ಗೋವಾ: ವಿಧಾನಸಭೆ 2027ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಮೈತ್ರಿ ಸಾಧ್ಯತೆ ಕುರಿತು ಪ್ರಾಥಮಿಕ ಮಾತುಕತೆಗಳನ್ನು ಆರಂಭಿಸಿವೆ. ಇದೇ ವೇಳೆ, ಆಮ್ ಆದ್ಮಿ ಪಾರ್ಟಿ (ಆಪ್) ಕೂಡ ಬಿಜೆಪಿಯನ್ನು ಎದುರಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಕೈಜೋಡಿಸಲು ಸಿದ್ಧತೆ ತೋರಿಸಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಿರೀಶ್ ಚೋಡಣ್ಕರ್ ಅವರು, ಜಿಎಫ್‌ಪಿ ಮುಖ್ಯಸ್ಥ ವಿಜಯ್ ಸರ್ದೇಸಾಯಿ ಅವರೊಂದಿಗೆ ಮೈತ್ರಿ ಪುನರುಜ್ಜೀವನದ ಕುರಿತು ಚರ್ಚೆ ನಡೆಸಿರುವುದಾಗಿ ಭಾನುವಾರ ತಿಳಿಸಿದ್ದಾರೆ. ಇಬ್ಬರು ನಾಯಕರು ಶನಿವಾರ ದಕ್ಷಿಣ ಗೋವಾದ ಫತೋರ್ಡಾದಲ್ಲಿ ಭೇಟಿಯಾಗಿ ಈ ಕುರಿತು ಚರ್ಚಿಸಿದರು.
2022ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜಿಎಫ್‌ಪಿ ಒಟ್ಟಿಗೆ ಸ್ಪರ್ಧಿಸಿದ್ದವು.
ಇದನ್ನೂ ಓದಿ: ಸೆಯುಟಾ ವಲಸೆ ಸಂಕಷ್ಟ: ಸಾವಿರಾರು ಮಂದಿ ಮೊರಾಕ್ಕೊಗೆ ಮರಳಿಕೆ
ಈ ಚರ್ಚೆಗಳನ್ನು ‘ಪ್ರಾಥಮಿಕ’ ಎಂದು ವಿವರಿಸಿದ ಚೋಡಣ್ಕರ್, ಮೈತ್ರಿ ಕುರಿತು ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.
“ಸೀಟು ಹಂಚಿಕೆ ಸೇರಿದಂತೆ ಎಲ್ಲಾ ವಿಚಾರಗಳನ್ನು ಅಂತಿಮಗೊಳಿಸಲು ಮತ್ತೊಮ್ಮೆ ಸಭೆ ನಡೆಯಲಿದೆ,” ಎಂದು ಅವರು ಹೇಳಿದ್ದಾರೆ.
ಇದನ್ನಾಲದೆ, ಆಮ್ ಆದ್ಮಿ ಪಾರ್ಟಿಯ ಗೋವಾ ಘಟಕವೂ ಮೈತ್ರಿ ಸಾಧ್ಯತೆ ಕುರಿತು ಆಂತರಿಕ ಚರ್ಚೆಗಳನ್ನು ಆರಂಭಿಸಿದೆ. ರಾಜ್ಯಾಧ್ಯಕ್ಷ ವಾಲ್ಮೀಕಿ ನಾಯಕ್ ಅವರು ಶನಿವಾರ, ಇತರ ಪಕ್ಷಗಳೊಂದಿಗೆ ಮೈತ್ರಿ ಆಯ್ಕೆಗಳನ್ನು ಪರಿಶೀಲಿಸಲು ರಚಿಸಲಾದ ಸಮಿತಿಯೊಂದಿಗೆ ಸಭೆ ನಡೆಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ನಾಯಕ್, “ರಾಜ್ಯದಲ್ಲಿನ ಭ್ರಷ್ಟ ಬಿಜೆಪಿ ಸರ್ಕಾರವನ್ನು ಸೋಲಿಸುವುದೇ ನಮ್ಮ ಪ್ರಮುಖ ಗುರಿ,” ಎಂದು ಹೇಳಿ, ಮೈತ್ರಿಗೆ ಪಕ್ಷ ತೆರೆದ ಮನಸ್ಸು ಹೊಂದಿದೆ ಎಂದು ತಿಳಿಸಿದ್ದಾರೆ.
40 ಸದಸ್ಯರ ಗೋವಾ ವಿಧಾನಸಭೆಗೆ ಚುನಾವಣೆಗಳು 2027ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯುವ ನಿರೀಕ್ಷೆಯಿದೆ.
ಪ್ರಸ್ತುತ ಬಿಜೆಪಿ ಸರ್ಕಾರವು 33 ಶಾಸಕರ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿದೆ. ಇದರಲ್ಲಿ ಬಿಜೆಪಿಯ 28 ಶಾಸಕರು, ಮೂವರು ಸ್ವತಂತ್ರರು ಹಾಗೂ ಮಹಾರಾಷ್ಟ್ರವಾದಿ ಗೊಮಂತಕ್ ಪಾರ್ಟಿಯ (ಎಂಜಿಪಿ) ಇಬ್ಬರು ಶಾಸಕರು ಸೇರಿದ್ದಾರೆ.
2022ರ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದಿದ್ದು, ನಂತರ ಕಾಂಗ್ರೆಸ್‌ನ ಎಂಟು ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತ್ತು.
ಈಗ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 3 ಶಾಸಕರು, ಆಪ್‌ಗೆ 2 ಶಾಸಕರು ಇದ್ದರೆ, ಜಿಎಫ್‌ಪಿ ಮತ್ತು ರೆವಲ್ಯೂಷನರಿ ಗೋವಾನ್ಸ್ ಪಾರ್ಟಿ (ಆರ್‌ಜಿಪಿ) ತಲಾ ಒಬ್ಬ ಶಾಸಕರನ್ನು ಹೊಂದಿವೆ.
ಇದಕ್ಕೂ ಮುನ್ನ ಬಿಜೆಪಿ 2027ರ ಚುನಾವಣೆಯಲ್ಲಿ ಕನಿಷ್ಠ 30 ಸ್ಥಾನಗಳನ್ನು ಗೆದ್ದು, ನಾಲ್ಕನೇ ಬಾರಿ ಸರಕಾರ ರಚಿಸುವ ಗುರಿಯನ್ನು ಘೋಷಿಸಿತ್ತು.
ಇದನ್ನೂ ನೋಡಿ: ಕನಿಷ್ಠ ವೇತನ ಪುನರ್‌ಪರಿಶೀಲಿಸಿದರೆ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ! | ಕಾರ್ಮಿಕರ ಎಚ್ಚರಿಕೆ Janashakthi Media
