ಕಲಬುರಗಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಲೋಪದ ಕುರಿತು ನೀಡಿರುವ ದೂರು ಬಿಜೆಪಿ ನಡೆಸುತ್ತಿರುವ ಮತ್ತೊಂದು ‘ರಾಜಕೀಯ ನಾಟಕ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಮೊದಲು ಪ್ರತಿಭಟನೆ ನಡೆಸಿದವರು ಬಿಜೆಪಿ ಆಗಿದ್ದು, ನಂತರ ಹೊರಗಿನ ಅಧಿಕಾರಿಗಳನ್ನು ಕರೆತರುವ ಮೂಲಕ ಪ್ರಕ್ರಿಯೆಯನ್ನು ತಮ್ಮ ಅನುಕೂಲಕ್ಕೆ ತಿರುಗಿಸಿಕೊಳ್ಳುವ ‘ಗೇಮ್ ಪ್ಲ್ಯಾನ್’ ನಡೆಯುತ್ತಿದೆ ಎಂದು ದೂರಿದರು.
ರಾಮಮಂದಿರ ಟ್ರಸ್ಟ್ ಹಾಗೂ ಭ್ರಷ್ಟಾಚಾರ ಆರೋಪಗಳನ್ನು ಉಲ್ಲೇಖಿಸಿದ ಅವರು, ಅಯೋಧ್ಯೆಯಲ್ಲಿಯೇ ಗುತ್ತಿಗೆಗಳಲ್ಲಿ ಕಮಿಷನ್ ತೆಗೆದುಕೊಂಡ ಘಟನೆಗಳ ಕುರಿತು ಮಾಹಿತಿ ಇದೆ ಎಂದು ಹೇಳಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: SIR ಅವೈಜ್ಞಾನಿಕ, ಅಸಂವಿಧಾನಿಕ: ಜಾರಿಗೆ ನಾಗರೀಕ ಮತಕಾವಲು ಸಮಿತಿ ವಿರೋಧ
ಟ್ರಸ್ಟ್ ಸಭೆ ಹಾಗೂ ರಾಜೀನಾಮೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಎಸ್ಎಸ್ ಹಿನ್ನೆಲೆಯವರೇ ಈ ಎಲ್ಲ ವ್ಯವಸ್ಥೆಯ ಭಾಗವಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪುನರುಚ್ಚರಿಸಿದ ಅವರು, ತಾವು ಅಧಿಕಾರದಲ್ಲಿರುವವರೆಗೂ ನಿಯಮದ ಪ್ರಕಾರವೇ ಅನುಮತಿ ಪಡೆಯಬೇಕು ಎಂದು ಹೇಳಿದರು. ಈ ಕುರಿತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ತಮ್ಮ ವಿರುದ್ಧ ನಡೆಯುತ್ತಿರುವ ವೈಯಕ್ತಿಕ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ವೈಯಕ್ತಿಕ ಜೀವನದ ಕುರಿತು ಅನಗತ್ಯವಾಗಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಇಂತಹ ವಿಚಾರಗಳಿಂದ ತಾವು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಇದನ್ನೂ ನೋಡಿ: ‘ಜನತಾ ಪ್ರಜಾಪ್ರಭುತ್ವಕ್ಕಾಗಿ ಬದುಕು’: ಕಾರ್ಮಿಕ ಚಳುವಳಿಯ ಹೆಜ್ಜೆಗುರುತು Janashakthi Media
