ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿಯು ಕಸ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿದ 50 ಸಾವಿರ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ನೋಟಿಸ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ನಿಯಮ ಉಲ್ಲಂಘಿಸಿದವರಿಗೆ ಮೊದಲ ಹಂತದಲ್ಲಿ ₹15 ಸಾವಿರದವರೆಗೆ ದಂಡ ವಿಧಿಸಲಾಗುತ್ತಿದ್ದು, ನೋಟಿಸ್ ನೀಡಿದ ಬಳಿಕವೂ ಮತ್ತೆ ನಿಯಮ ಉಲ್ಲಂಘಿಸಿದರೆ ₹30 ಸಾವಿರ ದಂಡ ವಿಧಿಸುವುದಾಗಿ ಮಂಡಳಿ ಎಚ್ಚರಿಕೆ ನೀಡಿದೆ.
ಹೋಟೆಲ್, ಮಾಲ್, ಅಪಾರ್ಟ್‌ಮೆಂಟ್‌ಗಳು, ಕಲ್ಯಾಣ ಮಂಟಪಗಳು ಹಾಗೂ ಐಟಿ ಕಂಪನಿಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ತ್ಯಾಜ್ಯವನ್ನು ಉತ್ಪಾದನೆಯ ಸ್ಥಳದಲ್ಲೇ ಸಂಸ್ಕರಿಸಬೇಕು ಅಥವಾ ಅಧಿಕೃತ ವೆಂಡರ್‌ಗಳ ಮೂಲಕ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಅಮೇರಿಕದಲ್ಲಿ ಅಡಾನಿ ಪ್ರಕರಣದ ವಜಾ ಪ್ರಕರಣ
ಈ ಎರಡೂ ಕ್ರಮಗಳನ್ನು ಪಾಲಿಸದಿದ್ದರೆ ಜಿಬಿಎ ಕಸದ ಲಾರಿಗೆ ತ್ಯಾಜ್ಯ ನೀಡಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ತ್ಯಾಜ್ಯದ ಪ್ರಮಾಣ ಆಧರಿಸಿ ದಂಡ ವಿಧಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿ ಸಿಇಒ ಕರೀಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದು, ಅನಧಿಕೃತವಾಗಿ ಕಸ ಉತ್ಪಾದನೆ ಮತ್ತು ವಿಲೇವಾರಿ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ನೋಟಿಸ್ ಪಡೆದವರು 7 ದಿನಗಳ ಒಳಗಾಗಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಕುರಿತು ಉತ್ತರ ನೀಡಬೇಕು. ಇಲ್ಲವಾದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ: ಬಿಎಲ್‌ಒ ಕಾರ್ಯದಿಂದ ಮುಕ್ತಗೊಳಿಸಿ: ಜಿಲ್ಲಾಧಿಕಾರಿ ಕಚೇರಿಗೆ ಅಂಗನವಾಡಿ ನೌಕರರ ಮುತ್ತಿಗೆ Janashakthi Media
