ಪೋಕ್ಸೋ ಸಂತ್ರಸ್ತೆ ಸೇರಿ 6 ಜನರ ಹತ್ಯೆಗೈದ ಜಾಮೀನಿನಲ್ಲಿ ಹೊರಬಂದ ಆರೋಪಿ

ತೆಲಂಗಾಣ: ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ಪ್ರಕರಣದ ಸಂತ್ರಸ್ತೆ ಸೇರಿದಂತೆ ಆರು ಮಂದಿಯನ್ನು ಹತ್ಯೆ ಮಾಡಿರುವ ಭೀಕರ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ತಾಲೂಕಿನಲ್ಲಿ ನಡೆದಿದೆ.

ರಾಜ್‌ಕುಮಾರ್ (28) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ ಎಂದು ಪೊಲೀಸರು ಶಂಕಿಸಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿದ್ದ 17 ವರ್ಷದ ಬಾಲಕಿ, ಆಕೆಯ ತಾಯಿ ಹಾಗೂ ಅಜ್ಜಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ಮೊದಲು ಸಂತ್ರಸ್ತೆಯ ಮನೆಗೆ ತೆರಳಿ ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ‘ರಾಮಮಂದಿರ ಹುಂಡಿ ಕಳ್ಳತನದ ಕ್ರೆಡಿಟ್ ಕೂಡ ತಗೊಳ್ಳಿ’ : ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ನಂತರ ತನ್ನ ಮನೆಗೆ ಮರಳಿದ ರಾಜ್‌ಕುಮಾರ್, ಪತ್ನಿ ಸರಿತಾ ಹಾಗೂ ಮಕ್ಕಳಾದ ಪರೀಕ್ಷಿತ್ (3) ಮತ್ತು ಧೈವಿಕ್ಷಿತ್ (2) ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಬಳಿಕ ತನ್ನ ಪೋಷಕರಿಗೆ ಕರೆ ಮಾಡಿ ಕುಟುಂಬದವರನ್ನು ಕೊಂದಿರುವುದಾಗಿ ತಿಳಿಸಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಾಹಿತಿ ತಿಳಿದ ತಕ್ಷಣ ಫ್ಯೂಚರ್ ಸಿಟಿ ಪೊಲೀಸ್ ಆಯುಕ್ತ ತರುಣ್ ಜೋಶಿ, ಚೆವೆಲ್ಲಾ ಡಿಸಿಪಿ ಯೋಗೇಶ್ ಗೌತಮ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಸುಳಿವು ಸಂಗ್ರಹ ತಂಡಗಳು ಸ್ಥಳಕ್ಕೆ ತೆರಳಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.

ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಾಯಿ ಮೇ 16ರಂದು ರಾಜ್‌ಕುಮಾರ್ ವಿರುದ್ಧ ಕಿರುಕುಳ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಇತ್ತೀಚೆಗೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ನೋಡಿ: SIR ಕರ್ತವ್ಯದಲ್ಲಿ ಮತ್ತೊಂದು ಆಘಾತ! ಬಿಎಲ್‌ಒಗೆ ಜಾತಿ ನಿಂದನೆ; ಎಫ್‌ಐಆರ್‌ ದಾಖಲು Janashakthi Media

Donate Janashakthi Media

Leave a Reply

Your email address will not be published. Required fields are marked *