ಪ್ರಾಯೋಜಿತ ಆಚರಣೆಗಳ ಅಪಾಯಕಾರಿ ಬೆಳವಣಿಗೆ

ಸಂಪುಟ 10 ಸಂಚಿಕೆ 3 ಜನವರಿ 17 , ಅತಿಥಿ ಅಂಕಣ – ಪ್ರೊ|| ರಾಜೇಂದ್ರ ಚೆನ್ನಿ

ವಿವೇಕಾನಂದರ ಚಿಂತನೆಯ ಒಂದು ಅರ್ಥಪೂರ್ಣವಾದ ಭಾಗವು ಅವರ ಕಾಲದ ಭಾರತದ ಸಾಮಾಜಿಕ ಸ್ಥಿತಿಗಳ ಬಗ್ಗೆ ಇದೆ. ಅದರ ಬಗ್ಗೆ ಅವರ ತೀವ್ರವಾದ ವಿಮರ್ಶೆ, ಬದಲಾವಣೆಯನ್ನು ಬಯಸುವ ಬದ್ಧತೆ ಇವುಗಳು ಅಪೂರ್ವವಾಗಿವೆ.  ಪ್ರಶ್ನೆಯೆಂದರೆ ಸದ್ಯದ ಸ್ಥಿತಿಯಲ್ಲಿ ನಾವು ವಿವೇಕಾನಂದರ ವ್ಯಕ್ತಿತ್ವದ ಈ ಮುಖವನ್ನು ಪ್ರಬಲವಾಗಿ ಬಿಂಬಿಸುವ ಸಿದ್ಧತೆ ಮಾಡಿಕೊಂಡಿದ್ದೇವೆಯೆ? ಇಲ್ಲದಿದ್ದರೆ ವಿವೇಕಾನಂದರ “ಬಲಿಷ್ಠ ಭಾರತ, ಧೈರ್ಯಶಾಲಿ ಶೂರ ಹಿಂದೂ” ಈ ಪರಿಕಲ್ಪನೆಗಳೇ ಹೆಚ್ಚಿನ ಪ್ರಚಾರ ಪಡೆದು ಬಲಪಂಥೀಯ ಸಿದ್ಧಾಂತಗಳಿಗೆ ಸಮರ್ಥನೆ ನೀಡುವ ಅಪಾಯಗಳೇ ಹೆಚ್ಚು.

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸರಕಾರ ಪ್ರಾಯೋಜಿತ ಆಚರಣೆಗಳು ಉಂಟುಮಾಡಿದ ವಿವಾದಗಳು, ಗಲಭೆ ಹಾಗೂ ಹಿಂಸೆಯ ಬಗ್ಗೆ ಗಂಭೀರವಾಗಿ ನಾವು ಯೋಚಿಸಬೇಕಿದೆ.  ಇವುಗಳನ್ನು ಒಂದೊಂದಾಗಿ ಚರ್ಚಿಸಬಹುದು; ಆದರೆ ಇವೆಲ್ಲವೂ ಸೇರಿ ಒಂದು ಅಪಾಯಕಾರಿಯಾದ ಬೆಳವಣಿಗೆಯನ್ನು ಸೂಚಿಸುತ್ತವೆ. ಅದೇನೆಂದರೆ ಪ್ರಭುತ್ವವು ಧರ್ಮ, ಇತಿಹಾಸ ಹಾಗೂ ಸಂಸ್ಕøತಿಯ ವಿಷಯಗಳಲ್ಲಿ ಅತಿಕ್ರಮ ಪ್ರವೇಶವನ್ನು ಮಾಡುತ್ತಿದೆ.  ಮತ್ತು ಅದರಿಂದಾಗಿ ತನ್ನ ಸೆಕ್ಯೂಲರ್ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಒಂದು ಸಮಾಜವು ಆರೋಗ್ಯಕರ ವಾಗಿರಬೇಕೆಂದರೆ ಪ್ರಭುತ್ವದ ಸಂಸ್ಥೆಗಳು ಹಾಗೂ ಅಧಿಕಾರದ ಆಚೆಗೆ ಇರುವ ನಾಗರೀಕ ಸಮುದಾಯವು ಧರ್ಮ, ಇತಿಹಾಸ, ಸಾಹಿತ್ಯ ಹಾಗೂ ಸಂಸ್ಕøತಿಯ ವಲಯಗಳ ಬಗ್ಗೆ ಸಾರ್ವಜನಿಕ ಚರ್ಚೆ, ಸಂವಾದ ಇವುಗಳ ಮೂಲಕ ತನ್ನ ನಿಲುವುಗಳನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳುವಂತಿರಬೇಕು.

ಜನಮಾನಸದ ನೆನಪುಗಳನ್ನು ಮರೆತ ಟಿಪ್ಪು ಜಯಂತಿ

ಈಗ ಕರ್ನಾಟಕದಲ್ಲಿ ಆಗುತ್ತಿರುವುದೆಂದರೆ ಪ್ರಭುತ್ವವೇ ಈ ವಲಯಗಳಲ್ಲಿ ನಿರ್ದೇಶನಗಳನ್ನು ಕೊಡುತ್ತಿದೆ. ಅದೂ ಆಚರಣೆಗಳನ್ನು ನಡೆಸಬೇಕು ಎನ್ನುವ ಆದೇಶಗಳ ಮೂಲಕ.  ಉದಾಹರಣೆಗೆ ಟಿಪ್ಪೂ ಜಯಂತಿಯ ವಿವಾದವನ್ನು ನೋಡೋಣ. ಟಿಪ್ಪೂನನ್ನು ಕುರಿತ ವಿವಾದಗಳು ಹೊಸದೇನಲ್ಲ. ಬ್ರಿಟಿಷ್ ವಸಾಹತುಶಾಹಿಗೆ ಅವನು ನಿದ್ದೆಯಲ್ಲೂ ತಲ್ಲಣಗೊಳಿಸುವ ದುಃಸ್ವಪ್ನನಂತಾಗಿದ್ದ. ಬ್ರಿಟಿಷ್ ಆಡಳಿತಗಾರರು, ಸೈನಿಕರು, ಪಾದ್ರಿಗಳು, ಇತಿಹಾಸಕಾರರು, ಕಾದಂಬರಿಕಾರರು, ಚಿತ್ರಕಲಾವಿ ದರು ಅವನು ಬದುಕಿದ ಕಾಲದಲ್ಲಿ ಮತ್ತು ಆನಂತರ ಅವನನ್ನು ಒಂದು ಗೀಳಾಗಿಸಿಕೊಂಡಿದ್ದರು.  ಅವನನ್ನು ಮನುಷ್ಯರೂಪದ ರಾಕ್ಷಸನನ್ನಾಗಿ ಒಂದು ದಂತಕತೆಯನ್ನೇ ನಿರ್ಮಿಸಿಬಿಟ್ಟರು.  ಅದರ ಸಮರ್ಥನೆಗಾಗಿ ಚರಿತ್ರೆಯನ್ನೇ ಸೃಷ್ಟಿಸಿದರು. ಅವರ ಭಯಗಳು, ಆತಂಕಗಳು ಚರಿತ್ರೆಯ ರೂಪವನ್ನು ತಾಳಿ ನಮ್ಮ ವಸಾಹತು ಪ್ರಜ್ಞೆಯನ್ನು ಪ್ರವೇಶಮಾಡಿದವು.  ಇದು ಸಾಲದು ಎನ್ನುವಂತೆ ಕ್ರಿಶ್ಚಿಯನ್ ಹಾಗೂ ಹಿಂದೂ ಧಾರ್ಮಿಕ ನೆಲೆಗಳಿಂದಲೂ ಟಿಪ್ಪುವಿನ ಬಗ್ಗೆ ಇದೇ ಬಗೆಯ ಕರಾಳ ಚಿತ್ರಣಗಳು ಚಾಲ್ತಿಗೆ ಬಂದವು.  ಅದೇ ಹೊತ್ತಿಗೆ ಕನ್ನಡ ನಾಡಿನ ಲಾವಣಿಗಳಲ್ಲಿ, ಹಾಡುಗಳಲ್ಲಿ ಈ ಚಿತ್ರಣಕ್ಕೆ ವಿರುದ್ಧವಾದ, ಅವನನ್ನು ಧೀರ ನಾಯಕನನ್ನಾಗಿ ಹಾಗೂ ದುರಂತ ಪಾತ್ರವಾಗಿ ಬಿಂಬಿಸಲಾಯಿತು.

ಇತ್ತೀಚಿನ ಟಿಪ್ಪೂ ವಿವಾದದಲ್ಲಿ ಪರ ಹಾಗೂ ವಿರೋಧವಾಗಿ ಬರೆದ, ಮಾತನಾಡಿದ ಇತಿಹಾಸಕಾರರು ಸಂಪೂರ್ಣವಾಗಿ ಹೊರಗಿಟ್ಟಿ ದ್ದೆಂದರೆ ಈ ಬಗೆಯ ಮೌಖಿಕ ಇತಿಹಾಸ ಹಾಗೂ ಜನಮಾನಸದ ನೆನಪುಗಳನ್ನು, ಇರಲಿ.  ನಾನು ಇಲ್ಲಿ ಚರ್ಚೆ ಮಾಡುತ್ತಿರುವುದು ಪ್ರಭುತ್ವ (ಸರಕಾರವು) ಆದೇಶದ ಮೂಲಕ ಟಿಪ್ಪೂ ಜಯಂತಿಯನ್ನು ಆಚರಿಸುವ ಫರ್ಮಾನು ಹೊರಡಿಸಿದ್ದು.  ಈ ತೀರ್ಮಾನ ಅವಸರದ್ದು ಹಾಗೂ ಸಿನಿಕತನದ್ದು ಎಂದು ನನಗೆ ಅನ್ನಿಸಿದೆ. ಅದೊಂದು ರಾಜಕಾರಣದ ಕ್ರಮವಾಗಿತ್ತು.  ಟಿಪ್ಪೂವಿನ ಬಗೆಗಿನ ದ್ವೇಷವನ್ನು ಕೋಮುರಾಜಕಾರಣಕ್ಕಾಗಿ ಬಲಪಂಥೀಯ ಸಂಘಟನೆಗಳ ಬಳಸಿಕೊಳ್ಳುತ್ತ ಬಂದಿರುವುದು ಸರಕಾರಕ್ಕೆ ಗೊತ್ತಿಲ್ಲವೆ?

1999 ರಲ್ಲಿ ಶಿವಮೊಗ್ಗೆಯಲ್ಲಿ ಟಿಪ್ಪೂವಿನ ಬಗ್ಗೆ ಒಂದು ಕಾರ್ಯಕ್ರಮವನ್ನು ರೂಪಿಸಿದಾಗ ಅದರ ಹಿಂದಿನ ದಿನ ನನ್ನ ಮನೆಗೇ ಪೋಲೀಸರ ಒಂದು ದೊಡ್ಡ ಟೀಮ್ ಬಂದು, ನಾನು ಭಾಷಣ ಮಾಡಬಾರದೆಂದು ಬುದ್ಧಿ ಹೇಳಲು ಪ್ರಯತ್ನಿಸಿತು. ಕಾರ್ಯಕ್ರಮದ ಮುಖ್ಯ ರೂವಾರಿಯಾಗಿದ್ದ ಗೆಳೆಯ ಸುಂದರ್ ಅವರಿಗೂ ಎಚ್ಚರಿಕೆ ಕೊಡಲಾಗಿತ್ತು. ಇಂಥ ಘಟನೆಗಳು ಕರ್ನಾಟಕದ ಉದ್ದಕ್ಕೂ ನಡೆದಿದ್ದವು.  ಆ ವಿವಾದದ ನಂತರ ಸರಕಾರದ ಯಾವುದೇ ಸಂಸ್ಥೆಗಳು (ಅಂದರೆ ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ ಇತ್ಯಾದಿಗಳು) ಟಿಪ್ಪೂನ ಬಗ್ಗೆ ವಸ್ತುನಿಷ್ಠ ಇತಿಹಾಸದ ಬರಹಗಳನ್ನು ಪ್ರೋತ್ಸಾಹಿಸಲಿಲ್ಲ. ಈಗ ದಿಢೀರನೆ ಟಿಪ್ಪೂ ಜಯಂತಿಯನ್ನು ಆಚರಿಸುವಂತೆ ಫರ್ಮಾನು ಹೊರಡಿಸಿದ್ದು ರಾಜಕಾರಣ ಮಾತ್ರ. ಸರಕಾರವೇ ಅದು ಮುಸ್ಲಿಮರ ಕಾರ್ಯಕ್ರಮವೆನ್ನುವ ಧೋರಣೆಯನ್ನು ತನ್ನ ನೌಕರಶಾಹಿಯ ಮೂಲಕ ತೋರಿಸಿತು.  ನಿರೀಕ್ಷೆಯಂತೆಯೇ ಬಲಪಂಥೀಯ ಸಂಘಟನೆಗಳು ಇದನ್ನು ಹಿಂಸೆಗೆ ಪರಿವರ್ತಿಸಿದವು. ಅನೇಕ ವರ್ಷಗಳಿಂದ ಬಲಪಂಥೀಯ ಸಿದ್ಧಾಂತದ ವಿರುದ್ಧ ಗಟ್ಟಿಯಾಗಿ ಮಾತನಾಡುತ್ತ ಬಂದಿರುವ ಗಿರೀಶ್ ಕಾರ್ನಾಡರ ಮೇಲೆ ರಾಜ್ಯದ ಬಲಾಢ್ಯ ಜಾತಿಯೊಂದನ್ನು ಬಳಸಿಕೊಂಡು ಹಗೆ ತೀರಿಸಿಕೊಂಡವು.

ಆಚರಣೆ ಬಿಂಬಿಸಿದ ‘ಅನುಭಾವಿ ಋಷಿ’ ಕುವೆಂಪು

ಇದಾದ ಕೂಡಲೇ ಅಷ್ಟೇ ಅವಸರವಾಗಿ ಕುವೆಂಪು ಅವರ ಜನ್ಮದಿನೋತ್ಸವವನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲು ಆದೇಶ ಹೊರಟಿತು. ಕುವೆಂಪು ಕನ್ನಡ ಮನಸ್ಸಿನ ಅತ್ಯಂತ ಮುಖ್ಯ ಭಾಗವೇ ಆಗಿರುವುದರಿಂದ ಅವರು ಬರೆಯಲು ಆರಂಭಿಸಿದ ಕಾಲದಿಂದಲೇ ಕನ್ನಡ ಸಮಾಜವು ಅವರನ್ನು ಓದುತ್ತ, ಚರ್ಚಿಸುತ್ತ ಬಂದಿದೆ. ನಮ್ಮ ಎಲ್ಲಾ ತಲೆಮಾರುಗಳಿಗೆ ಕುವೆಂಪು ಅರ್ಥಪೂರ್ಣವಾದ ಸಾಂಸ್ಕøತಿಕ ಬಂಡಾಯದ ಮಹಾನ್ ಸಂಕೇತವಾಗಿದ್ದಾರೆ. ವೈಚಾರಿಕ ಸ್ವಾತಂತ್ರ್ಯದ ರೂಪಕವಾಗಿದ್ದಾರೆ. ಆದರೆ ನಾನು ನೋಡಿದ ಹಾಗೆ “ವಿಶ್ವಮಾನವ ಆಚರಣೆ”ಗಾಗಿ ಅವಸರದಲ್ಲಿ ಏರ್ಪಾಡಾದ ಅನೇಕ ಕಾರ್ಯಕ್ರಮಗಳಲ್ಲಿ ಕುವೆಂಪು ಅವರನ್ನು ಕೇವಲ ಆಧ್ಯಾತ್ಮಕ್ಕೆ, ಅನುಭಾವಕ್ಕೆ ಇಳಿಸಿ ಒಬ್ಬ ಋಷಿಯಾಗಿ ಬಿಂಬಿಸಲಾಯಿತು. ನಮ್ಮ ಚರಿತ್ರೆಯನ್ನು ಬಾಧಿಸಿದ ವರ್ಣ, ಜಾತಿ, ಮೂಢನಂಬಿಕೆ, ಅಸಮಾನತೆ, ಪುರೋಹಿತಶಾಹಿ ಇವುಗಳ ವಿರುದ್ಧ ಅವರ ಬರಹವು ಅತ್ಯಂತ ಪ್ರಬಲವಾದ ಪ್ರತಿರೋಧವಾಗಿತ್ತು ಎನ್ನುವುದನ್ನು ಪ್ರಧಾನವಾಗಿ ಚರ್ಚಿಸಲಾಗಲಿಲ್ಲ. ನಮ್ಮ ವಿಶ್ವವಿದ್ಯಾನಿಲಯದಲ್ಲಿಯೇ ಮಾತನಾಡಿದ ಪ್ರಖ್ಯಾತ ವಿದ್ವಾಂಸರೊಬ್ಬರು ರಾಮಕೃಷ್ಣ ಪರಮಹಂಸರು, ಉಪನಿಷತ್ತುಗಳು ಇವುಗಳ ಪ್ರಭಾವದಲ್ಲಿ ಕುವೆಂಪು “ಹಿಂದೂ ರಾಷ್ಟ್ರಕ್ಕೆ” ಸಮನ್ವಯತೆಯನ್ನು ತಂದುಕೊಟ್ಟರೆಂದು ವಾದಿಸಿದರು.

ಈಗಾಗಲೇ ಇಡೀ ಒಂದು ವಾರದವರೆಗೆ ವಿವೇಕಾನಂದರ ಕುರಿತು ಎಲ್ಲಾ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಇನ್ನೊಂದು ಫರ್ಮಾನು ಬಂದಿದೆ.  ಭಾರತದ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ವಿವೇಕಾನಂದರು ಒಬ್ಬರು ಎನ್ನುವುದು ನಿರ್ವಿವಾದ. ಆದರೆ ಬಲಪಂಥೀಯ ಸಂಘಟನೆಗಳು ವಿವೇಕಾನಂದರ ಸಮಾಜಮುಖಿಯಾದ ಹಾಗೂ ಪುರೋಹಿತಶಾಹಿ ವಿರುದ್ಧವಾದ ಚಿಂತನೆಯನ್ನು ಮರೆಮಾಚಿ ಅವರನ್ನು ಬಲಿಷ್ಠ ಹಿಂದೂ ರಾಷ್ಟ್ರದ ವಕ್ತಾರರನ್ನಾಗಿ, ಬಲಪಂಥೀಯ ಯುವಕರಿಗೆ ಒಂದು ಮೂರ್ತಿಯಾಗಿ (ಐಕಾನ್) ಪರಿವರ್ತಿಸಿಬಿಟ್ಟಿವೆ. ಈ ಹಿಂದೆ ಬಿ.ಜೆ.ಪಿ. ಅಧಿಕಾರದಲ್ಲಿದ್ದಾಗ ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ವಿವೇಕಾನಂದರ ಭಾವಚಿತ್ರವನ್ನು ಎಲ್ಲಿಡಬೇಕು, ಹೇಗೆ ಎಲ್ಲರೂ ಹೂವಿನ ಪಕಳೆಗಳನ್ನು ಹೇಗೆ ಅರ್ಪಿಸಬೇಕು ಎನ್ನುವ ವಿವರಗಳನ್ನು ಕೊಡಲಾಗಿತ್ತು. ಈಗ ಸರಕಾರ ಪ್ರಾಯೋಜಿತ ಒಂದು ವಾರದ ಕಾರ್ಯಕ್ರಮಗಳಲ್ಲಿ ಬಲಪಂಥೀಯ ವಾಗ್ಮಿಗಳು ಮಿಂಚಲಿದ್ದಾರೆ. ವಿವೇಕಾನಂದರ ಬಗ್ಗೆ ಸಮಗ್ರವಾದ ಓದು, ಚರ್ಚೆ ಇವುಗಳು ಅಸಾಧ್ಯ. ಏಕೆಂದರೆ ಸರಕಾರಕ್ಕೆ ಕೂಡ ಬೇಕಾಗಿರುವುದು ಆಚರಣೆಗಳು ಮಾತ್ರ.

ವಿವೇಕಾನಂದರ ಪರ್ಯಾಯ ಪ್ರತಿಮೆಗೆ ಪೂರ್ವಸಿದ್ಧತೆ ಇದೆಯೇ?

ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಯಾವುದನ್ನು ಆಚರಿಸಬೇಕು ಎನ್ನುವ ನಿರ್ದೇಶನಗಳನ್ನು ಯಾವ ಅಧಿಕಾರದ ಮೇಲೆ ನೀಡುತ್ತದೆಯೆನ್ನುವುದು ಅರ್ಥವಾಗದ ವಿಷಯ.  ಅದರಲ್ಲೂ ಸೂಚನೆಯಲ್ಲ, ಅದೇಶದ ರೀತಿಯಲ್ಲಿ. ವಿವೇಕಾನಂದರ ಕುರಿತು ಕಾರ್ಯಕ್ರಮಗಳನ್ನು ನೇರವಾಗಿ ಮುಖ್ಯಮಂತ್ರಿಗಳೇ ಉಸ್ತುವಾರಿ ವಹಿಸುತ್ತಾರೆ, ತಕ್ಷಣ ಕಾರ್ಯಕ್ರಮದ ವಿವರಗಳನ್ನು ತಿಳಿಸಿ ಎಂದು ಆದೇಶ ಬಂದಿದೆ. ಇಲ್ಲಿರುವ ತಾತ್ವಿಕ ಪ್ರಶ್ನೆಗಳೆಂದರೆ, ವಿವೇಕಾನಂದರನ್ನು ಬಲಪಂಥೀಯ ಸಿದ್ಧಾಂತಗಳ ಪ್ರತಿಮೆಯನ್ನಾಗಿ ಪರಿವರ್ತಿಸಲಾಗಿದೆಯಾದ್ದರಿಂದ ಅದನ್ನು ಮುಖ್ಯಮಂತ್ರಿಗಳು ಅಮೂಲಾಗ್ರವಾಗಿ ಬದಲಾಯಿಸುವ ಸಿದ್ಧತೆ ಮಾಡಿಕೊಂಡಿದ್ದಾರೆಯೆ? ಅದಕ್ಕಾಗಿ ಯಾವುದೇ ಪೂರ್ವಸಿದ್ಧತೆಗಳನ್ನು ಯಾಕೆ ಮಾಡಿರಲಿಲ್ಲ?  ‘ಬಲಿಷ್ಠ ಹಿಂದೂ ರಾಷ್ಟ್ರ’, ‘ವಿಶ್ವದ ನಾಗರೀಕತೆಗಳಿಗೆ ಆಧ್ಯಾತ್ಮಿಕ ಗುರುವಾದ ಭಾರತ’ ಇಂಥ ಸಂಕಥನಗಳಿಗೆ ಸುಲಭವಾಗಿ ದಕ್ಕುವ ವಿವೇಕಾನಂದರ ಯಾವ ಪರ್ಯಾಯವಾದ ಪ್ರತಿಮೆಯನ್ನು ಕೊಡಲು ಸರಕಾರವು ಸಿದ್ಧವಾಗಿದೆ?  ಈ ಸಿದ್ಧತೆಯಿಲ್ಲದ್ದರಿಂದ ಬಲಪಂಥೀಯ ಧೋರಣೆಗಳಿಗೆ ಸುಲಭವಾದ, ಪ್ರಭಾವಶಾಲಿಯಾದ ವೇದಿಕೆಯನ್ನು ಕಾಂಗ್ರೆಸ್ ಸರಕಾರ ಯಾಕೆ ನಿರ್ಮಿಸಿಕೊಡುತ್ತಿದೆ?  ಮುಖ್ಯವಾಗಿ, ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ನಮ್ಮ ಅವಿವೇಕಿ ಸರಕಾರಿ ಅಧಿಕಾರಿಗಳಿಗೆ ಸಾಫ್ಟ್ ಟಾರ್ಗೆಟ್ ಆಗುವುದನ್ನು ನಿಲ್ಲಿಸುವುದು ಹೇಗೆ? ಶಿಕ್ಷಣ ಸಂಸ್ಥೆಗಳು ಇರುವುದು ಸಂಶೋಧನೆ, ಚರ್ಚೆಗಳಿಗೆ ಹೊರತು ಆಚರಣೆಗಳಿಗಲ್ಲ.

ಇತಿಹಾಸದ ವ್ಯಕ್ತಿತ್ವಗಳನ್ನು ನಮ್ಮ ಇಂದಿನ ಸಿದ್ಧಾಂತಗಳಿಗೆ ತಕ್ಕಂತೆ ಅಥವಾ ಸದ್ಯದ ತುರ್ತುಗಳಿಗೆ ತಕ್ಕಂತೆ ಮರುಸೃಷ್ಟಿಸಿಕೊಳ್ಳುವುದು ಅಪ್ರೋಪ್ರಿಯೇಟ್(appropriate) ಮಾಡಿಕೊಳ್ಳುವುದು ನಿರಂತರವಾಗಿ ನಡೆಯುವ ಕೆಲಸವಾಗಿದೆ.  ಚರಿತ್ರೆಯ ವಸ್ತುನಿಷ್ಠತೆಯ ಬಗ್ಗೆ ನಾವು ಏನೇ ವಾದಿಸಿದರೂ ಈ ಕೆಲಸವನ್ನು ನಿಲ್ಲಿಸುವುದು ಅಸಾಧ್ಯ.  ಆದರೆ ಅಪಾಯಕಾರಿಯಾದ ನಿಲುವುಗಳು ಹಾಗೂ ಕ್ರಿಯೆಗಳ ಸಮರ್ಥನೆಗಾಗಿ ಇತಿಹಾಸವನ್ನು ಬಳಸಿಕೊಂಡಾಗ ಅದಕ್ಕೆ ಪ್ರತಿರೋಧವು ಅವಶ್ಯಕವಾಗುತ್ತದೆ.  ಪ್ರತಿರೋಧವು ಒಂದು ಇತ್ಯಾತ್ಮಕವಾದ ಸಾಂಸ್ಕøತಿಕ ರಾಜಕಾರಣದ ಸ್ವರೂಪದ್ದಾಗಿರಬೇಕಾಗುತ್ತದೆ. ಹಾಗೂ ಇದಕ್ಕೆ ಖಚಿತವಾದ ರಾಜಕೀಯದ ಬೆಂಬಲವಿರಬೇಕಾಗುತ್ತದೆ.  ಈಗ ಎದ್ದು ಕಾಣುತ್ತಿರುವುದು ಇವುಗಳ ಕೊರತೆ.

ವಿವೇಕಾನಂದರ ಬಗ್ಗೆ ಬಂದಿರುವ ಅತ್ಯುತ್ತಮ ಸಂಶೋಧನೆಯನ್ನು ಓದಿದರೆ ಅವರ ಬರಹ ಹಾಗೂ ವ್ಯಕ್ತಿತ್ವಗಳನ್ನು ಸದ್ಯದ ಕೋಮುವಾದಿ ಹಾಗೂ ಅಸಹಿಷ್ಣುತೆಯ ಸಂದರ್ಭದಲ್ಲಿ ಇತ್ಯಾತ್ಮಕವಾಗಿ ಬಳಸಿಕೊಳ್ಳುವುದು ಕಷ್ಟಕರವೆಂದು ತೋರುತ್ತದೆ. ಅವರ ಚಿಂತನೆಯು ಬಹುಪಾಲು ಓರಿಯಂಟಲಿಸ್ಟ್ ವೈಚಾರಿಕತೆಯ ಆಧಾರವಾದ ಪೂರ್ವ-ವರ್ಸಸ್-ಪಶ್ಚಿಮದ ಆಕೃತಿಯನ್ನು ಅವಲಂಬಿಸಿತ್ತು. ಹೀಗಾಗಿ ಭಾರತವು ಆಧ್ಯಾತ್ಮಿಕತೆ ಹಾಗೂ ಧಾರ್ಮಿಕತೆಯ ತಾಯಿಯೆಂದೂ ಹಾಗೂ ಪಶ್ಚಿಮವು ಇವುಗಳನ್ನು ಭಾರತದಿಂದ ಕಲಿಯಬೇಕೆಂದು ಅವರು ವಾದಿಸಿದರು. ಅದೇ ಹೊತ್ತಿಗೆ ತಮ್ಮ ಕಾಲದ ವಾಸ್ತವಿಕ ಭಾರತವು ದುರ್ಬಲವಾಗಿದೆ, ಪುರೋಹಿತಶಾಹಿಯಿಂದ, ಅಸ್ಪøಶ್ಯತೆಯಿಂದಾಗಿ ದುಸ್ಥಿತಿಯಲ್ಲಿದೆ ಎಂದೂ ವಾದಿಸಿದರು. ಇಷ್ಟಾದರೂ ಅಂತಿಮವಾಗಿ ಅದ್ವೈತ, ಆಧ್ಯಾತ್ಮಿಕತೆಗಳಿಂದಲೇ ಪ್ರಬಲ ಭಾರತವನ್ನು ಕಟ್ಟಬಹುದೆಂದು ನಂಬಿದ್ದರು.

ಅವರ ಚಿಂತನೆಯ ಒಂದು ಅರ್ಥಪೂರ್ಣವಾದ ಭಾಗವು ಅವರ ಕಾಲದ ಭಾರತದ ಸಾಮಾಜಿಕ ಸ್ಥಿತಿಗಳ ಬಗ್ಗೆ ಇದೆ. ಅದರ ಬಗ್ಗೆ ಅವರ ತೀವ್ರವಾದ ವಿಮರ್ಶೆ, ಬದಲಾವಣೆಯನ್ನು ಬಯಸುವ ಬದ್ಧತೆ ಇವುಗಳು ಅಪೂರ್ವವಾಗಿವೆ.  ಪ್ರಶ್ನೆಯೆಂದರೆ ಸದ್ಯದ ಸ್ಥಿತಿಯಲ್ಲಿ ನಾವು ವಿವೇಕಾನಂದರ ವ್ಯಕ್ತಿತ್ವದ ಈ ಮುಖವನ್ನು ಪ್ರಬಲವಾಗಿ ಬಿಂಬಿಸುವ ಸಿದ್ಧತೆ ಮಾಡಿಕೊಂಡಿದ್ದೇವೆಯೆ? ಇಲ್ಲದಿದ್ದರೆ ವಿವೇಕಾನಂದರ “ಬಲಿಷ್ಠ ಭಾರತ, ಧೈರ್ಯಶಾಲಿ ಶೂರ ಹಿಂದೂ” ಈ ಪರಿಕಲ್ಪನೆಗಳೇ ಹೆಚ್ಚಿನ ಪ್ರಚಾರ ಪಡೆದು ಬಲಪಂಥೀಯ ಸಿದ್ಧಾಂತಗಳಿಗೆ ಸಮರ್ಥನೆ ನೀಡುವ ಅಪಾಯಗಳೇ ಹೆಚ್ಚು. ಈ ಸೂಕ್ಷ್ಮಗಳನ್ನು ನೋಡಬಲ್ಲವರಿಗೆ ಕರ್ನಾಟಕ ಸರಕಾರ ಪ್ರಾಯೋಜನ ವಿವೇಕಾನಂದ ಸಪ್ತಾಹದ ಆಚರಣೆಯ ಬಗ್ಗೆ ಆತಂಕಗಳು ಇರುವುದು ಸಹಜವೇ ಆಗಿದೆ.

Donate Janashakthi Media

Leave a Reply

Your email address will not be published. Required fields are marked *