11 ದಿನಗಳ ವಿಜೃಂಭಣೆಯ ಮೈಸೂರು ದಸರಾ – 2026: ಹೊಸ ಕಾರ್ಯಕ್ರಮಗಳ ಭರವಸೆ

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ – 2026 ಅನ್ನು ಈ ಬಾರಿ 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಗಳನ್ನು ಒಳಗೊಂಡಂತೆ ಹೊಸ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗಸ್ಟ್ 26ರಂದು ಬೆಳಗ್ಗೆ 10 ಗಂಟೆಗೆ ಗಜಪೂಜೆ ನಡೆಯಲಿದ್ದು, ಅಕ್ಟೋಬರ್ 11ರಂದು ಬೆಳಗ್ಗೆ 11.50ಕ್ಕೆ ದಸರಾ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು. ಅಕ್ಟೋಬರ್ 21ರಂದು ಮಧ್ಯಾಹ್ನ 1.30ಕ್ಕೆ ಜಂಬು ಸವಾರಿ ಹಾಗೂ ನಂದಿ ಪೂಜೆ ನಡೆಯಲಿದ್ದು, ಸಂಜೆ 4.10ಕ್ಕೆ ಜಂಬುಸವಾರಿ ಪುಷ್ಪಾರ್ಚನೆ ಕಾರ್ಯಕ್ರಮ ನಿಗದಿಯಾಗಿದೆ.

ದಸರಾ ಆಯೋಜನೆಗಾಗಿ ಶೀಘ್ರದಲ್ಲೇ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ಈ ಬಾರಿ ಏರ್ ಶೋ ನಡೆಸುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಯಾರಿಂದ ನಡೆಸಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿದೆ ಎಂದರು.

ಇದನ್ನೂ ಓದಿ: ಹೆಚ್ಚು ಬೆಲೆ, ಕಡಿಮೆ ಪ್ರಮಾಣ? ಬಾಸ್ಕ್ ಬೇಕರಿ ವಿರುದ್ಧ ಆಕ್ರೋಶ

ಐತಿಹಾಸಿಕ ಮೈಸೂರು ದಸರಾ ರಾಜ್ಯದ ಹೆಮ್ಮೆಯಾಗಿದ್ದು, ಪ್ರತಿ ವರ್ಷ ಹೊಸ ಆಲೋಚನೆಗಳೊಂದಿಗೆ ಉತ್ಸವವನ್ನು ಇನ್ನಷ್ಟು ಆಕರ್ಷಕವಾಗಿ ರೂಪಿಸಲಾಗುತ್ತಿದೆ. ಬರಗಾಲದ ನೆಪದಲ್ಲಿ ದಸರಾ ಸರಳವಾಗಿ ಆಚರಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಕಳೆದ ಮೂರು ವರ್ಷಗಳಿಂದ ಮೈಸೂರು ನಗರದಲ್ಲಿ ದೀಪಾಲಂಕಾರವನ್ನು ಚೆಸ್ಕಾಂ ಮೂಲಕ ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಶಕ್ತಿ ಯೋಜನೆಯ ಪರಿಣಾಮ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಈ ಬಾರಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು, ಕ್ರೀಡಾ ಕಾರ್ಯಕ್ರಮಗಳು ಹಾಗೂ ವಿವಿಧ ಸಂಪ್ರದಾಯಗಳಿಗೆ ಅನುಗುಣವಾದ ಕಾರ್ಯಕ್ರಮಗಳನ್ನು ಅಳವಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲರ ಸಲಹೆ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗೋಲ್ಡನ್ ಪಾಸ್ ವಿತರಣೆ ಸಂಬಂಧ ಗೊಂದಲ ನಿವಾರಣೆಗೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಲಾಗುವುದು. ಮೈಸೂರು ಆತಿಥ್ಯಕ್ಕೆ ಹೆಸರುವಾಸಿಯಾಗಿರುವುದರಿಂದ ಹೊರ ರಾಜ್ಯ ಹಾಗೂ ದೇಶಗಳಿಂದ ಬರುವ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ ಬರಗಾಲದ ಛಾಯೆ ಇದ್ದರೂ, ಇತ್ತೀಚಿನ ಮಳೆಯಿಂದ ಪರಿಸ್ಥಿತಿ ಸುಧಾರಿಸಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ಎಸ್‌ಐಆರ್ ವಿರುದ್ಧ ರಾಜ್ಯವ್ಯಾಪಿ ಕಾವಲು ಸಮಿತಿ | ಮತದಾರರ ಹಕ್ಕು ರಕ್ಷಣೆಗೆ ಹೋರಾಟJanashakthi Media

Donate Janashakthi Media

Leave a Reply

Your email address will not be published. Required fields are marked *