ಉತ್ತರಾಖಂಡ ಮಳೆ ದಾಳಿ: ಗೋಡೆ ಕುಸಿದು ವೈದ್ಯರ ದುರ್ಮರಣ; ಜುಲೈ 17ರವರೆಗೆ ಅಲರ್ಟ್

ದೆಹ್ರಾಡೂನ್: ಉತ್ತರಾಖಂಡದಲ್ಲಿ ಜುಲೈ 11ರಂದು ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಸರ್ಕಾರದ ವೈದ್ಯರು ಮೃತಪಟ್ಟ ಘಟನೆ ನಡೆದಿದೆ. ಆಸ್ಪತ್ರೆಯ ವಸತಿ ಸಮುಚ್ಚಯದ ಬಳಿ ಹಾನಿಗೊಂಡಿದ್ದ ರಿಟೈನಿಂಗ್ ಗೋಡೆ ಕುಸಿದು ಅವರ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಉತ್ತರಾಖಂಡ

ಮಳೆ ಹಿನ್ನೆಲೆ ಭೂಸ್ಖಲನಗಳೂ ಉಂಟಾಗಿ ಪ್ರಮುಖ ಯಾತ್ರಾ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯಗೊಂಡಿದೆ. ಜುಲೈ 17ರವರೆಗೆ ಇನ್ನಷ್ಟು ಮಳೆ ಹಾಗೂ ಗುಡುಗು-ಮಿಂಚಿನ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಚಮೋಲಿ ಜಿಲ್ಲೆಯ ನರಾಯಣಬಗರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನವೀನ್ ದಿಮ್ರಿ ಅವರು, ಮಳೆಯಿಂದ ಹಾನಿಗೊಂಡ ಗೋಡೆಯನ್ನು ಪರಿಶೀಲಿಸುವ ವೇಳೆ ಅದು ಏಕಾಏಕಿ ಕುಸಿದು ಅವಶೇಷಗಳಡಿ ಸಿಲುಕಿದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮೇಲ್ದರ್ಜೆ ಆಸ್ಪತ್ರೆಗೆ ರವಾನಿಸಲಾಗುತ್ತಿದ್ದಾಗಲೇ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚು: 12 ಸಾವು, 23 ಮಂದಿ ಕಾಣೆ

ರಿಷಿಕೇಶ್–ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ ಸಿರೋಬಾಗರ್–ಖಾಂಕ್ರಾ ಭೂಸ್ಖಲನ ವಲಯದಲ್ಲಿ ಭಾರೀ ಮಣ್ಣು ಕುಸಿತ ಸಂಭವಿಸಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಬೆಟ್ಟದ ಇಳಿಜಾರಿನಿಂದ ಕಲ್ಲು, ಮಣ್ಣು ಜಾರಲು ಆರಂಭವಾಗಿದ್ದು, ಹೆದ್ದಾರಿ ಸುಮಾರು 10 ಗಂಟೆಗಳ ಕಾಲ ಬಂದ್ ಆಗಿತ್ತು.

ನಿರಂತರ ಮಳೆಯ ಕಾರಣ ರಸ್ತೆ ತೆರವು ಕಾರ್ಯಾಚರಣೆ ಅಡ್ಡಿಪಡಿಸಲ್ಪಟ್ಟಿದ್ದು, ಹೊಸದಾಗಿ ಮಣ್ಣು ಜಾರಿಕೆಯಿಂದ ಕಾರ್ಮಿಕರು ಮತ್ತು ಯಂತ್ರೋಪಕರಣಗಳಿಗೆ ಅಪಾಯ ಉಂಟಾಯಿತು. ಬಳಿಕ ಮಧ್ಯಾಹ್ನದ ವೇಳೆಗೆ ಹೆದ್ದಾರಿಯನ್ನು ತೆರೆಯಲಾಯಿತು.

ಮಿನಿ ಗೋವಾ ಬೀಚ್‌ನಿಂದ ಖಾಂಕ್ರಾ ವರೆಗೆ ರಸ್ತೆ ಭಾಗ ಹೆಚ್ಚು ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಸಂಚಾರವನ್ನು ತಡೆದ ಪರಿಣಾಮ, ಎರಡೂ ಬದಿಗಳಲ್ಲಿ ಸುಮಾರು 10 ಕಿಲೋಮೀಟರ್ ಉದ್ದದ ವಾಹನಗಳ ಸಾಲು ನಿರ್ಮಾಣವಾಯಿತು.

ಸಾವಿರಾರು ಚಾರ್ ಧಾಮ ಯಾತ್ರಿಕರು, ಸ್ಥಳೀಯರು ಹಾಗೂ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನಗಳು ಹಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದವು.

ಇದನ್ನೂ ನೋಡಿ: “ವೋಟ್ ಬೇಕಾದಾಗ ನಾವು ಬೇಕು, ವ್ಯಾಪಾರಕ್ಕೆ ಜಾಗ ಕೇಳಿದರೆ ಬೇಡವೇ?” Janashakthi Media

Donate Janashakthi Media

Leave a Reply

Your email address will not be published. Required fields are marked *