ಸತೀಶ್ ಜಾರಕಿಹೊಳಿ ಆಪ್ತ ಸದಾಶಿವ ದೇಶಿಂಗೆ ಬಿಜೆಪಿ ಸೇರ್ಪಡೆ

ಬೆಂಗಳೂರು: ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಹಿರಿಯ ನಾಯಕ ಸದಾಶಿವ ದೇಶಿಂಗೆ ಅವರು ಕಾಂಗ್ರೆಸ್ ತೊರೆದು ಜುಲೈ 6ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಧ್ವಜ ನೀಡಿ ದೇಶಿಂಗೆ ಅವರನ್ನು ಬಿಜೆಪಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಬೈರತಿ ಬಸವರಾಜು, ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಾಡು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಸದಾಶಿವ ದೇಶಿಂಗೆ ಅವರು ಉತ್ತರ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ರಾಯಬಾಗ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ನಾಯಕರಾಗಿದ್ದು, ಅವರ ಸೇರ್ಪಡೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಮತ್ತಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇಸಿ ವಿರುದ್ಧ 110 ದೂರುಗಳು, ಒಂದನ್ನೂ ಸ್ವೀಕರಿಸದ ನ್ಯಾಯಾಲಯ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಕೂಡ ಸಾಮಾಜಿಕ ಜಾಲತಾಣದಲ್ಲಿ ದೇಶಿಂಗೆ ಅವರ ಸೇರ್ಪಡೆಯನ್ನು ಸ್ವಾಗತಿಸಿದ್ದು, ಅವರ ಸಂಘಟನಾ ಅನುಭವ ಹಾಗೂ ಸಮಾಜಮುಖಿ ಕಾರ್ಯಗಳು ಪಕ್ಷಕ್ಕೆ ನೆರವಾಗಲಿವೆ ಎಂದು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನವರಾದ ಸದಾಶಿವ ದೇಶಿಂಗೆ ಅವರು ಹಲವು ವರ್ಷಗಳಿಂದ ಸಾಮಾಜಿಕ ಮತ್ತು ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ವಿಶೇಷವಾಗಿ ಹಾಲುಮತ ಹಾಗೂ ಕುರುಬ ಸಮುದಾಯದಲ್ಲಿ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತರೆಂದೂ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಅವರ ಬಿಜೆಪಿ ಸೇರ್ಪಡೆ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಸಂಘಟನೆಗೆ ಇದು ಹೊಸ ಬಲ ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ನೋಡಿ: ‘ಅರ್ಬುದನ ಡೈರಿ’ | ಕ್ಯಾನ್ಸರ್ ಪೀಡಿತರಿಗೆ ವಿಶ್ವಾಸ ತುಂಬುವ ಅನುಭವ ಕಥನ Janashakthi Media

Donate Janashakthi Media

Leave a Reply

Your email address will not be published. Required fields are marked *