ಚಾಮರಾಜನಗರ: ಹನೂರು ತಾಲ್ಲೂಕಿನ ಮರಿಮಂಗಳ ಅರಣ್ಯ ಬೀಟ್ನಲ್ಲಿ ಕಾಡಂಚಿನ ತೋಮಿಯಾರ್ಪಾಳ್ಯದ ಮೂವರು ಅಮಾಯಕರು ಮೃತಪಟ್ಟಿರುವ ಪ್ರಕರಣವನ್ನು ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಆಗ್ರಹಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿ ‘ಎನ್ಕೌಂಟರ್’ ಹೆಸರಿನಲ್ಲಿ ನಡೆಸಿರುವ ಕಗ್ಗೊಲೆ ಎಂದು ಆರೋಪಿಸಿರುವ ಕೆಪಿಆರ್ಎಸ್, ಪ್ರಕರಣಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೂಡಲೇ ಬಂಧಿಸಬೇಕು. ವ್ಯವಸ್ಥಿತ ಪೂರ್ವಯೋಜನೆಯಿಂದ ಈ ಕೃತ್ಯ ನಡೆದಿದ್ದರೆ ಕೊಲೆ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದೆ.
ರಾಜ್ಯ ಸರ್ಕಾರ ತನ್ನ ಅಧೀನದ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ತನಿಖೆಯನ್ನು ಹಿಂಪಡೆದು, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು. ಮೃತಪಟ್ಟ ಕುಟುಂಬಗಳಿಗೆ ಕನಿಷ್ಠ ₹5 ಕೋಟಿ ಪರಿಹಾರ ಘೋಷಿಸಬೇಕು ಎಂದು ಕೆಪಿಆರ್ಎಸ್ ರಾಜ್ಯ ಸಮಿತಿ ಒತ್ತಾಯಿಸಿದೆ.
ಕಾಡಂಚಿನಲ್ಲಿ ವಾಸಿಸುವ ಜನರು ಅರಣ್ಯ ಇಲಾಖೆಯ ಮೂಲಕ ಯಾವ ರೀತಿಯ ದಬ್ಬಾಳಿಕೆ ಹಾಗೂ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಎನ್ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳಂತೆ ಕೊಲೆ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಹೇಳಿದೆ.
ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರಾಷ್ಟ್ರೀಯ ಸಹ ಕಾರ್ಯದರ್ಶಿ ಡಿ. ರವೀಂದ್ರನ್, ಕೆಪಿಆರ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ. ನೇತೃತ್ವದ ರೈತ ಸಂಘದ ಉನ್ನತ ಮಟ್ಟದ ನಿಯೋಗ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಸಿಐಟಿಯು ಚಾಮರಾಜನಗರ ಜಿಲ್ಲಾ ನಾಯಕಿ ಶಾಂತಾ ಸೇರಿದಂತೆ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಮೃತರನ್ನು ಅಂಥೋಣಿ ಸ್ವಾಮಿ (45), ಸೆಬಾಸ್ಟಿನ್ ಡೇವಿಡ್ ಕುಮಾರ್ (35) ಹಾಗೂ ಪಿ. ಜಾನ್ ರೋಸ್ ಪೀಟರ್ (42) ಎಂದು ಗುರುತಿಸಲಾಗಿದೆ. ಅಂಥೋಣಿ ಸ್ವಾಮಿ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಸುಮಾರು 50 ನಾಟಿ ಹಸುಗಳನ್ನು ಸಾಕುತ್ತಿದ್ದರು. ಅವರ ಹಸು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಅದನ್ನು ಹುಡುಕಲು ತಮ್ಮ ಬಾಮೈದನೊಂದಿಗೆ ತೆರಳಿದ್ದರು. ಸೆಬಾಸ್ಟಿನ್ ಡೇವಿಡ್ ಕುಮಾರ್ ಕೇರಳದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹಸು ಹುಡುಕಲು ತೆರಳಿದ್ದವರಿಗೆ ಸಹಾಯ ಮಾಡಲು ಜಾನ್ ರೋಸ್ ಪೀಟರ್ ಕೂಡ ಅವರೊಂದಿಗೆ ತೆರಳಿದ್ದರು ಎಂದು ಕೆಪಿಆರ್ಎಸ್ ತಿಳಿಸಿದೆ.
ಈ ಘಟನೆಯ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ಮೃತ ಕುಟುಂಬಗಳಿಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಕೆಪಿಆರ್ಎಸ್ ರಾಜ್ಯ ಸಮಿತಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : ಹನೂರು ತಾಲ್ಲೂಕಿನ ಮರಿಮಂಗಳ ಅರಣ್ಯ ಬೀಟ್ ವ್ಯಾಪ್ತಿಯಲ್ಲಿ ಕಾಡಂಚಿನ ತೋಮಿಯಾರ್ಪಾಳ್ಯದ ಮೂವರು ವ್ಯಕ್ತಿಗಳು ಮೃತಪಟ್ಟ ಘಟನೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಎನ್ಕೌಂಟರ್ನಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಮೃತರು ಕಾಣೆಯಾಗಿದ್ದ ಹಸುವನ್ನು ಹುಡುಕಲು ಅರಣ್ಯ ಪ್ರದೇಶಕ್ಕೆ ತೆರಳಿದ್ದರು ಎಂದು ಕೆಪಿಆರ್ಎಸ್ ಹೇಳಿದೆ. ಘಟನೆಗೆ ಸಂಬಂಧಿಸಿದಂತೆ ಸತ್ಯಾಂಶವನ್ನು ಸಂಪೂರ್ಣವಾಗಿ ಹೊರತರಲು ಸ್ವತಂತ್ರ ನ್ಯಾಯಾಂಗ ತನಿಖೆ ಅಗತ್ಯ ಎಂದು ಸಂಘಟನೆ ಒತ್ತಾಯಿಸಿದ್ದು, ಮೃತ ಕುಟುಂಬಗಳಿಗೆ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.
