ವಲಸೆ ತಡೆಯಲು ಮಧ್ಯಮ – ಸಣ್ಣ ನಗರಗಳಲ್ಲಿ ಉದ್ಯಮ ಉತ್ತೇಜನ: ಸಿಎಂ ಡಿಕೆಶಿ

ಕಲಬುರ್ಗಿ: ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಬರುತ್ತಿರುವ ವಲಸೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಮಧ್ಯಮ ಹಾಗೂ ಸಣ್ಣ ನಗರಗಳಲ್ಲಿ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಲಸೆ 

ಕಲಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದರು. ವಲಸೆ 

ಈ ನಿಟ್ಟಿನಲ್ಲಿ ಕಲಬುರ್ಗಿ ಸೇರಿದಂತೆ ಮಧ್ಯಮ ಮತ್ತು ಸಣ್ಣ ನಗರಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು 0.6 ಪ್ರಿಮಿಯಂ ಎಫ್ಎಆರ್ ಹಾಗೂ ದ್ವಿಗುಣ ಎಫ್ಎಆರ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಇದರಿಂದ ಉದ್ಯಮಗಳಿಗೆ ಕಡಿಮೆ ವೆಚ್ಚದಲ್ಲಿ ಜಾಗ ಲಭ್ಯವಾಗಲಿದೆ. ಈ ಕುರಿತು ಅಗತ್ಯ ತಿದ್ದುಪಡಿಗಳನ್ನು ನಗರಾಭಿವೃದ್ಧಿ ಇಲಾಖೆ ಮೂಲಕ ತರಲಾಗುವುದು ಎಂದು ಮಾಹಿತಿ ನೀಡಿದರು. ವಲಸೆ 

ಇದನ್ನೂ ಓದಿ: ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ: ಕರಾವಳಿ – ಮಲೆನಾಡಿನಲ್ಲಿ ಬಿರುಗಾಳಿ ಎಚ್ಚರಿಕೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಹೋಗುವ ಪ್ರವೃತ್ತಿಯನ್ನು ತಡೆಯಲು ಸಿಎಸ್ಆರ್ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲೆಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಕಂಪನಿಗಳು 10 ರಿಂದ 15 ಕೋಟಿ ರೂಪಾಯಿ ಹೂಡಿಕೆ ಮಾಡಿ ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸಿದರೆ, ಸರ್ಕಾರ ಶಿಕ್ಷಕರ ನೇಮಕಾತಿಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸುವುದಾಗಿ ತಿಳಿಸಿದರು. ಈ ಯೋಜನೆಯಡಿ ಸುಮಾರು 2,000 ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.

ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸುಗಮಗೊಳಿಸಲು ‘ಯುವ ಸೇತು’ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಕಂಪನಿಗಳು ಈ ವೇದಿಕೆಯ ಮೂಲಕ ಕೌಶಲ್ಯಾಧಾರಿತ ಯುವಕರನ್ನು ಆಯ್ಕೆ ಮಾಡಿಕೊಳ್ಳಬಹುದು. ಅಗತ್ಯ ತರಬೇತಿಯನ್ನು ಕೌಶಲ್ಯಾಭಿವೃದ್ಧಿ ಇಲಾಖೆ ನೀಡಲಿದೆ. ಸ್ಥಳೀಯರಿಗೆ ಆದ್ಯತೆ ನೀಡುವಂತೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದರು.

ಎಸ್ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದ ಸಿಎಂ, ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಮತದಾರರ ಹಕ್ಕು ರಕ್ಷಣೆ ನಮ್ಮ ಬದ್ಧತೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಬಿಎಲ್ಓಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕು. ಪ್ರತಿ ಮನೆಗೆ ಮೂರು ಬಾರಿ ಸಂಪರ್ಕ ಸಾಧಿಸುವಂತೆ ಸೂಚಿಸಲಾಗಿದೆ ಎಂದರು.

ಜನರಿಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಉಚಿತವಾಗಿ ನಿವಾಸ ಹಾಗೂ ಜಾತಿ ಪ್ರಮಾಣಪತ್ರ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ಕಾರ್ಯಪಡೆ ರಚಿಸಲಾಗಿದ್ದು, ಎಲ್ಲಾ ಆರ್‌ಒ ಕೇಂದ್ರಗಳ ಪರಿಶೀಲನೆ ಹಾಗೂ ನೀರಿನ ಗುಣಮಟ್ಟ ಪರೀಕ್ಷೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತಿ ವರ್ಷ 5,000 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಯುವಕರಲ್ಲಿ ಸಾಮರಸ್ಯ ಮತ್ತು ನಾಯಕತ್ವ ಬೆಳೆಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ 10,000 ‘ಭಾರತ ಜೋಡೋ ಯುವಕರ ಸಂಘ’ಗಳನ್ನು ರಚಿಸಲಾಗುವುದು. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು. ಸಂಘಗಳ ನೋಂದಣಿ ಪ್ರಕ್ರಿಯೆಯನ್ನು ಮುಂದಿನ ತಿಂಗಳ 15ರೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದರು.

ಡ್ರಗ್ಸ್ ನಿಯಂತ್ರಣಕ್ಕೆ ‘ಝೀರೋ ಟಾಲರೆನ್ಸ್’ ನೀತಿ ಅನುಸರಿಸಲಾಗುತ್ತಿದ್ದು, ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ನಿಗ್ರಹ ಪಡೆ ರಚಿಸಲು ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಇದರ ಜೊತೆಗೆ, ಬಡವರಿಗೆ ನಿವೇಶನ ಹಂಚಿಕೆ, ಕಲಬುರ್ಗಿಯಲ್ಲಿ 320 ಕೋಟಿ ರೂಪಾಯಿ ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪನೆ, ಬೆಳೆ ವಿಮೆ ಪರಿಹಾರ ವಿತರಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ವಿವರಿಸಿದರು.

ಸಾಲಮನ್ನಾ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈ ಬೇಡಿಕೆಗಳು ಬಂದಿರುವುದನ್ನು ಒಪ್ಪಿಕೊಂಡು, ಅದು ಸುಲಭ ನಿರ್ಧಾರವಲ್ಲ, ಪರಿಶೀಲನೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಖಾಲಿ ಇರುವ ಸುಮಾರು 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, ಗೃಹ, ಕೃಷಿ, ಕಂದಾಯ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನೇಮಕಾತಿಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ತಿಳಿಸಿದರು.

ಎಸ್ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಇರುವ ಆರೋಪಗಳನ್ನು ತಳ್ಳಿಹಾಕಿದ ಸಿಎಂ, ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಕಾರ್ಯ ನಡೆಯುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಇಲ್ಲ. ಸಿಬ್ಬಂದಿ ಒದಗಿಸುವುದು ಮಾತ್ರ ನಮ್ಮ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.

ಇದನ್ನೂ ನೋಡಿ: ‘ಜನತಾ ಪ್ರಜಾಪ್ರಭುತ್ವಕ್ಕಾಗಿ ಬದುಕು’: ಕಾರ್ಮಿಕ ಚಳುವಳಿಯ ಹೆಜ್ಜೆಗುರುತು Janashakthi Media

Donate Janashakthi Media

Leave a Reply

Your email address will not be published. Required fields are marked *