ಬೆಂಗಳೂರು: ಪ್ರಯಾಣಿಕರ ದೀರ್ಘಕಾಲದ ಸಮಸ್ಯೆಗಳಾದ ಆಟೋ-ಕ್ಯಾಬ್ ನಿರಾಕರಣೆ, ದರದ ಬಾರ್ಗೇನ್ ಮತ್ತು ಅತಿಯಾದ ಶುಲ್ಕ ವಸೂಲಿಗೆ ತಡೆ ಹಾಕುವ ಉದ್ದೇಶದಿಂದ, ‘ನಗರ್ ಮೀಟರ್ ಆಟೋ’ ಎಂಬ ಚಾಲಕರ ಸಂಘವು ಹೊಸ ಡಿಜಿಟಲ್ ಮೀಟರ್ ಪ್ಲಾಟ್ಫಾರ್ಮ್ ಅನ್ನು ಪರಿಚಯಿಸಿದೆ.
ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ನಿರಂಜನಾರಾಧ್ಯ ಅವರು, “ಸುಮಾರು 90% ಪ್ರಯಾಣಿಕರು ಚಾಲಕರು ಸವಾರಿ ನಿರಾಕರಿಸುವುದು ಅಥವಾ ಒಂದೂವರೆ ಪಟ್ಟು, ಎರಡು ಪಟ್ಟು ದರ ಕೇಳುವುದು ಬಗ್ಗೆ ದೂರು ನೀಡುತ್ತಾರೆ. ನಾವು ಬಾರ್ಗೇನ್ ವ್ಯವಸ್ಥೆ ನಿವಾರಿಸಿ, ನ್ಯಾಯಸಮ್ಮತ ದರವನ್ನು ಖಚಿತಪಡಿಸಲು ಬಯಸುತ್ತೇವೆ,” ಎಂದು ತಿಳಿಸಿದ್ದಾರೆ.
ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ಆಪ್ ಮೂಲಕ ಬುಕ್ಕಿಂಗ್ ಮಾಡುವ ಅಗತ್ಯವಿಲ್ಲ. ಬದಲಿಗೆ, ನಗರ್ ಮೀಟರ್ಗೆ ಸೇರಿರುವ ಆಟೋ ಅಥವಾ ಟ್ಯಾಕ್ಸಿಯನ್ನು ನೇರವಾಗಿ ರಸ್ತೆಯಲ್ಲೇ ಹಿಡಿಯಬಹುದು.
ಇದನ್ನೂ ಓದಿ: SIR ಅವೈಜ್ಞಾನಿಕ, ಅಸಂವಿಧಾನಿಕ: ಜಾರಿಗೆ ನಾಗರೀಕ ಮತಕಾವಲು ಸಮಿತಿ ವಿರೋಧ
ಪ್ರಯಾಣ ಆರಂಭವಾದ ನಂತರ ಚಾಲಕರು ನಗರ್ ಮೀಟರ್ ಆಪ್ನಲ್ಲಿ ಡಿಜಿಟಲ್ ಮೀಟರ್ ಆನ್ ಮಾಡುತ್ತಾರೆ. ವಾಹನದೊಳಗಿನ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ SMS/ವಾಟ್ಸಾಪ್ ಲಿಂಕ್ ಮೂಲಕ ಪ್ರಯಾಣಿಕರು ದರವನ್ನು ಲೈವ್ನಲ್ಲಿ ನೋಡಬಹುದು. ದರವನ್ನು ಸರ್ಕಾರ ನಿಗದಿಪಡಿಸಿದ ಮೀಟರ್ ದರದ ಪ್ರಕಾರವೇ ಲೆಕ್ಕ ಹಾಕಲಾಗುತ್ತದೆ.
ಈ ಪ್ಲಾಟ್ಫಾರ್ಮ್ನಲ್ಲಿ ನೋಂದಾಯಿತ ಚಾಲಕರು ಆಪ್ ಬುಕ್ಕಿಂಗ್ಗಳನ್ನು ಸ್ವೀಕರಿಸುವುದರ ಜೊತೆಗೆ, ನೇರವಾಗಿ ರಸ್ತೆಯಿಂದ ಪ್ರಯಾಣಿಕರನ್ನು ತೆಗೆದುಕೊಳ್ಳುವ ಅವಕಾಶವೂ ಹೊಂದಿದ್ದಾರೆ. ಇದರಿಂದ ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಟೆಕ್ ಪಾರ್ಕ್ಗಳಂತಹ ಹೆಚ್ಚಿನ ಬೇಡಿಕೆಯ ಪ್ರದೇಶಗಳಲ್ಲಿ ನಿಂತು ಸೇವೆ ನೀಡಲು ಸಾಧ್ಯವಾಗುತ್ತದೆ.
ಈ ವ್ಯವಸ್ಥೆ ಪರಿಚಯವಾದ ಬಳಿಕ ವೇಗವಾಗಿ ಬೆಳವಣಿಗೆ ಕಂಡಿದ್ದು, ದಿನನಿತ್ಯದ ಪ್ರಯಾಣಗಳ ಸಂಖ್ಯೆ 10–20ರಿಂದ ಸುಮಾರು 400ಕ್ಕೆ ಏರಿಕೆಯಾಗಿದೆ. ಜೊತೆಗೆ ಸಕ್ರಿಯ ಚಾಲಕರ ಸಂಖ್ಯೆ 150ರಿಂದ ಸುಮಾರು 500ಕ್ಕೆ ಹೆಚ್ಚಳ ಕಂಡಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ನೋಡಿ: “ಇರಾನ್ – ಯು.ಎಸ್. ನಡುವಿನ MoUನಲ್ಲಿ ಏನಿದೆ?” | ಎನ್ ಕೆ ವಸಂತರಾಜ, ಗುರುರಾಜ ದೇಸಾಯಿ ಮಾತುಕತೆ Janashakthi Media
