್ಞಾನ ತಜ್ಞರನ್ನು ಸೇರ್ಪಡೆ ಮಾಡಿ ಕಾರ್ಯಾರಂಭ ಮಾಡಬೇಕು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು ಎಂದು ಸಂಘಟನೆ ತಿಳಿಸಿದೆ.

ಸಮಿತಿಯು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಅಹವಾಲುಗಳನ್ನು ಆಲಿಸಬೇಕು ಹಾಗೂ ಸಮಿತಿ ವರದಿ ಸಲ್ಲಿಸಿ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದಿಲ್ಲ ಎಂಬ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದ್ದರು ಎಂದು ಸಂಯುಕ್ತ ಹೋರಾಟ ಕರ್ನಾಟಕ ಹೇಳಿದೆ. ಆದರೆ ಒಂದು ತಿಂಗಳು ಕಳೆದರೂ ಸಮಿತಿ ಕಾರ್ಯಾರಂಭ ಮಾಡಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಇದರ ನಡುವೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಿಯಲ್ ಎಸ್ಟೇಟ್ ಮಧ್ಯವರ್ತಿಗಳ ಮೂಲಕ ರೈತರ ಮೇಲೆ ವಿವಿಧ ರೀತಿಯ ಒತ್ತಡ ಹೇರಲಾಗುತ್ತಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಆರೋಪಿಸಿದೆ. ಕುಟುಂಬಗಳ ನಡುವೆ ಸಿವಿಲ್ ವ್ಯಾಜ್ಯಗಳನ್ನು ಹುಟ್ಟುಹಾಕುವುದು, ಕ್ರಿಮಿನಲ್ ಪ್ರಕರಣಗಳ ಬೆದರಿಕೆ, ಕಂದಾಯ ದಾಖಲೆಗಳಲ್ಲಿ ತಿದ್ದುಪಡಿ ಮಾಡಿಸುವುದು ಹಾಗೂ ಭೂಸ್ವಾಧೀನ ಪರಿಹಾರ ಪಡೆಯುವಂತೆ ಒತ್ತಡ ಹೇರುವುದು ಸೇರಿದಂತೆ ಹಲವು ರೀತಿಯ ದಬ್ಬಾಳಿಕೆ ನಡೆಯುತ್ತಿದೆ ಎಂದು ಸಂಘಟನೆ ಹೇಳಿದೆ. ಹೋರಾಟದಲ್ಲಿ ಸಕ್ರಿಯವಾಗಿರುವ ಕುಟುಂಬಗಳ ಕೃಷಿ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಹಾರ ಪಡೆಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದೂ ಅದು ತಿಳಿಸಿದೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರದಲ್ಲಿ ಪ್ರಕೃತಿ ವಿಕೋಪದ ಭೀಕರ ಹೊಡೆತ: 24 ಸಾವಿರಕ್ಕೂ ಹೆಚ್ಚು ಮನೆ, 5 ಸಾವಿರ ರಸ್ತೆ ಹಾನಿ

ರೈತರ ಹೋರಾಟ 18 ತಿಂಗಳಿನಿಂದ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿದೆ ಎಂದು ಸಂಘಟನೆ ಟೀಕಿಸಿದೆ. ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರೈತರ ಹೋರಾಟವನ್ನು ತಮ್ಮ ಹೋರಾಟವೆಂದು ಬಿಂಬಿಸಿಕೊಂಡರೂ ವಿಧಾನಸಭೆಯಲ್ಲಿ ಈ ವಿಚಾರವನ್ನು ಸಮರ್ಪಕವಾಗಿ ಪ್ರಸ್ತಾಪಿಸಿಲ್ಲ ಎಂದು ಸಂಯುಕ್ತ ಹೋರಾಟ ಕರ್ನಾಟಕ ಆರೋಪಿಸಿದೆ.

ಅತ್ಯಂತ ಫಲವತ್ತಾದ, ನೀರಾವರಿ ಸಮೃದ್ಧ ಹಾಗೂ ಬಹುವಾರ್ಷಿಕ ಬೆಳೆಗಳನ್ನು ಬೆಳೆಯುವ ಕೃಷಿ ಭೂಮಿಯನ್ನು ರಕ್ಷಿಸುವುದು ರೈತರ ಹಕ್ಕಿನ ಪ್ರಶ್ನೆಯಾಗಿದ್ದು, ಇದನ್ನು ಪಕ್ಷ ರಾಜಕಾರಣದ ದೃಷ್ಟಿಯಿಂದ ನೋಡದೆ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಬೈರಮಂಗಲ ವೃತ್ತದ ಪ್ರತಿಭಟನಾ ಸ್ಥಳದಲ್ಲಿ ರೈತರ ಶಾಂತಿಯುತ ಪ್ರತಿಭಟನಾ ಹಕ್ಕಿಗೆ ರಕ್ಷಣೆ ನೀಡಬೇಕು, ರೈತರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮುಖ್ಯಮಂತ್ರಿ ನೀಡಿದ್ದ ಭರವಸೆಗಳನ್ನು ಜಾರಿಗೊಳಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕರಾದ ಬಡಗಲಪುರ ನಾಗೇಂದ್ರ ಹಾಗೂ ಯಶವಂತ ಟಿ. ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ : ಮತದಾರರ ಹಕ್ಕಿಗಾಗಿ ಹೋರಾಟ: SIR ವಿರುದ್ಧ ಪ್ರತಿರೋಧ ಪ್ರವಾಸ! Janashakthi Media

Donate Janashakthi Media

Leave a Reply

Your email address will not be published. Required fields are marked *