ಕಲಾ ರಂಗಮಂದಿರ ನೆಲಸಮ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ; ಮರುನಿರ್ಮಾಣಕ್ಕೆ ಆಗ್ರಹ

ಗಂಗಾವತಿ: ನಗರದ ಸರ್ಕಾರಿ ಪದವಿ ಪೂರ್ವ (ಜೂನಿಯರ್) ಕಾಲೇಜು ಆವರಣದಲ್ಲಿದ್ದ ಕಲಾ ರಂಗಮಂದಿರವನ್ನು ನೆಲಸಮಗೊಳಿಸಿ ಕಾಲೇಜು ಆವರಣವನ್ನು ಇತರೆ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ಬಳಿಕ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಗಂಗಾವತಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುಮಾರು 10 ಎಕರೆ ವಿಸ್ತೀರ್ಣದ ಮೈದಾನಕ್ಕೆ 75 ವರ್ಷಗಳ ಇತಿಹಾಸವಿದೆ. 2004ರವರೆಗೆ ತಾಲೂಕಿನ ಶಾಲೆ-ಕಾಲೇಜುಗಳ ಕ್ರೀಡಾಕೂಟಗಳು, ಸಾರ್ವಜನಿಕ ಕಾರ್ಯಕ್ರಮಗಳು, ಕನ್ನಡಪರ ಚಟುವಟಿಕೆಗಳು, ಸಾಹಿತ್ಯ ಸಮ್ಮೇಳನಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಈ ಮೈದಾನ ಬಳಕೆಯಾಗುತ್ತಿತ್ತು. ಕಳೆದ 25 ವರ್ಷಗಳಲ್ಲಿ ವಿವಿಧ ಕಟ್ಟಡಗಳ ನಿರ್ಮಾಣದಿಂದ ಮೈದಾನದ ಬಹುಭಾಗ ಅತಿಕ್ರಮಣಕ್ಕೊಳಗಾಗಿದೆ ಎಂದು ಆರೋಪಿಸಿದರು.

ನಗರಸಭೆ, ಪಿಕಾರ್ಡ್, ಲೋಕೋಪಯೋಗಿ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳನ್ನು ಕಾಲೇಜು ಆವರಣದಲ್ಲಿ ನಿರ್ಮಿಸಿರುವುದರಿಂದ ವಿದ್ಯಾರ್ಥಿಗಳ ಆಟದ ಮೈದಾನ ಹಾಗೂ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಜುಲೈ 10ರಂದು ಸ್ಕೀಮ್ ನೌಕರರ ಕಪ್ಪು ದಿನಾಚರಣೆ; ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ

ಕಾಲೇಜು ಆವರಣದಲ್ಲಿದ್ದ ಕಲಾ ರಂಗಮಂದಿರವನ್ನು ಫುಡ್ ಕೋರ್ಟ್ ನಿರ್ಮಾಣದ ಹೆಸರಿನಲ್ಲಿ ಬುಲ್ಡೋಜರ್ ಮೂಲಕ ನೆಲಸಮಗೊಳಿಸಿರುವುದು ಖಂಡನೀಯ. ಸರ್ಕಾರದ ಇತರೆ ಯೋಜನೆಗಳಿಗೆ ಪರ್ಯಾಯ ಜಾಗಗಳಿದ್ದರೂ ಕಾಲೇಜು ಆವರಣವನ್ನೇ ಬಳಸುತ್ತಿರುವುದು ಸರಿಯಲ್ಲ. ಈ ಕ್ರಮದಿಂದ ವಿದ್ಯಾರ್ಥಿಗಳು ಹಾಗೂ ರಂಗಭೂಮಿ ಕಲಾವಿದರಿಗೆ ಅನ್ಯಾಯವಾಗಿದೆ ಎಂದು ಎಸ್‌ಎಫ್‌ಐ ಆರೋಪಿಸಿತು.

ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ನೆಲಸಮಗೊಳಿಸಿರುವ ಕಲಾ ರಂಗಮಂದಿರವನ್ನು ಅದೇ ಸ್ಥಳದಲ್ಲಿ ಮರುನಿರ್ಮಾಣ ಮಾಡಬೇಕು. ಇಲ್ಲವಾದರೆ ಎಸ್‌ಎಫ್‌ಐ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಜಂಟಿ ಕಾರ್ಯದರ್ಶಿ ಬಸಯ್ಯ, ಸದಸ್ಯರಾದ ಶರಣಬಸವ ಬಾದ್ನಟ್ಟಿ, ದೊಡ್ಡಬಸವ ಅಗಸಿಮುಂದಿನ, ಮಾರುತಿ ವಿಠಲಾಪುರ, ಮುಖಂಡರಾದ ಬೀರಪ್ಪ, ಯಂಕಣ್ಣ, ಕೌಶಿಕ್, ಸಂಜನಾ, ಕಲ್ಪನಾ, ಕವಿತಾ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ನೋಡಿ: ಆರ್‌ಎಸ್‌ಎಸ್‌ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?

Donate Janashakthi Media

Leave a Reply

Your email address will not be published. Required fields are marked *