ಬೆಂಗಳೂರು: “ಇದು ಭೂಗಳ್ಳರ ಸರ್ಕಾರ. ಭೂಮಾಫಿಯಾಗಳ ರಕ್ಷಣೆಗೆ ನಿಂತಿರುವ ಶಾಸಕರ ಸಂಖ್ಯೆಯೇ ಹೆಚ್ಚಾಗಿದೆ. ‘ಆ ಲೇಔಟ್, ಈ ಲೇಔಟ್’ ಎಂಬ ಬಣ್ಣದ ಮಾತುಗಳ ಮೂಲಕ ಬಡಜನರ ಭೂಮಿಯನ್ನು ಕಸಿಯುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ” ಎಂದು ಸಿಪಿಐ(ಎಂ) ಹಿರಿಯ ನಾಯಕ ಜಿ.ಎನ್. ನಾಗರಾಜ ಆರೋಪಿಸಿದರು. ಮತದಾರ
ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳ ವತಿಯಿಂದ ಆಯೋಜಿಸಿದ್ದ ‘ಬೆಂಗಳೂರು ನಾಗರಿಕರ ಜನಾಕ್ರೋಶ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಭೂಕಬಳಿಕೆ ನೀತಿಗಳ ವಿರುದ್ಧ ಜನರು ಸುಮ್ಮನೆ ಕುಳಿತಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರ ಹೋರಾಟಗಳು ನಡೆಯುತ್ತಿವೆ. ಚನ್ನರಾಯಪಟ್ಟಣದಲ್ಲಿ ಹೋರಾಟದ ಮೂಲಕ ಭೂಮಿಯನ್ನು ಉಳಿಸಿಕೊಳ್ಳಲಾಗಿದೆ. ಬಿಡದಿ, ದೊಡ್ಡಬೆಳವಂಗಲ ಹಾಗೂ ಆನೇಕಲ್‌ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಬೃಹತ್ ಜನಾಂದೋಲನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಶಿಮ್ಲಾ| ಮಳೆ ಅಬ್ಬರ: ಭೂಸ್ಖಲನ, ಸೇತುವೆ ಕುಸಿತ, ಮನೆಗೆ ನುಗ್ಗಿದ ನೀರು
ಎಸ್‌ಐಆರ್ (Special Intensive Revision) ಹೆಸರಿನಲ್ಲಿ ಬಡವರು, ತಳಸಮುದಾಯಗಳು, ಮಹಿಳೆಯರು ಹಾಗೂ ದುಡಿಯುವ ವರ್ಗದ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಚು ನಡೆಯುತ್ತಿದೆ. ಚುನಾವಣಾ ಆಯೋಗವು ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರನ್ನು ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿರುವುದೇ ವಲಸೆಗೆ ಪ್ರಮುಖ ಕಾರಣವಾಗಿದೆ. ಸಾಮಾನ್ಯ ಜನರ ಬದುಕು ಕೆಂಡದ ಉಂಡೆಯಂತಾಗಿದೆ. ಜನರು ಎಚ್ಚೆತ್ತುಕೊಂಡು ಬಲಿಷ್ಠ ಜನಾಂದೋಲನಗಳ ಮೂಲಕ ಸರ್ಕಾರದ ಜನವಿರೋಧಿ ನೀತಿಗಳನ್ನು ಸೋಲಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಬೆಂಗಳೂರು ದಕ್ಷಿಣದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ ಮಾತನಾಡಿ,
ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಎಂದು ಬದಲಾಯಿಸಲಾಗಿದೆ ವಿನಃ ನಗರದ ಸಮಸ್ಯೆಗಳು ಮಾಮಾಲಿನಂತಿವೆ. ನಗರವನ್ನು ಐದು ನಗರ ಪಾಲಿಕೆಗಳಾಗಿ ವಿಂಗಡಿಸಿದೆಯಾದರೂ, ಅವು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕಳೆದ ಆರು ವರ್ಷಗಳಿಂದ ಚುನಾವಣೆಗಳನ್ನು ನಡೆಸದೇ, ಸಲ್ಲದ ಕಾರಣಗಳನ್ನು ಮುಂದೊಡ್ಡಿ ಮುಂದೂಡುತ್ತಲೇ ಬರಲಾಗಿದೆ.
ನಾಗರಿಕ ಸೌಲಭ್ಯಗಳನ್ನು ನೀಡುವಲ್ಲಿ ತಾರತಮ್ಯವಿದೆ. ಬಡವರು, ಅಸಂಘಟಿತ ಕಾರ್ಮಿಕರು, ಸಾಮಾನ್ಯ ಜನ ವಾಸಮಾಡುವ ಪ್ರದೇಶಗಳಿಗೆ ಮೂಲಸೌಕರ್ಯಗಳನ್ನು ನೀಡಲು ನಿರ್ಲಕ್ಷ್ಯ ಧೋರಣೆ ಇದೆ. ಆದರೆ ಪ್ರತಿಷ್ಠಿತರು ವಾಸಿಸುವ ಬಡಾವಣೆಗಳಿಗೆ ಸಕಲ ಸೌಕರ್ಯಗಳೂ ಕೇಳದೆಯೂ ದಕ್ಕುತ್ತವೆ. ಇಂತಹ ತಾರತಮ್ಯ ಧೋರಣೆ ಆಡಳಿತದಲ್ಲಿ ಬೇರೂರಿದೆ ಎಂದು ಆರೋಪಿಸಿದರು.
ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿ ಪ್ರತಾಪಸಿಂಹ ಮಾತನಾಡಿ, ನಗರದ ಶುದ್ಧ ಕುಡಿಯುವ ನೀರಿನ ಬವಣೆ ನೀಗಿಸಲು ಜಲಮಂಡಳಿ ವಿಫಲವಾಗಿದೆ. ಖಾಸಗಿ ನೀರಿನ ಟ್ಯಾಂಕರ್ ಗಳ ಭರಾಟೆ ಜೋರಾಗಿದೆ. ಇನ್ನೊಂದೆಡೆ ಬೇಡಿಕೆಯಷ್ಟು ನೀರು ಪೂರೈಸಲು ಸಾಧ್ಯವಾಗದಿದ್ದರೂ ನೀರಿನ ಶುಲ್ಕವನ್ನು ವಿಪರೀತ ಏರಿಸಲಾಗಿದೆ. ನಗರದೆಲ್ಲೆಡೆ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿಲ್ಲ, ಇದರಿಂದ ನಗರ ನೈರ್ಮಲ್ಯ ಹದಗೆಟ್ಟಿದೆ. ಕಸ ವಿಲೇವಾರಿಗಾಗಿ ಪ್ರತ್ಯೇಕ ಸಂಸ್ಥೆಯನ್ನು ಮಾಡಿದ್ದರೂ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಅಪಾಯದ ಸ್ಥಿತಿ ತಲುಪುತ್ತಿದೆ, ನಗರದ ಟ್ರಾಫಿಕ್ ಜಾಗತಿಕ ಕುಖ್ಯಾತಿಗೆ ಗುರಿಯಾಗಿದೆ. ಬೆಂಗಳೂರು ನಗರ ಪ್ರತೀ ಮಳೆಗೂ ನೆರೆಗೆ ತುತ್ತಾಗುತ್ತಿದೆ. ಕೆರೆ, ಕಟ್ಟೆ, ಗೋಮಾಳ ಸೇರಿದಂತೆ ಸರ್ಕಾರದ ಸ್ವತ್ತುಗಳ ಒತ್ತುವರಿ ನಡೆಯುತ್ತಿದೆ. ಆದಾಗ್ಯೂ ನಗರಾಡಳಿತದ ಚುಕ್ಕಾಣಿ ಹಿಡಿರುವ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ನಿಭಾಯಿಸದೇ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿವೆ, ಇದರಿಂದ ನಗರದ ನಾಗರಿಕರು ಯಾತನೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ,ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ದುಬಾರಿ ದಂಡ ವಿಧಿಸಲಾಗಿದೆ. ನೀರಿನ ದರ ಏರಿಕೆ ಪ್ರಸ್ತಾಪ, ಬಿಎಂಟಿಸಿ ಮತ್ತು ಕೆಎಸ್‌ಆರ್ಟಿಸಿ ದರ ಏರಿಕೆ ಪ್ರಸ್ತಾಪಗಳು ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲಿನ ಬರೆ ಆಗಲಿದೆ ಎಂದರು.
ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಟನಲ್ ರಸ್ತೆ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ವೈಜ್ಞಾನಿಕ ಮತ್ತು ಪ್ರಾಯೋಗಿಕವಾದುದಲ್ಲ, ಜೊತೆಗೆ ಇದರಿಂದ ಪರಿಸರಕ್ಕೂ ಹಾನಿಯಾಗಲಿದೆ ಮತ್ತು ಇದೊಂದು ದುಬಾರಿ ವೆಚ್ಚದ ಯೋಜನೆ ಎಂಬ ಕಾರಣಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರೂ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗಿನ ಟನಲ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿರುವು ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ತೆರೆದಿಟ್ಟಿದೆ ಎಂದರು.
ಹಿರಿಯ ಮುಖಂಡ ಗೋಪಾಲಗೌಡ ಮಾತನಾಡಿ, ನಗರದಲ್ಲಿ ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಶಾಲೆಗಳು ಜನರನ್ನು ಸುಲಿಗೆ ಮಾಡುತ್ತಿವೆ. ಆಸ್ಪತ್ರೆಗಳಲ್ಲಿ ಏಕರೂಪದ ದರ ಎಂಬುದಿಲ್ಲ. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿಗೆ ಕಾನೂನು ಇದ್ದಾಗಿಯೂ ಕಡಿವಾಣ ಬೀಳುತ್ತಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ದರ ನಿಗದಿ ಮಾಡಲು ಸರ್ಕಾರ ಮುಂದಾಗಬೇಕಿದೆ. ಜೊತೆಗೆ ಖಾಸಗಿ ಶಾಲೆಗಳಲ್ಲಿನ ಡೊನೆಷನ್ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮ ಆಗಬೇಕಿದೆ. ಆರೋಗ್ಯ, ಶಿಕ್ಷಣ ಮತ್ತು ಮನೆ ಬಾಡಿಗೆ ಜನರ ಆದಾಯದ ಬಹುಪಾಲನ್ನು ನುಂಗಿಹಾಕುತ್ತಿವೆ ಎಂದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಗೌರಮ್ಮ ಮಾತನಾಡಿ, ನಗರದಲ್ಲಿ ಮನೆ – ನಿವೇಶನದ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ಮನೆ ಬಾಡಿಗೆ ಹೊರಲಾರದ ಹೊರೆಯಾಗುತ್ತಿದೆ. ಹೀಗಿರುವಾಗ ಬಿಡಿಎ, ಹೌಸಿಂಗ್ ಬೋರ್ಡ್, ರಾಜೀವಗಾಂಧಿ ನಿಗಮದಿಂದ ನಿರ್ಮಾಣವಾಗಿರುವ ಫ್ಲಾಟ್‌ಗಳ ದರಗಳು ಬಡವರ ಕೈಗೆ ಎಟುಕದಾಗಿವೆ. ಸ್ಲಂ ನಿವಾಸಿಗಳ ಹಕ್ಕುಪತ್ರ ಬೇಡಿಕೆಗೆ ಸರ್ಕಾರ ಕೇವಲ ಬಾಯಿ ಮಾತಿನ ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುತ್ತಿದೆ.
ಬೆಂಗಳೂರು ನಗರದ ಸುತ್ತಮುತ್ತಲ ಜಿಲ್ಲೆಗಳವರೆಗೂ ಬೆಳೆದಿದೆ, ಆದರೆ ಬೆಟ್ಟದಷ್ಟು ನಾಗರಿಕ ಸಮಸ್ಯೆಗಳು ಇವೆ. ಹೀಗಿದ್ದರೂ ನಗರವನ್ನು ಇನ್ನಷ್ಟೂ ವಿಸ್ತರಿಸಲು ಹೊರವಲಯದ ಕೃಷಿ ಭೂಮಿಯನ್ನು ಸ್ವಾದೀನ ಮಾಡುಕೊಳ್ಳುತ್ತಿದೆ. ಇದರಿಂದ ರೈತ ಕುಟುಂಬಗಳು ಬೀದಿಗೆ ಬೀಳಲಿವೆ ಎಂದರು.
ಸಮಾವೇಶದಲ್ಲಿ ಸಿಪಿಐ(ಎಂ) ಮುಖಂಡರಾದ ಬಿ.ಎನ್. ಮಂಜುನಾಥ್, ಪ್ರತಾಪಸಿಂಹ,ಶಶಿಕಲಾ,ನಾಗರಾಜ, ಶ್ರೀಪತಿ, ಮುನಿರಾಜು, ಚಂದ್ರಶೇಖರ್ಕೆ.ಎಸ್. ಲಕ್ಷ್ಮೀ, ನರಸಿಂಹಮೂರ್ತಿ, ಲಿಂಗರಾಜ, ಹುಳ್ಳಿ ಉಮೇಶ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಇದನ್ನೂ ನೋಡಿ: ಚೇಳುಗಳ ವಿಸ್ಮಯ ಜಗತ್ತು: ಗೊತ್ತಿಲ್ಲದ ಅಚ್ಚರಿಯ ಸತ್ಯಗಳು | ಡಾ: ಎನ್.ಬಿ.ಶ್ರೀಧರ Janashakthi Media
