ಬೆಂಗಳೂರು: ಕಳೆದ 480 ದಿನಗಳಿಂದ ಅತ್ಯಂತ ಫಲವತ್ತಾದ, ನೀರಾವರಿ ಸಮೃದ್ಧ, ಬಹುವಾರ್ಷಿಕ ಬೆಳೆಗಳು ಇರುವತಮ್ಮಅಮೂಲ್ಯ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಬಿಡದಿ ರೈತರ ಅಹವಾಲು ಆಲಿಸಲು ಬೃಹತ್ ಪಬ್ಲಿಕ್ ಹಿಯರಿಂಗ್ ಕಾರ್ಯಕ್ರಮವನ್ನು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೂ ಹಿತರಕ್ಷಣಾ ಸಂಘ ಜಂಟಿಯಾಗಿ ಬೈರಮಂಗಲ ವೃತ್ತದಲ್ಲಿ ಹಮ್ಮಿಕೊಂಡಿದೆ ಎಂದು ಪತ್ರಿಕಾಗೋಷ್ಠಿಯನ್ನೂದ್ದೇಶಿಸಿ ಮಾತಾನಾಡಿದ ಸಂಯುಕ್ತ ಹೋರಾಟ ಕರ್ನಾಟಕ ಸಂಯೋಜಕ ಯಶವಂತ ಟಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ ಗೋಪಾಲಗೌಡರವರ ನೇತೃತ್ವದಲ್ಲಿ ನಡೆಯುವ ಬೃಹತ್ ಪಬ್ಲಿಕ್ ಹಿಯರಿಂಗ್ (ಸಾರ್ವಜನಿಕ ವಿಚಾರಣೆ) ನಲ್ಲಿ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು, ಪ್ರಖ್ಯಾತ ಕೃಷಿ ಅರ್ಥಶಾಸ್ತ್ರಜ್ಞ ಡಾ. ಪ್ರಕಾಶ್ ಕಮ್ಮರಡಿ, ಖ್ಯಾತ ಸಮಾಜಶಾಸ್ತ್ರಜ್ಞೆ ಡಾ. ಎ. ಆರ್ ವಾಸವಿ ಹಾಗೂ ಹಿರಿಯ ಪತ್ರಕರ್ತ ಡಿ ಉಮಾಪತಿರವರು, ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ಆತಂಕ ಅನುಭವಿಸುತ್ತಿರುವ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಅಹವಾಲನ್ನು ಆಲಿಸಿ ತೀರ್ಪು ಪ್ರಕಟಿಸುವರು ಎಂದರು.
ಇದನ್ನೂ ಓದಿ: ಎಸ್‌ಐಆರ್ ಕರ್ತವ್ಯಕ್ಕೆ ಹೋದ ಬಿಎಲ್‌ಒಗೆ ಜಾತಿನಿಂದನೆ; ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲು
ಬೆಂಗಳೂರು ಸುತ್ತಲಿನ ಸಮೃದ್ಧ ಆಮ್ಲ ಜನಕದ ಮೂಲವಾಗಿರುವ ಇಂತಹ ಹಸಿರು ಪ್ರದೇಶಗಳನ್ನು ರಕ್ಷಿಸಿಕೊಳ್ಳುವುದು ಎಷ್ಟು ಮಹತ್ವದ್ದು ಎಂದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಎದುರಿಸುತ್ತಿರುವ ಬೆಂಗಳೂರು ಹಾಗೂ ಕರ್ನಾಟಕದ ಇವತ್ತಿನ ಅನುಭವದ ಹಿನ್ನೆಲೆಯಲ್ಲಿ ಅರಿತುಕೊಳ್ಳಬೇಕಾಗಿದೆ. ಕೃಷಿ ಭೂಮಿ ಉಳಿವಿಗಾಗಿ ಹೋರಾಟ ಮಾಡುತ್ತಿರುವ ರೈತರನ್ನು,ರೈತರೇ ಅಲ್ಲ, ಇಲ್ಲಿಯಾವ ಕೃಷಿ ಭೂಮಿಯೂ ಇಲ್ಲ ಎಂದು ಬಹಳ ದೊಡ್ಡ ಅಪಪ್ರಚಾರ ಮಾಡಿದ ರಾಜಕಾರಣಿ ಹಾಗೂ ಅಧಿಕಾರಿಗಳ ಕೂಟವು, ಅಲ್ಲಿ ಇರುವ ಸಮೃದ್ಧ ಹಸಿರು ಪ್ರದೇಶ ಎಲ್ಲರ ಗಮನಕ್ಕೆ ಬರುತ್ತಿದ್ದಂತೆ ಬಹುಸಂಖ್ಯಾತರು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಿದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವಿ ಗೋಪಾಲಗೌಡರವರ ನೇತೃತ್ವದ ಬೃಹತ್ ಸಾರ್ವಜನಿಕ ವಿಚಾರಣೆ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು, ಅತ್ಯಂತ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೈತರ ಆತ್ಮವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸಲಿದೆ.
ಕರ್ನಾಟಕ ಹಾಗೂ ಒರಿಸ್ಸಾ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಯಾಗಿ ನಂತರ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ನ್ಯಾಯಮೂರ್ತಿ ವಿ.ಗೋಪಾಲಗೌಡರವರು ಸಂವಿಧಾನ ಖಾತರಿ ಪಡಿಸಿರುವ ಸಾಮಾನ್ಯ ಜನತೆಯ ಮೂಲಭೂತ ಹಕ್ಕುಗಳು, ನಾಗರಿಕ ಹಕ್ಕುಗಳು, ಸಾಮಾಜಿಕ ನ್ಯಾಯ, ಸ್ವಾತಂತ್ರ‍್ಯ, ಸಮಾನತೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಮರ್ಥಿಸುವ ತೀರ್ಪು ನೀಡಿ ಸಾಮಾಜಿಕ ನ್ಯಾಯಾಧೀಶರು ಎಂದು ಕೀರ್ತಿಗೆ ಪಾತ್ರರಾಗಿದ್ದು ಬಿಡದಿ ಟೌನ್ ಶಿಪ್ ಯೋಜನೆಯ ವಿವಿಧ ಆಯಾಮಗಳನ್ನು ನ್ಯಾಯಾಂಗದ ಪರಾಮರ್ಶೆಗೆ ಒಳಪಡಿಸಲಿದ್ದು, ಕೃಷಿ ಆರ್ಥಿಕತೆ -ಪರಿಸರ ಮುಂತಾದ ಸಮಾಜೋ ಆರ್ಥಿಕತೆಯ ವಿವಿಧ ಆಯಾಮಗಳನ್ನು ಇನ್ನುಳಿದ ವಿಷಯತಜ್ಞರು ಪರಾಮರ್ಶಿಸಿ ಜಂಟಿಯಾಗಿತೀರ್ಪನ್ನು ಪ್ರಕಟಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಿ ಗೋಪಾಲ್ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ,ಬೈರಮಂಗಲ ಹೋರಾಟ ಸಮಿತಿ ಮುಖಂಡರುಗಳಾದ ನಾಗರಾಜ್, ಆನಂದ್ ಇದ್ದರು.
ಇದನ್ನೂ ನೋಡಿ: SIR ಕರ್ನಾಟಕ | ಕೆಲಸದ ಒತ್ತಡ, ಅಪಪ್ರಚಾರ: ಎಸ್‌ಐಆರ್ ಕೆಲಸದ ನೋವು ಬಿಚ್ಚಿಟ್ಟ ಬಿಎಲ್‌ಒ Janashakthi Media
