ಲಖನೌ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಜಿ ರಾಜ್ಯಸಭಾ ಸದಸ್ಯ ಅಶೋಕ್ ಸಿದ್ಧಾರ್ಥ ಅವರು ರಾಜಕೀಯ ಹಾಗೂ ಸಾಮಾಜಿಕ ಜೀವನದಿಂದ ನಿವೃತ್ತಿ ಪಡೆಯುವುದಾಗಿ ಗುರುವಾರ ಘೋಷಿಸಿದ್ದಾರೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು, ಸಿದ್ಧಾರ್ಥ ರಾಜಕೀಯದಿಂದ ಸಂಪೂರ್ಣ ಹಿಂದೆ ಸರಿದರೆ ಅವರ ಅಳಿಯ ಹಾಗೂ ತಮ್ಮ ಸಹೋದರಳಿಯ ಆಕಾಶ್ ಆನಂದ್ ಅವರಿಗೆ ಪಕ್ಷದಲ್ಲಿ ಮತ್ತೆ ಸಕ್ರಿಯ ಪಾತ್ರ ದೊರೆಯಬಹುದು ಎಂದು ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಾಯಾವತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ಧಾರ್ಥ, ತಮ್ಮ ರಾಜಕೀಯ ಜೀವನಕ್ಕೆ ತೆರೆ ಎಳೆಯುವುದಾಗಿ ತಿಳಿಸಿದ್ದಾರೆ. ಬಿಎಸ್‌ಪಿ ಹಾಗೂ ಬಹುಜನ ಚಳವಳಿಗೆ ತಾವು ದೀರ್ಘಕಾಲ ಸೇವೆ ಸಲ್ಲಿಸಿದ್ದು, ಪಕ್ಷದ ಹಿತಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಮಾಯಾವತಿ ಅವರು ಬುಧವಾರ ನೀಡಿದ್ದ ಹೇಳಿಕೆಯಲ್ಲಿ, ಸಿದ್ಧಾರ್ಥ ಅವರು ವೈಯಕ್ತಿಕ ಮತ್ತು ಕೌಟುಂಬಿಕ ಹಿತಾಸಕ್ತಿಗಳಿಗಿಂತ ಪಕ್ಷದ ಚಳವಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದರು. ಅವರು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ತ್ಯಜಿಸಿ ಸಂಪೂರ್ಣ ನಿವೃತ್ತರಾದರೆ, ಆಕಾಶ್ ಆನಂದ್ ಅವರು ಪಕ್ಷದಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶವಾಗಲಿದೆ ಮತ್ತು ಅವರ ಜವಾಬ್ದಾರಿಗಳನ್ನು ಮರುಸ್ಥಾಪಿಸುವ ಬಗ್ಗೆ ಪಕ್ಷ ಸಹಾನುಭೂತಿಯಿಂದ ಪರಿಗಣಿಸಬಹುದು ಎಂದು ಹೇಳಿದ್ದರು.
ಇದನ್ನೂ ಓದಿ : 15 ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಿಗೆ ಕೇಂದ್ರದ ಎಚ್ಚರಿಕೆ; ಆ್ಯಪ್‌ಗಳು, ವೆಬ್‌ಸೈಟ್‌ಗಳ ನಿರ್ಬಂಧಕ್ಕೆ ಆದೇಶ
ಸಿದ್ಧಾರ್ಥ ಅವರನ್ನು ಬಿಎಸ್‌ಪಿಯಿಂದ ಆಗಸ್ಟ್ 2ರಂದು ಎರಡನೇ ಬಾರಿಗೆ ಉಚ್ಚಾಟಿಸಲಾಗಿತ್ತು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಇದಕ್ಕೂ ಮೊದಲು 2025ರ ಫೆಬ್ರವರಿಯಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ಬಳಿಕ ಮಾಯಾವತಿ ಅವರಿಗೆ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು.
ಅಶೋಕ್ ಸಿದ್ಧಾರ್ಥ ಅವರ ಪುತ್ರಿ ಪ್ರಜ್ಞಾ ಅವರು ಆಕಾಶ್ ಆನಂದ್ ಅವರನ್ನು 2023ರ ಮಾರ್ಚ್‌ನಲ್ಲಿ ವಿವಾಹವಾಗಿದ್ದಾರೆ. ಹೀಗಾಗಿ ಸಿದ್ಧಾರ್ಥ ಅವರು ಆಕಾಶ್ ಆನಂದ್ ಅವರ ಮಾವನಾಗಿದ್ದಾರೆ. ಆಕಾಶ್ ಆನಂದ್ ಅವರ ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿದಂತೆ ಮಾಯಾವತಿ ಇತ್ತೀಚೆಗೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಸೆಪ್ಟೆಂಬರ್ 3ರಂದು ಅವರನ್ನು ಬಿಎಸ್‌ಪಿಯ ಮುಖ್ಯ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ದೂರ ಇರಿಸಲಾಗಿತ್ತು.
ಈ ಎಲ್ಲಾ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಬಿಎಸ್‌ಪಿಯೊಳಗಿನ ನಾಯಕತ್ವ ಮತ್ತು ಆಕಾಶ್ ಆನಂದ್ ಅವರ ಭವಿಷ್ಯದ ಕುರಿತ ಬೆಳವಣಿಗೆಗಳು ಇದೀಗ ಮತ್ತಷ್ಟು ಕುತೂಹಲ ಮೂಡಿಸಿವೆ.
ಇದನ್ನೂ ನೋಡಿ :
