ಬೆಂಗಳೂರು: ಗ್ರಾಮ ಪಂಚಾಯತಿ ನೌಕರರಿಗೆ 2026ರ ಮೇ 22ರಂದು ಪ್ರಕಟಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಈ ತಿಂಗಳಿಂದಲೇ ಜಾರಿಗೊಳಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಹೋರಾಟ
ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ನೇತೃತ್ವದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಗ್ರಾಮ ಪಂಚಾಯತಿ ನೌಕರರು ಹಾಗೂ ಸ್ವಚ್ಛವಾಹಿನಿ ಚಾಲಕಿಯರು ಮತ್ತು ಸಹಾಯಕಿಯರು ಪಾಲ್ಗೊಂಡು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಹೋರಾಟ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಡಗೌಡ, ಗ್ರಾಮ ಪಂಚಾಯತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸುವುದು, ಸ್ವಚ್ಛವಾಹಿನಿ ಮಹಿಳಾ ನೌಕರರ ವೇತನ ತಾರತಮ್ಯ ನಿವಾರಿಸಿ ನಿಯಮಿತ ವೇತನ ಪಾವತಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಇಲಾಖೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇದು ನೌಕರರ ಹೋರಾಟಕ್ಕೆ ದೊರೆತ ಮೊದಲ ಹಂತದ ಜಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: 1 ವರ್ಷ ಪತ್ರ ವಿತರಣೆ ಇಲ್ಲ: ಪೋಸ್ಟ್‌ಮ್ಯಾನ್ ಮನೆಯಲ್ಲಿ ಆಧಾರ್, ಪ್ಯಾನ್ ಕಾರ್ಡ್‌ಗಳು ಪತ್ತೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿ ರಂದೀಪ್ ಡಿ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮ ಪಂಚಾಯತಿ ನೌಕರರ ಬೇಡಿಕೆಗಳ ಕುರಿತು ಈಗಾಗಲೇ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗಿದ್ದು, ಸಚಿವರ ಗಮನಕ್ಕೂ ತರಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಈ ತಿಂಗಳಿಂದಲೇ ಪರಿಷ್ಕೃತ ಕನಿಷ್ಠ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸ್ವಚ್ಛವಾಹಿನಿ ನೌಕರರನ್ನು ಗ್ರಾಮ ಪಂಚಾಯತಿ ನೌಕರರನ್ನಾಗಿ ಪರಿಗಣಿಸುವ ಕುರಿತು ಒಂದು ವಾರದೊಳಗೆ ಎನ್‌ಆರ್‌ಎಲ್‌ಎಂ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಬಾಕಿ ವೇತನ ಪಾವತಿ ಹಾಗೂ ಅವರ ಸೇವಾ ಭದ್ರತೆ ಕುರಿತೂ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಇದಲ್ಲದೆ, ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ, ಇಡಗಂಟು ಭತ್ಯೆ, ಎರಡನೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಷ್ಟಿ, ಖಾಲಿ ಹುದ್ದೆಗಳ ನೇಮಕಾತಿಗೆ ಸಿ & ಆರ್ ನಿಯಮ ರೂಪಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಬಗ್ಗೆ ಒಂದು ವಾರದೊಳಗೆ ಸಚಿವರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೈಬು ಜೈನೇಖಾನ್, ಖಜಾಂಚಿ ಮಲ್ಲಿಕಾರ್ಜುನ ಯಾದಗಿರಿ, ಉಪಾಧ್ಯಕ್ಷರಾದ ಆರ್.ಎಸ್. ಬಸವರಾಜ, ಗೋಪಾಲಕೃಷ್ಣ ಅರಳಹಳ್ಳಿ, ಜಿ. ರಾಮಕೃಷ್ಣ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಸೇರಿದಂತೆ ಸಂಘದ ರಾಜ್ಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದರು.
ಇದನ್ನೂ ನೋಡಿ: ರಾಮ ಮಂದಿರ ಟ್ರಸ್ಟ್ ಹಗರಣ: ಭಕ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ? ಹೊಣೆ ಹೊರುವರೇ ಮೋದಿ? MG ಹೆಗಡೆ | ಗುರುರಾಜ ದೇಸಾಯಿ
