ಗೆ ಬದಲಾಗಿ AI: ಶಿಕ್ಷಕರ ವಿರೋಧ; ಪ್ರತ್ಯೇಕ ವಿಷಯವಾಗಿಸಲು ಆಗ್ರಹ

ಬೆಂಗಳೂರು: ಸರ್ಕಾರಿ ಪ್ರೌಢಶಾಲೆಗಳಲ್ಲಿನ ಮೂರನೇ ಭಾಷೆಯ ಆಯ್ಕೆಗೆ ಬದಲಾಗಿ ಕೃತಕ ಬುದ್ಧಿಮತ್ತೆ (AI) ವಿಷಯವನ್ನು ಪರಿಚಯಿಸುವ ರಾಜ್ಯ ಸರ್ಕಾರದ ಕ್ರಮಕ್ಕೆ ಭಾಷಾ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ದೇಶೀಯ ಭಾಷಾ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 2,000ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು. ಮೂರನೇ ಭಾಷೆಯ ಬೋಧನೆಗೆ ಧಕ್ಕೆಯಾಗದಂತೆ AI ಅನ್ನು ಪ್ರತ್ಯೇಕ ಕೌಶಲ್ಯಾಧಾರಿತ ಅಥವಾ ಐಚ್ಛಿಕ ವಿಷಯವಾಗಿ ಪರಿಚಯಿಸಬೇಕು ಎಂದು ಅವರು ಆಗ್ರಹಿಸಿದರು.

ಶಿಕ್ಷಕರ ಪ್ರಕಾರ, AI ಶಿಕ್ಷಣಕ್ಕೆ ಸೇರಿಸುವುದನ್ನು ವಿರೋಧಿಸುವುದಿಲ್ಲ. ಆದರೆ ಅದನ್ನು ಮೂರನೇ ಭಾಷೆಗೆ ಪರ್ಯಾಯವಾಗಿ ಬಳಸುವುದು ಕರ್ನಾಟಕದ ಬಹುಭಾಷಾ ಶಿಕ್ಷಣ ಪರಂಪರೆಗೆ ಸೂಕ್ತವಲ್ಲ. ಭಾಷೆ ಮತ್ತು ತಂತ್ರಜ್ಞಾನ ಎರಡೂ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವುದರಿಂದ ಎರಡಕ್ಕೂ ಪ್ರತ್ಯೇಕ ಸ್ಥಾನ ನೀಡಬೇಕು ಎಂದು ವೇದಿಕೆ ತಿಳಿಸಿದೆ.

ಇದೇ ವೇಳೆ, ರಾಜ್ಯ ಸರ್ಕಾರ ಜುಲೈ 14ರಂದು ಪ್ರಕಟಿಸಿರುವ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಕರಡು ಅಧಿಸೂಚನೆಯ ಬಗ್ಗೆಯೂ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಶಿಕ್ಷಕರಿಗೆ ಮಾತ್ರ ಆದ್ಯತೆ ನೀಡುವ ರೀತಿಯ ವ್ಯವಸ್ಥೆ ರೂಪುಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಕಸ್ತೂರಿರಂಗನ್ ವರದಿ: ಕಾಂಗ್ರೆಸ್–ಬಿಜೆಪಿ ಆರೋಪ–ಪ್ರತ್ಯಾರೋಪ; ನಿರ್ಣಯಕ್ಕೆ ಕ್ಷಣಗಣನೆ

ಸರ್ಕಾರಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಹಿಂದಿ, ಸಂಸ್ಕೃತ, ಉರ್ದು, ತೆಲುಗು, ತಮಿಳು, ಮರಾಠಿ, ಕೊಂಕಣಿ, ತುಳು, ಮಲಯಾಳಂ ಮತ್ತು ಅರೇಬಿಕ್ ಸೇರಿದಂತೆ ಹಲವು ಭಾಷೆಗಳನ್ನು ಬೋಧಿಸಲಾಗುತ್ತಿದೆ. ಈ ಭಾಷೆಗಳ ಶಿಕ್ಷಕರ ನೇಮಕಾತಿ ಸೀಮಿತಗೊಂಡರೆ, ಆ ಭಾಷೆಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೂ ಹಾಗೂ ಅರ್ಹ ಶಿಕ್ಷಕರ ಉದ್ಯೋಗಾವಕಾಶಗಳಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೇದಿಕೆ ಹೇಳಿದೆ.

ಮೂರನೇ ಭಾಷಾ ಶಿಕ್ಷಕರ ನೇಮಕಾತಿಯನ್ನು ಮುಂದುವರಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಬೋಧಿಸಲಾಗುವ ಎಲ್ಲ ಮಾನ್ಯತೆ ಪಡೆದ ಭಾಷೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಶಿಕ್ಷಕ ಹುದ್ದೆಗಳನ್ನು ಸೃಷ್ಟಿಸಬೇಕು ಮತ್ತು AI ಅನ್ನು ಮೂರನೇ ಭಾಷೆಯ ಬದಲಿಗೆ ಪ್ರತ್ಯೇಕ ವಿಷಯವಾಗಿ ಪರಿಚಯಿಸಬೇಕು ಎಂಬುದು ಶಿಕ್ಷಕರ ಪ್ರಮುಖ ಬೇಡಿಕೆಗಳಾಗಿವೆ.

ರಾಜ್ಯದಲ್ಲಿ 2026–27ನೇ ಶೈಕ್ಷಣಿಕ ವರ್ಷದಿಂದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯ್ದ 1,642 ಸರ್ಕಾರಿ ಶಾಲೆಗಳಲ್ಲಿ AI ಅನ್ನು ವೃತ್ತಿಪರ/ಕೌಶಲ್ಯಾಧಾರಿತ ವಿಷಯವಾಗಿ ಪರಿಚಯಿಸುವ ಯೋಜನೆ ಇದೆ. ಈ ವ್ಯವಸ್ಥೆಯಲ್ಲಿ AI ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯ ಬದಲಾಗಿ ಆ ವಿಷಯವನ್ನು ಕಲಿಯುವ ಅವಕಾಶ ನೀಡಲಾಗುತ್ತಿದೆ.

AI ಮೂಲಕ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನ ಕೌಶಲ್ಯಗಳನ್ನು ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದರೂ, ಭಾಷಾ ಶಿಕ್ಷಕರ ಬೇಡಿಕೆ ಪ್ರಕಾರ ತಂತ್ರಜ್ಞಾನ ಶಿಕ್ಷಣದ ಜೊತೆಗೆ ಬಹುಭಾಷಾ ಶಿಕ್ಷಣಕ್ಕೂ ಸಮಾನ ಅವಕಾಶ ಕಲ್ಪಿಸುವ ಅಗತ್ಯವಿದೆ.

ಇದನ್ನೂ ನೋಡಿ : ದೆಹಲಿ ಎಸ್‌ಐಆರ್‌: ವಿಐಪಿಗಳಿಗೂ ತಪ್ಪದ ನೋಟೀಸ್ ಕಾಟ! ಸಾಮಾನ್ಯರ ಪಾಡೇನು? | ವಿಶ್ಲೇಷಣೆ – ಕೆ.ಎಸ್‌. ವಿಮಲಾ

Donate Janashakthi Media

Leave a Reply

Your email address will not be published. Required fields are marked *