ಬೆಂಗಳೂರು: ಕರ್ನಾಟಕದಲ್ಲಿ ರಸ್ತೆ ಕಾಮಗಾರಿಗಳ ಯೋಜನೆ ಮತ್ತು ವೆಚ್ಚದ ಅಂದಾಜು ತಯಾರಿಕೆಯಲ್ಲಿ ಗಂಭೀರ ಲೋಪಗಳು ನಡೆದಿರುವುದನ್ನು ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ (CAG) ವರದಿ ಬಹಿರಂಗಪಡಿಸಿದೆ. ಲೋಕೋಪಯೋಗಿ ಇಲಾಖೆ (PWD) ಕೈಗೊಂಡ ರಸ್ತೆ ಕಾಮಗಾರಿಗಳ ಅಂದಾಜುಗಳಲ್ಲಿ ನಿಯಮಬಾಹಿರತೆ ಮತ್ತು ತಪ್ಪು ಲೆಕ್ಕಾಚಾರಗಳಿಂದ ಸಾರ್ವಜನಿಕ ಹಣದ ವೆಚ್ಚ ಹೆಚ್ಚಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರಸ್ ವರದಿ ಮಾಡಿದೆ. ರಸ್ತೆ
CAG ನಡೆಸಿದ ಅನುಸರಣೆ ಲೆಕ್ಕಪರಿಶೋಧನೆಯಲ್ಲಿ ಆಯ್ದ ವಿಭಾಗಗಳಲ್ಲಿ ಒಟ್ಟು 5,200 ಕಾಮಗಾರಿಗಳನ್ನು, ಅಂದಾಜು ₹16,858 ಕೋಟಿ ವೆಚ್ಚದೊಂದಿಗೆ ಪರಿಶೀಲಿಸಲಾಗಿದೆ. ಈ ಪೈಕಿ 367 ಕಾಮಗಾರಿಗಳನ್ನು, ಒಟ್ಟು ₹5,174 ಕೋಟಿ ಮೌಲ್ಯದಲ್ಲಿ ವಿವರವಾಗಿ ಪರಿಶೀಲಿಸಲಾಗಿದೆ. ಪರಿಶೀಲಿಸಿದ ಕಾಮಗಾರಿಗಳಲ್ಲಿ 317 ಕಾಮಗಾರಿಗಳ ಅಂದಾಜುಗಳು ಹೆಚ್ಚಾಗಿ ನಿಗದಿಪಡಿಸಿರುವುದು ಪತ್ತೆಯಾಗಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ₹4,837 ಕೋಟಿ. ಅಂದರೆ ಪರಿಶೀಲಿಸಿದ ಮಾದರಿ ಕಾಮಗಾರಿಗಳ ಒಟ್ಟು ಮೌಲ್ಯದ ಸುಮಾರು 94% ಕಾಮಗಾರಿಗಳು ಅಂದಾಜು ಹೆಚ್ಚಳದ ವ್ಯಾಪ್ತಿಗೆ ಬಂದಿವೆ ಎಂದು CAG ತಿಳಿಸಿದೆ. ರಸ್ತೆ
ರಸ್ತೆ ಕಾಮಗಾರಿಗಳ ಅಂದಾಜು ರೂಪಿಸುವಾಗ ಈಗಾಗಲೇ ಲಭ್ಯವಿರುವ ರಸ್ತೆ ಆಸ್ತಿ ನಿರ್ವಹಣಾ ಮಾಹಿತಿಯನ್ನು ಸಮರ್ಪಕವಾಗಿ ಬಳಸಲಾಗಿಲ್ಲ ಎಂದು CAG ಗಮನಿಸಿದೆ. ಕಾಮಗಾರಿಗಳಲ್ಲಿ ದೊರೆಯುವ ಅಗೆದ ಮಣ್ಣು, ವೆಟ್ ಮಿಕ್ಸ್ ಮಕಾಡಂ ಹಾಗೂ ಗ್ರ್ಯಾನ್ಯುಲರ್ ಸಬ್‌ಬೇಸ್‌ನಂತಹ ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ವೆಚ್ಚ ಕಡಿಮೆ ಮಾಡುವ ಅವಕಾಶವಿದ್ದರೂ ಅದನ್ನು ಸಮರ್ಪಕವಾಗಿ ಬಳಸಲಾಗಿಲ್ಲ.
ಇದಲ್ಲದೆ, ಮಣ್ಣಿನ ತುಂಬುವಿಕೆ ಮತ್ತು ಎಂಬ್ಯಾಂಕ್‌ಮೆಂಟ್ ಪ್ರಮಾಣದ ಲೆಕ್ಕಾಚಾರದಲ್ಲೂ ತಪ್ಪುಗಳು, ಸೂಕ್ತವಲ್ಲದ ಟೆಂಡರ್ ಪ್ರೀಮಿಯಂ ಹಾಗೂ ರಸ್ತೆ ವಿನ್ಯಾಸದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸುಧಾರಣೆಗಳನ್ನು ಅಳವಡಿಸಿರುವುದು ಕಂಡುಬಂದಿದೆ.
Indian Roads Congress (IRC) ಮತ್ತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ (MoRTH) ಮಾರ್ಗಸೂಚಿಗಳಿಂದ ಕೆಲವು ಕಾಮಗಾರಿಗಳಲ್ಲಿ ವಿಚಲನವಾಗಿರುವುದರಿಂದ ಅಗತ್ಯಕ್ಕಿಂತ ಹೆಚ್ಚಿನ ವೆಚ್ಚ ಉಂಟಾಗಿದೆ ಎಂದು CAG ಹೇಳಿದೆ. ರಸ್ತೆ
ಇದನ್ನೂ ಓದಿ : ಮೂರನೇ ಭಾಷೆಗೆ ಬದಲಾಗಿ AI: ಶಿಕ್ಷಕರ ವಿರೋಧ; ಪ್ರತ್ಯೇಕ ವಿಷಯವಾಗಿಸಲು ಆಗ್ರಹ
ಗುತ್ತಿಗೆದಾರರಿಗೆ ಅನುಕೂಲವಾಗುವ ಸಾಧ್ಯತೆ?
ಕಾಮಗಾರಿಗಳ Schedule of Ratesನಲ್ಲೂ ತಪ್ಪುಗಳಿರುವುದು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿದೆ. ತಪ್ಪಾದ conversion factor ಹಾಗೂ ವೆಚ್ಚದ ಲೆಕ್ಕಾಚಾರಗಳು ಅಂದಾಜು ಮೊತ್ತವನ್ನು ಹೆಚ್ಚಿಸಿವೆ. ಇಂತಹ ತಪ್ಪುಗಳು ಗುತ್ತಿಗೆದಾರರಿಗೆ ಅನಗತ್ಯ ಆರ್ಥಿಕ ಲಾಭ ಕಲ್ಪಿಸುವ ಸಾಧ್ಯತೆಯನ್ನೂ CAG ಉಲ್ಲೇಖಿಸಿದೆ.
ರಸ್ತೆ ನಿರ್ಮಾಣದಲ್ಲಿ ಕಡಿಮೆ ವೆಚ್ಚದ ಹಾಗೂ ಪರಿಸರ ಸ್ನೇಹಿ ಪರ್ಯಾಯ ತಂತ್ರಜ್ಞಾನಗಳಾದ ಸಿಮೆಂಟ್ ಸಂಸ್ಕರಿತ ಅಡಿಪಾಯ, ಮರುಬಳಕೆ ಮಾಡಿದ ಡಾಂಬರು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ನಿರ್ಮಿಸುವ ರಸ್ತೆ ತಂತ್ರಜ್ಞಾನಗಳ ಸಾಧ್ಯತೆಗಳನ್ನೂ ಇಲಾಖೆ ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು ವರದಿ ಹೇಳಿದೆ.
CAG ವರದಿಯಲ್ಲಿ ಉತ್ತರ ಕನ್ನಡದ ಕಾರವಾರದ ಸಮೀಪದ ಮತ್ತೊಂದು ಪ್ರಕರಣವೂ ಬೆಳಕಿಗೆ ಬಂದಿದೆ. ₹8.7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ, ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣವಾಗದ ಕಾರಣ ಬಳಕೆಯಾಗದೆ ಉಳಿದಿದೆ.
ಸಿದ್ದಾರ್ನಾಯವಾಡ ಗ್ರಾಮವನ್ನು ಉಂಬ್ಳೆಜೂಗ್ ಗ್ರಾಮಕ್ಕೆ ಸಂಪರ್ಕಿಸುವ ಉದ್ದೇಶದಿಂದ ನಿರ್ಮಿಸಲಾದ ಈ ಸೇತುವೆ 2022ರ ಜನವರಿಯಲ್ಲಿ ಪೂರ್ಣಗೊಂಡಿತ್ತು. ಆದರೆ ಸೇತುವೆಗೆ ಸಂಪರ್ಕಿಸುವ ರಸ್ತೆಗಾಗಿ ಅಗತ್ಯವಿದ್ದ ಭೂಸ್ವಾಧೀನವೇ ಪೂರ್ಣಗೊಂಡಿರಲಿಲ್ಲ ಎಂದು CAG ಗಮನಿಸಿದೆ. ಇದನ್ನು ಕಳಪೆ ಯೋಜನೆ ಮತ್ತು ಕಾಮಗಾರಿಗಳ ಕ್ರಮಬದ್ಧತೆಯ ಕೊರತೆಯ ಉದಾಹರಣೆಯಾಗಿ ವರದಿ ಗುರುತಿಸಿದೆ. ರಸ್ತೆ
ಸರ್ಕಾರದ ಪ್ರತಿಕ್ರಿಯೆ ಏನು?
CAG ಎತ್ತಿರುವ ಆಕ್ಷೇಪಣೆಗಳಿಗೆ 2025ರ ಜುಲೈನಲ್ಲಿ ಸರ್ಕಾರ ಪ್ರತಿಕ್ರಿಯಿಸಿದ್ದು, ಇನ್ನು ಮುಂದೆ ಲಭ್ಯವಿರುವ ಸಂಪನ್ಮೂಲಗಳ ಮರುಬಳಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ತಿಳಿಸಿದೆ. ಅಂದಾಜುಗಳಲ್ಲಿನ ತಪ್ಪುಗಳನ್ನು ತಪ್ಪಿಸಲು ಸಿಬ್ಬಂದಿಗೆ ತರಬೇತಿ, ಸ್ವಯಂಚಾಲಿತ ಸಾಧನಗಳ ಬಳಕೆ ಮತ್ತು ಲೆಕ್ಕಾಚಾರಗಳ ಪರಿಶೀಲನೆ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.
CAG, Schedule of Rates ಅನ್ನು ಪರಿಷ್ಕರಿಸಿ ತಪ್ಪು ದರ ಮತ್ತು ಲೆಕ್ಕಾಚಾರಗಳನ್ನು ಸರಿಪಡಿಸುವುದು, PRAMC ಮಾಹಿತಿಯನ್ನು ಪರಿಣಾಮಕಾರಿಯಾಗಿ ಬಳಸುವುದು ಹಾಗೂ ವಾಸ್ತವಿಕ ಸಂಚಾರ ಪ್ರಮಾಣ ಮತ್ತು ಕಾಮಗಾರಿಯ ಅಗತ್ಯಕ್ಕೆ ಅನುಗುಣವಾಗಿ ಅಂದಾಜು ರೂಪಿಸುವಂತೆ ಶಿಫಾರಸು ಮಾಡಿದೆ.
ಒಟ್ಟಿನಲ್ಲಿ, ರಸ್ತೆ ಅಭಿವೃದ್ಧಿಗೆ ಮೀಸಲಾಗುವ ಸಾರ್ವಜನಿಕ ಹಣದ ಬಳಕೆಯಲ್ಲಿ ಯೋಜನಾ ದೋಷ, ತಪ್ಪಾದ ಅಂದಾಜು ಮತ್ತು ನಿಯಮಗಳ ಉಲ್ಲಂಘನೆಗಳು ಎಷ್ಟು ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ ಎಂಬುದನ್ನು CAG ವರದಿ ಎತ್ತಿ ತೋರಿಸಿದೆ.
ಇದನ್ನೂ ನೋಡಿ : ದೆಹಲಿ ಎಸ್‌ಐಆರ್: ವಿಐಪಿಗಳಿಗೂ ತಪ್ಪದ ನೋಟೀಸ್ ಕಾಟ! ಸಾಮಾನ್ಯರ ಪಾಡೇನು? | ವಿಶ್ಲೇಷಣೆ – ಕೆ.ಎಸ್. ವಿಮಲಾ
