ಬದ್ರಿನಾಥ ದೇಣಿಗೆ ವಿವಾದ: ಸಿಬ್ಬಂದಿ ಅಮಾನತು, ಉನ್ನತ ಮಟ್ಟದ ತನಿಖೆ ಆರಂಭ

ಡೆಹ್ರಾಡೂನ್: ಬದ್ರಿನಾಥ ಧಾಮದಲ್ಲಿ ದೇಣಿಗೆ ಹಾಗೂ ಕಾಣಿಕೆಗಳ ನಿರ್ವಹಣೆಯಲ್ಲಿ ಅವ್ಯವಸ್ಥೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ (BKTC) ತನ್ನ ವೈಯಕ್ತಿಕ ಸಹಾಯಕ ಪ್ರಮೋದ್ ನೌಟಿಯಾಲ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಲೋಪಗಳ ಪ್ರಾಥಮಿಕ ಸುಳಿವುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆಯನ್ನೂ ಸಮಿತಿ ವೇಗಗೊಳಿಸಿದೆ.

BKTC ಹೊರಡಿಸಿದ ಆದೇಶದ ಪ್ರಕಾರ, ಜುಲೈ 3ರಂದು ನೌಟಿಯಾಲ್ ಅವರಿಗೆ “ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಅವ್ಯವಸ್ಥೆ” ಆರೋಪದ ಕುರಿತು ಕಾರಣ ಸೂಚಿಸಿ ನೋಟಿಸ್ ಜಾರಿಗೊಳಿಸಲಾಗಿತ್ತು. ಬಳಿಕ ಸಮಗ್ರ ಮತ್ತು ನ್ಯಾಯಸಮ್ಮತ ತನಿಖೆಗಾಗಿ ನಾಲ್ವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿತ್ತು.

ಇದನ್ನೂ ಓದಿ: ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಹಿಸೋದಿಲ್ಲ: ಅಧಿಕಾರಿಗಳಿಗೆ ಸಿಎಂ ಡಿಕೆಶಿ ಕಠಿಣ ಎಚ್ಚರಿಕೆ

ನೌಟಿಯಾಲ್ ನೀಡಿದ ಉತ್ತರ ಹಾಗೂ ತನಿಖಾ ಸಮಿತಿ ಸಲ್ಲಿಸಿದ ಪ್ರಾಥಮಿಕ ವರದಿ ಪರಿಶೀಲನೆಯ ಬಳಿಕ, ಆರೋಪಗಳು ಪ್ರಾಥಮಿಕವಾಗಿ ಸಾಬೀತಾಗಿವೆ ಎಂದು ಕಂಡುಬಂದಿದ್ದು, ಶಿಸ್ತಿನ ಕ್ರಮ ಕೈಗೊಳ್ಳಲು ಸಮಿತಿ ಶಿಫಾರಸು ಮಾಡಿದೆ.

“ತನಿಖೆಯ ನಿರಪೇಕ್ಷತೆ ಮತ್ತು ಪಾರದರ್ಶಕತೆಯನ್ನು ಕಾಪಾಡಲು, ಸಂಬಂಧಪಟ್ಟ ಸಿಬ್ಬಂದಿಯನ್ನು ಹುದ್ದೆಯಲ್ಲಿ ಮುಂದುವರಿಸಲು ಅವಕಾಶ ನೀಡುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಪ್ರಮೋದ್ ನೌಟಿಯಾಲ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ,” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಮಾನತು ಅವಧಿಯಲ್ಲಿ ನೌಟಿಯಾಲ್ ಅವರನ್ನು ಜ್ಯೋತಿರ್ಮಠದಲ್ಲಿರುವ BKTC ಕಚೇರಿಗೆ ನಿಯೋಜಿಸಲಾಗಿದೆ.

ಈ ಘಟನೆ ಉತ್ತರಾಖಂಡ ಸರ್ಕಾರದ ಗಮನಕ್ಕೂ ಬಂದಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸೂಚನೆಯಂತೆ, ಬದ್ರಿನಾಥ ಧಾಮದ ದೇಣಿಗೆ ಹಾಗೂ ಕಾಣಿಕೆಗಳಿಗೆ ಸಂಬಂಧಿಸಿದ ಅವ್ಯವಸ್ಥೆಗಳನ್ನು ಪರಿಶೀಲಿಸಲು ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸಮಿತಿಗೆ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಪರ್ಯಟನ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಭ್ಯಾಲ್ ಹೊರಡಿಸಿದ ಆದೇಶದ ಪ್ರಕಾರ, ದೇವಸ್ಥಾನಕ್ಕೆ ಲಭಿಸುವ ದೇಣಿಗೆಗಳ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ. ಇತ್ತೀಚಿನ ದೂರುಗಳು ಹಾಗೂ ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಉನ್ನತ ಮಟ್ಟದ ಸಮಿತಿಗೆ ಗಢ್ವಾಲ್ ವಿಭಾಗದ ಆಯುಕ್ತರು ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ತಿವಾರಿ ಹಾಗೂ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ನಿರ್ದೇಶನಾಲಯದ ಹಣಕಾಸು ನಿರ್ದೇಶಕ ಜಗತ್ ಸಿಂಗ್ ಚೌಹಾನ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಸಮಿತಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು, ಹಣಕಾಸು ದಾಖಲೆಗಳು ಹಾಗೂ ಸಂಬಂಧಿಸಿದವರ ಹೇಳಿಕೆಗಳನ್ನು ಪರಿಶೀಲಿಸಿ ಅಂತಿಮ ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ BKTC ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು, “ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರ ನಂಬಿಕೆ ಅತ್ಯಂತ ಮುಖ್ಯ. ಎಲ್ಲಾ ವ್ಯವಸ್ಥೆಗಳು ಕಟ್ಟುನಿಟ್ಟಿನ, ಪಾರದರ್ಶಕ ಮತ್ತು ಹೊಣೆಗಾರಿಕೆಯಿಂದ ನಡೆಯುವಂತೆ ನಾವು ಬದ್ಧರಾಗಿದ್ದೇವೆ,” ಎಂದು ತಿಳಿಸಿದ್ದಾರೆ.

ದೇಶದಾದ್ಯಂತ ದೇವಸ್ಥಾನಗಳ ದೇಣಿಗೆ ನಿರ್ವಹಣೆ ಕುರಿತು ಹೆಚ್ಚುತ್ತಿರುವ ಪರಿಶೀಲನೆಯ ನಡುವೆಯೇ ಈ ವಿವಾದ ಎದುರಾಗಿದೆ. ಹರಿದ್ವಾರದಲ್ಲಿರುವ ಮಾನ್ಸಾ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಪುರೋಹಿತರಿಗೂ ಸಿಬ್ಬಂದಿಗೂ ಪಾಕೆಟ್ ರಹಿತ ಕುರ್ತಾ ಅನಿವಾರ್ಯಗೊಳಿಸುವ ಮೂಲಕ ಪಾರದರ್ಶಕತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ, BKTC ದೇವಸ್ಥಾನಾಧಿಕಾರಿ ಯುದ್ಧವೀರ್ ಪುಷ್ಪವಾನ್ ಅವರ ಲಿಖಿತ ದೂರಿನ ಆಧಾರದ ಮೇಲೆ, ಬದ್ರಿನಾಥ ಪೊಲೀಸರು ಬುಧವಾರ FIR ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 306 ಮತ್ತು 316(5) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಜುಲೈ 2ರಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಕೆಗಳಲ್ಲಿ ಅವ್ಯವಸ್ಥೆ ನಡೆದಿದೆ ಎಂಬ ಆರೋಪಗಳೊಂದಿಗೆ ಪೋಸ್ಟ್‌ಗಳು ವೈರಲ್ ಆದ ಹಿನ್ನೆಲೆಯಲ್ಲಿ, ಬೆಳಿಗ್ಗೆ 9ರಿಂದ 9.30ರ ನಡುವೆ ದೇವಸ್ಥಾನದ ಹಣವನ್ನು “ಅನಧಿಕೃತವಾಗಿ” ತೆರವುಗೊಳಿಸಲಾಗಿದೆ ಎಂಬ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ನೋಡಿ: ಎಸ್‌ಐಆರ್ ವಿರುದ್ಧ ರಾಜ್ಯವ್ಯಾಪಿ ಕಾವಲು ಸಮಿತಿ | ಮತದಾರರ ಹಕ್ಕು ರಕ್ಷಣೆಗೆ ಹೋರಾಟJanashakthi Media

Donate Janashakthi Media

Leave a Reply

Your email address will not be published. Required fields are marked *