ಮೆಟಾ, ಗೂಗಲ್, ಎಕ್ಸ್‌ಗೆ ಸಮನ್ಸ್: ಆಗಸ್ಟ್ 3ರಂದು ಮಹತ್ವದ ಸಭೆ
ನವದೆಹಲಿ: ಸಾಮಾಜಿಕ ಮತ್ತು ಡಿಜಿಟಲ್ ವೇದಿಕೆಗಳ ನಿಯಂತ್ರಣ ಕುರಿತು ಚರ್ಚಿಸಲು ಸಂಸತ್ತಿನ ಸ್ಥಾಯಿ ಸಮಿತಿಯು ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳಾದ ಮೆಟಾ, ಗೂಗಲ್, ಎಕ್ಸ್ (ಹಳೆಯ ಟ್ವಿಟ್ಟರ್) ಮತ್ತು ಸ್ನ್ಯಾಪ್‌ಚಾಟ್ ಪ್ರತಿನಿಧಿಗಳನ್ನು ಆಗಸ್ಟ್ 3ರಂದು ಸಭೆಗೆ ಕರೆದಿದೆ. ಜೊತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಾಗೂ ಗೃಹ ಸಚಿವಾಲಯದ ಅಧಿಕಾರಿಗಳಿಗೂ ಸಮನ್ಸ್ ನೀಡಲಾಗಿದೆ.
ಇತ್ತೀಚೆಗೆ, ಜಂತರ್ ಮಂತರಲ್ಲಿ ನಡೆದ NEET-UG ಪ್ರಶ್ನೆಪತ್ರ ಸೋರಿಕೆ ಸೇರಿದಂತೆ ವಿವಿಧ ವಿಚಾರಗಳ ವಿರುದ್ಧ Cockroach Janta Party (CJP) ನಡೆಸಿದ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ ಒಗ್ಗೂಡಿಸಲು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ಈ ಹಿನ್ನೆಲೆ ಈ ಸಭೆ ಮಹತ್ವ ಪಡೆದುಕೊಂಡಿದೆ.
36 ದಿನಗಳ ಕಾಲ ನಡೆದ ಈ ಹೋರಾಟ ಸರ್ಕಾರ ಪ್ರಮುಖ ಬೇಡಿಕೆಗಳನ್ನು ಅಂಗೀಕರಿಸಿದ ಬಳಿಕ ಶನಿವಾರ ಅಂತ್ಯಗೊಂಡಿತ್ತು. ಇದೇ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಪೇಪರ್ ಲೀಕ್ ಸಮಸ್ಯೆಗೆ ‘ಔಟ್ ಆಫ್ ಬಾಕ್ಸ್’ ಪರಿಹಾರ ಅಗತ್ಯ: ಸುಪ್ರೀಂ ಕೋರ್ಟ್
ಮಂಗಳವಾರ ಹೊರಡಿಸಿದ ನೋಟಿಸ್ ಪ್ರಕಾರ, ಸಭೆಯ ಕಾರ್ಯಸೂಚಿಯಲ್ಲಿ “ಸಾಮಾಜಿಕ ಮತ್ತು ಡಿಜಿಟಲ್ ವೇದಿಕೆಗಳು ಹಾಗೂ ಅವುಗಳ ನಿಯಂತ್ರಣ” ವಿಷಯದಡಿ MeitY, ಗೃಹ ಸಚಿವಾಲಯ ಹಾಗೂ ಸ್ನ್ಯಾಪ್‌ಚಾಟ್, ಗೂಗಲ್, ಎಕ್ಸ್ ಮತ್ತು ಮೆಟಾ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ) ಪ್ರತಿನಿಧಿಗಳಿಂದ ವಿವರ ಪಡೆಯುವ ಕಾರ್ಯಕ್ರಮ ಇದೆ.
ಸಂಸತ್ತಿನ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಬಳಕೆದಾರರ ಗೌಪ್ಯತೆಯನ್ನು ಹೇಗೆ ರಕ್ಷಿಸಲಾಗುತ್ತದೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಈ ಕಂಪನಿಗಳು ಹೇಗೆ ಸಹಕರಿಸುತ್ತವೆ ಎಂಬುದನ್ನು ವಿವರಿಸಲು ಕಂಪನಿಗಳನ್ನು ಕರೆದಿರುವುದಾಗಿ ತಿಳಿಸಿದ್ದಾರೆ.
ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಅವರು, “ಆಗಸ್ಟ್ 3, 2026ರಂದು ಸಂಜೆ 4 ಗಂಟೆಗೆ ನಮ್ಮ ಐಟಿ ಮತ್ತು ಸಂವಹನ ಸಂಸತ್ ಸಮಿತಿ ಮೆಟಾ (ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸಾಪ್), ಎಕ್ಸ್ (ಟ್ವಿಟ್ಟರ್), ಸ್ನ್ಯಾಪ್‌ಚಾಟ್ ಮತ್ತು ಗೂಗಲ್ ಕಂಪನಿಗಳನ್ನು ಸಮನ್ಸ್ ನೀಡಿದೆ,” ಎಂದು ಹೇಳಿದ್ದಾರೆ.
“ಮಹಿಳೆಗಳು, ಮಕ್ಕಳು, ರೈತರು, ಗ್ರಾಮೀಣ ಜನರು, ಕಾರ್ಮಿಕರು ಹಾಗೂ ಸಾಮಾನ್ಯ ಜನರ ಗೌಪ್ಯತೆ ಹೇಗೆ ರಕ್ಷಿಸಲಾಗುತ್ತದೆ? ಸರ್ಕಾರದ ಸಾರ್ವಜನಿಕ ಸುವ್ಯವಸ್ಥೆಯನ್ನು ಈ ಕಂಪನಿಗಳು ಹೇಗೆ ಖಚಿತಪಡಿಸುತ್ತವೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ ರಾಜೀನಾಮೆ: ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಗೆಲುವು; ಸಂಘಟನೆಗಳಿಂದ ಸಂಭ್ರಮಾಚರಣೆ
