ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು: ಕಾಂಗ್ರೆಸ್ ತಿರುಗೇಟು, ಬಿಜೆಪಿ-ಜೆಡಿಎಸ್ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾಂಗ್ರೆಸ್ ಅನ್ನು ನೇರವಾಗಿ ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ಜೆಡಿಎಸ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೂಲಕ ರಾಜಕೀಯ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ. ದೇಶದಾದ್ಯಂತ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಿರುವ ಬಿಜೆಪಿ ಈಗ ಕರ್ನಾಟಕದಲ್ಲಿ ಜೆಡಿಎಸ್ ಅನ್ನು ಬಳಸಿಕೊಳ್ಳುತ್ತಿದೆ” ಎಂದು ಟೀಕಿಸಿದರು.

ರಾಜ್ಯದಲ್ಲಿ ಮತದಾರರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಆತಂಕ ವ್ಯಕ್ತಪಡಿಸಿದ ಅವರು, “ಸುಮಾರು 5.65 ಲಕ್ಷ ಮತದಾರರ ಮ್ಯಾಪಿಂಗ್ ಆಗಿದ್ದು, 50 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದರು.

ಇದನ್ನೂ ಓದಿ: ಜುಲೈ 10ರಂದು ಸ್ಕೀಮ್ ನೌಕರರ ಕಪ್ಪು ದಿನಾಚರಣೆ; ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ

ರಾಮನಗರದಲ್ಲಿ ಮಸೀದಿಯಲ್ಲಿ ಗಣತಿ ನಮೂನೆಗಳನ್ನು ಭರ್ತಿ ಮಾಡುತ್ತಿರುವ ಕುರಿತು ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಚುನಾವಣಾ ಆಯೋಗದ ನಿಯಮಾವಳಿಯಂತೆ ಸಾರ್ವಜನಿಕ ಸ್ಥಳಗಳಲ್ಲಿ ನಮೂನೆಗಳನ್ನು ಭರ್ತಿ ಮಾಡಲು ಅವಕಾಶವಿದೆ ಎಂದರು. ಬಿಎಲ್‌ಒಗಳು ಎಲ್ಲ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದ ಕಾರಣ ಸಮುದಾಯ ಭವನ, ಮಸೀದಿ ಹಾಗೂ ದೇವಾಲಯಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

“ನಕಲಿ ಮತದಾರರು, ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕಲಿ. ಆದರೆ ಯಾವುದೇ ಅರ್ಹ ಮತದಾರನ ಮತದಾನದ ಹಕ್ಕು ಕಸಿಯಬಾರದು ಎಂಬುದೇ ಕಾಂಗ್ರೆಸ್‌ನ ನಿಲುವು” ಎಂದು ಅವರು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧವೂ ವಾಗ್ದಾಳಿ ನಡೆಸಿದ ಹರಿಪ್ರಸಾದ್, ರಾಜ್ಯಕ್ಕೆ ಎಷ್ಟು ಅನುದಾನ ತಂದಿದ್ದಾರೆ ಹಾಗೂ ಮಹದಾಯಿ ಯೋಜನೆ ಕುರಿತು ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಮೊದಲು ತಿಳಿಸಬೇಕು ಎಂದು ಸವಾಲು ಹಾಕಿದರು.

ಸಿಎಎ, ಎನ್‌ಆರ್‌ಸಿ ಬಳಿಕ ಈಗ ಎಸ್‌ಐಆರ್ ಮೂಲಕ ಮತದಾರರ ಪಟ್ಟಿಯಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲ್ಪಟ್ಟಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಎಂದು ಹೇಳಿದರು.

“ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಜನರ ನೇರ ತೀರ್ಪು ಪಡೆಯಲು ಸಾಧ್ಯವಾಗದೆ ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ” ಎಂದು ಹರಿಪ್ರಸಾದ್ ಹೇಳಿದರು.

ಬಿಜೆಪಿ ಬಿಎಲ್‌ಎಗಳು ಕೆಲವು ಕಡೆ ಮತದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ ಅವರು, “ಕಾಂಗ್ರೆಸ್ ಕಳೆದ ಒಂದು ವರ್ಷದಿಂದ ಬಿಎಲ್‌ಎ-2ಗಳನ್ನು ನೇಮಿಸಿ ಮತದಾರರ ಪಟ್ಟಿಯ ಪರಿಶೀಲನೆ ನಡೆಸುತ್ತಿದೆ. ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ” ಎಂದು ಟೀಕಿಸಿದರು.

ಇದನ್ನೂ ನೋಡಿ: ಒಂದು ಕೋಟಿ ಕುಟುಂಬಗಳ ಬದುಕಿನ ಮೇಲೆ ಹೊಡೆತ; ಕನಿಷ್ಠ ವೇತನ ಹಿಂಪಡೆದರೆ ಬೀದಿಗಿಳಿಯುತ್ತೇವೆ: ಕಾರ್ಮಿಕ ಸಂಘಟನೆಗಳು

Donate Janashakthi Media

Leave a Reply

Your email address will not be published. Required fields are marked *