ಬೈಕ್‌ ಸವಾರನ ರೋಡ್‌ ರೇಜ್‌: ಬೆಂಗಳೂರಿನ CEOಗೆ ‘AI’ ನೆರವು; ಕ್ಷಮೆ ಕೇಳಿ ಪರಿಹಾರ ನೀಡಿದ ಬೈಕ್‌ ಸವಾರ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರೋಡ್‌ ರೇಜ್‌ ಪ್ರಕರಣವೊಂದರಲ್ಲಿ ಕಾರಿನ ಡ್ಯಾಶ್‌ಕ್ಯಾಮ್‌ ದೃಶ್ಯಗಳು ಮತ್ತು ಕೃತಕ ಬುದ್ಧಿಮತ್ತೆ (AI) ಸಾಧನ ಜೆಮಿನಿ ನೆರವಿನಿಂದ ಪೊಲೀಸ್‌ ದೂರು ದಾಖಲಿಸಿ, ಅಂತಿಮವಾಗಿ ಬೈಕ್‌ ಸವಾರನಿಂದ ಕ್ಷಮಾಪಣೆ ಹಾಗೂ ಕಾರಿನ ಹಾನಿಗೆ ಪರಿಹಾರ ಪಡೆದಿರುವುದಾಗಿ ಬೆಂಗಳೂರಿನ ಉದ್ಯಮಿಯೊಬ್ಬರು ಹೇಳಿಕೊಂಡಿದ್ದಾರೆ. ಈ ಘಟನೆ ಕುರಿತ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ ಇದೀಗ ವೈರಲ್‌ ಆಗಿದೆ.

ಬಾರತ್‌ಅಗ್ರಿ ಸಂಸ್ಥೆಯ ಸಿಇಒ ಸಿದ್ಧಾರ್ಥ್‌ ದಯಾಲಾನಿ ಅವರ ಪ್ರಕಾರ, ಸೋನಿ ಸಿಗ್ನಲ್‌ ಮತ್ತು ಈಜಿಪುರ ಸಿಗ್ನಲ್‌ ನಡುವಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಪತ್ನಿಯೊಂದಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಬೈಕ್‌ಗೆ ಕಾರು ತಾಗಿದೆಯೆಂದು ಆರೋಪಿಸಿ ಕಾರನ್ನು ನಿಲ್ಲಿಸುವಂತೆ ಮಾಡಿದ್ದಾರೆ. ಬಳಿಕ ಕಾರಿನ ಬದಿಯ ಬಾಗಿಲಿಗೆ ಒದ್ದಿದ್ದು, ನಂತರ ಬೈಕ್‌ನಿಂದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಕಾರನ್ನು ಹಿಂದಿಕ್ಕಿ ಪದೇಪದೇ ಬ್ರೇಕ್‌ ಹಾಕುವ ಮೂಲಕ ಬೆದರಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ದಯಾಲಾನಿ ಆರೋಪಿಸಿದ್ದಾರೆ.

ಆದರೆ ಈ ಸಂಪೂರ್ಣ ಘಟನೆ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ದಾಖಲಾಗಿತ್ತು. ಆರಂಭದಲ್ಲಿ ಪ್ರಕರಣವನ್ನು ಅಲ್ಲಿಗೇ ಬಿಡಲು ಯೋಚಿಸಿದ್ದ ದಯಾಲಾನಿ, ಕಾರಿನ ಬಾಗಿಲಿನಲ್ಲಿದ್ದ ಹಾನಿಯನ್ನು ಗಮನಿಸಿದ ಬಳಿಕ ಪೊಲೀಸ್‌ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ : ಡಾರ್ಕ್‌ ಸ್ಟೋರ್‌ನಿಂದ ಜಿಮ್‌ವರೆಗೆ: ಬೆಂಗಳೂರಿನಲ್ಲಿ ಪಾರ್ಟಿಗೆ ಹೊಸ ತಾಣಗಳ ಹುಡುಕಾಟ

ದೂರು ಬರೆಯಲು ಜೆಮಿನಿ ನೆರವು

ದಯಾಲಾನಿ ಹೇಳುವಂತೆ, ಅವರು Google Gemini ಬಳಸಿ ಕೊರಮಂಗಲ ಪೊಲೀಸ್‌ ಠಾಣೆಗೆ ಸಲ್ಲಿಸಲು ದೂರು ಸಿದ್ಧಪಡಿಸಿಕೊಂಡಿದ್ದಾರೆ. ದೂರು ನೀಡಿದ ಬಳಿಕ ಅದರ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಪಡೆಯುವಂತೆ ಜೆಮಿನಿ ಸಲಹೆ ನೀಡಿತ್ತು ಎಂದು ಅವರು ತಿಳಿಸಿದ್ದಾರೆ.

ಡ್ಯಾಶ್‌ಕ್ಯಾಮ್‌ ದೃಶ್ಯದಲ್ಲಿದ್ದ ಬೈಕ್‌ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಸವಾರನನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆತನನ್ನು ಠಾಣೆಗೆ ಕರೆಸಲಾಗಿದೆ. ಆರಂಭದಲ್ಲಿ ಆತ ಕಾರು ಚಾಲಕನ ಮೇಲೆಯೇ ಆರೋಪ ಮಾಡಿದ್ದರೂ, ಡ್ಯಾಶ್‌ಕ್ಯಾಮ್‌ ದೃಶ್ಯಗಳು ಮತ್ತು ಇತರ ದಾಖಲೆಗಳನ್ನು ತೋರಿಸಿದ ಬಳಿಕ ಪ್ರಕರಣದ ಗಂಭೀರತೆಯನ್ನು ಅರಿತುಕೊಂಡಿದ್ದಾನೆ ಎಂದು ದಯಾಲಾನಿ ಹೇಳಿದ್ದಾರೆ.

ನಂತರ ಬೈಕ್‌ ಸವಾರ ಲಿಖಿತವಾಗಿ ಕ್ಷಮೆಯಾಚಿಸಿ, ಕಾರಿಗೆ ಉಂಟಾದ ಹಾನಿಗೆ ಪರಿಹಾರ ನೀಡಿದ್ದಾನೆ ಎಂದು ದಯಾಲಾನಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಯಾವುದೇ ಲಂಚ ನೀಡಿಲ್ಲ ಮತ್ತು ಕೊರಮಂಗಲ ಪೊಲೀಸರು ವೃತ್ತಿಪರವಾಗಿ ಹಾಗೂ ಸಹಕಾರದಿಂದ ವರ್ತಿಸಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಶ್ಲಾಘಿಸಿದ್ದಾರೆ.

ಈ ಅನುಭವದ ಹಿನ್ನೆಲೆಯಲ್ಲಿ ದಯಾಲಾನಿ “Gemini is my lawyer now” ಎಂದು ಹಾಸ್ಯಮಿಶ್ರಿತವಾಗಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ರಸ್ತೆ ಅಪಘಾತ ಅಥವಾ ರೋಡ್‌ ರೇಜ್‌ ಪ್ರಕರಣಗಳಲ್ಲಿ ಡ್ಯಾಶ್‌ಕ್ಯಾಮ್‌ ದೃಶ್ಯಗಳ ಮಹತ್ವ ಮತ್ತು ದೂರುಗಳನ್ನು ಸಿದ್ಧಪಡಿಸಲು AI ಬಳಕೆಯ ಕುರಿತು ಹಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ನೋಡಿ : ನೇಮಕಾತಿ, ವೇತನ ಹೆಚ್ಚಳಕ್ಕೆ ಆಗ್ರಹ: ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಉಪವಾಸ ಸತ್ಯಾಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *