ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಹಿತಿ

ನವದೆಹಲಿ: ಭಾರತದಲ್ಲಿ ಬಹುಕಾಲದಿಂದಲೂ ಟ್ಯಾಬೂ ಆಗಿದ್ದ ಲೈಂಗಿಕ ಶಿಕ್ಷಣ ವಿಷಯವನ್ನು ಶಾಲಾ ಪಠ್ಯಕ್ರಮದಲ್ಲಿ ಅಧಿಕೃತವಾಗಿ ಸೇರಿಸುವತ್ತ ಮಹತ್ವದ ಹೆಜ್ಜೆ ಇಡಲಾಗಿದೆ. “ಕಾಂಪ್ರಿಹೆನ್ಸಿವ್ ಸೆಕ್ಸ್ ಎಜುಕೇಶನ್” ಅನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಲೈಂಗಿಕ

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಸೊಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ತಜ್ಞ ಸಮಿತಿ ನೀಡಿದ ವರದಿಯನ್ನು ಸರ್ಕಾರ ಅಂಗೀಕರಿಸಿದ್ದು, ಕೋರ್ಟ್ ಅನುಮತಿ ಸಿಕ್ಕ ಬಳಿಕ ದೇಶಾದ್ಯಂತ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.

ಕಿರಿಯ ವಯಸ್ಸಿನ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿರುವುದು ಮತ್ತು ಪರಸ್ಪರ ಒಪ್ಪಿಗೆಯ ಪ್ರೇಮ ಸಂಬಂಧಗಳು POCSO ಕಾಯ್ದೆಯಡಿ ಅಪರಾಧೀಕರಣವಾಗುತ್ತಿರುವ ಹಿನ್ನೆಲೆ, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಸಮಿತಿ ಈ ವರದಿ ಸಲ್ಲಿಸಿದೆ.

ಇದನ್ನೂ ಓದಿ: 17ನೇ ದಿನಕ್ಕೆ ಕಾಲಿಟ್ಟ ಸೋನಂ ವಾಂಗ್ಚುಕ್ ಉಪವಾಸ: ತೀವ್ರ ನೋವಿನ ನಡುವೆಯೂ ಮುಂದುವರಿಕೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಲಾದ 26 ಸದಸ್ಯರ ರಾಷ್ಟ್ರೀಯ ತಜ್ಞ ಸಮಿತಿ, ಕಿಶೋರರ ಗೌಪ್ಯತೆ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳನ್ನು ಪರಿಶೀಲಿಸಿದೆ. ಸಮಿತಿಯಲ್ಲಿ ಟಿಐಎಸ್‌ಎಸ್ ತಜ್ಞರು, ಕ್ಲಿನಿಕಲ್ ಸೈಕಾಲಜಿಸ್ಟ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ಎನ್‌ಸಿಪಿಸಿಆರ್ ಮತ್ತು ಎನ್‌ಎಲ್‌ಎಸ್‌ಎ ಸದಸ್ಯರು ಸೇರಿದ್ದರು.

ಸಮಿತಿಯ ಶಿಫಾರಸುಗಳ ಪ್ರಕಾರ, “ಕಾಂಪ್ರಿಹೆನ್ಸಿವ್ ಸೆಕ್ಸ್ ಎಜುಕೇಶನ್” ಮತ್ತು “ಚೈಲ್ಡ್ ಸೆಕ್ಸುಯಲ್ ಅಬ್ಯೂಸ್” ವಿಷಯಗಳನ್ನು ಶಾಲಾ ಪಠ್ಯಕ್ರಮದ ಪ್ರಮುಖ ಭಾಗವನ್ನಾಗಿ ಮಾಡಬೇಕು. ಪ್ರಾಥಮಿಕ ಹಂತದಿಂದಲೇ ದೇಹದ ಭಾಗಗಳು, ಸ್ವಚ್ಛತೆ, ಸುರಕ್ಷತೆ ಮತ್ತು “ಸೇಫ್-ಅನ್ಸೇಫ್ ಟಚ್” ಕುರಿತು ಮೂಲಭೂತ ಅರಿವು ನೀಡಬೇಕು ಎಂದು ಸೂಚಿಸಲಾಗಿದೆ.

ಈ ಪಠ್ಯಕ್ರಮವನ್ನು ರೂಪಿಸುವ ಜವಾಬ್ದಾರಿಯನ್ನು NCERTಗೆ ನೀಡುವಂತೆ ಸಮಿತಿ ಶಿಫಾರಸು ಮಾಡಿದೆ.

ಹೊಸ ಶಿಕ್ಷಣ ನೀತಿ (NEP-2020)ಗೆ ಹೊಂದುವಂತೆ ಕಿಶೋರ ಶಿಕ್ಷಣವನ್ನು ಶಾಲೆ ಹಾಗೂ ಕಾಲೇಜುಗಳಲ್ಲಿ ಜಾರಿಗೆ ತರಬೇಕು ಎಂದು ವರದಿ ಹೇಳುತ್ತದೆ. ಇದರಿಂದ ಸಮಗ್ರ ಅಭಿವೃದ್ಧಿ, ವಿಮರ್ಶಾತ್ಮಕ ಚಿಂತನೆ ಮತ್ತು ಜೀವನ ಕೌಶಲ್ಯಗಳ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವಕೀಲರಾದ ಮಾಧವಿ ದಿವಾನ್ ಮತ್ತು ಲಿಜ್ ಮ್ಯಾಥ್ಯೂ, ಈ ವರದಿಯನ್ನು ಶ್ಲಾಘಿಸಿ “ಕಾಂಪ್ರಿಹೆನ್ಸಿವ್ ಸೆಕ್ಸ್ ಎಜುಕೇಶನ್” ಅರ್ಥವನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಆದೇಶ ನೀಡುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ಸಮಿತಿಯ ಶಿಫಾರಸು ಪ್ರಕಾರ, ಪ್ರಾಥಮಿಕ ಹಂತದಿಂದಲೇ ವಾರದಲ್ಲಿ ಎರಡು ಬಾರಿ ಕನಿಷ್ಠ 15-20 ನಿಮಿಷಗಳ ಕಾಲ ಈ ವಿಷಯದ ತರಗತಿಗಳನ್ನು ಕಡ್ಡಾಯವಾಗಿ ನಡೆಸಬೇಕು. ಜೊತೆಗೆ, ಪೋಷಕರು, ಶಿಕ್ಷಕರು ಮತ್ತು ಪಾಲಕರಿಗೆ ಮಕ್ಕಳ ಬೆಳವಣಿಗೆಯ ಹಂತಗಳು ಮತ್ತು ಲೈಂಗಿಕ ಶಿಕ್ಷಣದ ಮಹತ್ವ ಕುರಿತು ವಿಶೇಷ ಸಭೆಗಳನ್ನು ಆಯೋಜಿಸುವುದನ್ನೂ ಸೂಚಿಸಲಾಗಿದೆ.

ಇದನ್ನೂ ನೋಡಿ: ಉಸಿರಾಡುವ ಗಾಳಿಯೇ ವಿಷ! ಆಯುಷ್ಯ ಕಸಿಯುತ್ತಿರುವ ‘ಸೈಲೆಂಟ್ ಕಿಲ್ಲರ್’ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *