ದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ; ಕರ್ನಾಟಕ ಸೇರಿ 13 ರಾಜ್ಯಗಳಲ್ಲಿ ಆತಂಕ

ನವದೆಹಲಿ: ದೇಶದ ಪ್ರಮುಖ 166 ಜಲಾಶಯಗಳಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯದ ಕೇವಲ ಶೇ.26ರಷ್ಟು ನೀರು ಮಾತ್ರ ಉಳಿದಿದ್ದು, ಕರ್ನಾಟಕ, ತಮಿಳುನಾಡು, ಒಡಿಶಾ ಹಾಗೂ ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನೀರಿನ ಲಭ್ಯತೆ ಆತಂಕಕಾರಿ ಮಟ್ಟಕ್ಕೆ ಇಳಿದಿದೆ ಎಂದು ಪರಿಸರ ವಿಷಯಗಳ ಕುರಿತು ವರದಿ ಪ್ರಕಟಿಸುವ ಡೌನ್ ಟು ಅರ್ಥ್ (Down To Earth) ಪತ್ರಿಕೆ ವರದಿ ಮಾಡಿದೆ.

ದೇಶದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಈ ವರ್ಷವೂ ಆತಂಕ ಮೂಡಿಸುವ ಮಟ್ಟದಲ್ಲಿದೆ. ಕೇಂದ್ರ ಜಲ ಆಯೋಗದ (CWC) ಜುಲೈ 2, 2026ರ ಸಾಪ್ತಾಹಿಕ ವರದಿ ಪ್ರಕಾರ, ದೇಶದ 166 ಪ್ರಮುಖ ಜಲಾಶಯಗಳಲ್ಲಿ ಒಟ್ಟು 183.565 ಬಿಲಿಯನ್ ಘನ ಮೀಟರ್ (BCM) ಸಂಗ್ರಹ ಸಾಮರ್ಥ್ಯವಿದ್ದು, ಪ್ರಸ್ತುತ 47.725 BCM ನೀರು ಮಾತ್ರ ಲಭ್ಯವಿದೆ. ಇದು ಒಟ್ಟು ಸಾಮರ್ಥ್ಯದ ಕೇವಲ ಶೇ.26ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ 78.077 BCM ನೀರು ಲಭ್ಯವಿದ್ದರೆ, ಈ ಬಾರಿ ಅದರ ಮಟ್ಟ ಗಣನೀಯವಾಗಿ ಕುಸಿದಿದೆ. ಕಳೆದ ಹತ್ತು ವರ್ಷಗಳ ಸರಾಸರಿ ನೀರಿನ ಸಂಗ್ರಹಕ್ಕೆ ಹೋಲಿಸಿದರೆ ಪ್ರಸ್ತುತ ಮಟ್ಟವೂ ಸ್ವಲ್ಪ ಕಡಿಮೆಯಾಗಿದೆ.

ಮಾನ್ಸೂನ್ ಬಹುತೇಕ ರಾಜ್ಯಗಳಿಗೆ ತಲುಪಿರುವ ಈ ಹಂತದಲ್ಲಿ ಜಲಾಶಯಗಳು ವೇಗವಾಗಿ ತುಂಬುವ ನಿರೀಕ್ಷೆ ಇರುತ್ತದೆ. ಆದರೆ ಈ ಬಾರಿ ಮಳೆಯ ಹಂಚಿಕೆ ಸಮರ್ಪಕವಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರೂ, ಹಲವು ಪ್ರಮುಖ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯ ಕೊರತೆ ಕಂಡುಬಂದಿರುವುದು ನೀರಿನ ಮಟ್ಟದ ಮೇಲೆ ಪರಿಣಾಮ ಬೀರಿದೆ.

ವರದಿ ಪ್ರಕಾರ, 166 ಜಲಾಶಯಗಳಲ್ಲಿ 69 ಜಲಾಶಯಗಳಲ್ಲಿನ ನೀರಿನ ಸಂಗ್ರಹ ಸಾಮಾನ್ಯ ಮಟ್ಟದ ಶೇ.80ಕ್ಕಿಂತ ಕಡಿಮೆಯಿದೆ. ಅವುಗಳಲ್ಲಿ 34 ಜಲಾಶಯಗಳು ಸಾಮಾನ್ಯ ಮಟ್ಟದ ಅರ್ಧಕ್ಕಿಂತಲೂ ಕಡಿಮೆ ನೀರು ಹೊಂದಿದ್ದು, ಗಂಭೀರ ಸ್ಥಿತಿಯಲ್ಲಿವೆ. ಬಿಹಾರದ ಚಂದನ್, ಒಡಿಶಾದ ರೆಂಗಾಲಿ, ಕರ್ನಾಟಕದ ಆಲಮಟ್ಟಿ ಹಾಗೂ ತುಂಗಭದ್ರ ಜಲಾಶಯಗಳು ಅತ್ಯಂತ ಕಡಿಮೆ ನೀರು ಹೊಂದಿರುವ ಜಲಾಶಯಗಳ ಪಟ್ಟಿಯಲ್ಲಿವೆ. ಮಹಾರಾಷ್ಟ್ರದ ಭೀಮಾ-ಉಜ್ಜೈನಿ, ತಮಿಳುನಾಡಿನ ಅಲಿಯಾರ್ ಹಾಗೂ ಉತ್ತರ ಪ್ರದೇಶದ ಮೌದಾಹ ಜಲಾಶಯಗಳಲ್ಲಿ ನೀರಿನ ಮಟ್ಟ ಶೂನ್ಯಕ್ಕೆ ತಲುಪಿರುವುದಾಗಿ ವರದಿ ಸೂಚಿಸಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಖರೀಫ್ ಬಿತ್ತನೆ ಕುಸಿತ: ಗುರಿಯ 43% ಮಾತ್ರ ಸಾಧನೆ

ದೇಶದ 13 ರಾಜ್ಯಗಳಲ್ಲಿ ಜಲಾಶಯಗಳ ನೀರಿನ ಸಂಗ್ರಹವು ಹತ್ತು ವರ್ಷದ ಸರಾಸರಿಗಿಂತ ಕಡಿಮೆಯಾಗಿದೆ. ಹಿಮಾಚಲ ಪ್ರದೇಶ, ಪಂಜಾಬ್, ಬಿಹಾರ, ಜಾರ್ಖಂಡ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಈ ಪಟ್ಟಿಯಲ್ಲಿವೆ.

ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಪರಿಸ್ಥಿತಿ ಹೆಚ್ಚು ಕಳವಳಕಾರಿಯಾಗಿದೆ. ಈ ರಾಜ್ಯಗಳ ಜಲಾಶಯಗಳಲ್ಲಿನ ನೀರಿನ ಮಟ್ಟ ಸಾಮಾನ್ಯಕ್ಕಿಂತ ಶೇ.16ರಿಂದ ಶೇ.46ರವರೆಗೆ ಕಡಿಮೆಯಾಗಿದೆ. ಪೂರ್ವ ಭಾರತದ ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ.

ಮುಂದಿನ ವಾರಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ನೀರಾವರಿ, ಕುಡಿಯುವ ನೀರಿನ ಪೂರೈಕೆ ಹಾಗೂ ಜಲವಿದ್ಯುತ್ ಉತ್ಪಾದನೆ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ ಎಂದು ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ.

ನದಿ ಜಲಾನಯನ ಪ್ರದೇಶಗಳ ಪೈಕಿ ಕೃಷ್ಣಾ, ಕಾವೇರಿ, ಮಹಾನದಿ, ಪೆನ್ನಾರ್, ಬ್ರಹ್ಮಣಿ–ಬೈತರಾಣಿ, ಬರಾಕ್ ಸೇರಿದಂತೆ ಹಲವು ಜಲಾನಯನ ಪ್ರದೇಶಗಳನ್ನು ನೀರಿನ ಕೊರತೆ ಇರುವ ಪ್ರದೇಶಗಳೆಂದು ಗುರುತಿಸಲಾಗಿದೆ. ಆದರೆ ಈ ಬಾರಿ ಯಾವುದೇ ಜಲಾನಯನ ಪ್ರದೇಶವನ್ನು “ತೀವ್ರ ಕೊರತೆ” ವಿಭಾಗಕ್ಕೆ ಸೇರಿಸದಿರುವುದು ಸಮಾಧಾನದ ಸಂಗತಿಯಾಗಿದೆ.

ಇದೇ ವೇಳೆ, ಗಂಗಾ, ನರ್ಮದಾ, ಗೋದಾವರಿ, ಮಾಹಿ, ಸಬರಮತಿ ಸೇರಿದಂತೆ ಕೆಲವು ಜಲಾನಯನ ಪ್ರದೇಶಗಳಲ್ಲಿ ನೀರಿನ ಸಂಗ್ರಹ ಸಾಮಾನ್ಯ ಮಟ್ಟಕ್ಕಿಂತ ಉತ್ತಮವಾಗಿದೆ. ಸಿಂಧೂ, ಬ್ರಹ್ಮಪುತ್ರ ಹಾಗೂ ಸುಬರ್ಣರೇಖಾ ಜಲಾನಯನ ಪ್ರದೇಶಗಳಲ್ಲೂ ನೀರಿನ ಮಟ್ಟ ಸಾಮಾನ್ಯ ಮಟ್ಟಕ್ಕೆ ಸಮೀಪದಲ್ಲಿದೆ.

ಭಾರತ ಹವಾಮಾನ ಇಲಾಖೆಯ (IMD) ಜುಲೈ 2ರ ಅಂಕಿಅಂಶಗಳ ಪ್ರಕಾರ, ದೇಶದ 741 ಜಿಲ್ಲೆಗಳ ಪೈಕಿ ಸುಮಾರು ಎರಡು-ಮೂರಾಂಶ ಜಿಲ್ಲೆಗಳು ಸಾಮಾನ್ಯಕ್ಕಿಂತ ಕಡಿಮೆ ಅಥವಾ ತೀವ್ರ ಕಡಿಮೆ ಮಳೆಯನ್ನು ದಾಖಲಿಸಿವೆ. ಉತ್ತರ ಪ್ರದೇಶ, ಬಿಹಾರ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆ ದಾಖಲಾಗಿದೆ. ಮತ್ತೊಂದೆಡೆ, ತಮಿಳುನಾಡು, ರಾಜಸ್ಥಾನ ಹಾಗೂ ಪಂಜಾಬ್‌ನ ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯಾಗಿದೆ.

ಈ ಅಂಕಿಅಂಶಗಳು ದೇಶಾದ್ಯಂತ ಮುಂಗಾರು ಚುರುಕುಗೊಂಡಿದ್ದರೂ, ಮಳೆಯ ವಿತರಣೆ ಸಮಾನವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಇದೇ ಕಾರಣದಿಂದ ಹಲವು ರಾಜ್ಯಗಳ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ ಎನ್ನಲಾಗಿದೆ.

ಇದನ್ನೂ ನೋಡಿ : 40 ಬೇಡಿಕೆಗಳೊಂದಿಗೆ ಜುಲೈ 10ಕ್ಕೆ ಅಂಗನವಾಡಿ-ಬಿಸಿಯೂಟ ನೌಕರರ ರಾಜ್ಯವ್ಯಾಪಿ ಮುಷ್ಕರ

Donate Janashakthi Media

Leave a Reply

Your email address will not be published. Required fields are marked *